ADVERTISEMENT

ಅಯೋಧ್ಯೆ: ಎರಡು ಭಿನ್ನ ಬಿಂಬಗಳು... ಇದು ಸಕಾರಾತ್ಮಕವಾದ ಚಾರಿತ್ರಿಕ ಬೆಳವಣಿಗೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2020, 19:30 IST
Last Updated 1 ಆಗಸ್ಟ್ 2020, 19:30 IST
ಅಯೋಧ್ಯೆಯಲ್ಲಿ ಕಂಡ ಭಕ್ತನ ನೋಟ
ಅಯೋಧ್ಯೆಯಲ್ಲಿ ಕಂಡ ಭಕ್ತನ ನೋಟ   
""

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇನ್ನೇನು ಭೂಮಿಪೂಜೆ ನೆರವೇರಲಿದೆ. ದೇಶವನ್ನು ದಶಕಗಳ ಕಾಲ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಕಾಡಿದ ವಿಷಯಗಳಲ್ಲಿ ಈ ವಿವಾದವೂ ಒಂದು. ಸುಪ್ರೀಂ ಕೋರ್ಟ್‌ನ ತೀರ್ಪಿನ ಅನ್ವಯ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿರುವ ಈ ಹೊತ್ತಿನಲ್ಲಿ ಸಾಂಸ್ಕೃತಿಕ ಲೋಕದ ಪ್ರತಿಕ್ರಿಯೆ ಹೇಗಿದ್ದೀತು? ಭಿನ್ನ ನಿಲುವುಗಳನ್ನು ಹೊಂದಿದ ಸಾಂಸ್ಕೃತಿಕ ಲೋಕದ ಪ್ರತಿನಿಧಿಗಳ ಮುಂದೆ ‘ಪ್ರಜಾವಾಣಿ’ ಐದು ಪ್ರಶ್ನೆಗಳನ್ನು ಇಟ್ಟಿತು. ತಾಂಜಾನಿಯಾ ಭಾರತೀಯ ರಾಯಭಾರ ಕಚೇರಿಯ ವಿವೇಕಾನಂದ ಅಧ್ಯಯನ ಕೇಂದ್ರದ ನಿರ್ದೇಶಕ ಸಂತೋಷ್‌ ಜಿ.ಆರ್‌ ಅವರು ಕೊಟ್ಟ ಉತ್ತರಗಳು ಇಲ್ಲಿವೆ. ಅಯೋಧ್ಯೆಯ ಎರಡು ಭಿನ್ನ ಬಿಂಬಗಳೂ ಅದರಲ್ಲಿ ಕಾಣುತ್ತಿವೆ...

ಪ್ರಜಾವಾಣಿ ಕೇಳಿದಐದು ಪ್ರಶ್ನೆಗಳು

* ದೇಶದ ಸೌಹಾರ್ದಕ್ಕಿಂತ ಧಾರ್ಮಿಕ ನಂಬಿಕೆಯೇ ಮುಖ್ಯವಾಗಿದ್ದು ಸರಿಯೇ? ಆ ನಂಬಿಕೆಯ ಸಂಕೇತವಾದ ಸ್ಥಳಕ್ಕಾಗಿ ಅಷ್ಟೊಂದು ವಿವಾದ-ಹೋರಾಟ ಅನಿವಾರ್ಯವಾಗಿತ್ತೇ?

ADVERTISEMENT

* ಮಂದಿರ-ಮಸೀದಿಯ ಸುದೀರ್ಘ ಇತಿಹಾಸ ಹಿಂದಿದೆ. ಸುಪ್ರೀಂ ಕೋರ್ಟ್ ತೀರ್ಪು ಎದುರಿಗಿದೆ. ಮುಂದಿನ ಹಾದಿ ಯಾವ ಮೌಲ್ಯವನ್ನು ಎತ್ತಿ ಹಿಡಿಯಲಿದೆ?

* ರಾಮ ಜನ್ಮಭೂಮಿ ಹೋರಾಟವನ್ನು ಬಿಜೆಪಿಯ ಉತ್ಥಾನದ ಕಾಲ ಎಂದು ವ್ಯಾಖ್ಯಾನಿಸಲಾಗಿದೆ. ಅದು ನಿಜವಾದರೆ ದೇಶ ರಾಜಕೀಯವಾಗಿ ಪಡೆದುಕೊಂಡಿದ್ದೇನು? ಕಳೆದುಕೊಂಡಿದ್ದೇನು?

* ಕಾಂಗ್ರೆಸ್ ಸಹ -ಅದರಲ್ಲೂ ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್ ಅವರು ಪ್ರಧಾನಿಯಾಗಿದ್ದಾಗ- ಮಂದಿರ ನಿರ್ಮಾಣದ ಹೋರಾಟವನ್ನು ಮೌನವಾಗಿ ಬೆಂಬಲಿಸಿತು ಎಂದು ಹೇಳಲಾಗುತ್ತದೆ. ಇದು ನಿಜವೇ? ಹೌದಾದರೆ, ವಿವಾದ ತೀವ್ರಗೊಳ್ಳಲು ಅದರ ಕೊಡುಗೆಯೂ ಇದೆಯೇ?

* ಅಯೋಧ್ಯೆಯಲ್ಲಿ ಮಂದಿರವೇನೋ ಆಗುತ್ತಿದೆ. ಮುರಿದ ಮನಸ್ಸುಗಳನ್ನು ಮತ್ತೆ ಕೂಡಿಸಿ ಕಟ್ಟುವುದು ಹೇಗೆ? ದೇಶದಲ್ಲಿ ಮತ್ತೆ ಯಾವ ಬೆಳವಣಿಗೆಗಳಿಗೆ ಈ ನಿರ್ಮಾಣ ಕಾರಣವಾಗಲಿದೆ?

ಸಂತೋಷ್‌ ಜಿ.ಆರ್‌ ಅವರು ನೀಡಿದ ಉತ್ತರಗಳು

ಸಂತೋಷ್‌ ಜಿ.ಆರ್‌

1. ಭಾರತದಂತಹ ಪ್ರಾಚೀನ ದೇಶದಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಮುಂತಾದ ಆಯಾಮಗಳೂ ಪರಸ್ಪರ ಹಾಸುಹೊಕ್ಕಾಗಿರುತ್ತವೆ. ಅಯೋಧ್ಯೆಯ ರಾಮಮಂದಿರವನ್ನು ಬರಿ ಧಾರ್ಮಿಕ ಸ್ಥಳ ಎಂದು ಭಾವಿಸುತ್ತಿರುವುದೇ ತಪ್ಪು. ಈ ದೇಶವನ್ನು ಹೊರಗಿನಿಂದ ಬಂದು ನೋಡಿದವರ ದೃಷ್ಟಿಕೋನ ಇದು. ಸ್ವಾತಂತ್ರ್ಯಾ ನಂತರವಾದರೂ ಇದು ಬದಲಾಗಬೇಕಿತ್ತು; ಸೋಮನಾಥನ ವಿಷಯದಲ್ಲಿ ಆದಹಾಗೆ. ಆದರೆ, ದುರದೃಷ್ಟವಶಾತ್ ಕೋಮುಬಣ್ಣವೇ ಮುಂದುವರಿದು ಬಿಟ್ಟಿತು. ದೇಶ ನಂಬಿಕೊಂಡು ಬಂದ ಮೌಲ್ಯಗಳ ಸ್ವರೂಪವಾಗಿ, ಸ್ಮಾರಕವಾಗಿ ರಾಮಮಂದಿರ ಮರುನಿರ್ಮಾಣ ಬಹುಹಿಂದೆಯೇ ಆಗಬೇಕಿತ್ತು.

ರಾಮನ ಜೀವನವೇ ಸೌಹಾರ್ದಕ್ಕೆ ಅತ್ಯುತ್ತಮ ಉದಾಹರಣೆ. ಈ ನೆಲದ ಗುಣವೇ ಅವನಲ್ಲಿ ವ್ಯಕ್ತವಾಗಿದೆ. ನೀತಿವಂತರಾದ ಎಲ್ಲರನ್ನೂ ಅವನು ಗೌರವಿಸಿದ. ರಾಕ್ಷಸನಾದರೂ ವಿಭೀಷಣನಿಗೆ ಪಟ್ಟ ಕಟ್ಟಿದ. ಹನುಮ, ಸುಗ್ರೀವಾದಿ ವಾನರರು ಆತನ ಆಪ್ತರು. ವನವಾಸಿ ಗುಹ ಆತ್ಮೀಯ ಮಿತ್ರ. ಕರಡಿಗಳ ನಾಯಕ ಜಾಂಬವಂತನನ್ನು ಮಾರ್ಗದರ್ಶಕನೆಂದು ಭಾವಿಸುತ್ತಿದ್ದ. ಪಕ್ಷಿಯಾದ ಜಟಾಯುವಿಗೆ ಪಿತೃಕಾರ್ಯಗಳನ್ನು ಮಾಡಿದ. ಹೀಗೆ ಮಾನವರೊಂದಿಗೆ ಮಾತ್ರವಲ್ಲ; ಸಕಲ ಪಶುಪ್ರಾಣಿ, ಪಕ್ಷಿಗಳೊಂದಿಗೂ ಸಮರಸದ, ಸೌಹಾರ್ದದ ಜೀವನ ಸಾಧ್ಯ ಎಂದು ನಿರೂಪಿಸಿದ. ಇಂತಹ ಮಹಾಪುರುಷನ ಜನ್ಮಸ್ಥಾನದಲ್ಲಿನ ಮಂದಿರ ಸೌಹಾರ್ದದ ಆದರ್ಶವನ್ನು ಸಾರುವ ಕೇಂದ್ರವೇ ಆಗುವುದಲ್ಲವೆ?

ಹಟಮಾರಿ ಸ್ವಭಾವದರಿಗೆ ಶರಣಾಗಿ ಕೇಳಿದ್ದೆಲ್ಲಾ ಕೊಡುತ್ತಾ ಹೋಗುವುದೇ ಸೌಹಾರ್ದವಲ್ಲ. ಹೀಗೆ ನಡೆದುಕೊಂಡದ್ದರಿಂದಲೇ ದೇಶ ಮೂರು ಭಾಗವಾಯಿತು. ಯಾವುದು ದೇಶದ ಏಕತೆಗೆ ಪೂರಕವೋ ಅದನ್ನು ಒಪ್ಪಿಸಿ ಅನುಷ್ಠಾನಗೊಳಿಸಬೇಕಿತ್ತು. ಆದರೆ, ಆಗಿನ ನೇತೃತ್ವವಹಿಸಿದವರ ವರ್ತನೆಯಿಂದ ವಿವಾದ–ಹೋರಾಟಗಳು ಅನಿವಾರ್ಯವಾಗಿಬಿಟ್ಟವು.

2. ಸುಪ್ರೀಂ ಕೋರ್ಟ್ ತೀರ್ಪಿಗೂ ಮೊದಲೇ, ಯಾವುದೇ ನಿರ್ಣಯವನ್ನು ಸ್ವಾಗತಿಸುವುದಾಗಿ ಹಿಂದೂ, ಮುಸ್ಲಿಂ ಸಂಘಟನೆಗಳೆಲ್ಲವೂ ಪ್ರಕಟಿಸಿದ್ದವು. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕೃತಕವಾಗಿ ಕ್ಷೋಭೆಯನ್ನು ಉಂಟು ಮಾಡುತ್ತಿರುವ ಓವೈಸಿ ಅಂತಹವರ ಅಭಿಪ್ರಾಯವನ್ನು ಪರಿಗಣಿಸುವ ಅಗತ್ಯವಿಲ್ಲ. ಆದರೆ, ಮಾಧ್ಯಮಗಳು ಇಂತಹವರನ್ನು ವೈಭವೀಕರಿಸುವುದೇ ಸಮಸ್ಯೆ. ದೇಶದ ಭಾಗವೇ ಆಗಿರುವ ಶ್ರದ್ಧಾವಂತ ಮುಸಲ್ಮಾನರು ಭಾವೈಕ್ಯದ ಸಾಧನವಾಗಿ ಮಂದಿರ ನಿರ್ಮಾಣ ಪ್ರಸಂಗವನ್ನು ಕಾಣುತ್ತಿದ್ದಾರೆ.

ಮೊಹಮ್ಮದ್ ಫೈಜ್ ಖಾನ್ ಕೌಸಲ್ಯೆಯ ಜನ್ಮಸ್ಥಳವಾದ ಛತ್ತೀಸ್‌ಗಡದ ಚಾಂದ್ಖುರಿಯಿಂದ ಅಲ್ಲಿನ ಮಣ್ಣನ್ನು ತೆಗೆದುಕೊಂಡು 800 ಕಿ.ಮೀಗಳಷ್ಟು ದೂರ ನಡೆದು ಭೂಮಿಪೂಜೆಯಲ್ಲಿ ಭಾಗವಹಿಸಲು ಅಯೋಧ್ಯೆಗೆ ಹೊರಟಿದ್ದಾರೆ. ರಾಮ ಜನ್ಮಭೂಮಿ ನ್ಯಾಸದ ಪದಾಧಿಕಾರಿಗಳು ಮುಕ್ತಕಂಠದಿಂದ ಇದನ್ನು ಸ್ವಾಗತಿಸಿ, ಸ್ವೀಕರಿಸುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ಬೆಳವಣಿಗೆಗಳನ್ನು ಕಾಣಬಹುದು. ಶ್ರೀರಾಮಮಂದಿರ ದೇಶದ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಬಹುದೊಡ್ಡ ಪಾತ್ರವಹಿಸಲಿದೆ.

3. ರಾಮಜನ್ಮಭೂಮಿ ಹೋರಾಟ ಇಂದು ನಿನ್ನೆಯದಲ್ಲ. ಬಾಬರ್ ದಾಳಿಯಿಟ್ಟ ದಿನದಿಂದಲೇ ಅದು ಆರಂಭವಾಯಿತು. ಆಯಾ ಕಾಲಘಟ್ಟಗಳ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ರಾಜರೋ, ಸಂತರೋ ಈ ಹೋರಾಟಗಳ ನೇತೃತ್ವವಹಿಸುತ್ತಿದ್ದರು. ಈ ಕುರಿತ ಕಾನೂನು ಹೋರಾಟವೂ ಇನ್ನೂರು ವರ್ಷಕ್ಕೂ ಹಳೆಯದು.

ರಾಮಮಂದಿರದ ಅಭಿಯಾನದಿಂದ ಬಿಜೆಪಿಯು ರಾಜಕೀಯವಾಗಿ ಕೋಮುವಾದಿಯ ಪಟ್ಟ ಹೊತ್ತು, ಮೂಲೆಗುಂಪಾದೀತು ಎಂದೇ ಎಲ್ಲರ ಅನಿಸಿಕೆಯಾಗಿತ್ತು. ಆದರೆ, ಈ ವಿಷಯದಲ್ಲಿ ತೋರಿದ ಬದ್ಧತೆಯಿಂದ ಬಿಜೆಪಿಗೆ ರಾಜಕೀಯ ಮಹತ್ವ ಬಂದಿತು.

4. ಆಡಳಿತದ ನೇತೃತ್ವ ಯಾರೇ ವಹಿಸಿರಲಿ ಪ್ರಜೆಗಳ ಅಭಿಪ್ರಾಯಕ್ಕೆ ಸ್ಪಂದಿಸುವ ಪ್ರಮಾಣ ವ್ಯತ್ಯಾಸವಾದೀತು; ಆದರೆ, ಉಪೇಕ್ಷೆ ಮಾಡಲು ಸಾಧ್ಯವಿಲ್ಲ. ಮೊಘಲ್ ದೊರೆ ಅಕ್ಬರ್ ಸಹ ಹಿಂದೂಗಳನ್ನು ಸಮಾಧಾನಪಡಿಸಲು ರಾಮ ಚಬೂತರದ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ. ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಮಂದಿರದ ಬೀಗಮುದ್ರೆ ತೆರೆದು ವಿವಾದಿತವಲ್ಲದ ಪ್ರದೇಶದಲ್ಲಿ ಹಿಂದೂಗಳ ಪ್ರವೇಶಕ್ಕೆ ಅವಕಾಶ ಮಾಡಿಕೊಟ್ಟರು. ಆದರೆ, ಸಂಪೂರ್ಣವಾಗಿ ವಿವಾದ ಪರಿಹರಿಸುವ ಇರಾದೆ ಅವರಲ್ಲಿ ಇರಲಿಲ್ಲ. ಪಿ.ವಿ. ನರಸಿಂಹರಾವ್ ಸಂಧಾನದ ಮೂಲಕ ಇದನ್ನು ಪರಿಹರಿಸಲು ಉಪಕ್ರಮಗಳನ್ನು ಕೈಗೊಂಡಿದ್ದರೂ ದೃಢನಿಶ್ಚಯದ ಕೊರತೆ ಕಾಣುತ್ತಿತ್ತು. ಲಕ್ಷಾಂತರ ಭಕ್ತರು ರಾಮಲಲ್ಲಾ ತುಂಬಾ ಹೀನಾಯ ಸ್ಥಿತಿಯಲ್ಲಿರುವುದನ್ನು ಕಂಡು ದುಃಖ ಪಡುತ್ತಿದ್ದರು. ವಿವಾದಕ್ಕೆ ಪರಿಹಾರ ಶೀಘ್ರವಾಗಿ ಆಗಬೇಕು ಎಂಬ ಚಡಪಡಿಕೆ ಶುರುವಾಗಲು ಇದು ಕಾರಣವಾಯಿತು.

5. ಈ ತೀರ್ಪನ್ನು ಬಹುಪಾಲು ಧಾರ್ಮಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಸ್ವಾಗತಿಸಿರುವುದೇ ವೈಚಾರಿಕ ಪ್ರಬುದ್ಧತೆಗೆ ಸಾಕ್ಷಿ. ಮನಸ್ಸುಗಳು ಮುರಿದಿಲ್ಲ, ಪ್ರಯತ್ನಪೂರ್ವಕವಾಗಿ ಹಾಗೆ ಬಿಂಬಿಸಲಾಗುತ್ತಿದೆ ಅಷ್ಟೆ. ಮಸೀದಿಗೆ ಸರ್ಕಾರವೇ ಆರು ಎಕರೆ ಜಾಗ ನೀಡಬೇಕೆಂಬುದನ್ನು ಯಾರೂ ವಿರೋಧಿಸಲಿಲ್ಲ. ಸಂವಿಧಾನಾತ್ಮಕವಾಗಿ ರೂಪುಗೊಂಡ ದೇಶದ ನ್ಯಾಯ ವ್ಯವಸ್ಥೆಯ ತೀರ್ಮಾನವೇ ಅಂತಿಮ ಎಂದು ಎಲ್ಲರೂ ಒಪ್ಪಿಕೊಂಡಿದ್ದಾರೆ.

ಸಂಕೀರ್ಣ ಸಮಸ್ಯೆಗಳನ್ನು ನ್ಯಾಯಪೀಠಗಳು ಸಮರ್ಥವಾಗಿ ನಿರ್ವಹಿಸುವ ನಂಬಿಕೆ ಹೆಚ್ಚಿದ್ದು, ವಿವಾದಗಳ ಪರಿಹಾರಕ್ಕಾಗಿ ರಸ್ತೆಗಿಳಿಯಲೇ ಬೇಕು ಎಂಬ ಭಾವನೆ ದೂರವಾಗುತ್ತದೆ. ಜನರನ್ನು ಧಾರ್ಮಿಕವಾಗಿ ಒಡೆದು ಆಳುವ ನೀತಿಗಿಂತ ದೇಶದ ಒಳಿತಿಗಾಗಿ ಸಮಗ್ರವಾಗಿ ಎಲ್ಲ ರಾಜಕೀಯ ಪಕ್ಷಗಳೂ ಚಿಂತಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.