ADVERTISEMENT

ಹೀಗೊಂದು ಬೆಳಕಿನ ಚಿಂತನೆ | ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ…

ಬೆಂಕಿ ಹಚ್ಚುವುದು ಸುಲಭ, ದೀಪ ಹಚ್ಚುವುದು ಕಷ್ಟ

ಕೃಷ್ಣಮೂರ್ತಿ ಹನೂರು
Published 22 ಅಕ್ಟೋಬರ್ 2022, 19:30 IST
Last Updated 22 ಅಕ್ಟೋಬರ್ 2022, 19:30 IST
ದೀಪದಿಂದ ದೀಪಹಚ್ಚಿ.... ದೀಪ ಹಚ್ಚಿ ಸಂಭ್ರಮಿಸಿದ ಯುವತಿ –ಪ್ರಜಾವಾಣಿ ಚಿತ್ರ
ದೀಪದಿಂದ ದೀಪಹಚ್ಚಿ.... ದೀಪ ಹಚ್ಚಿ ಸಂಭ್ರಮಿಸಿದ ಯುವತಿ –ಪ್ರಜಾವಾಣಿ ಚಿತ್ರ   

ಬೆಳಕಿನ ದಾರಿಗೆ ಅಡ್ಡಲಾಗಿರುವ ಸಂಗತಿಗಳು ಒಂದೇ, ಎರಡೇ. ಹಾಗಾದರೆ ಜಗತ್ತನ್ನು ಆವರಿಸಿರುವ ಕತ್ತಲೆಯಿಂದ ಬಿಡುಗಡೆ ಹೊಂದುವ ದಾರಿಯಾವುದು? ದೀಪಾವಳಿಯ ಈ ಹೊತ್ತಿನಲ್ಲಿ ಹೀಗೊಂದು ಬೆಳಕಿನ ಚಿಂತನೆ

***

ಮನುಷ್ಯನಾಗುವುದು ಕಷ್ಟ. ಅದಕ್ಕಿಂತಲೂ ಕಠಿಣವಾದುದೆಂದರೆ ಇನ್ನೊಬ್ಬರೊಂದಿಗೆ ನಾವು ಒಂದಾಗುವ, ಅಂತರಂಗಪೂರ್ವಕ ಸಂಬಂಧವಿದೆಯೆಂದು ಮೆಲುದನಿಯಲ್ಲಿ ಹೇಳಿಕೊಳ್ಳುವ ವಿಚಾರ. ಗುಂಪುಗಳ ನಡುವೆ ರಾಗದ್ವೇಷಗಳನ್ನು ಸೃಷ್ಟಿಸುವುದು ಸುಲಭ. ಅದಕ್ಕೆ ಕುತಂತ್ರಮೂಲದ ಮನಸ್ಥಿತಿ ಇದ್ದರೆ ಸಾಕು. ನಿಂತ ನೆಲವನ್ನೂ, ಜನಸಮೂಹವನ್ನೂ ಜೀವವಿಲ್ಲದ ಕುರುಹುಗಳ ಮೇಲೆ ಒಡೆದು ಹಾಕಿಬಿಡಬಹುದು. ಬದುಕಿನ ಸಮಯವೆಲ್ಲ ಅದಕ್ಕೇ ಮೀಸಲು. ನಮ್ಮ ಸುತ್ತಲಿನ ಪ್ರಕೃತಿಯೇನೋ ಸಮೃದ್ಧವಾಗಿದೆ; ಆದರೆ ಬೆಳಕನ್ನು ಬೆಂಕಿ ಮಾಡುತ್ತಿರುವ, ಹರಿಯುವ ಪವಿತ್ರ ತೀರ್ಥಗಳನ್ನು ಬಚ್ಚಲು ಮಾಡುತ್ತಿರುವ ಮನುಷ್ಯನ ಈ ಹೊತ್ತಿನ ಮನಃಸ್ಥಿತಿ, ತನ್ನ ಸುತ್ತಿನ ಚರಾಚರವನ್ನು, ಸುಂದರ ಪ್ರಕೃತಿಯನ್ನು ಕೃಶವಾಗಿಸುತ್ತಿದೆ. ಭೋಗಕ್ಕೆ ಬೆಲೆ ಕೊಡುವವರು ದೇವರನ್ನೂ, ಭಕ್ತಿ, ಅಧ್ಯಾತ್ಮವನ್ನೂ ಫ್ಯಾಷನ್ ಆಗಿಸಿರುವುದುಂಟು. ಇದು ಅರೆ ಬೌದ್ಧಿಕತೆಯ ಮತ್ತು ನಮ್ಮ ಶಿಕ್ಷಣ ನೀಡುತ್ತಿರುವ ಪದವಿಗಳ ವ್ಯಾಪಾರದ ಸಂಗತಿ. ಪ್ರಪಂಚ ಗೆಲ್ಲುವ ಹುಂಬರಿಗೆ ಶತಮಾನಗಳ ಕತೆ ಗೊತ್ತಿರಬೇಕು. ಭೂಪಾಲರೆಲ್ಲ ಸಮಾಧಿಯ ವೀರಗಲ್ಲಾಗಿ ಅಲ್ಲಲ್ಲೇ ಬಿದ್ದರಲ್ಲ! ಅವರ ಅಸಂಖ್ಯ ರಾಣಿಯರೆಲ್ಲ ಬೆಂಕಿ ಪಾಲಾದರು. ಅರಮನೆಯ ಸಕಲ ಭೋಗವೂ ಅವರ ಪದತಲದಲ್ಲಿದ್ದರೂ ಬೆಳ್ಳಿ, ಬಂಗಾರ ತಿನ್ನಲಾಗಲಿಲ್ಲ. ಯಾಕೆಂದರೆ ಅವರ ಕೈಯಲ್ಲಿ ಆಯುಧವಿದ್ದಿತು. ಅದರಿಂದ ಯಾರನ್ನೂ ಅಪ್ಪಿಕೊಳ್ಳಲಾಗಲೇ ಇಲ್ಲ. ಕೊನೆಗೆ ನಂಬಿದವರನ್ನು ಕೂಡ!

ADVERTISEMENT

‘ನೀವು ನಿಮ್ಮ ಜೀವನದಲ್ಲಿ ಏನನ್ನು ತ್ಯಜಿಸಲು ಬಯಸುತ್ತೀರಿ’ ಎಂದು ಕೇಳುವಲ್ಲಿ ಆಲ್ಬರ್ಟ್ ಕಾಮು, ‘ನನ್ನೊಳಗೆ ಮನೆ ಮಾಡಿರುವ ಕತ್ತಲು ಹಾಗೂ ಅದಕ್ಕೆ ಕಾರಣವಾಗಿರುವ ಅಸ್ಪೃಶ್ಯ ಸಂಗತಿ’ ಎಂದು ಹೇಳಿದ. ಹೀಗೆ ಜಗತ್ತನ್ನು ತುಂಬಿದ ಕತ್ತಲೆಗೆ ಸಿಡಿಮದ್ದು ಇಟ್ಟು ಇನ್ನಷ್ಟು ಬೆಂಕಿ ಹಚ್ಚಿ ಹೊಗೆ ಏಳಿಸಿ ಎಲ್ಲಿಯವರೆಗೆ ಸಾಗಬಹುದು? ಈ ಸಾಗಾಟದಲ್ಲಿ ಯಾರನ್ನೋ ಎಳೆ ತರುತ್ತ ಮತ್ತೆ ಯಾರನ್ನೋ ಹಿಂದೆ ತಳ್ಳುತ್ತ ಯಾವ ಗುರಿಯನ್ನು ಮುಟ್ಟಬಹುದು? ನಾನಾ ತಂತ್ರಗಳ ಉಪಾಯಗಳಲ್ಲೇ ಸಿಲುಕಿಕೊಂಡಿರುವ ಲೋಕಕ್ಕೆ ಬಿಡುಗಡೆಯ ಬೆಳಕು ಯಾವುದು?

***

ದಕ್ಷಿಣ ಕರ್ನಾಟಕದ ತುತ್ತ ತುದಿಯ ಅರಣ್ಯ ಭಾಗದಲ್ಲಿ ಹತ್ತಿಪ್ಪತ್ತು ಗುಡಿಸಲ ಸಮೂಹದ ನಡುವೆ ಮರದ ನೆರಳಿನ ಕಟ್ಟೆಯಲ್ಲಿ ಕೂತಿದ್ದ ಬುಡಕಟ್ಟು ಹಿರಿಯನೊಬ್ಬ ಮೇಲಿನ ಆಕಾಶವನ್ನೂ, ಸುತ್ತಿನ ಅರಣ್ಯವನ್ನೂ ನೋಡುತ್ತ ಹೊರ ಜಗತ್ತಿನ ವಿದ್ಯಮಾನಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ‘ನಿಮ್ಮದೆಲ್ಲ ನಾಣ್ಯದ ಪರಪಂಚ’ ಎಂದ. ಅಷ್ಟಾಗಿ ಕಾಸಿನ ಲೋಕ ಗೊತ್ತಿಲ್ಲದ ಈ ಅರಣ್ಯ ಮಧ್ಯದ ವ್ಯಕ್ತಿ ನಾಣ್ಯ ಪದವನ್ನು ಹಣ ಎಂಬ ಅರ್ಥದಲ್ಲಿ ಬಳಸಿರಲಾರ ಎನಿಸಿತು. ಒಂದು ಗಳಿಗೆ ಯೋಚಿಸಲಾಗಿ ನಾವೀನ್ಯದ ಪ್ರಪಂಚ ಎಂಬುದನ್ನು ನಾಣ್ಯ ಪರಪಂಚ ಎಂದಿರಬಹುದೇ, ಹೇಗಿದ್ದರೂ ಅದು ಸರಿಯೇ ಸರಿ ಎನಿಸಿತು.

ಸರಿಸುಮಾರು ನಲವತ್ತೈದು ವರ್ಷಗಳ ಹಿಂದೆ ಮಧ್ಯ ಕರ್ನಾಟಕದ ಚಿತ್ರದುರ್ಗ ಸೀಮೆಯ ಬುಡಕಟ್ಟು ಹಟ್ಟಿಯ ಜನಪದ ಗಾಯಕಿ ಸಿರಿಯಜ್ಜಿಯ ಕೈಗೆ ನೂರರ ಎರಡು ನೋಟುಗಳನ್ನು ಇಟ್ಟಾಗ, ಅವಳು ಒಂದು ಗಳಿಗೆ ಅದನ್ನೇ ನೋಡುತ್ತ ಈ ಕಾಸನ್ನು ಏನು ಮಾಡಬೇಕು ಎಂದಳು. ಅವಳು ಬದುಕುತ್ತಿದ್ದ ಹತ್ತಾರು ಗುಡಿಸಲುಗಳ ಸುತ್ತ ಯಾವ ಮಾಲ್‌ಗಳೂ ಇರಲಿಲ್ಲ. ಒಂದು ಕೊಂಡರೆ ಇನ್ನೊಂದು ಉಚಿತ ಎನ್ನುವ ಇಳುವರಿಯ ಮಾರಾಟದ ಭಾರಿ ವ್ಯಾಪಾರ ಮಳಿಗೆಗಳು ಇರಲಿಲ್ಲ. ಹೀಗಾಗಿ ಕೈಯಲ್ಲಿದ್ದ ಕಾಗದದ ನೋಟುಗಳನ್ನು ಏನು ಮಾಡಬೇಕೆಂದು ಕ್ಷಣಕಾಲ ಗೊತ್ತಾಗದೇ ಹೋಗಿದ್ದರೆ ಅದರಲ್ಲೇನು ಆಶ್ಚರ್ಯವಿರಲಿಲ್ಲ.

ಆಮೇಲೆ, ಸಿರಿಯಜ್ಜಿ ಪದ ಹೇಳು ಅಂದರೆ ತನಗೇನೂ ಗೊತ್ತಿಲ್ಲ ಅಂದಳು. ಸ್ವಲ್ಪ ಹೊತ್ತಿನ ಮೇಲೆ ಅವಳ ಹಾಡಿನ ಪ್ರಕಾರದಂತೆ ಬಾಳೆಯ ವನದಲ್ಲಿರುವ ಸರಸೋತಿ, ನೆಲ್ಲು ತೆನೆಯಂತೆ ತೂಗುವ ಸರಸೋತಿಯನ್ನು ಆವಾಹಿಸಿ ಆಮೇಲಾಮೇಲೆ ‘ಮಳೆರಾಯ ಬಂದು ಇಳೆಯೆಲ್ಲ ತಣಿದು, ಮೊದಲ ವೀಳ್ಯವ ಒಕ್ಕಲು ಮಗನಿಗೆ ನೀಡಿರೋ’ ಎಂದು ಹಾಡಿದಳು. ಲೋಕದ ಜೀವನಾಡಿಯಾದ ನೇಗಿಲ ಯೋಗಿಗೆ ಮೊದಲ ವೀಳ್ಯ ನೀಡಿ ಎಂದದ್ದು ಎಲ್ಲ ಕಾಲದ ಕ್ರಿಯೆ ಆಗಬೇಕಿತ್ತು. ಹಾಗೇನೂ ಆಗಲಿಲ್ಲ. ರಾಜಕಾರಣ, ಶಿಕ್ಷಣ ಎಲ್ಲವೂ ಹಣ ಪ್ರಪಂಚವಾಗಿರುವಂತೆ ಉಳುವ ನೆಲವೂ ಕಾಸು ಬೆಳೆಯುವ ಜಾಗಗಳಾಗುತ್ತಿವೆ. ಇಂಥದೆಲ್ಲ ದಂಧೆಗಳ ನಡುವೆ ಕಾಣಬಹುದಾದ ಬೆಳಕಿನ ಮಾರ್ಗ ಯಾವುದು?

***

ನಮ್ಮ ಪರಂಪರೆಯಾದರೋ ದೈವವನ್ನು ಸತ್ಯಶುದ್ಧ ಕಾಯಕದ ಮೂಲಕ ಕಂಡುಕೊಳ್ಳಬೇಕಾದದ್ದು, ಅದೇ ಬೆಳಕಿನ ಮಾರ್ಗ ಎಂದು ಹೇಳಿದೆ. ಆ ಬೆಳಕು ಅದರ ಸಂಕೇತವಾಗಿರುವ ಹಣತೆ ಅಥವಾ ಜ್ಯೋತಿ; ಇದಕ್ಕೆ ನಮ್ಮ ಸಂತರು ವಿವರಿಸಿಕೊಂಡು ಬಂದಿರುವ ಕ್ರಮವನ್ನು ಗಮನಿಸಿದರೆ ಆಶ್ಚರ್ಯವಾಗುತ್ತದೆ. ಸೌಂದರ್ಯಕ್ಕೆ ಸೋತು ಕೈಹಿಡಿದವನನ್ನು ಬಿಟ್ಟು, ಅರಸೊತ್ತಿಗೆಯನ್ನು ತಳ್ಳಿ, ಹುಟ್ಟಿದ ಪರಿಸರವನ್ನು ತೊರೆದು, ಕಲ್ಯಾಣವನ್ನು ಮುಟ್ಟಿ, ಬಸವನೆಂಬ ಅಮೃತಬಳ್ಳಿ ಸುತ್ತಿಕೊಂಡದ್ದರ ಸ್ಪರ್ಶದಿಂದ ಶ್ರೀಶೈಲ ಶಿಖರವನ್ನು ಕಂಡ ಅಕ್ಕ ಮಹಾದೇವಿ ತನ್ನೆಲ್ಲ ಪಡಿಪಾಟಲುಗಳ, ಪ್ರಯಾಣದ ಸಂಕಷ್ಟಗಳ ನಂತರ ‘ಕೋಟಿ ರವಿ ಶಶಿಗಳಿಗೆ ಮೀಟಾದ ಪ್ರಭೆ ಬಂದು ನಾಟಿತು ಎನ್ನ ಮನದೊಳಗೆ, ಅದರಿಂದ ದಾಟಿದೆನು ಭವದ ಕೊಳಗಳ’ ಎಂದಳು. ಆಕೆ ಹೇಳುವ ದಿವ್ಯ ಪ್ರಭೆ ಯಾವುದು? ಅಧ್ಯಾತ್ಮದ ತುದಿ ಮುಟ್ಟಿದವರ, ಪರಮಹಂಸರುಗಳ ಬದುಕಿನ ಆತ್ಯಂತಿಕ ಸಂದರ್ಭದಲ್ಲಿ ಕಂಡ ದಿವ್ಯರೂಪ ಅದೇ ಇರಬಹುದೆ? ಅದರ ಆರಂಭಿಕ ಹಂತ ಯಾವುದು? ನಿತ್ಯ ಬೆಳಗಿಸುವ ಅಥವಾ ಹಬ್ಬಗಳಂದು ಹಚ್ಚಿಡುವ ಹಣತೆಗಳೇ ಇರಬಹುದು. ಈ ಕಿರು ಹಣತೆಗಳೇ ದೈವ ಪ್ರಭೆಯನ್ನು ಕಾಣುವ ಕಿರುದಾರಿ ಹೌದು ಎನ್ನುವಂತೆ ತಿಳಿಯಲಾಗಿದೆ.

ಅಕ್ಕ ಮಹಾದೇವಿಯ ಕಠಿಣ ಮಾರ್ಗದಲ್ಲಿ ಕಂಡುಕೊಂಡ ಕೋಟಿ ರವಿ ಶಶಿಯ ಪ್ರಭೆಗೆ ಮೀಟಾದ ದಿವ್ಯ ಪ್ರಭೆಯನ್ನು ಕುರಿತು ತುಂಬ ಸರಳವಾಗಿಯೂ ಮನೋಜ್ಞವಾಗಿಯೂ ನಮ್ಮ ಸಂತರು, ಕವಿಗಳು ತತ್ವ ಪದಗಳಲ್ಲಿ ಕಾಣಿಸಿರುವುದುಂಟು. ಅಂಥ ಪರಿಶುದ್ದ ರೂಪವನ್ನು ಕುರಿತು ದಕ್ಷಿಣ ಕರ್ನಾಟಕದ ಗ್ರಾಮವೊಂದರ ಬದಿಯ ಎತ್ತರದ ಗುಡ್ಡದ ಗವಿಯಲ್ಲಿ ವಾಸವಿದ್ದ ನಿಜಗುಣ ಶಿವಯೋಗಿಗಳು ಜ್ಯೋತಿ ಬೆಳಗುತಿದೆ ಎಂಬ ತತ್ವಪದ ಹಾಡಿದ್ದಾರೆ. ಕರ್ನಾಟಕದ ದಕ್ಷಿಣ ತುದಿಯಿಂದ ಉತ್ತರ ಕರ್ನಾಟಕದ ಕಲಬುರ್ಗಿವರೆಗೆ ಕೇಳಿಸಿಕೊಳ್ಳಬಹುದಾದ ಈ ಕೀರ್ತನೆಯ ಅರ್ಥವ್ಯಾಪ್ತಿ ದೊಡ್ಡದು. ಬಳಕೆಯಾಗಿರುವ ಒಂದೊಂದು ಪದವೂ ವಿಶ್ವ ಚೈತನ್ಯ ಶಕ್ತಿಯ ಕಡೆಗೆ ನಡೆಯುವಂತಿದೆ. ಬೆಳಕಿನ ಕಡೆಗೆ ಕೈ ಹಿಡಿದು ನಡೆಸಿಕೊಂಡು ಹೋಗುವಂತಿದೆ. ಆ ಪ್ರಯಾಣದಲ್ಲಿ ಮಾತು ಕಡಿಮೆಯಾಗಬೇಕು. ಮಾತು, ಆಪಾದನೆ, ಜಗಳ ಇಲ್ಲವಾದರೆ ಸಾಲದು. ಅಂತರಂಗ ಸರಿ ಹೋಗಿ ಅದು ನಿರ್ಮಲವಾಗಬೇಕು. ಕಾಣುವ ಜ್ಯೋತಿಯ ಕಡೆ ದೃಷ್ಟಿ ಇದ್ದರೆ ಮಾತ್ರವಲ್ಲ, ಆ ಬಗ್ಗೆ ತಿಳಿಯುವ ಕುತೂಹಲ ಇರಬೇಕು. ಮುಂದುವರೆದು ನಿಜಗುಣರು ಇನ್ನೊಂದು ನಿಯಮ ಹಾಕುತ್ತಾರೆ, ಅಲ್ಲಿ ಯಾವ ಲಾಭ ನಷ್ಟದ ಉದ್ದೇಶವೂ ಇರಕೂಡದು. ದೇವರಿಗೆ ಎಷ್ಟು ಆಮಿಷ ತೋರಿ, ತಾನೆಷ್ಟು ಹೊಡೆಯಬಹುದು ಎಂಬ ತುಚ್ಛ ಭಾವ ಇರುವಂತಿಲ್ಲ. ಈ ಕಾರಣ ಜ್ಯೋತಿಯ ಕಡೆಗಿನ ಪ್ರಯಾಣ ಕಠಿಣ. ಸರಳ ನಡೆಯಿದ್ದಲ್ಲಿ ಸುಲಭ ಕೂಡ. ನಿರುಪಾಧಿಕ ಭಾವದಿಂದ ಹೊರಟಲ್ಲಿ ಕಡೆಗೊಮ್ಮೆಆ ಜ್ಯೋತಿ ಕಾಣಿಸಿಕೊಳ್ಳಬಹುದು. ಇದನ್ನೇ ನಿಜಗುಣರು‘ಮಾತು ಮನಂಗಳಿಂದ ಅತ್ತತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ ಜ್ಯೋತಿ’ ಎಂದಿದ್ದಾರೆ. ಸಂಸ್ಕೃತ ಅಲಂಕಾರಿಕರು ಕೂಡ ಲೋಕ ಆಡುವ ಮಾತನ್ನೇ ಜ್ಯೋತಿ ಎಂದಿದ್ದಾರೆ.

ಕರ್ನಾಟಕದ ಯಾವುದೋ ತುದಿಯ ಗುಡ್ಡದ ಗವಿಯಲ್ಲಿ ಐದು ಶತಮಾನಗಳ ಹಿಂದೆ ಹೇಳಿದ್ದನ್ನೇ, ಹತ್ತೊಂಬತ್ತನೆಯ ಶತಮಾನದಲ್ಲಿ ಯೂರೋಪಿನ ಕವಿ ಜಾನ್ ಹೆನ್ರಿ ನ್ಯೂಮನ್, ಆ ಬೆಳಕನ್ನೆ ತನ್ನ ಬಳಿಗೆ ಕರೆದು ಕೈ ಹಿಡಿದು ನಡೆಸಬೇಕೆಂದು ಪ್ರಾರ್ಥಿಸಿದ್ದಾನೆ. ಕರುಣಾಳು ಬೆಳಕಿನ ಬಗೆಗೆ ಅಂಥ ಪ್ರಾರ್ಥನೆ ಏಕೆಂದರೆ, ಬೇಡುವವನು ಮುಸುಕಿದ ಕತ್ತಲೆಯ ಗವಿಯಲ್ಲಿ ಸಿಲುಕಿಬಿಟ್ಟಿದ್ದಾನೆ, ದಾರಿ ಕಾಣುತ್ತಿಲ್ಲ. ಹಾಗಾಗಿ ಬೆಳಕನ್ನು ಕರೆಯುತ್ತಿದ್ದಾನೆ. ನಿಜಗುಣ, ನ್ಯೂಮನ್ ಇವರ ರಚನೆ ಎರಡೂ ವಿರುದ್ಧ ದಿಕ್ಕಿನದಾದರೂ ಅವುಗಳ ಉದ್ದೇಶ ಒಂದೇ. ನಿಜಗುಣರು ದಾರಿ ತೋರಿದರೆ, ನ್ಯೂಮನ್ ದಾರಿ ಕಾಣದು ಎನ್ನುತ್ತಿದ್ದಾನೆ. ಈ ದಾರಿಗೆ ಅಡ್ಡಲಾಗಿರುವ ಸಂಗತಿಗಳು ಒಂದೇ ಎರಡೇ.

ನಾವೇ ಸೃಷ್ಟಿ ಮಾಡಿಕೊಂಡಿರುವ ಹುಸಿ ಅಧ್ಯಾತ್ಮ ಸಂಸ್ಥೆಗಳು, ದೇಶದೋದ್ಧಾರ ಸಂಬಂಧಿ ಚರ್ಚೆಗಳು, ಬದುಕಿಗೆ ಬಿಡುಗಡೆ ನೀಡಬೇಕಾದ ಧರ್ಮಗಳೇ ಕೈಕಾಲುಗಳಿಗೆ ಸುತ್ತಿಕೊಂಡು ಅದಕ್ಕೆ ಹೊಂದಿಕೊಂಡಂತೆ ಅಸಂಖ್ಯಾತ ದೈವಗಳು, ಇವೆಲ್ಲವೂ ನಮ್ಮನ್ನು ಬೆಳಕಿನತ್ತ ಮುಖವಾಗದಂತೆ ಮಾಡಿಬಿಟ್ಟಿವೆ. ವಿದ್ಯಮಾನಗಳೆಲ್ಲ ಗೋಚರವಾಗುತ್ತಿದ್ದರೂ ಬಿಡಿಸಿಕೊಳ್ಳಲಾರದಂತೆ, ಬಲೆಯಿಂದ ಹೊರಬರದಂತೆ ನಿರ್ಬಂಧವೇರ್ಪಡುತ್ತಿವೆ. ನಮ್ಮ ಜಾತಿಯವನೆ ಮುಖ್ಯಮಂತ್ರಿ ಎಂತಲೋ, ಜೈಲಿನಿಂದ ಬಂದ ನಮ್ಮವನೇ ನಾಯಕನೆಂದೋ ಹಾರವೇರಿಸಿ, ಮದ್ದಿನ ಸರಮಾಲೆಗೆ ಕಿಡಿ ಸೋಕಿಸಿ ಸಿಡಿಯುವಂತೆ ಮಾಡಿರಲಾಗಿ, ಸುತ್ತೆಲ್ಲ ಗುಡಿಸಲಾಗದ ಕಸದ ಗುಡ್ಡೆ ನಿರ್ಮಾಣವಾಗಿದೆ. ಇವರ ಗದ್ದಲಕ್ಕೆ ಹಕ್ಕಿ ಪಕ್ಷಿಗಳೂ ಬೆಚ್ಚಿ ಬೀಳುತ್ತಿವೆ. ಈ ಕ್ರಮದಲ್ಲಿ ಅಸಹಾಯಕವಾಗಿರುವ ಸಮೂಹಕ್ಕೆ ಅದರ ಬೇಡಿಕೆ ಪೂರೈಸಲೋ, ಪ್ರಭುತ್ವ ಸಾಧಿಸಲೋ, ಭೇದಭಾವ ಹುಟ್ಟಿಸಲೋ ಒಟ್ಟಿನಲ್ಲಿ ತಮ್ಮ ಯಾವತ್ತೂ ಉದ್ದೇಶಗಳಿಗೆ ಬೇಕಾದ ಮೂಲ ಸಾಮಗ್ರಿಗಳನ್ನಾಗಿ ಮನುಷ್ಯ ಗುಂಪುಗಳನ್ನು ಬಳಸಿಕೊಳ್ಳುವಂತಾಗಿದೆ. ಇದರ ವೇಗದಲ್ಲಿ ಮಂಗಳದ ಬೆಳಕು ದೇವರನ್ನೂ ಸೇರಿಸಿ ಊರು ಕೇರಿಯನ್ನೇ ಸುಡುತ್ತ, ತೀರ್ಥವಾಗಬೇಕಿದ್ದ ನೀರು ಹುಚ್ಚು ಹೊಳೆಯಾಗಿ ಜನ ಜಾನುವಾರನ್ನು ಮುಳುಗಿಸುವುದಾದರೆ ರಕ್ಷಕರು ಯಾರು?

ಸಂದರ್ಭ ನಿಷ್ಠೆಯಿಂದ ಬೇರೆಯಾಗಿ ಸಾರ್ವತ್ರಿಕವಾಗಿ ಎಲ್ಲರಿಗೂ ಎಲ್ಲ ಸಮಯದಲ್ಲೂ ಅನ್ವಯವಾಗುವಂಥ ಸೂತ್ರಗಳು ಭಾರತದಲ್ಲಿ ಹಿಂದೆಯೂ ಇದ್ದವು, ಈಗಲೂ ಇದ್ದೇ ಇವೆ. ಎಲ್ಲ ಮಹಾ ಪುರುಷರೂ ಅದನ್ನೇ ಪ್ರತಿಪಾದಿಸಿದ್ದಾರೆ. ಆದರೆ ಆಯಾ ಮಹಾನುಭಾವರ ಅನುಯಾಯಿಗಳೇ ತಮಗೆ ಬೇಕಾದಂತೆ ಆ ಜೀವನ ಸೂತ್ರಗಳನ್ನು ತಿರುಗಿಸಿ, ಉರುಗಿಸಿ ಎಲ್ಲ ದಿವ್ಯವಾದುದೂ ತಮ್ಮ ಕೈ ಅಳತೆಯಲ್ಲೇ ಇದೆ, ಇತ್ತಲೇ ಬನ್ನಿ ಎಂದು ಲಾಭದ ಹುಂಡಿಯನ್ನು ಇಟ್ಟು ಕೂತಿದ್ದಾರಲ್ಲ!

***

ಎಲ್ಲ ಪದಗಳೂ ಹೇಳಿ ಮುಗಿದವೇ ಎಂದು ಸಿರಿಯಜ್ಜಿಯನ್ನು ಕೇಳಲಾಗಿ ಅವಳು ಹಾಡುವುದು ಇನ್ನೂ ಇದೆ ಎಂದಳು. ಉಳಿದದ್ದು ಎಂದರೆ ‘ಸಣ್ಣ ಹಣತೆ, ಮಿಳ್ಳೆ ಎಣ್ಣೆ/ ನನ್ನ ಗುಡಿಸಲ ಜ್ಯೋತಿಯೇ/ ಮೆಲ್ಲ ಮೆಲ್ಲಾಕ ಉರಿಯೆ ಪರಂಜ್ಯೋತಿ’ ಎಂದು ಹಾಡಿದಳು. ಗಮನಿಸಬೇಕಾದದ್ದು ಎಂದರೆ ಎರಡನೆಯ ಸಾಲಿನಲ್ಲಿ ಕಣ್ಣಿಗೆ ಕಾಣುವ ಜ್ಯೋತಿ, ಮೂರನೆಯ ವಾಕ್ಯದಲ್ಲಿ ಶ್ರಮ ವಹಿಸಿ ಕಾಣಿಸಿಕೊಳ್ಳಬೇಕಾದ ಪರಂಜ್ಯೋತಿಯಾಗಿಬಿಡುತ್ತದೆ. ಈ ಪದ ಕೇಳುವಲ್ಲಿ ಆಕೆಯನ್ನು ಸನ್ಮಾನಿಸಲು ಸೇರಿದ್ದ ಸಭೆ ಒಂದು ಗಳಿಗೆ ನಿಶ್ಚಲ ದೀಪದ ಕುಡಿಯಂತಾಗಿಬಿಟ್ಟಿತು! ಇದೀಗ ಮಳೆಯ ಸಮೃದ್ಧಿಯೊಡನೆ ಮತ್ತೆ ಬಂದಿರುವ ದೀಪಾವಳಿ ದಿನದಂದು ಮಕ್ಕಳು, ಹೆಣ್ಣುಮಕ್ಕಳು, ಹಿರಿಯರು ಸೇರಿ ಹಚ್ಚುವ ಹಣತೆಗಳ ಸಣ್ಣ ಬೆಳಕು ನಮ್ಮ ಕಣ್ಣುಗಳಿಗೆ ಕಾಣಿಸಿ, ಅದು ಅಂತರಂಗಕ್ಕಿಳಿದು ಬೆಳಗುವಂತಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.