ADVERTISEMENT

ಮೊದಲ ಓದು: ತಾಜಾ ಪ್ರಾಯದ ಕೆಲವು ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 19:30 IST
Last Updated 6 ಫೆಬ್ರುವರಿ 2021, 19:30 IST
ಗುರುಗಣೇಶ ಭಟ್ ಡಬ್ಗುಳಿ ಪದ್ಯಗಳು
ಗುರುಗಣೇಶ ಭಟ್ ಡಬ್ಗುಳಿ ಪದ್ಯಗಳು   

ಇದುವರೆಗಿನ ಪ್ರಾಯ
ಲೇ:
ಗುರುಗಣೇಶ ಭಟ್ ಡಬ್ಗುಳಿ
ಪ್ರ: ಸ್ವಯಂ ಪ್ರಕಾಶನ, ಯಲ್ಲಾಪುರ
ಮೊ: 80950 29267

ಪ್ರಾಯ ಬಂದಾಗ ಅದೇ ಜಗತ್ತು ಹೊಸದಾಗಿ ಕಾಣಿಸುತ್ತದೆ. ಆದರೆ ಆ ಹೊಸತನ ಇರುವುದು ಪ್ರಾಯದ ಕಣ್ಣುಗಳಲ್ಲಿ. ಆ ಮೇಲುನೋಟದ ಹೊಳಪನ್ನು ಮೀರಿ ಬದುಕಿನಲ್ಲಿ ಅಂತರ್ಗತವಾಗಿ ಹರಿಯುತ್ತಿರುವ ಜೀವಂತಿಕೆಯನ್ನು ಕಾಣಲು, ಕಾಣಿಸಲು ಪ್ರಾಯದ ಉಮೇದಿನ ಜೊತೆಗೆ ಅದಕ್ಕೆ ಮೀರಿದ ಪ್ರತಿಭೆಯೂ ಬೇಕು. ಈ ಪ್ರತಿಭೆಯ ಸೂಚನೆಯನ್ನು ಕೊಡುವ ಸಾಲುಗಳು, ಚಿತ್ರಗಳು ಗುರುಗಣೇಶ ಭಟ್ ಡಬ್ಗುಳಿ ಅವರ ಮೊದಲ ಕವನ ಸಂಕಲನ ‘ಇದುವರೆಗಿನ ಪ್ರಾಯ’ದಲ್ಲಿ ಅಲ್ಲಲ್ಲಿ ಎದುರಾಗುತ್ತವೆ.

ಬದುಕಿನ ನೋವು, ಸಮಾಜದಲ್ಲಿನ ಅನ್ಯಾಯಗಳಿಗಷ್ಟೇ ಕಾವ್ಯವಾಗುವ ಯೋಗ್ಯತೆಯಿದೆ ಎಂಬ ಜನಪ್ರಿಯ ವ್ಯೂ ಪಾಯಿಂಟ್‌ನಿಂದ ಎರಡೇ ಹೆಜ್ಜೆ ಆಚೆ ನಿಂತು ಈ ಕವಿ, ಜಗತ್ತನ್ನು ನೋಡುತ್ತಿರುವಂತಿದೆ. ಹಾಗಂತ ಈ ಸಂಕಲನದಲ್ಲಿ ನೋವು, ನಿರಾಸೆ, ವಿಷಾದಗಳೆಲ್ಲ ಇಲ್ಲವೆಂದಲ್ಲ. ಆದರೆ ಅವುಗಳನ್ನು ಎದುರಿಸುತ್ತಿರುವ ರೀತಿ ಕೊಂಚ ಭಿನ್ನವಾಗಿದೆ. ಆ ನೋಟದಲ್ಲಿ ತುಂಟತನ, ಬೆರಗು, ಭಾವುಕತೆಗಳೂ ಸೇರಿಕೊಂಡಿವೆ.

ADVERTISEMENT

ಇಲ್ಲಿ ಕವಿತೆ ತನ್ನ ಸುತ್ತಲಿನ ಜಗತ್ತು ಮತ್ತು ಅದರೊಳಗೆ ಸೇರಿಹೋಗಿರುವ ಬದುಕನ್ನು ಬೇರೆ ಬೇರೆ ಎನ್ನುವಂತೆ ನೋಡುವುದಿಲ್ಲ. ಹಾಗಾಗಿಯೇ ಕವಿಗೆ ‘ನೆಲ ಆಕಾಶ ತಾಗುವ ಜಾಗ/ಅಮ್ಮ ಮಾಡುವ ನಮಸ್ಕಾರ’ದಂತೆ ಕಾಣುತ್ತದೆ. ಕವಿತೆ ಬರೆಯುತ್ತ ಬರೆಯುತ್ತ ‘ಯಾವುದು ಪದ್ಯ/ಯಾವುದು ಬದುಕು/ಒಂದೂ ತಿಳಿಯಲಿಲ್ಲ’ ಎಂಬ ಬೆರಗು ಮೂಡುತ್ತದೆ.

ಆದರೆ ಈ ಸಂಕಲನದಲ್ಲಿ ಅಲ್ಲಲ್ಲಿ ಎದುರಾಗುವ ಇಂಥ ತಾಜಾ ಬಿಂಬಗಳು ಸ್ವತಂತ್ರವಾಗಿ ಗಮನ ಸೆಳೆಯುತ್ತವೆಯೇ ಹೊರತು ಒಂದಿಡೀ ಪದ್ಯ ಗಾಢವಾಗಿ ಕಾಡುವುದಿಲ್ಲ. ಇಲ್ಲಿನ ಬಹುತೇಕ ಪದ್ಯಗಳು ಹಲವು ಚದುರಿದ ಚಿತ್ರಗಳನ್ನು ಒಂದೆಡೆ ಜೋಡಿಸಿಟ್ಟಂತೆ ಕಾಣುತ್ತವೆ. ಇಂಥ ಚಿತ್ರಗಳೂ ಕಾವ್ಯದಲ್ಲಿ ಸಾರ್ಥಕವಾಗುವುದು, ಆ ಚಿತ್ರಗಳೆಲ್ಲ ಸೇರಿಕೊಂಡು ಒಂದು ಗಟ್ಟಿ ಅನುಭವವಲಯವನ್ನು ನಿರ್ಮಾಣಮಾಡಿ, ದರ್ಶನದತ್ತ ಮುಖಮಾಡಿದಾಗ. ಇಲ್ಲಿನ ಕವಿತೆಗಳಿಗೆ ಅಂಥ ಮಹತ್ವಾಕಾಂಕ್ಷೆ ಇಲ್ಲ. ಹಾಗಾಗಿ ಇವು ಆ ಕ್ಷಣಕ್ಕೆ ಓದಿ ಸುಖಿಸುವುದರಾಚೆಗೆ ಮತ್ತೆ ಮತ್ತೆ ಓದಿಸಿಕೊಳ್ಳುವ ಶಕ್ತಿಯನ್ನು ಪಡೆದಿಲ್ಲ. ಭಾಷೆಯಲ್ಲಿ ಮೂಡುವ ಚಮತ್ಕಾರಗಳ ಮೋಹದಿಂದ ಬಿಡಿಸಿಕೊಂಡು ಅನುಭವದ ಸಮರ್ಥ ಅಭಿವ್ಯಕ್ತಿಯ ಕಸುವನ್ನು ರೂಢಿಸಿಕೊಂಡರೆ ಇವರ ಮುಂದಿನ ಕಾವ್ಯಗಳಿಗೆ ಬೇರೆಯದೇ ಆಯಾಮ ದೊರೆಯಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.