ADVERTISEMENT

ಹಾಲಿವುಡ್‌ನಲ್ಲೂ ಮಿಂಚಿದ ಹಾವಾಡಗಿತ್ತಿ!

ಪ್ರವೀಣ ಕುಲಕರ್ಣಿ
Published 27 ಫೆಬ್ರುವರಿ 2021, 19:30 IST
Last Updated 27 ಫೆಬ್ರುವರಿ 2021, 19:30 IST
ಗುಲಾಬೊ ಸಪೇರಾ
ಗುಲಾಬೊ ಸಪೇರಾ   

‘ಭಾರತವೆಂದರೆ ಹಾವಾಡಿಗರ ದೇಶ’ ಎಂದು ಮೂಗು ಮುರಿದ ರಾಷ್ಟ್ರಗಳು ಈಗ ಸರದಿಯಲ್ಲಿ ನಿಂತು ಅದೇ ಭಾರತದ ಹಾವಾಡಿಗ ಕುಟುಂಬದ ಕಲಾವಿದೆ ಗುಲಾಬೊ ಸಪೇರಾ ಅವರ ನೃತ್ಯ ಪ್ರದರ್ಶನಕ್ಕಾಗಿ ಹಾತೊರೆದು ಕಾಯುತ್ತಿವೆ. ಹೇಳಿಕೊಳ್ಳಲು ಒಂದು ಊರೂ ಇಲ್ಲದ ರಾಜಸ್ಥಾನದ ಈ ಕಲಾವಿದೆ, 150ಕ್ಕೂ ಹೆಚ್ಚು ದೇಶಗಳಲ್ಲಿ ಕಾಲ್‌ಬೆಲಿಯಾ ನೃತ್ಯ ಪ್ರದರ್ಶನ ನೀಡಿ ಜಗತ್ತಿನ ಗಮನ ಸೆಳೆದಿದ್ದಾರೆ.

ರಾಜಸ್ಥಾನದ ಕುರುಚಲು ಕಾಡುಗಳಲ್ಲಿ ಪುಂಗಿಯ ನಾದ, ದಪಲಿಯ ಸದ್ದಿಗೆ ಹಾವಿನ ಚಲನೆಯಂತೆ ನೃತ್ಯದ ಪಟ್ಟುಗಳನ್ನು ಪ್ರದರ್ಶಿಸುತ್ತಿದ್ದ ಗುಲಾಬೊ, ಶಾಲೆಯ ಮೆಟ್ಟಿಲನ್ನೇನು ತುಳಿದವರಲ್ಲ. ಆದರೆ, ಹಾಲಿವುಡ್‌ ಚಿತ್ರಗಳಲ್ಲೂ ನಟಿಸುವಷ್ಟು ಎತ್ತರಕ್ಕೆ ಬೆಳೆದು ನಿಂತವರು. ಕಾಡು ಕುಸುಮವೊಂದು ಹೀಗೆ ಜಗತ್ತಿನ ತುಂಬಾ ತನ್ನ ಕಲೆಯ ಪರಿಮಳವನ್ನು ಪಸರಿಸುತ್ತಿರುವುದು ನಮ್ಮ ದೇಶದ ಬೆರಗುಗಳಲ್ಲೊಂದು. ಈ ವರ್ಷದ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಅವರು ‘ಭಾನುವಾರದ ಪುರವಣಿ’ಯೊಂದಿಗೆ ಮಾತಿಗೆ ಸಿಕ್ಕರು. ‘ಹೇಳತೀನಿ ಕೇಳ...’ ಎಂದು ತಮ್ಮ ಬದುಕಿನ ರೋಚಕ ಕಥೆಗಳ ಪುಟಗಳನ್ನು ತಿರುವಿ ಹಾಕಿದರು.

ಕಾಲ್‌ಬೆಲಿಯಾ (ಹಾವು ಹಿಡಿಯುವವರು) ಎನ್ನುವುದು ರಾಜಸ್ಥಾನದ ಬುಡಕಟ್ಟು ಜನಾಂಗಗಳಲ್ಲಿ ಒಂದು. ಗುಡ್ಡಗಾಡಿನಲ್ಲಿಯೇ ಈ ಸಮುದಾಯ ನೆಲೆ ಕಂಡುಕೊಂಡಿದೆ. ಹಾವು ಹಿಡಿಯುವುದು, ಹಾವಾಡಿಸಲು ಊರೂರು ಸುತ್ತುವುದು ಈ ಸಮುದಾಯದ ಕಾಯಕ. ಅಂತಹ ಸಮುದಾಯದಲ್ಲಿ ಜನಿಸಿದವರು ಗುಲಾಬೊ.

ADVERTISEMENT

ಒಂದು ಕುಟುಂಬಕ್ಕೆ ಒಂದೇ ಹೆಣ್ಣುಮಗು ಎನ್ನುವುದು ಕಾಲ್‌ಬೆಲಿಯಾ ಜನಾಂಗದ ಅಲಿಖಿತ ನಿಯಮ. ಕುಟುಂಬದ ಏಳನೇ ಮಗುವಾಗಿ ಗುಲಾಬೊ ಜನಿಸಿದಾಗ ಆಕೆಗೆ ಅದಾಗಲೇ ಮೂವರು ಅಕ್ಕಂದಿರು ಇದ್ದರು. ಹಿಂದೆಯೂ ಈ ಕುಟುಂಬದ ಹೆಣ್ಣುಮಕ್ಕಳನ್ನು ಕೊಲ್ಲಲು ಹೋಗಿ ಸೋತಿದ್ದ ಸಮುದಾಯದ ಮುಖಂಡರು, ನಮ್ಮ ಹಾಡಿಯಲ್ಲಿ ‘ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಯಿತು’ ಎಂದು ಆಕ್ರೋಶಗೊಂಡರು, ಆಗತಾನೆ ಜನಿಸಿದ ಹಸುಗೂಸನ್ನು ಕಾಡಿನಲ್ಲಿ ದಫನ ಮಾಡಲು ಅದರ ಅಮ್ಮನ ಮಡಿಲಿನಿಂದ ಕಿತ್ತುಕೊಂಡು ಹೋದರು. ಆದರೆ, ಅವರನ್ನು ಹಿಂಬಾಲಿಸಿದ ಆ ಕೂಸಿನ ಚಿಕ್ಕಮ್ಮ, ಮಣ್ಣಾಗುತ್ತಿದ್ದ ಕಂದನನ್ನು ಉಳಿಸಿಕೊಂಡು ಬಂದರು. ಗುಲಾಬೊ, ಜನಿಸಿದ ತಕ್ಷಣವೇ ಸಾವಿನ ದವಡೆಯಿಂದ ಪಾರಾಗಿ ಬಂದ ಕಥೆ ಇದು.

‘ಕಾಲ್‌ಬೆಲಿಯಾ ಸಮುದಾಯ ಗುಡ್ಡಗಾಡಿನಲ್ಲಿಯೇ ವಾಸ ಇರುವುದರಿಂದ ಮನೆಯಲ್ಲಿ ಹೆಣ್ಣುಮಕ್ಕಳು ಹೆಚ್ಚಾಗಿದ್ದರೆ ಅಪಾಯ ಜಾಸ್ತಿ. ಏನಾದರೂ ಹೆಚ್ಚು–ಕಡಿಮೆಯಾದರೆ ಕುಲಕ್ಕೂ ಕೆಟ್ಟ ಹೆಸರು. ಅಲ್ಲದೆ, ಬೆಳೆದ ಮೇಲೆ ಮದುವೆ ಮಾಡಲು ದೊಡ್ಡ ಪ್ರಮಾಣದಲ್ಲಿ ವರದಕ್ಷಿಣೆಯನ್ನೂ ಕೊಡಬೇಕು. ಇಂತಹ ಯಾವ ತಾಪತ್ರಯ ಬೇಡವೆಂದು ಸಮುದಾಯದ ಮುಖಂಡರು ಕಂಡುಕೊಂಡ ಸುಲಭದ ಉಪಾಯ ಹುಟ್ಟಿದ ತಕ್ಷಣವೇ ಹೆಣ್ಣುಮಗುವಿನ ಜೀವವನ್ನು ತೆಗೆದುಬಿಡುವುದು’ ಎಂದು ನೋವಿನ ನಗೆ ನಗುತ್ತಾರೆ ಗುಲಾಬೊ.

ಮನೆಯಲ್ಲಿ ಬಿಟ್ಟುಹೋದರೆ ಸಮುದಾಯದ ಮುಖಂಡರಿಂದ ಮತ್ತೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರಿತ ಗುಲಾಬೊ ಅವರ ಅಪ್ಪ, ಮುಂದೆ ಆ ಪುಟ್ಟ ಮಗುವನ್ನು ಹಾವಿನ ಬುಟ್ಟಿಗಳ ಮಧ್ಯೆ ಕೂರಿಸಿಕೊಂಡು ಹಾವಾಡಿಸಲು ಹೋಗುತ್ತಿದ್ದರು. ಹಾವಿಗೆ ಹಾಲು ಕುಡಿಸಿದ ಮೇಲೆ, ಅವುಗಳು ಬಿಟ್ಟ ಹಾಲನ್ನು ಗುಲಾಬೊ ಅವರಿಗೆ ಕುಡಿಯಲು ಕೊಡುತ್ತಿದ್ದರು. ಹೀಗೆ ಗುಲಾಬೊ ಹಾವಿನ ಹುಡುಗಿಯಾಗಿ ಬೆಳೆಯಲು ಆರಂಭಿಸಿದರು.

ಹಾವುಗಳನ್ನು ಪಳಗಿಸುವಾಗ, ಊರೂರಲ್ಲಿ ಪ್ರದರ್ಶನ ನೀಡುವಾಗ ಅಪ್ಪ ಪುಂಗಿ ಊದುತ್ತಿದ್ದ. ಅಣ್ಣ ದಪಲಿ ಬಾರಿಸುತ್ತಿದ್ದ. ಅಕಶೇರುಕಗಳಾದ ಹಾವುಗಳು ಕಣ್ಣು ಮಿಟುಕಿಸುವಷ್ಟರಲ್ಲಿ ಹೆಡೆ ಎತ್ತಿ ಅತ್ತಿಂದಿತ್ತ ಚಲಿಸುವುದನ್ನು ಗುಲಾಬೊ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದರು. ಅವುಗಳು ಬಳಕುವುದನ್ನು ಅಷ್ಟೇ ಏಕಾಗ್ರತೆಯಿಂದ ಗಮನಿಸುತ್ತಿದ್ದರು. ಕಾಡಿನಲ್ಲಿ ಹಾವುಗಳ ಪ್ರಣಯ ಪ್ರಸಂಗಗಳನ್ನೂ ಅವರು ನೋಡಿದ್ದರು. ಅವುಗಳು ಪಲ್ಟಿ ಹೊಡೆಯುತ್ತಿದ್ದ ಆ ವೇಗ ಈ ಹುಡುಗಿಗೆ ರೋಮಾಂಚನವನ್ನು ಉಂಟು ಮಾಡಿತ್ತು. ಸಂಜೆ ಮನೆಯ ಮುಂದಿನ ಬಯಲಿನಲ್ಲಿ ದಪಲಿಯ ಸದ್ದು ಮೊಳಗುವಾಗ ಅಥವಾ ಪುಂಗಿಯ ನಾದ ಕೇಳಿಬರುವಾಗ ಗುಲಾಬೊ ನೃತ್ಯವೂ ಜೋರಾಗಿ ನಡೆಯುತ್ತಿತ್ತು. ಮಬ್ಬುಗತ್ತಲಿನಲ್ಲಿ ನಡೆಯುತ್ತಿದ್ದ ಆ ಕಲಾ ಪ್ರದರ್ಶನ ಹಾಡಿಯಲ್ಲಿ ಯಾರೆಂದರೆ ಯಾರ ಗಮನಕ್ಕೂ ಬರಲಿಲ್ಲ. ಆದರೆ, ಆ ವೇಳೆಗೆ ಹಾವಿನಂತೆ ಬಳುಕುವುದನ್ನು ಆ ಹುಡುಗಿ ಕಲಿತುಬಿಟ್ಟಿದ್ದಳು.

ಗುಲಾಬೊ ಅವರ ಅಪ್ಪ ಹಾವುಗಳ ಬುಟ್ಟಿಗಳನ್ನು ಹೊತ್ತು ಪುಷ್ಕರ ಮೇಳ ಕ್ಕೆ ಹೋಗುವಾಗ ಮಗಳನ್ನೂ ಕರೆದೊಯ್ದಿದ್ದರು. ಅಪ್ಪ ಹಾವಾಡಿಸುವಾಗ, ಮಗಳು ಮಾಡುತ್ತಿದ್ದ ನೃತ್ಯ ಮೇಳದ ಉಸ್ತುವಾರಿ ಹೊತ್ತ ರಾಜಸ್ಥಾನದ ಅಧಿಕಾರಿಗಳ ಗಮನವನ್ನೂ ಸೆಳೆಯಿತು. ‘ಏನು ಈ ಹುಡುಗಿ, ದೇಹದಲ್ಲಿ ಎಲುಬುಗಳೇ ಇಲ್ಲ ಎನ್ನುವಂತೆ ನೃತ್ಯ ಮಾಡುತ್ತಾಳಲ್ಲ’ ಎಂದು ಅವರಿಗೆಲ್ಲ ಸೋಜಿಗ. ಪ್ರಧಾನ ವೇದಿಕೆಯಲ್ಲಿ ಗುಲಾಬೊ ಅವರ ನೃತ್ಯ ಪ್ರದರ್ಶನಕ್ಕೆ ಅವಕಾಶವನ್ನೂ ಮಾಡಿಕೊಟ್ಟರು. ಅಲ್ಲಿಂದ ಈ ಕಲಾವಿದೆ ಹಿಂದಿರುಗಿ ನೋಡಿದ್ದೇ ಇಲ್ಲ. ಅವಕಾಶಗಳ ಮೇಲೆ ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು.

ಅಮೆರಿಕದಲ್ಲಿ ನಡೆದ ಭಾರತೀಯ ಹಬ್ಬದಲ್ಲಿ ಗುಲಾಬೊ ಅವರಿಗೆ ಪಾಲ್ಗೊಳ್ಳುವ ಅವಕಾಶ ಸಿಕ್ಕಾಗ ಅವರ ಅಪ್ಪ ತೀರಿ ಹೋಗಿದ್ದರು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡವರೇ ಆಕೆ ಸೀದಾ ವಾಷಿಂಗ್ಟನ್‌ ವಿಮಾನ ಏರಲು ಹೊರಟರು. ಸಮುದಾಯದ ಮುಖಂಡರು ಆಕ್ಷೇಪ ಎತ್ತಿದಾಗ, ‘ನಾನು ಎತ್ತರಕ್ಕೆ ಬೆಳೆಯಬೇಕು ಎನ್ನುವುದು ಅಪ್ಪನ ಅಪೇಕ್ಷೆಯಾಗಿತ್ತು. ಇಲ್ಲಿದ್ದು ಕರ್ಮಾದಿಗಳಲ್ಲಿ ಪಾಲ್ಗೊಳ್ಳುವುದಕ್ಕಿಂತ ಅಮೆರಿಕಕ್ಕೆ ಹೋಗಿ ಪ್ರದರ್ಶನ ನೀಡುವುದೇ ಆತನಿಗೆ ನಾನು ಸಲ್ಲಿಸುವ ದೊಡ್ಡ ಶ್ರದ್ಧಾಂಜಲಿ’ ಎಂದು ಬಾಯಿ ಮುಚ್ಚಿಸಿದರು. ವಾಷಿಂಗ್ಟನ್‌ನ ವಿಮಾನ ಏರಿದಾಗ ಗುಲಾಬೊ ಅವರಿಗೆ ಕೇವಲ ಹದಿನಾಲ್ಕರ ಹರೆಯ. ಮುಂದೆ ಹಾಲಿವುಡ್‌ನ ಯಾತ್ರೆಗೂ ಆ ಪ್ರದರ್ಶನ ನೆರವಾಯಿತು.

ಕಾಲ್‌ಬೆಲಿಯಾ ನೃತ್ಯ ಪ್ರಕಾರಕ್ಕೆ ಒಂದು ಸ್ಪಷ್ಟ ರೂಪವನ್ನು ಕೊಟ್ಟವರು ಗುಲಾಬೊ. ಅವರ ಈ ಸಾಹಸಕ್ಕಾಗಿಯೇ ಪದ್ಮಶ್ರೀ ಗೌರವ ಅವರನ್ನು ಹುಡುಕಿಕೊಂಡು ಬಂದಿದ್ದು. ಗುಲಾಬೊ, ಸೊಗಸಾಗಿ ಹಾಡನ್ನೂ ಹಾಡುತ್ತಾರೆ. ಹಾಡಿನ ಲಯ, ಪುಂಗಿ–ದಪಲಿಯ ನಾದದ ಏರಿಳಿತಗಳಿಗೆ ತಕ್ಕಂತೆ ಕಾಲ್‌ಬೆಲಿಯಾ ನೃತ್ಯ ಅರಳುತ್ತಾ ಹೋಗುತ್ತದೆ. ಕ್ಷಣಗಳು ಉರುಳಿದಂತೆ ಪಟ್ಟುಗಳು ಪಡೆಯುವ ವೇಗ ಬೆರಗು ಹುಟ್ಟಿಸುತ್ತದೆ. ಮೈಮೇಲೆ ನೃತ್ಯದ ದಿರಿಸು ಹಾಗೂ ಆಭರಣಗಳು ಸೇರಿ ಮಣಭಾರ (ಬರೋಬ್ಬರಿ 21 ಕೆಜಿ ತೂಕ) ಹೊತ್ತುಕೊಂಡು ಹೆಜ್ಜೆ ಹಾಕುವುದೇನು ತಮಾಷೆಯ ಮಾತೇ? ಈ ಹಿಂದೆ ಗುಲಾಬೊ ಕುಟುಂಬಕ್ಕೆ ಬಹಿಷ್ಕಾರ ಹಾಕುವ ಮಾತುಗಳನ್ನಾಡಿದವರೇ ಇಂದು ಅವರ ಮಕ್ಕಳನ್ನು ಈ ಕಲಾವಿದೆ ಬಳಿ ನೃತ್ಯದ ತರಬೇತಿಗಾಗಿ ಕಳುಹಿಸುತ್ತಿದ್ದಾರೆ. ಹೆಣ್ಣುಮಕ್ಕಳನ್ನು ಕೊಲ್ಲುವ ಪ್ರವೃತ್ತಿ ಬಹುತೇಕ ನಿಂತಿದ್ದು, ಅದಕ್ಕೆ ಗುಲಾಬೊ ಅವರೇ ಪ್ರೇರಣೆಯಾಗಿದ್ದಾರೆ. ಕಾಲ್‌ಬೆಲಿಯಾ ನೃತ್ಯ ಶಾಲೆಯನ್ನು ತೆರೆಯುವ ಇರಾದೆಯನ್ನೂ ಅವರು ಹೊಂದಿದ್ದಾರೆ. ಮಾತು ಮುಗಿಸುವ ಮುನ್ನ ‘ಅರೆರೆರೆ ರೇ ಕಾಳ್ಹೋ...’ ಎಂದು ಅವರು ರಾಗ ತೆಗೆಯುವಾಗ ಭವಿಷ್ಯದ ಬಗೆಗೆ ಅವರು ಹೊಂದಿರುವ ಆತ್ಮವಿಶ್ವಾಸದ ಸೆಳಕೊಂದು ಫಕ್ಕನೆ ಹೊಳೆದಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.