ADVERTISEMENT

ನಗುವಿನ ಹಳಿ ಮೇಲೆ ಜಾನಿ ಪಯಣ

ಕೆ.ಎಚ್.ಓಬಳೇಶ್
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಪ್ರೀತಂ ಗುಬ್ಬಿ
ಪ್ರೀತಂ ಗುಬ್ಬಿ   

‘ದುನಿಯಾ ಟಾಕೀಸ್’ ಮೂಲಕ ನಟ ದುನಿಯಾ ವಿಜಯ್‌ ಚಿತ್ರ ನಿರ್ಮಾಣಕ್ಕೆ ಇಳಿದಿದ್ದಾರೆ. ಅವರ ಬ್ಯಾನರ್‌ನ ಮೊದಲ ಚಿತ್ರ ‘ಜಾನಿ ಜಾನಿ ಯೆಸ್‌ ಪಪ್ಪಾ’ ಈ ವಾರ ತೆರೆಕಾಣುತ್ತಿದೆ. ಈ ಚಿತ್ರ ನಿರ್ದೇಶಿಸಿರುವುದು ಪ್ರೀತಂ ಗುಬ್ಬಿ. ಸಿನಿಮಾ ಕುರಿತು ‘ಚಂದನವನ’ದೊಂದಿಗೆ ಅವರು ಅನುಭವ ಹಂಚಿಕೊಂಡಿದ್ದಾರೆ.

‘ಜಾನಿ ಜಾನಿ ಯೆಸ್‌ ಪಪ್ಪಾ’ ಚಿತ್ರದ ವಿಶೇಷತೆ ಏನು?
ನಾನು ಮತ್ತು ವಿಜಿ ಏಳು ವರ್ಷದ ನಂತರ ಈ ಚಿತ್ರದ ಮೂಲಕ ಮತ್ತೆ ಒಂದಾಗುತ್ತಿದ್ದೇವೆ. ‘ಜಾನಿ ಮೇರಾ ನಾಮ್‌ ಪ್ರೀತಿ ಮೇರಾ ಕಾಮ್‌’ ಚಿತ್ರದ ಮೂಲಕ ವಿಜಿ ಆ್ಯಕ್ಷನ್‌ ಇಮೇಜ್‌ನಿಂದ ಕಾಮಿಡಿ ಇಮೇಜ್‌ಗೆ ಹೊರಳಿದ್ದರು. ಈ ಚಿತ್ರ ಅದರ ಮುಂದುವರಿದ ಭಾಗ. ನಾನು ವಿಜಿಯೊಂದಿಗೆ ಮತ್ತೊಂದು ಸಿನಿಮಾ ಮಾಡಬೇಕೆಂಬುದು ಪ್ರೇಕ್ಷಕರ ಒತ್ತಾಯವಾಗಿತ್ತು. ಪ್ರೇಕ್ಷಕರನ್ನು ನೂರುಪಟ್ಟು ನಗಿಸಲು ಒಂದಾಗಿದ್ದೇವೆ. ‘ಬನ್ನಿ ದುಡ್ಡು ಕೊಟ್ಟು ಮಜಾ ಮಾಡಿ ಹೋಗಿ’ ಎನ್ನುವುದು ನಮ್ಮ ಸೂತ್ರ. ನಮ್ಮಿಬ್ಬರ ಕಾಂಬಿನೇಷನ್‌ ಜನರಿಗೆ ಇಷ್ಟವಾಗಲಿದೆ ಎಂಬ ನಂಬಿಕೆ ಇದೆ.

ವಿಜಯ್‌ ಮತ್ತು ರಂಗಾಯಣ ರಘು ಪಾತ್ರದ ಬಗ್ಗೆ ಹೇಳಿ.
ಜಾನಿ ಎನ್ನುವುದು ವಿಜಿ ಪಾತ್ರದ ಹೆಸರು. ಇಂಗ್ಲಿಷ್‌ನ ಮಕ್ಕಳ ಪದ್ಯದ ಹೆಸರನ್ನು ಸೂಚ್ಯವಾಗಿ ಬಳಸಿದ್ದೇವೆ. ‘ಜಾನಿ ಮೇರಾ ನಾಮ್‌’ ಚಿತ್ರದಲ್ಲಿ ಜಾನಿಯದ್ದು ಸಮಾಜ ಸೇವಕನ ಪಾತ್ರವಾಗಿತ್ತು. ಜಾನಿ ರೈನ್‌ಬೋ ಕಾಲನಿಯ ಹೀರೊ. ಇದು ಡಿಜಿಟಲ್‌ ಯುಗ. ಹಾಗಾಗಿ, ಈ ಚಿತ್ರದಲ್ಲಿ ‘ಜಾನಿ.ಕಾಂ’ ಇದೆ. ಇಲ್ಲಿಯೂ ಸಮಾಜ ಸೇವೆ ಇದೆ. ವಿಜಿಯ ಪಾತ್ರಕ್ಕೆ ಪೂರಕವಾಗಿ ರಂಗಾಯಣ ರಘು ಅವರ ಪಾತ್ರವಿದೆ. ಇಬ್ಬರೂ ವಿಶಿಷ್ಟ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.   

ADVERTISEMENT

ಚಿತ್ರೀಕರಣದ ಅನುಭವ ಹೇಗಿತ್ತು?
ಚಿತ್ರೀಕರಣಕ್ಕಾಗಿ ಮೈಸೂರಿನಲ್ಲಿ ಅದ್ದೂರಿ ವೆಚ್ಚದಲ್ಲಿ ಸೆಟ್ ಹಾಕಲಾಗಿತ್ತು. ರೈನ್‌ಬೋ ಕಾಲನಿಯ ಸೆಟ್‌ ಅದು. ಇದು ಚಿತ್ರದ ವಿಶೇಷಗಳಲ್ಲೊಂದು. ವಿಜಿಯೇ ಬಂಡವಾಳ ಹೂಡುತ್ತೇನೆ ಎಂದರು. ಹಾಗಾಗಿ, ಯಾವುದೇ ಅಡೆತಡೆ ಇಲ್ಲದೆ ನಿರೀಕ್ಷಿತ ದಿನದಂದು ಚಿತ್ರ ತೆರೆಕಾಣುತ್ತಿದೆ.

ಚಿತ್ರದಲ್ಲಿ ಯುವಜನರಿಗೆ ಸಂದೇಶ ಇದೆಯೇ?
ಇಲ್ಲಿಯವರೆಗೂ ಎಲ್ಲಿಯೂ ಕಥೆಯ ಸುಳಿವು ಬಿಟ್ಟುಕೊಟ್ಟಿಲ್ಲ. ಎಲ್ಲ ವರ್ಗದ ಜನರಿಗೂ ಸಂದೇಶ ಇದೆ. ನಗುವಿನ ಮೂಲಕ ಅದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ. ಹೆಚ್ಚಿನ ಬೋಧನೆ ಮಾಡಿಲ್ಲ. ಆದರೆ, ಚಿತ್ರದ ಸಂಭಾಷಣೆ, ಸನ್ನಿವೇಶಗಳಲ್ಲಿ ಸಂದೇಶ ಅಡಗಿದೆ. ಸಿನಿಮಾ ನೋಡಿದ ಪ್ರೇಕ್ಷಕರಿಗೆ ಇದು ಅರ್ಥವಾಗಲಿದೆ.

ನಿಮ್ಮ ಮುಂದಿನ ಯೋಜನೆಗಳೇನು?
ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಪ್ರೇಕ್ಷಕ ಪ್ರಭು ಹೇಗೆ ಸ್ವೀಕರಿಸುತ್ತಾನೆ ಎಂಬ ಕಾತರ ಇದೆ. ನಟ ಗಣೇಶ್‌ ಮತ್ತು ವಿಜಿ ಇಬ್ಬರನ್ನೂ ಸೇರಿಸಿಕೊಂಡು ಸಿನಿಮಾ ಮಾಡುವ ಆಲೋಚನೆ ಇದೆ. ಸದ್ಯಕ್ಕೆ ಯಾವುದೇ ತಯಾರಿ ಮಾಡಿಕೊಂಡಿಲ್ಲ. ಈ ಚಿತ್ರದ ಯಶಸ್ಸಿನ ಮೇಲೆ ಮುಂದಿನ ಯೋಜನೆ ರೂಪಿಸಲು ನಿರ್ಧರಿಸಿದ್ದೇನೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.