ADVERTISEMENT

ಕವಿತೆ | ಸೀರೆ ಮಹಲು  

ದಾದಾಪೀರ್
Published 29 ಮಾರ್ಚ್ 2020, 2:26 IST
Last Updated 29 ಮಾರ್ಚ್ 2020, 2:26 IST
ಕಲೆ: ಸಿ.ಪಿ. ಮದನ್‌
ಕಲೆ: ಸಿ.ಪಿ. ಮದನ್‌   

ಹಣತೆ ತರಲು ಹೋದ ತಂದೆ

ಮರಳಿ ದಡ ಸೇರದೆ ಹೋದಾಗ

ಒಳಗಿದ್ದ ಕಣ್ಣೀರನೇ ಸೀಮೆಯೆಣ್ಣೆಯ ಮಾಡಿ

ADVERTISEMENT

ಅಪ್ಪನ ಸಾರಾಯಿ ಸೀಸೆ ಬುಡ್ಡಿದೀಪವಾಗಿಸಿ

ಇಳಿಬಿಟ್ಟು ಹಳೆ ಸೀರೆ ಸೆರಗಿನ ಚುಂಗುಬತ್ತಿ

ಜೀವಸತ್ವವ ಹೀರಿ ಛಲದ ಕಿಡಿ ಗೀರಿದಾಗ

ಗುಡಿಸಲೊಳಗೆಲ್ಲ ಬಂಗಾರದಬೆಳಕು

ಬಾಗಿಲ ಪರದೆ, ಮಚ್ಚರದಾನಿ

ಕಿಟಕಿಗಳ ಕರಟನ್ನು, ಹಾಸಿಹೊದೆಯುವ ಕೌದಿ

ಒಲೆಮೇಲೆ ಕುದಿವ ದಬರಿಗಳಿಳಿಸುವ ಮಸಿ ಅರಿವೆ

ಸಂಡಿಗೆ ಹುಟ್ಟುವ ಆಸ್ಪತ್ರೆ

ನಾಗರಪಂಚಮಿಗೆ ಕಟ್ಟಿಕೊಟ್ಟ ಜೋಕಾಲಿ

ನೆರಕೆಗಳ ಪೊಳಕು ಮುಚ್ಚುವ ಬಟ್ಟೆ

ಹೀಗೆ ನಿತ್ಯಸೀರೆಯಿಂದಲೆ ತಯಾರಾಗುತ್ತಿತ್ತು ಸೀರೆಮಹಲು

ಅಂಚಿಗೆ ಹಬ್ಬಿದ ರಂಗವಲ್ಲಿ

ಕುಣಿವ ನವಿಲು ಹಾಡೋ ಹಕ್ಕಿ

ಹೂ ಹಣ್ಣು ಚಂದ್ರ ತಾರೆ ಚುಕ್ಕಿ

ಏನಿತ್ತು ಏನಿಲ್ಲ ಆ ಸೀರೆಯರಮನೆಯೊಳಗೆ!


ಕರಿಮಣಿಸರ ಹಸಿರುಗಾಜಿನ ಬಳೆ

ಜಾತ್ರೆಯಲಿ ಕೊಂಡ ಹೇರ್ ಕ್ಲಿಪ್ಪು

ಹಬ್ಬಕ್ಕೊಮ್ಮೆ ಹೊರಬರುತ್ತಿದ್ದ ಅತ್ತರು ಮತ್ತು ಸುರ್ಮಾ

ಇತ್ಯಾದಿಗಳೆಲ್ಲದರ ಸಸ್ತಾ ಉಳಿತಾಯದಲಿ

ಮಕ್ಕಳು ಬೆಳೆದು ನೌಕರಿ ಹಿಡಿದ ಮುಂದೆಂದಾದರೂ

ದುಬಾರಿ ಬೆಲೆಯ ಸೀರೆಯುಟ್ಟು ಮೆರೆಯಬೇಕೆಂಬ

ಅಭಿಲಾಷೆ ಕಣ್ಣಲ್ಲಿಮಿನುಗುತ್ತಿದ್ದುದು

ಬೆಸ್ತವಾರದ ಸಂತೆಯೊಳಗೆ ಉಳಿದವರು

ಉಟ್ಟುಕೊಂಡ

ಕುಚ್ ಕುಚ್ ಹೋತಾ ಹೈ, ಕನ್ಯಾದಾನ, ಕಾವ್ಯಾಂಜಲಿ

ಧಾರಾವಾಹಿ ಸಿನಿಮಾ ಸೀರೆಗಳನು ಕಂಡಾಗ...

ಈಗ ಗುಡಿಸಲು ತಗಡಿನ ಸೂರಾಗಿದೆ

ಕಬ್ಬಿಣದ ಟ್ರಂಕು ಬೀರುವಾಗಿ ಬೆಳೆದು ನಿಂತಿದೆ

ಅಲಮಾರಿನ ಹ್ಯಾಂಗರಿನೊಳಗೆ ಹಾಯಾಗಿ

ಚಕ್ಕಳ ಮಕ್ಕಳ ಹಾಕಿ ಕುಳಿತಿರುವ

ಬಣ್ಣಬಣ್ಣದ ಸೀರೆಗಳ ಮುಂದೆ ನಿಂತು ಪ್ರತಿದಿನ

'ಛೆ... ಉಡಲು ಸೀರೆಗಳೇ ಇಲ್ಲ' ಅಮ್ಮನ

ಉದ್ಗಾರ ಒಮ್ಮೆಗೆ ಹಲವು ಅರ್ಥಗಳನ್ನು ಹೊಮ್ಮಿಸಿಬಿಡುತ್ತದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.