ADVERTISEMENT

ಆರಾಮದಾಯಕ ಉಡುಗೆಯೇ ಈಗಿನ ಟ್ರೆಂಡ್‌

ಶರತ್‌ ಹೆಗ್ಡೆ
Published 27 ನವೆಂಬರ್ 2020, 19:30 IST
Last Updated 27 ನವೆಂಬರ್ 2020, 19:30 IST
   
""

ಮೊಣಕಾಲಿನವರೆಗಿನ ಷಾರ್ಟ್ಸ್‌, ಮೇಲೊಂದು ದೊಗಳೆ ಟೀ ಷರ್ಟ್‌ ಮನೆಯಿಂದಲೇ ಕಚೇರಿ ಕೆಲಸ ಮಾಡುವವರಿಗೆ ಮಾತ್ರವಲ್ಲ, ಹೊರಗಡೆ ಅಡ್ಡಾಡಲೂ ಆರಾಮದಾಯಕ ಉಡುಪು.

ಫ್ಯಾಷನ್‌ಪ್ರಿಯರಿಗೆ ಪ್ರಸಕ್ತ ವರ್ಷ ಕೊಂಚ ಬೇಸರ ಮೂಡಿಸಿರಬಹುದು. ಕೋವಿಡ್‌–19ನಿಂದಾಗಿ ಆರೋಗ್ಯದ ಬಗ್ಗೆ, ಉದ್ಯೋಗ ಉಳಿಸಿಕೊಳ್ಳುವತ್ತ ಗಮನಹರಿಸುವುದು ಅನಿವಾರ್ಯವಾಗಿರುವಾಗ ಫ್ಯಾಷನ್‌ ಕಡೆ ದೃಷ್ಟಿ ಹೊರಳಿಸಲು ಸಮಯವೆಲ್ಲಿರುತ್ತದೆ ಅಲ್ಲವೇ? ಆದರೂ ಹೊಸತನದ ಹುಡುಕಾಟದಲ್ಲಿರುವವರು ಆನ್‌ಲೈನ್‌ನಲ್ಲಿ ಚೆಂದದ ಉಡುಗೆ, ಫ್ಯಾಷನ್‌ ಆಕ್ಸೆಸರಿಗಳತ್ತ ನೋಟ ಹಾಯಿಸಿ ತೃಪ್ತಿಪಟ್ಟುಕೊಳ್ಳಲು ಅಡ್ಡಿಯೇನಿಲ್ಲವಲ್ಲ.

ಮಾರ್ಚ್‌ನಿಂದ ಜೂನ್‌ವರೆಗೆ ಹೊಸ ಬಟ್ಟೆ ಖರೀದಿಗೆ ಅಂಥ ಉತ್ಸಾಹವನ್ನೇನೂ ಜನರು ತೋರಲಿಲ್ಲ ಎಂಬುದು ಫ್ಯಾಷನ್‌ ತಜ್ಞರ ಅಭಿಮತ. ಭಾರತದ ಫ್ಯಾಷನ್‌ ಮಾರುಕಟ್ಟೆ ಸ್ವಲ್ಪ ಕಣ್ಣುಬಿಟ್ಟಿದ್ದು ನವರಾತ್ರಿ ವೇಳೆಗೆ. ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆಯಲ್ಲಿ ಭರ್ಜರಿ ಆಫರ್‌ ಕೊಟ್ಟಿದ್ದು, ಉದ್ಯೋಗ ಪರಿಸ್ಥಿತಿ ಅಲ್ಪ ಚೇತರಿಕೆ ಕಂಡಿದ್ದು ಇದಕ್ಕೆ ಕಾರಣ.

ADVERTISEMENT

ಫ್ಯಾಷನ್‌ ಟ್ರೆಂಡ್‌ನತ್ತ ಕೊಂಚ ಕಣ್ಣು ಹಾಯಿಸಿದರೆ ಮಾಸ್ಕ್‌ ಕೂಡ ಫ್ಯಾಷನ್ ಆಗಿ ಬದಲಾಗಿದ್ದು ಅಚ್ಚರಿ ಮೂಡಿಸುತ್ತದೆ.

ಫೇಸ್‌ ಮಾಸ್ಕ್‌: ಆರಂಭದಲ್ಲಿ ಎಂತಹ ಮಾಸ್ಕ್‌ ಧರಿಸಬೇಕು ಎಂಬ ಗೊಂದಲವಿತ್ತು. ಹತ್ತಿಬಟ್ಟೆಯ ಸರಳ ಮಾಸ್ಕ್‌ ಧರಿಸಿದರೂ ಸಾಕು ಎಂದು ತಜ್ಞರು ಶಿಫಾರಸು ಮಾಡಿದ್ದೇ ತಡ, ಅದರಲ್ಲೂ ತರಹೇವಾರಿ ಬಣ್ಣ, ಆಕಾರ, ವಿನ್ಯಾಸಗಳು ಬಂದೇಬಿಟ್ಟವು. ಬಹುತೇಕರು ಬಹುವರ್ಣದ ಮಾಸ್ಕ್‌ ಸೆಟ್‌ ಅನ್ನು ಖರೀದಿಸಿಟ್ಟುಕೊಂಡರು. ತಮ್ಮ ಉಡುಪಿಗೊಪ್ಪುವ ಬಣ್ಣದ ಮಾಸ್ಕ್‌ ಅನ್ನೇ ಆಯ್ಕೆ ಮಾಡಿಕೊಳ್ಳುವ ಟ್ರೆಂಡ್‌ ಕಳೆದ ಮೇನಿಂದಲೇ ಶುರುವಾಯಿತು.

ಉದ್ಯೋಗದ ಸ್ಥಳಗಳಲ್ಲಿ ಆತ ಯಾವ ಮಾಸ್ಕ್‌ ಧರಿಸಿದ್ದಾನೆ, ಬ್ರ್ಯಾಂಡ್‌ ಯಾವುದು, ಬೆಲೆ ಎಷ್ಟು ಎಂಬುದರ ಬಗ್ಗೆಯೂ ಚರ್ಚೆ ನಡೆಯುತ್ತದೆ. ಇದರ ಮೇಲೆಯೇ ಅವರ ವ್ಯಕ್ತಿತ್ವ ಅಳೆಯುವ ಜಮಾನವೂ ಬಂದುಬಿಟ್ಟಿದೆ. ಇದನ್ನು ಆಕ್ಸೆಸರಿ ಟ್ರೆಂಡ್‌ ಎನ್ನಬಹುದೇನೊ.

ಮೊಣಕಾಲವರೆಗಿನ ಷಾರ್ಟ್ಸ್: ಮೊಣಕಾಲವರೆಗೆ ಷಾರ್ಟ್ಸ್‌ (ಉದ್ದದ ಚೆಡ್ಡಿ)‌, ಅದರ ಮೇಲೊಂದು ಟೀಷರ್ಟ್‌ ಅಥವಾ ಕ್ಯಾಷುವಲ್‌ ಷರ್ಟ್‌ ಧರಿಸಿ ಓಡಾಡುವುದು, ಬೈಕ್‌ ಏರಿ ಷೋಕಿ ಮಾಡುವುದು ಯುವಕರ ಪ್ರಿಯವಾದ ಟ್ರೆಂಡ್‌. ಈ ಉಡುಗೆ ಮನೆಗೂ ಸೈ ಬೀದಿಗೂ ಸೈ. ವರ್ಕ್‌ ಫ್ರಂ ಹೋಂ ಮಾಡುವವರಿಗೆ ಆರಾಮದಾಯಕ ಉಡುಗೆಯೂ ಹೌದು. ಇದರ ದರವೂ ಕೈಗೆಟಕುವಂತಿದೆ.

ಕ್ಯೂಬನ್‌ ಕಾಲರ್‌ ಷರ್ಟ್‌ಗಳು: ವಿನ್ಯಾಸದಲ್ಲಿ ಸರಳ. ಆದರೆ ವರ್ಣಸಂಯೋಜನೆಯಲ್ಲಿ ಢಾಳಾಗಿ ಕಾಣುವ ಅರ್ಧ ತೋಳಿನ ಅಂಗಿಗಳಿವು. ಇದಕ್ಕೆ ವಿರುದ್ಧ ಬಣ್ಣದ ಪ್ಯಾಂಟ್‌ ಧರಿಸಿ ಅಂಗಿ– ಪ್ಯಾಂಟ್‌ಬಣ್ಣಗಳಲ್ಲಿ ಕಾಂಟ್ರಾಸ್ಟ್‌ ಸೃಷ್ಟಿಸಬಹುದು. ತಿಳಿ ಬಣ್ಣದ ಅಂಗಿಯಾದರೆ ಕಚೇರಿಗೂ ಹಾಕಿಕೊಂಡು ಹೋಗಬಹುದು.

ಪ್ಯಾಚ್‌ ವರ್ಕ್‌ ಪ್ರಿಂಟ್‌: ಹೆಸರೇ ಹೇಳುವಂತೆ ಬಟ್ಟೆಯ ತುಂಬಾ ಅಲ್ಲಲ್ಲಿ ತೇಪೆ ಹಾಕಿದಂತಹ ವರ್ಣ, ವಿನ್ಯಾಸ ಸಂಯೋಜನೆಯ ಬಟ್ಟೆಗಳಿವು. ಬಹಳ ಹಿಂದೆ ಬೇರೆ ಬಟ್ಟೆ ಹೊಲಿಯುವಾಗ ಉಳಿದ ತುಂಡುಗಳಿಂದ ಅಂಗಿ ಸಿದ್ಧ ಪಡಿಸುತ್ತಿದ್ದರಲ್ಲ, ಅದುಈಗ ಒಂದೇ ಬಟ್ಟೆಯಲ್ಲಿ ಬೇರೆ ಬೇರೆ ವರ್ಣ ಸಂಯೋಜನೆಯ ಟ್ರೆಂಡ್‌ ಆಗಿಬಿಟ್ಟಿದೆ. ಜೀನ್ಸ್‌, ಸಡಿಲ ಕಾಟನ್ ಪ್ಯಾಂಟ್‌ ಅಥವಾ ಯಾವುದೇ ರೀತಿಯ ಪ್ಯಾಂಟ್‌ ಈ ಅಂಗಿಗಳಿಗೆ ಹೊಂದುತ್ತದೆ.

ಶೀಲ್ಡ್‌ ಸನ್‌ಗ್ಲಾಸ್‌: ಮುಖ ಆವರಿಸುವ ಶೀಲ್ಡ್‌ ಬಂದಿದೆಯಲ್ಲಾ ಅದೇ ರೀತಿ ಇದು ಕಣ್ಣುಗಳನ್ನು ಪೂರ್ಣ ಆವರಿಸಿ ರಕ್ಷಿಸುವ ಮಾದರಿಯ ತಂಪು ಕನ್ನಡಕಗಳು. ಆದರೆ, ಭಾರತದ ಮಾರುಕಟ್ಟೆಯಲ್ಲಿ ಇವು ಜೋರಾಗಿ ಸದ್ದು ಮಾಡಲಿಲ್ಲ. ಕೇವಲ ಫೋಟೋಷೂಟ್‌ಗಳಿಗಷ್ಟೇ ಸೀಮಿತವಾಯಿತು.

ಹೈ ವೇಯ್ಸ್ಟ್‌ ಟ್ರೌಸರ್‌: ಸೊಂಟಕ್ಕಿಂತಸ್ವಲ್ಪ ಮೇಲ್ಭಾಗದಿಂದ ಈ ಪ್ಯಾಂಟ್‌ನ ಪಟ್ಟಿಯ ಭಾಗ ಆರಂಭವಾಗುತ್ತದೆ. 1950–60ರ ಚಲನಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳಿ. ಇನ್ನೂ ಹೇಳಬೇಕೆಂದರೆ ಬೆಲ್‌ ಬಾಟಂ ಶೈಲಿಯ ಪ್ಯಾಂಟ್‌ಗಳನ್ನೇ ಹೋಲುತ್ತದೆ. ಆ ಟ್ರೆಂಡ್‌ ಮತ್ತೆ ಬಂದಿದೆ.

ಆರಾಮದಾಯಕ ಉಡುಗೆ
ಒಂದು ದೊಗಳೆ ಟೀ ಷರ್ಟ್‌, ಮೊಣಕಾಲಿನವರೆಗಿನ ಷಾರ್ಟ್ಸ್‌ ಅಥವಾ ಅರೆ ಹರಿದ ಜೀನ್ಸ್‌ ಪ್ಯಾಂಟ್‌ ಹಾಕಿಕೊಂಡು ಬೇಕಾದಂತೆ ಓಡಾಡುವವರಿಗಾಗಿ ಈ ಫ್ಯಾಷನ್‌. ಹಿಪ್‌ ಹಾಪ್‌ ಸಂಸ್ಕೃತಿಯನ್ನು ನೆನಪಿಸುವ ಟ್ರೆಂಡ್‌ ಇದು. ಬಟ್ಟೆ ಯಾವುದಾದರೂ ಸರಿ ದೇಹಕ್ಕೆ ಹೊಂದಿಕೊಂಡು ಆರಾಮವೆನಿಸಿದರೆ ಸಾಕು ಎಂಬ ಪ್ರವೃತ್ತಿಯವರಿಗೆ ಹೇಳಿ ಮಾಡಿಸಿದ ಶೈಲಿಯಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.