ADVERTISEMENT

ಟ್ರೆಂಡ್‌: ಉಡುಪಿನ ಮೇಲೆ ಹಣ್ಣು, ತರಕಾರಿ ವಿನ್ಯಾಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 19:30 IST
Last Updated 24 ಸೆಪ್ಟೆಂಬರ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿ ಣ್ಣರು ಬಣ್ಣ ಬಣ್ಣದ ಫ್ರಾಕ್‌, ಅಂಗಿ– ಚೆಡ್ಡಿ ಧರಿಸಿ ಓಡಾಡುವಾಗ ಅವರನ್ನು ನೋಡುವುದಕ್ಕೆ ಎರಡು ಕಂಗಳು ಸಾಲವು. ಆ ಉಡುಪಿನ ಮೇಲೆ ಹಣ್ಣು, ತರಕಾರಿಗಳ ವಿನ್ಯಾಸವಿದ್ದರಂತೂ ಆ ಪುಟಾಣಿಗಳೂ ಪದೆ ಪದೆ ತಮ್ಮ ಉಡುಪನ್ನು ನೋಡಿಕೊಂಡು ಖುಷಿಪಡುತ್ತವೆ; ಅದೇ ಅಂಗಿಯನ್ನು ತೊಡಿಸಬೇಕೆಂದು ಹಟವನ್ನೂ ಹಿಡಿಯುತ್ತವೆ. ಇಂತಹ ಹಣ್ಣು– ತರಕಾರಿ ಚಿತ್ರಗಳಿರುವ ಉಡುಪನ್ನು ಈಗ ದೊಡ್ಡವರೂ ಧರಿಸುವುದು ಟ್ರೆಂಡ್‌ ಆಗಿದೆ.

ಮನೆಯಲ್ಲಿ ಧರಿಸುವ ಪೈಜಾಮ, ನೈಟ್‌ಗೌನ್‌ ಮೇಲೆ ಇಂತಹ ವಿನ್ಯಾಸಗಳಿರುವುದು ಅಪರೂಪವೇನಲ್ಲ. ಆದರೆ ಈ ರೀತಿಯ ಆಕರ್ಷಕ ಹಣ್ಣುಗಳ– ತರಕಾರಿಗಳ ಚಿತ್ರಗಳಿರುವ ಶರ್ಟ್‌, ಟೀ ಶರ್ಟ್‌, ಜಂಪ್‌ಸ್ಯೂಟ್‌, ಸ್ಕರ್ಟ್‌, ಟಾಪ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆನ್‌ಲೈನ್‌ನಲ್ಲೂ ಬೇಕಾದಷ್ಟು ಉಡುಪುಗಳು ಲಭ್ಯ.

‘ಆರಂಭದಲ್ಲಿ ಇಂತಹ ವಿನ್ಯಾಸಗಳಿರುವ ಉಡುಪು ಧರಿಸಿ ಹೊರಟರೆ ಹಲವರ ಹಾಸ್ಯಭರಿತ ನೋಟ ಎದುರಿಸಿದ್ದೇನೆ’ ಎನ್ನುತ್ತಾಳೆ ಸ್ನಾತಕೋತ್ತರ ಪದವಿ ಓದುತ್ತಿರುವ ಯುವತಿ ಕೃತಿ. ಬದನೆಕಾಯಿ ಚಿತ್ರವಿರುವ ಟಾಪ್‌ ಧರಿಸಿ ಹೊರಗೆ ಹೋದಾಗ ಹಲವರು ಹಿಂದಿರುಗಿ ನೋಡಿ ನಕ್ಕಿದ್ದರು ಎನ್ನುವ ಆಕೆ, ಈಗ ಯಾವುದೇ ಮುಜುಗರವಿಲ್ಲದೇ ಧರಿಸಿ ಓಡಾಡುವುದಾಗಿ ಹೇಳುತ್ತಾಳೆ.

ADVERTISEMENT

ಬಾಳೆಹಣ್ಣು, ಸೇಬು, ಕಿತ್ತಳೆ, ಒಡೆದ ಮೊಟ್ಟೆ, ಮೀನು, ಅಣಬೆ ಮೊದಲಾದ ಪ್ರಿಂಟ್‌ ಇರುವ ಉಡುಪುಗಳು ಆಹಾರಪ್ರಿಯರನ್ನು ಆಕರ್ಷಿಸುತ್ತಿವೆ. ಇಂತಹ ವಿನ್ಯಾಸಗಳನ್ನು ಭಾರತೀಯ ವಿನ್ಯಾಸಗಾರರು ಸೀರೆಗಳಂತಹ ಸಾಂಪ್ರದಾಯಿಕ ಉಡುಪಿನ ಮೇಲೂ ಮೂಡಿಸುತ್ತಿದ್ದಾರೆ. ಕಾಟನ್‌ ಹಾಗೂ ಲಿನನ್‌ ಸೀರೆಗಳ ಮೇಲೆ ಮೀನಿನ ವಿನ್ಯಾಸದಲ್ಲಿ ಕಸೂತಿ ಮಾಡುವ ಟ್ರೆಂಡ್‌ ಜಾಸ್ತಿಯಾಗಿದೆ. ಹಾಗೆಯೇ ತರಕಾರಿಗಳ ಪ್ರಿಂಟ್‌ಗಳನ್ನು ಮಾಡಿದ ಬಟ್ಟೆ ಕೂಡ ಲಭ್ಯ. ಡಿಸೈನರ್‌ ರವಿಕೆಯ ಬೆನ್ನಿನ ಭಾಗದಲ್ಲೂ ಒಂದು ಹಣ್ಣಿನ ಅಥವಾ ತರಕಾರಿಯ ವಿನ್ಯಾಸ ಮೂಡಿಸುವುದು ಹೆಚ್ಚಾಗಿದೆ. ಇಂತಹ ರವಿಕೆಗಳ ಖರೀದಿಗೆ ಆನ್‌ಲೈನ್‌ನಲ್ಲಿ ಹೆಚ್ಚು ಬೇಡಿಕೆಯಿದೆ.

ಈ ಫ್ಯಾಷನ್‌ ವಿಷಯದಲ್ಲಿ ಪುರುಷರೇನೂ ಕಮ್ಮಿಯಿಲ್ಲ. ಈಗಾಗಲೇ ಹಣ್ಣು, ತರಕಾರಿ ವಿನ್ಯಾಸವಿರುವ ಟೀ ಶರ್ಟ್‌ಗಳು ಮಳಿಗೆಯಲ್ಲಿ ಲಭ್ಯ. ಅವುಗಳ ಜೊತೆಗೆ ಇತ್ತೀಚೆಗೆ ಈ ವಿನ್ಯಾಸವಿರುವ ಶರ್ಟ್‌ಗಳೂ ಬಂದಿವೆ.

ಯಾರು ಯಾವ ರೀತಿಯ ಹಣ್ಣು, ತರಕಾರಿ ಅಥವಾ ಮಾಂಸಾಹಾರ ಇಷ್ಟಪಡುತ್ತಾರೆ ಎಂಬುದನ್ನು ಅವರು ಧರಿಸಿದ ಉಡುಪುಗಳ ವಿನ್ಯಾಸದ ಮೇಲೇ ಕಂಡು ಹಿಡಿಯಬಹುದು. ಮೊದಲು ಹೂವು, ಬಳ್ಳಿಯ ವಿನ್ಯಾಸ ಹೆಚ್ಚಾಗಿ ಕಂಡುಬರುತ್ತಿತ್ತು, ಈಗೇನಿದ್ದರೂ ಕಾಯಿ, ಹಣ್ಣುಗಳ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.