ADVERTISEMENT

ಹಬ್ಬದ ಬೆಳಕಿಗೆ ಹೊಸ ಉಡುಪಿನ ಮಿಂಚು

ವಿದ್ಯಾಶ್ರೀ ಎಸ್.
Published 6 ನವೆಂಬರ್ 2020, 19:30 IST
Last Updated 6 ನವೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಫ್ಯಾಷನ್‌ ಕ್ಷೇತ್ರ ಮನಸುಗಳ ನಾಡಿಮಿಡಿತದ ಜಾಡು ಹಿಡಿದು ಮಗ್ಗಲನ್ನು ಬದಲಿಸುತ್ತಲೇ ಇರುತ್ತದೆ. ಇಂದು ಹಳತು ಎನಿಸಿಕೊಳ್ಳುವುದು ಸ್ವಲ್ಪ ದಿನಗಳಲ್ಲಿಯೇ ಹೊಸ ರೂಪ ಪಡೆಯುತ್ತದೆ. ಕೊರೊನಾ ಸಂದರ್ಭದಲ್ಲಿ ಫ್ಯಾಷನ್ ಜಗತ್ತಿಗೆ ಸ್ವಲ್ಪ ಹಿನ್ನಡೆಯಾಗಿದ್ದು ನಿಜ. ಆದರೆ, ಭಾರಿ ಪರಿಣಾಮವನ್ನೇನೂ ಬೀರಲಿಲ್ಲ. ಲಾಕ್‌ಡೌನ್‌ ಮುಗಿದ ತಕ್ಷಣವೇ ಫೀನಿಕ್ಸ್‌ನಂತೆ ಈ ಕ್ಷೇತ್ರ ಚೇತರಿಸಿಕೊಂಡಿದೆ.

ಸುರಕ್ಷತೆಯ ದೃಷ್ಟಿಯಿಂದ ಮಳಿಗೆಗಳಿಗೆ ತೆರಳಿ ಉಡುಪುಗಳನ್ನು ಖರೀದಿಸಲು ಹಿಂದೇಟು ಹಾಕುವವರಿಗೆ ಆನ್‌ಲೈನ್‌ ವೇದಿಕೆ ಖರೀದಿಗೆ ಉತ್ತೇಜನ ನೀಡುತ್ತಿದೆ. ಉಡುಪುಗಳಿಗೆ ಹೊಂದಿಕೆಯಾಗುವಂತಹ ಮಾಸ್ಕ್‌ಗಳು, ರಿಯಾಯಿತಿ, ಕೊಡುಗೆಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ಅನುಸರಿಸುತ್ತಿದೆ.

ಮನೆಯಲ್ಲಿಯೇ ಕುಳಿತು ತಮ್ಮಿಷ್ಟದ ಉಡುಪುಗಳನ್ನು ಆಯ್ಕೆ ಮಾಡಿಕೊಳ್ಳುವ ಜೊತೆಗೆ ಇಷ್ಟವಾಗದಿದ್ದರೆ ಅದನ್ನು ಹಿಂತಿರುಗಿಸುವ ಆಯ್ಕೆಯೂ ಇರುವುದರಿಂದ ಆನ್‌ಲೈನ್‌ ಖರೀದಿಗೆ ಹೆಚ್ಚಿನವರು ಆದ್ಯತೆ ನೀಡುತ್ತಿದ್ದಾರೆ. ಗುಣಮಟ್ಟದ ಉತ್ಪನ್ನಗಳನ್ನು ಗ್ರಾಹಕರಿಗೆ ಪೂರೈಸುವ ವಿಶ್ವಾಸಾರ್ಹ ಸ್ಟೋರ್‌ಗಳಲ್ಲಿ ಖರೀದಿ ಮಾಡುವುದು ಒಳಿತು. ಈ ಹಬ್ಬಗಳ ಸಂದರ್ಭದಲ್ಲೂ ವಿಶೇಷ ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಉತ್ತೇಜಿಸುವ ಕೆಲಸ ಮಾಡುತ್ತಿವೆ ಆನ್‌ಲೈನ್ ಫ್ಯಾಷನ್ ಮಾರುಕಟ್ಟೆಗಳು.

ADVERTISEMENT

ಫ್ಯಾಷನ್‌ ಜಗತ್ತು ಎಷ್ಟೇ ವೇಗವಾಗಿ ಬೆಳೆಯುತ್ತಿದ್ದರೂ, ಯಾವುದೇ ಸಮಾರಂಭಗಳಿಗೂ ಹೊಂದುವಂತಹ ಗುಣದಿಂದಲೇ ಸೀರೆ ಆದ್ಯತೆ ಗಳಿಸಿಕೊಂಡಿದೆ. ಹೀಗಾಗಿಯೇ ಅದು ಎಲ್ಲಾ ಸಂದರ್ಭಗಳಲ್ಲಿಯೂ ಬೇಡಿಕೆ ಉಳಿಸಿಕೊಂಡಿದೆ. ಹೆಣ್ಮಕ್ಕಳ ಮನದೊಳಗೆ ಸೀರೆಗಳ ಸಡಗರ ಸದಾ ರಿಂಗಣಿಸುತ್ತಲೇ ಇರುತ್ತದೆ. ಎಲ್ಲಾ ಕಾಲಘಟ್ಟಕ್ಕೂ ಹೊಂದಿಕೊಳ್ಳುವ ಸ್ವರೂಪವನ್ನು ಸೀರೆ ಹೊಂದಿರುವ ಕಾರಣಕ್ಕೆ ಎಲ್ಲಾ ವಯೋಮಾನದ ಲಲನೆಯರನ್ನು ಸೆಳೆಯಲು ಇದು ಯಶಸ್ವಿಯಾಗಿದೆ.

ಫ್ಯಾಷನ್‌ ಜಗತ್ತಿನಲ್ಲಿ ಬಗೆಬಗೆ ಟ್ರೆಂಡ್‌ ಸೆಟ್‌ ಮಾಡುತ್ತಿರುವ ವಿನ್ಯಾಸಕರೂ ಹೊಸತನದ ದಿರಿಸುಗಳನ್ನು ಫ್ಯಾಷನ್‌ಪ್ರಿಯರಿಗಾಗಿ ನಾಜೂಕಾಗಿ ತಯಾರಿಸುತ್ತಿದ್ದಾರೆ. ಇದಕ್ಕೆ ಉದಾಹರಣೆ ಹಾಫ್‌ ಸೀರೆ. ಹಾಫ್‌ ಸೀರೆಯನ್ನು ಹಿಂದೆಲ್ಲ ಲಂಗದಾವಣಿಯ ತರಹ ಉಡುತ್ತಿದ್ದರು. ಆದರೆ ಅದು ಈಗ ಹೊಸ ಸ್ವರೂಪ ಪಡೆದುಕೊಂಡಿದೆ. ರೇಷ್ಮೆ ಲಂಗದ ಮೇಲೆ ಬನಾರಸಿ ಸೀರೆಯನ್ನು ಉಡುವುದು ಹೆಚ್ಚು ಪ್ರಚಲಿತದಲ್ಲಿದೆ. ನಡು ಕಾಣಿಸುವಂತಹ ಲೆಹೆಂಗಾಗಳ ಬಳಕೆಯೂ ಪ್ರಚಲಿತದಲ್ಲಿದೆ. ಗಾಢ ಬಣ್ಣಕ್ಕಿಂತ ತಿಳಿ ಬಣ್ಣದ ಅದ್ಧೂರಿ ಕಸೂತಿ ಹೊಂದಿರುವ ಲೆಹೆಂಗಾಗಳು ಲಲನೆಯರನ್ನು ಸೆಳೆಯುತ್ತಿವೆ.

ಉಡುಪುಗಳು ಸರಳವಾಗಿದ್ದರೇನೇ ಚೆಂದ ಎಂಬ ಮನಸ್ಥಿತಿಯ ಯುವತಿಯರು, ಅವುಗಳಿಗೆ ಹೊಂದುವಂತೆ ಕೇಶವಿನ್ಯಾಸ, ಮೇಕಪ್‌ ಜೊತೆಗೆ ಆಭರಣಗಳನ್ನು ಆಯ್ದುಕೊಂಡಿರಿ ಎಂದಾದರೆ ನೆರೆದವರ ಕಣ್ಣು ನಿಮ್ಮ ಮೇಲೆಯೇ ಬೀಳುವುದರಲ್ಲಿ ಸಂಶಯವೇ ಇಲ್ಲ.

ಪಲಾಜೊ ಬಹುಕಾಲದಿಂದ ಬೇಡಿಕೆ ಉಳಿಸಿಕೊಂಡಿದೆ. ಪ್ರತಿ ವರ್ಷವೂ ಇದು ಹೊಸ ರೂಪ ಪಡೆಯುತ್ತಲೇ ಇರುತ್ತದೆ. ಈ ವರ್ಷ ಹೊಸ ಬಣ್ಣ, ವಿನ್ಯಾಸ ಮತ್ತು ವಿಶೇಷ ಫ್ಯಾಬ್ರಿಕ್‌ಗಳಲ್ಲಿ ಮಾರುಕಟ್ಟೆ ಪ್ರವೇಶಿಸಿದೆ. ಆರಾಮದಾಯಕವೆನ್ನಿಸುವ ಈ ಪ್ಯಾಂಟಿಗೆ ತೋಳಿಲ್ಲದ ಕುರ್ತಾ ಅಥವಾ ಫ್ಲೋರಲ್‌, ಟ್ರೈಬಲ್ ಅಥವಾ ಗ್ರಾಫಿಕ್ ಪ್ರಿಂಟ್‌ಗಳ ಟಾಪ್‌ಗಳನ್ನು ಹೊಂದಿಸಿಕೊಳ್ಳಬಹುದು.

ಇವೆಲ್ಲದರ ಜೊತೆಗೆ ಹಬ್ಬ ಅಥವಾ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಧರಿಸಲು ಶರಾರಾ ಡ್ರೆಸ್ ಉತ್ತಮ ಆಯ್ಕೆ. ಸರಳವಾಗಿ ಚೂಡಿದಾರ್‌ನಂತಿರುವ ಶರಾರಾ ಸಂಪ್ರದಾಯಿಕ ದಿರಿಸಿನಂತೆ ಕಾಣುತ್ತದೆ. ಇದು ಕಡಿಮೆ ಬೆಲೆಯಿಂದ ಅತಿ ದುಬಾರಿ ಬೆಲೆವರೆಗೂ ಲಭ್ಯ.

ಆನ್‌ಲೈನ್‌ ಮೂಲಕವೇ ಅಳತೆ

ಬೃಂದಾ ಗೌಡ

ಲಾಕ್‌ಡೌನ್‌ ಸಂದರ್ಭದಲ್ಲಿ ಉದ್ದಿಮೆಗೆ ಹೊಡೆತ ಬಿದಿದ್ದು ನಿಜ. ಆದರೆ, ಕ್ರಮೇಣ ಚೇತರಿಕೆ ಕಾಣಿಸಿಕೊಂಡಿತು. ಈಗಂತೂ ಒಂದರ ಹಿಂದೆ ಒಂದರಂತೆ ಮದುವೆ ಸಮಾರಂಭಗಳು ನಡೆಯುತ್ತಿರುವುದರಿಂದ ಕೆಲಸಕ್ಕಂತೂ ಕಡಿಮೆ ಇಲ್ಲ. ಸುರಕ್ಷತೆಯ ಉದ್ದೇಶದಿಂದ ದೂರದ ಸ್ಥಳದಿಂದ ಬರಲು ಸಾಧ್ಯವಾಗದೇ ಇರುವವರ ದೇಹದ ಸುತ್ತಳತೆಯನ್ನು ಆನ್‌ಲೈನ್‌ ಮೂಲಕವೇ ತೆಗೆದುಕೊಳ್ಳುತ್ತೇವೆ. ಬಣ್ಣದ ಆಯ್ಕೆಯ ನಿರ್ಧಾರವನ್ನು ಕೆಲವು ಗ್ರಾಹಕರು ನಮಗೆ ಬಿಡುತ್ತಾರೆ.

-ಬೃಂದಾ ಗೌಡ, ವಸ್ತ್ರ ವಿನ್ಯಾಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.