ADVERTISEMENT

ಕಾಫಿಪುಡಿಯಲ್ಲಿ ಅಡಗಿದೆ ತ್ವಚೆಯ ಸೌಂದರ್ಯ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 19:30 IST
Last Updated 6 ಸೆಪ್ಟೆಂಬರ್ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಕುಡಿಯುವುದು ಅನೇಕರ ನೆಚ್ಚಿನ ಹವ್ಯಾಸ. ಕಾಫಿ ಕುಡಿಯುವುದರಿಂದ ಮನಸ್ಸು, ದೇಹ ಹಗುರಾಗುತ್ತದೆ. ಕಾಫಿಪುಡಿ ಕೇವಲ ಮನಸ್ಸನ್ನು ಮಾತ್ರವಲ್ಲ ಚರ್ಮವನ್ನೂ ಆಹ್ಲಾದಗೊಳಿಸುತ್ತದೆ.

ಕಾಫಿಪುಡಿಯ ಫೇಸ್‌ಪ್ಯಾಕ್ ತಯಾರಿಸಿ ಹಚ್ಚಿ ಕೊಳ್ಳುವುದರಿಂದ ಚರ್ಮದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಅಲ್ಲದೇ ಇದರಿಂದ ಕಲೆಗಳು, ಮೊಡವೆಯೂ ದೂರವಾಗುತ್ತವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶ ಅಧಿಕವಿದ್ದು ಒಣಚರ್ಮವನ್ನು ನಿವಾರಿಸಿ ಚರ್ಮದಲ್ಲಿ ಕಾಂತಿ ಹೆಚ್ಚಲು ಸಹಾಯ ಮಾಡುತ್ತದೆ. ಚರ್ಮವನ್ನು ಮೃದುಗೊಳಿಸಲು ಇದು ಸಹಕಾರಿ.

ಕಾಫಿಪುಡಿಯ ಕೆಲವು ಫೇಸ್‌ಪ್ಯಾಕ್‌ಗಳು ಹಾಗೂ ಅವುಗಳ ಉಪಯೋಗ ಇಲ್ಲಿದೆ.

ADVERTISEMENT

ಚರ್ಮದ ಹೊಳಪಿಗೆ ಕಾಫಿ ಫೇಸ್‌ಪ್ಯಾಕ್‌
ಈ ಫೇಸ್‌ಪ್ಯಾಕ್ ತಯಾರಿಸಲು 1 ಚಮಚ ಕಾಫಿಪುಡಿಗೆ ಒಂದೂವರೆ ಚಮಚ ಹಸಿಹಾಲು ಸೇರಿಸಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ.

ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ನಂತರ ತಣ್ಣೀರಿನಿಂದ ಮುಖ ತೊಳೆಯಿರಿ. ಈ ಫೇಸ್‌ಪ್ಯಾಕ್‌ ಬಳಕೆಯಿಂದ ಹಾಲಿನಲ್ಲಿರುವ ಲ್ಯಾಕ್ಟಿನ್‌ ಹಾಗೂ ಕಾಫಿಯಲ್ಲಿರುವ ಕೆಫಿನ್ ಅಂಶ ಮುಖದಲ್ಲಿನ ಕಲ್ಮಶಗಳನ್ನು ದೂರ ಮಾಡಿ ಕಾಂತಿ ಹೆಚ್ಚಲು ನೆರವಾಗುತ್ತದೆ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿ.

ಚರ್ಮದ ಬಿಳುಪು ಹೆಚ್ಚಲು ಫೇಸ್‌ಪ್ಯಾಕ್‌
ಒಂದು ಚಮಚ ಕಾಫಿಪುಡಿಗೆ ಒಂದು ಚಮಚ ಅರಿಸಿನ ಹಾಗೂ ಒಂದು ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣಮಾಡಿ. ಗಂಟಿಲ್ಲದಂತೆ ಕಲೆಸಿ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ. 20 ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತೊಳೆಯಿರಿ.

ಈ ಫೇಸ್‌ಪ್ಯಾಕ್ ಬಳಕೆಯಿಂದ ಅರಿಸಿನದಲ್ಲಿರುವವಿಟಮಿನ್‌ ಸಿ ಅಂಶ ಕಳೆಗುಂದಿದ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಮೊಸರಿನಲ್ಲಿರುವ ಅಲ್ಫಾ ಹ್ರೈಡಾಕ್ಸಿ ಆ್ಯಸಿಡ್‌ ಚರ್ಮದಲ್ಲಿನ ಕಲೆಯನ್ನು ನಿವಾರಿಸಿ ಚರ್ಮವನ್ನು ಪೋಷಿಸುತ್ತದೆ.

ಮೊಡವೆ ನಿವಾರಣೆಗೆ ಕಾಫಿ ಫೇಸ್‌ಪ್ಯಾಕ್‌
ಈ ಫೇಸ್‌ಪ್ಯಾಕ್‌ಗೆ ಒಂದು ಚಮಚ ಕಾಫಿಪುಡಿಗೆ ಅರ್ಧ ಚಮಚ ತೆಂಗಿನೆಣ್ಣೆ ಹಾಗೂ ಕಾಲು ಚಮಚ ದಾಲ್ಚಿನ್ನಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಪೇಸ್ಟ್ತಯಾರಿಸಿಕೊಳ್ಳಿ. ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ನಂತರ ಮಾಯಿಶ್ಚರೈಸರ್ ಹಚ್ಚಿಕೊಳ್ಳಿ.

ಇದನ್ನು ವಾರಕ್ಕೊಮ್ಮೆ ಮಾಡಿ. ತೆಂಗಿನೆಣ್ಣೆ ಮುಖದಲ್ಲಿ ಕಲ್ಮಶಗಳನ್ನು ಸ್ವಚ್ಛಗೊಳಿಸುತ್ತದೆ. ಕಾಫಿಪುಡಿ ಮುಖದಲ್ಲಿನ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕುತ್ತದೆ. ದಾಲ್ಚಿನ್ನಿಯಲ್ಲಿ ಸೂಕ್ಷ್ಮಜೀವಿ ವಿರೋಧಿ ಗುಣವಿರುವುದರಿಂದ ಇದು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.