ADVERTISEMENT

Union Budget 2021: ಮಹಿಳೆಯರಿಗೆ, ಮಕ್ಕಳಿಗೆ ದಕ್ಕಿದ್ದು ಕಡಿಮೆ

ರಾಜೇಶ್ವರಿ ಯು.ಆರ್‌.
Published 1 ಫೆಬ್ರುವರಿ 2021, 19:31 IST
Last Updated 1 ಫೆಬ್ರುವರಿ 2021, 19:31 IST
ರಾಜೇಶ್ವರಿ ಯು.ಆರ್‌.
ರಾಜೇಶ್ವರಿ ಯು.ಆರ್‌.   

ಕೊರೊನಾ ಮಹಾಮಾರಿಯಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಆಗಿರುವ ಹಾನಿಯ ಕುರಿತೇ ಕೇಂದ್ರೀಕೃತವಾದ ಬಜೆಟ್‌ ಇದು. ಹಾಗಾಗಿಈ ಬಜೆಟ್‌ ಬಗ್ಗೆ ಬಹಳ ನಿರೀಕ್ಷೆಗಳಿದ್ದವು. ಆರೋಗ್ಯ ಮತ್ತು ಮೂಲಸೌಕರ್ಯಗಳಿಗೆ ಭಾರಿ ಉತ್ತೇಜನಗಳನ್ನು ಹಣಕಾಸು ಸಚಿವೆ ಪ್ರಕಟಿಸಿದ್ದಾರೆ. ಸರ್ಕಾರವು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಯತ್ತ ಗಮನ ಕೇಂದ್ರೀಕರಿಸಿರುವ ಸಂಕೇತವಿದು. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಈ ಬಜೆಟ್‌ನಲ್ಲಿ ದಕ್ಕಿರುವುದು ಬಹಳ ಕಡಿಮೆ. ಕೊರೋನಾದಿಂದ ಅವರೆದುರಿಸಿದ ಸಂಕಷ್ಟಗಳಿಗೆ ಪರಿಹಾರ ಸೂಚಿಸುವ ಸ್ಪಷ್ಟ ಕಾರ್ಯಕ್ರಮಗಳ್ಯಾವುವೂ ಕಾಣಿಸುತ್ತಿಲ್ಲ.

ಕೋವಿಡ್‌ ಮಹಾಮಾರಿಯಿಂದಾಗಿ ಮಹಿಳೆಯರ ಬದುಕಿನಲ್ಲಿ ಮತ್ತು ಜೀವನೋಪಾಯದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪೌಷ್ಟಿಕ ಆಹಾರ, ಆರೋಗ್ಯ ಸೇವೆಗಳು ಮತ್ತು ಶಿಕ್ಷಣ ಪಡೆಯುವುದು, ಉದ್ಯೋಗದ ರೀತಿ ನೀತಿ ಹಾಗೂ ಕೆಲಸದ ವೈಖರಿಗಳಲ್ಲೂ ಮಾರ್ಪಾಡುಗಳಾಗಿವೆ. ಅವರ ಸಾಮಾಜಿಕ– ಆರ್ಥಿಕ ಪುನಃಶ್ಚೇತನ ಹಸಿರು ಟೊಂಗೆಗಳು ಚಿಗುರುವುದನ್ನು ಕಾತರದಿಂದ ಎದುರು ನೋಡುತ್ತಿದ್ದೆವು. ಮಹಿಳೆಯರು ಎದುರಿಸಿರುವ ಉದ್ಯೋಗ ನಷ್ಟಕ್ಕೆ ಪ್ರತಿಯಾಗಿ ಅವರಿಗೆ ಬೆಂಬಲ ಒದಗಿಸಲು ಮತ್ತು ಮಕ್ಕಳ ಶಿಕ್ಷಣದಲ್ಲಿ ಆಗಿರುವ ನಷ್ಟಗಳನ್ನು ಭರಿಸುವುದಕ್ಕೆ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿತ್ತು.

ಬಜೆಟ್‌ನಲ್ಲಿ ಕಾಣಿಸದ ಅಂಶಗಳು:

ADVERTISEMENT

* ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗೆ ಸೀಮಿತವಾದ ಯಾವುದೇ ಹೊಸ ಯೋಜನೆಗಳನ್ನು ಪ್ರಕಟಿಸಿಲ್ಲ.

* ಸ್ವಸಹಾಯ ಸಂಘಗಳಿಗೆ, ಬೇಟೀ ಬಚಾವೊ ಬೇಟೀ ಪಢಾವೊ ಕಾರ್ಯಕ್ರಮಗಳಿಗೆ, ಮಹಿಳೆಯರ ತರಬೇತಿ ಮತ್ತು ಉದ್ಯೋಗ ಕಾರ್ಯಕ್ರಮಕ್ಕೆ ಅನುದಾನ ಹಂಚಿಕೆ ಮಾಡುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ

* ಮಹಿಳೆಯರ ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಉಲ್ಲೇಖವಿಲ್ಲ.

* ಅನೌಪಚಾರಿಕ ವಲಯದ ಮಹಿಳಾ ಕಾರ್ಮಿಕರಿಗೂ ಯಾವುದೇ ಸವಲತ್ತುಗಳನ್ನು ಅಥವಾ ಯೋಜನೆಗಳನ್ನು ಪ್ರಕಟಿಸಿಲ್ಲ.

ಬಜೆಟ್‌ನಲ್ಲಿ ಮಹಿಳೆ ಮತ್ತು ಮಕ್ಕಳ ಕಾರ್ಯಕ್ರಮಗಳು:


* ಅಸ್ಸಾಂ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಚಹಾ ತೋಟಗಳಲ್ಲಿ ಕಾರ್ಮಿರಾಗಿರುವ ಮಹಿಳೆ ಮತ್ತು ಮಕ್ಕಳ ವಿಶೇಷ ಯೋಜನೆಗೆ ₹ 1 ಸಾವಿರ ಕೋಟಿ ಹಂಚಿಕೆ.

* ಉಜ್ವಲ ಯೋಜನೆಯನ್ನು ಮತ್ತೆ 1 ಕೋಟಿ ಫಲಾನುಭವಿಗಳಿಗೆ ವಿಸ್ತರಿಸಲಾಗಿದೆ

* ವಿತ್ತೀಯ ಸೇರ್ಪಡೆಯ ಉದ್ದೇಶದಿಂದ ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮತ್ತು ಮಹಿಳೆಯರಿಗೆ ಸಾಲ ಒದಗಿಸುವುದಕ್ಕೆ ಉತ್ತೇಜನ ನೀಡಲಾಗುತ್ತದೆ. ಫಲಾನುಭವಿಗಳು ಭರಿಸಬೇಕಾದ ಹಣದ (ಮಾರ್ಜಿನ್‌ ಮನಿ) ಪ್ರಮಾಣವನ್ನು ಶೇ 25ರಿಂದ ಶೇ 15ಕ್ಕೆ ಕಡಿತಗೊಳಿಸಲಾಗುತ್ತಿದೆ.

* ರಾಷ್ಟ್ರೀಯ ಶುಶ್ರೂಷಕಿಯರ ಮತ್ತು ಸೂಲಗಿತ್ತಿಯರ ಆಯೋಗದ ಮಸೂದೆ ರಚನೆ.

* ರಾಷ್ಟ್ರೀಯ ಪೋಷಣಾ ಅಭಿಯಾನದ ಮೊತ್ತ ₹ 3400 ಕೋಟಿಯಿಂದ ₹ 3,700 ಕೋಟಿಗಳಿಗೆ ಹೆಚ್ಚಳ

*ರಾಷ್ಟ್ರೀಯ ಶಿಕ್ಷಣ ನೀತಿಯಡಿ 15 ಸಾವಿರಕ್ಕೂ ಅಧಿಕ ಶಾಲೆಗಳ ಅಭಿವೃದ್ಧಿ.

* ಕನಿಷ್ಠ ಕೂಲಿ ಕಾಯ್ದೆಯನ್ನು ಎಲ್ಲ ವರ್ಗಗಳ ಕಾರ್ಮಿಕರಿಗೆ ಅನ್ವಯಗೊಳಿಸಲಾಗಿದೆ. ಮಹಿಳೆಯರು ಎಲ್ಲ ವರ್ಗಗಳಲ್ಲಿ ಹಾಗೂ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ರಾತ್ರಿ ಪಾಳಿಗಳಲ್ಲೂ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದು ಸ್ವಾಗತಾರ್ಹ ನಡೆ. ಕಾರ್ಮಿಕ ವಲಯದಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಳಕ್ಕೆ ಇದು ನೆರವಾಗಲಿದೆ. ಆದಾಗ್ಯೂ ಹೂಡಿಕೆ ಕಂಪನಿಗಳು ಮಹಿಳೆರಿಗೆ ಸುರಕ್ಷಿತ ಕಾರ್ಯಸ್ಥಳವನ್ನು ಒದಗಿಸುವುದನ್ನು ಖಾತರಿ ಪಡಿಸಿಕೊಳ್ಳಬೇಕು. ಮಹಿಳೆಯರೂ ಪುರುಷರಿಗೆ ಸರಿಸಮಾನರಾಗಿ ಹೆಚ್ಚಿನ ಅವಕಾಶಗಳನ್ನು ಪಡೆಯಲು ಹಾಗೂ ಕೌಶಲ ವರ್ಧಿಸಿಕೊಳ್ಳುವ ಮೂಲಕ ಎಲ್ಲ ವರ್ಗಗಳಲ್ಲೂ ಉದ್ಯೋಗ ಪಡೆಯಲು ಅಗತ್ಯ ಕ್ರಮಕೈಗೊಳ್ಳಬೇಕು. ಮಹಿಳೆಯರಿಗೆ ಇದರ ಪ್ರಯೋಜನ ಸಿಗಬೇಕಾದರೆ ಸಂಸ್ಥೆಗಳು ಮಹಿಳಾ ಉದ್ಯೋಗಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಅವರಿಗೆ ಸುರಕ್ಷಿತ ಮತ್ತು ಭದ್ರತೆ ಒದಗಿಸುವಂತಹ ಮೂಲಸೌಕರ್ಯಗಳನ್ನು ಒದಗಿಸಬೇಕು.

ಜನಸಂಖ್ಯೆಯಲ್ಲಿ ಶೇ 48ರಷ್ಟು ಮಹಿಳೆಯರನ್ನು ಹೊಂದಿರುವ ಹಾಗೂ 14 ವರ್ಷದೊಳಗಿನವರ ಸಂಖ್ಯೆ ಶೇ 26ರಷ್ಟಿರುವ ದೇಶದ ಬಜೆಟ್‌ನಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿಗೆ ಎಷ್ಟು ಅನುದಾನ ಹಂಚಿಕೆ ಮಾಡಲಾಗುತ್ತದೆ ಎಂಬುದು ಮಹತ್ವದ ವಿಷಯ. ಅನುದಾನ ಕೊರತೆಯಿಂದ ಉಂಟಾಗುವ ಸಾಮಾಜಿಕ ಮತ್ತು ಆರ್ಥಿಕ ದುಷ್ಪರಿಣಾಮಗಳು ದೀರ್ಘ ಕಾಲ ಬಾಧಿಸಬಲ್ಲವು. ಕೊರೊನಾ ಮಹಾಮಾರಿಯಿಂದಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸಂಕಟಗಳನ್ನು ಪರಿಹರಿಸಲು ಆರ್ಥಿಕ ಸ್ಥಿತಿ ಹಳಿಗೆ ಮರಳಿದ ಬಳಿಕವಾದರೂ ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂಬ ವಿಶ್ವಾಸ ನಮ್ಮದು.

(ಲೇಖಕರು: ಸಹಾಯಕ ಪ್ರಾಧ್ಯಾಪಕಿ ಎಕನಾಮಿಕ್ಸ್‌ ವಿಭಾಗ, ಕ್ರೈಸ್ಟ್‌ ಡೀಮ್ಡ್‌ ವಿಶ್ವವಿದ್ಯಾಲಯ)

ಇವುಗಳನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.