ADVERTISEMENT

ಕೋವಿಡ್‌–19 ಬಿಕ್ಕಟ್ಟಿನಿಂದ ಆದಾಯ ಕುಸಿತ: 1,400 ಸಿಬ್ಬಂದಿ ಕಡಿತಗೊಳಿಸಲಿದೆ ಓಲಾ 

ಏಜೆನ್ಸೀಸ್
Published 20 ಮೇ 2020, 10:29 IST
Last Updated 20 ಮೇ 2020, 10:29 IST
ಓಲಾ ಕ್ಯಾಬ್‌
ಓಲಾ ಕ್ಯಾಬ್‌    

ನವದೆಹಲಿ: ದೇಶದಾದ್ಯಂತ ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆ ನೀಡುತ್ತಿರುವ ಓಲಾ, ಕೊರೊನಾ ವೈರಸ್‌ನಿಂದ ಉಂಟಾಗಿರುವ ಆರ್ಥಿಕ ನಷ್ಟದ ಕಾರಣದಿಂದಾಗಿ 1,400 ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕುತ್ತಿದೆ. ಕಳೆದ ಎರಡು ತಿಂಗಳಲ್ಲಿ ಶೇ 95ರಷ್ಟು ಆದಾಯ ಕುಸಿದಿದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಿಷ್‌ ಅಗರ್ವಾಲ್‌ ಹೇಳಿದ್ದಾರೆ.

'ಕೊರೊನಾ ಸೋಂಕಿನಿಂದಾಗಿ ವಹಿವಾಟಿನ ಕುರಿತು ಸ್ಪಷ್ಟತೆ ಸಿಗುತ್ತಿಲ್ಲ ಹಾಗೂ ಅನಿಶ್ಚಿತತೆ ಎದುರಾಗಿದೆ. ಕೋವಿಡ್–19 ಬಿಕ್ಕಟ್ಟು ನಮ್ಮನ್ನು ದೀರ್ಘಕಾಲದ ವರೆಗೂ ಕಾಡಲಿದೆ. ಇದರಿಂದಾಗಿ ದೇಶದಾದ್ಯಂತ ಮತ್ತು ವಿದೇಶಗಳಲ್ಲಿ ನಮ್ಮ ಲಕ್ಷಾಂತರ ಚಾಲಕರ ಹಾಗೂ ಅವರ ಕುಟುಂಬದವರ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ. ಕಳೆದ 2 ತಿಂಗಳಲ್ಲಿ ಕಂಪನಿಯ ಆದಾಯ ಶೇ 95ರಷ್ಟು ಕಡಿಮೆಯಾಗಿದೆ. ಹೀಗಾಗಿ, 1,400 ಸಿಬ್ಬಂದಿಯನ್ನು ಕಾರ್ಯದಿಂದ ಬಿಡುಗಡೆ ನೀಡಲು ನಿರ್ಧರಿಸಿದೆ' ಎಂದು ಭವಿಷ್ ಅಗರ್ವಾಲ್‌ ಸಿಬ್ಬಂದಿಗೆ ಕಳುಹಿಸಿರುವ ಇ–ಮೇಲ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇದೇ ವಾರದಲ್ಲಿ ಸಂಚಾರ ಸೇವೆಯ ವಹಿವಾಟಿಗೆ ಸಂಬಂಧಿಸಿದ ಸಿಬ್ಬಂದಿತೆರವು ಗೊಳಿಸುವ ಕಾರ್ಯ ನಡೆಯುತ್ತದೆ. ಮುಂದಿನ ವಾರದಲ್ಲಿ ಓಲಾ ಫೂಡ್ಸ್‌ ಹಾಗೂ ಓಲಾ ಹಣಕಾಸು ಸೇವೆಗಳ ಸಿಬ್ಬಂದಿ ವಜಾಗೊಳಿಸಲಾಗುತ್ತದೆ. ಇದಾದ ನಂತರ ಕೋವಿಡ್‌–19ಗೆ ಸಂಬಂಧಿಸಿದಂತೆ ಸಿಬ್ಬಂದಿ ಕಡಿತಗೊಳಿಸುವ ಪ್ರಕ್ರಿಯೆ ನಡೆಯುವುದಿಲ್ಲ ಎಂದಿದ್ದಾರೆ.

ADVERTISEMENT

ಅಂತರ ಕಾಯ್ದುಕೊಳ್ಳುವುದು ಹಾಗೂ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಳ್ಳುವುದು ಅಗತ್ಯವಾಗಿದೆ. ಬಹುತೇಕ ಕಂಪನಿಗಳು ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ, ವಿಮಾನಯಾನ ಅತ್ಯಗತ್ಯ ಸಂಚಾರ ಮಾತ್ರ ನಡೆಯುತ್ತಿವೆ ಹಾಗೂ ರಜಾ ದಿನಗಳನ್ನು ಸುತ್ತಾಡಿ ಕಳೆಯುವುದು ದೂರವೇ ಉಳಿದಂತಾಗಿದೆ ಎಂದು ಉದ್ಯಮಕ್ಕೆ ಹೊಡೆತ ಬಿದ್ದಿರುವುದನ್ನು ವಿವರಿಸಿದ್ದಾರೆ.

ಕೋವಿಡ್‌–19 ಲಾಕ್‌ಡೌನ್‌ ಅವಧಿಯಲ್ಲಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ವಹಿವಾಟು ತೀವ್ರ ಕುಸಿದಿರುವುದರಿಂದ ತಂತ್ರಜ್ಞಾನ ಆಧಾರಿತ ಉದ್ಯಮಗಳಾದ ಊಬರ್‌, ಜೊಮ್ಯಾಟೊ ಹಾಗೂ ಸ್ವಿಗ್ಗಿ ಕೆಲವು ವಾರಗಳಿಂದ ಸಿಬ್ಬಂದಿ ಕಡಿತಗೊಳಿಸುವ ನಿರ್ಧಾರ ಪ್ರಕಟಿಸಿವೆ.

ಜೊಮ್ಯಾಟೊ ಒಟ್ಟು 4,000 ಸಿಬ್ಬಂದಿ ಪೈಕಿ ಶೇ 13ರಷ್ಟು ಜನರನ್ನು ಕೆಲಸದಿಂದ ತೆಗೆದು ಹಾಕಿದೆ. ಸ್ವಿಗ್ಗಿ 1,100 ಸಿಬ್ಬಂದಿಯನ್ನು ಹಾಗೂ ಊಬರ್‌ ಜಾಗತಿಕವಾಗಿ 3,000 ಸಿಬ್ಬಂದಿ ಕಡಿತಗೊಳಿಸುವುದಾಗಿ ಪ್ರಕಟಿಸಿವೆ.

ಓಲಾ ಕಳೆದ ವರ್ಷ ನಡೆಸಿದ ಕಂಪನಿ ಪುನರ್‌ರಚನೆ ಪ್ರಕ್ರಿಯೆಯಿಂದಾಗಿ 4,500 ಸಿಬ್ಬಂದಿಗಳ ಪೈಕಿ 350 ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ನಾವು ಹೂಡಿಕೆ ಹಾಗೂ ಮಾನವ ಸಂಪನ್ಮೂಲ ಹೆಚ್ಚಿಸುತ್ತಿದ್ದೇವೆ. ಈ ಬಿಕ್ಕಟಿನ ಮೂಲಕ ಅನ್ವೇಷಣೆ ಹಾಗೂ ಎಂಜಿನಿಯರಿಂಗ್‌ ದುಪ್ಪಟ್ಟು ಗೊಳಿಸಲು ಕ್ರಮವಹಿಸುತ್ತೇವೆ. ಡಿಜಿಟಲ್‌ ವಹಿವಾಟು, ಕ್ಲೀನ್‌ ಮೊಬಿಲಿಟಿ ಸೇರಿದಂತೆ ಉದ್ಯಮದ‌ಲ್ಲಿ ಹಲವು ಟ್ರೆಂಡ್‌ ಸೃಷ್ಟಿಸಿದೆ. ಕೆಲಸದಿಂದ ತೆರವುಗೊಳ್ಳುತ್ತಿರುವ ಸಿಬ್ಬಂದಿ, ಅವರ 3 ತಿಂಗಳ ನಿಗದಿತ ಸಂಬಳ ಪಡೆಯಲಿದ್ದಾರೆ. ಹೆಚ್ಚು ಸಮಯದಿಂದ ಕಾರ್ಯನಿರ್ವಹಿಸಿರುವವರು ಇನ್ನೂ ಹೆಚ್ಚಿನ ಮೊತ್ತ ಪಡೆಯಲಿದ್ದಾರೆ ಎಂದು ಭವಿಷ್‌ ಅಗರ್ವಾಲ್‌ ಹೇಳಿದ್ದಾರೆ.

ಎಲ್ಲ ಸಿಬ್ಬಂದಿ ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ವಿಮೆ. ಜೀವ ವಿಮೆ ಹಾಗೂ ಅಪಘಾತ ವಿಮೆ ಸೌಲಭ್ಯಅವರು ಮತ್ತೊಂದು ಕಡೆ ಕೆಲಸಕ್ಕೆ ಸೇರುವ ಅವಧಿ ವರೆಗೂ ಅಥವಾ2020, ಡಿಸೆಂಬರ್‌ 31ರ ವರೆಗೂ (ಮೊದಲು ಯಾವುದೋ ಆ ವರೆಗೂ) ಮುಂದುವರಿಯಲಿದೆ. ಸಿಬ್ಬಂದಿಯ ಇಬ್ಬರು ಪಾಲಕರಿಗೆ ₹2 ಲಕ್ಷದ ವರೆಗೂ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುತ್ತದೆ ಎಂದಿದ್ದಾರೆ.

ಓಲಾದಿಂದ ಹೊರಗೆ ಹುದ್ದೆ ಪಡೆಯಲು ಕಂಪನಿಯು ಸಹಾಯ ಮಾಡಲಿದೆ ಹಾಗೂ ಕಂಪನಿ ನೀಡಿರುವ ಲ್ಯಾಪ್‌ಟಾಪ್‌ಗಳನ್ನು ಅವರಲ್ಲಿ ಉಳಿಸಿಕೊಳ್ಳಲು ತಿಳಿಸಲಾಗಿದೆ. ಪ್ರಮುಖ ಹುದ್ದೆಯಲ್ಲಿರುವವರು ವೇತನ ಕಡಿತಕ್ಕೆ ಒಳಗಾಗಿದ್ದಾರೆ. ಮೊದಲಿಗೆ ಬಿಕ್ಕಟ್ಟು ಅಲ್ಪಾವಧಿ ಎಂದೇ ಭಾವಿಸಿದ್ದೆವು, ಆದರೆ ಕೋವಿಡ್–19 ಪರಿಣಾಮ ದೀರ್ಘಾವಧಿಯದು ಎಂದು ಹೇಳಿದ್ದಾರೆ.

ದೇಶದಾದ್ಯಂತ 2.5 ಲಕ್ಷಕ್ಕೂ ಹೆಚ್ಚು ಚಾಲಕ ಪಾಲುದಾರರನ್ನು ಓಲಾ ಹೊಂದಿದೆ. ಬೆಂಗಳೂರು ಮತ್ತು ರಾಜ್ಯದ ಇತರ ನಗರಗಳಲ್ಲೇ 1 ಲಕ್ಷಕ್ಕೂ ಹೆಚ್ಚು ಚಾಲಕರಿದ್ದಾರೆ. ದೇಶದ 200 ನಗರಗಳಲ್ಲಿ ಓಲಾ ಸೇವೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.