ADVERTISEMENT

ಜೊಮ್ಯಾಟೊ: ₹ 8,250 ಕೋಟಿ ಸಂಗ್ರಹಿಸಲು ಐಪಿಒ ಮಾರ್ಗ

ಪಿಟಿಐ
Published 28 ಏಪ್ರಿಲ್ 2021, 8:48 IST
Last Updated 28 ಏಪ್ರಿಲ್ 2021, 8:48 IST
ಜೊಮ್ಯಾಟೊ–ಪ್ರಾತಿನಿಧಿಕ ಚಿತ್ರ
ಜೊಮ್ಯಾಟೊ–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಆಹಾರ ಡೆಲಿವರಿ ಮಾಡುವ ಜೊಮ್ಯಾಟೊ ಪ್ಲಾಟ್‌ಫಾರ್ಮ್‌ ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ವಿತರಣೆಗಾಗಿ ಆರಂಭಿಕ ಹಂತದ ದಾಖಲೆಗಳನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಸಲ್ಲಿಸಿದೆ.

ಐಪಿಒ ಮೂಲಕ ಒಟ್ಟು ₹ 8,250 ಕೋಟಿ ಸಂಗ್ರಹಿಸಲು ಜೊಮ್ಯಾಟೊ ಉದ್ದೇಶಿಸಿದ್ದು, ₹7,500 ಕೋಟಿ ಮೌಲ್ಯದ ಈಕ್ವಿಟಿ ಷೇರುಗಳು ಹಾಗೂ ಇನ್ಫೊ ಎಡ್ಜ್‌ (ಇಂಡಿಯಾ) ಲಿಮಿಟೆಡ್‌ 'ಆಫ್‌ ಫಾರ್‌ ಸೇಲ್‌' ವಿಧಾನದಲ್ಲಿ ₹750 ಕೋಟಿ ಮೌಲ್ಯದ ಷೇರುಗಳನ್ನು ವಿತರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳ ಹೆಚ್ಚಳ ಮತ್ತು ಲಾಕ್‌ಡೌನ್‌ ಕಾರಣಗಳಿಂದ ಜನರು ಹೊಟೇಲ್‌ಗಳಿಗೆ ಭೇಟಿ ನೀಡುವುದು ಕಡಿಮೆಯಾಗಿದೆ ಹಾಗೂ ಆನ್‌ಲೈನ್‌ ಬೇಡಿಕೆ ಸಲ್ಲಿಸಿ ಪಾರ್ಸಲ್‌ ತರಿಸಿಕೊಳ್ಳುವುದು ಹೆಚ್ಚಿದೆ. ಭಾರತದಲ್ಲಿ ಆಹಾರ ಡೆಲಿವರಿ ವಲಯದಲ್ಲಿ ಮಾರುಕಟ್ಟೆ ವ್ಯಾಪ್ತಿ ಹೆಚ್ಚಿಸಿಕೊಳ್ಳಲು ಜೊಮ್ಯಾಟೊ ಮತ್ತು ಸ್ವಿಗ್ಗಿ ಸಮಾನ ಪೈಪೋಟಿ ನಡೆಸುತ್ತಿವೆ.

ADVERTISEMENT

ಕಳೆದ ಹಣಕಾಸು ವರ್ಷದಲ್ಲಿ ಜೊಮ್ಯಾಟೊ ಆದಾಯವು ದುಪ್ಪಟ್ಟು ಏರಿಕೆಯಾಗಿ ಸುಮಾರು ₹ 2,960 ಕೋಟಿ (394 ಮಿಲಿಯನ್‌ ಅಮೆರಿಕನ್ ಡಾಲರ್‌) ದಾಖಲಾಗಿದೆ. ಫೆಬ್ರುವರಿಯಲ್ಲಿ ಟೈಗರ್‌ ಗ್ಲೋಬಲ್‌, ಕೋರಾ ಹಾಗೂ ಇತರೆ ಹೂಡಿಕೆ ಸಂಸ್ಥೆಗಳಿಂದ ಜೊಮ್ಯಾಟೊ 250 ಮಿಲಿಯನ್‌ ಡಾಲರ್‌ (ಸುಮಾರು ₹ 1,800 ಕೋಟಿ) ಸಂಗ್ರಹಿಸಿದ್ದು, ಕಂಪನಿಯ ಮೌಲ್ಯ 5.4 ಬಿಲಿಯನ್‌ ಡಾಲರ್‌ ಆಗಿದೆ.

ಕೊಟ್ಯಾಕ್‌ ಮಹೀಂದ್ರಾ ಕ್ಯಾಪಿಟಲ್‌ ಕಂಪನಿ ಲಿಮಿಟೆಡ್‌, ಮಾರ್ಗನ್ ಸ್ಟ್ಯಾನ್ಲೇ ಇಂಡಿಯಾ ಕಂಪನಿ ಪ್ರೈವೇಟ್‌ ಲಿಮಿಟೆಡ್‌ ಹಾಗೂ ಕ್ರೆಡಿಟ್‌ ಸ್ಯೂಸ್‌ ಸೆಕ್ಯುರಿಟೀಸ್‌ (ಇಂಡಿಯಾ) ಪ್ರೈ.ಲಿ., ಸಂಸ್ಥೆಗಳು ಜೊಮ್ಯಾಟೊ ಐಪಿಒ ವಿತರಣೆ ಪ್ರಕ್ರಿಯೆಗಳನ್ನು ನಿರ್ವಹಿಸುತ್ತಿವೆ. ಬ್ಯಾಂಕ್‌ ಆಫ್‌ ಅಮೆರಿಕ ಸೆಕ್ಯುರಿಟೀಸ್‌ ಇಂಡಿಯಾ ಲಿಮಿಟೆಡ್‌, ಸಿಟಿಗ್ರೂಪ್‌ ಗ್ಲೋಬಲ್‌ ಮಾರ್ಕೆಟ್ಸ್‌ ಇಂಡಿಯಾ ಪ್ರೈ.ಲಿ., ಗಳನ್ನು ಸಾರ್ವಜನಿಕ ವಿತರಣೆಗಳಿಗೆ ಮರ್ಚೆಂಟ್‌ ಬ್ಯಾಂಕರ್‌ಗಳಾಗಿ ನಿಗದಿ ಪಡಿಸಲಾಗಿದೆ.

2021ರ ಮೊದಲಾರ್ಧದಲ್ಲಿ ಐಪಿಒ ವಿತರಣೆಗೆ ಉದ್ದೇಶಿಸಲಾಗಿದೆ ಎಂದು ಜೊಮ್ಯಾಟೊ ಸಂಸ್ಥಾಪಕ ಮತ್ತು ಸಿಇಒ ದೀಪೇಂದರ್‌ ಗೋಯಲ್‌ ಕಳೆದ ವರ್ಷ ಕಂಪನಿಯ ಸಿಬ್ಬಂದಿಗೆ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.