ADVERTISEMENT

ಬೆರಗಿನ ಬೆಳಕು: ಬಡತನ-ಸಿರಿತನ

ಡಾ. ಗುರುರಾಜ ಕರಜಗಿ
Published 19 ಮೇ 2022, 19:45 IST
Last Updated 19 ಮೇ 2022, 19:45 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಕಿವುಡುತನ ತಪ್ಪೀತೆ ರನ್ನ ಕುಂಡಲದಿಂದ ? |
ತೊವಲು ಜಬ್ಬಲು ಬಿಳದೆ ಮೃಷ್ಟಾನ್ನದಿಂದ ? || ಭುವಿಯ ಪರಿಣಾಮದಲಿ ಸಿರಿಬಡತನಗಳೊಂದೆ |
ಜವರಾಯ ಸಮವರ್ತಿ – ಮಂಕುತಿಮ್ಮ || 632 ||

ಪದ-ಅರ್ಥ: ರನ್ನ=ಚಿನ್ನದ, ಕುಂಡಲ=ಕಿವಿಯ ಓಲೆ, ತೊವಲು=ತೊಗಲು, ಜಬ್ಬಲು=ಜೋತು, ಬಿಳದೆ=ಬೀಳದೆ, ಭುವಿಯ=ಭೂಮಿಯ, ಜಗತ್ತಿನ, ಜವರಾಯ=ಯಮರಾಯ, ಸಮವರ್ತಿ=ಎಲ್ಲರನ್ನೂ ಸಮನಾಗಿ ನೋಡುವವನು.

ವಾಚ್ಯಾರ್ಥ: ಚಿನ್ನದ ಓಲೆಯನ್ನು ಹಾಕಿಕೊಂಡರೆ ಕಿವುಡುತನ ಹೋದೀತೇ? ದಿನವೂ ಮೃಷ್ಟಾನ್ನವನ್ನು ತಿನ್ನುತ್ತಿದ್ದರೆ ಚರ್ಮ ಜೋತು ಬೀಳದೆ? ಲೋಕದಲ್ಲಿ ಸಿರಿತನ, ಬಡತನಗಳು ಕೊನೆಯ ಪರಿಣಾಮದಲ್ಲಿ ಒಂದೇ ಆಗಿವೆ, ಯಾಕೆಂದರೆ ಯಮ ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುತ್ತಾನೆ.

ADVERTISEMENT

ವಿವರಣೆ: ಬದುಕಿನಲ್ಲಿ ಸಿರಿತನ, ಬಡತನಗಳನ್ನು, ನಾವು ಯಾವ ರೀತಿಯಲ್ಲಿ ನೋಡುತ್ತೇವೆ ಎನ್ನುವುದರ ಮೇಲಿದೆ. ತೀರ ಬಡತನವಿದ್ದೂ ಸಂತೋಷವಾಗಿರುವವರನ್ನೂ ಕಂಡಿದ್ದೇವೆ, ತುಂಬ ಶ್ರೀಮಂತಿಕೆ ಇದ್ದು ಸದಾ ಕೊರಗುವವರನ್ನು ನೋಡಿದ್ದೇವೆ. ಹಾಗಾದರೆ ಬಡತನ, ಸಿರಿತನಗಳ ವ್ಯತ್ಯಾಸವೇನು? ಅದು ನೋಡುವ ದೃಷ್ಟಿ. ಒಮ್ಮೆ ಒಂದು ಕೋಳಿ ಆಹಾರ ಹುಡುಕುತ್ತ ಒಬ್ಬ ಅತ್ಯಂತ ಶ್ರೀಮಂತರ ಮನೆಯ ಹಿಂಭಾಗಕ್ಕೆ ಹೋಯಿತು. ಅಲ್ಲೊಂದು ತಿಪ್ಪೆ. ಅದು ಶ್ರೀಮಂತರ ತಿಪ್ಪೆ. ಕೋಳಿಗೆ ಕೆದರಿ, ಕೆದರಿ ಸಾಕಾಯಿತು. ತಿನ್ನಲು ಏನೂ ಸಿಕ್ಕಲಿಲ್ಲ. ಮತ್ತೆ ಕೆದರಿದಾಗ ಅದಕೊಂದು ವಜ್ರದ ಹರಳು ಸಿಕ್ಕಿತು. ಕೋಟಿ ಬೆಲೆಬಾಳುವ ಹರಳು ಅದು. ಕೋಳಿ ಕಚ್ಚಿ, ಕಚ್ಚಿ ನೋಡಿತು. ದರಿದ್ರ ವಸ್ತು, ರುಚಿಯಿಲ್ಲ, ರಸವಿಲ್ಲ. ಇದು ನಿರುಪಯುಕ್ತ ವಸ್ತುವೆಂದು ಉಗುಳಿ ಹೊರಟು ಹೋಯಿತು. ಯಾವುದು ಶ್ರೀಮಂತನಿಗೆ ಬೆಲೆಬಾಳುವ ವಸ್ತುವಾಗಿತ್ತೋ, ಕೋಳಿಗೆ ಅದು ನಿಷ್ಪ್ರಯೋಜಕ. ಮುಂದೆ ಕೋಳಿಗೊಂದು ಅರ್ಧ ಕೊಳೆತ ಕಾಳು ಸಿಕ್ಕಿತು. ಅದಕ್ಕೆ ಸಂಭ್ರಮವೇ ಸಂಭ್ರಮ. ಅದು ಬೆಲೆಬಾಳುವ ವಸ್ತು ಕೋಳಿಗೆ.

ಸಪ್ತಸಾಗರಗಳಿವೆ, ತುಂಬಿ ಹರಿಯುವ ನದಿಗಳಿವೆ. ಮಳೆ ಎಲ್ಲೆಡೆಗೂ ಸುರಿಯುತ್ತದೆ. ಅಂದು ಕಾಳು ಬಿತ್ತಿದರೆ ಸಾವಿರ ಕಾಳು ಮರಳಿ ಕೊಡುವ ಫಲವತ್ತಾದ ನೆಲವಿದೆ. ಎಲ್ಲರನ್ನೂ ತಲುಪುವ ಸೂರ್ಯನಿದ್ದಾನೆ. ಆಗಸವನ್ನು ಅಲಂಕರಿಸಿದ ಚಂದ್ರ-ತಾರೆಗಳಿವೆ. ಇವು ಎಲ್ಲರಿಗೂ ಇವೆ. ಇವು ಯಾರೊಬ್ಬರ ಸೊತ್ತೂ ಅಲ್ಲ. ಹಾಗಾದರೆ ಬಡವರಾರು, ಶ್ರೀಮಂತರಾರು? ಪುಕ್ಕಟೆಯಾಗಿ ದೊರೆಯುವ ಈ ಎಲ್ಲವುಗಳನ್ನು ಸರಿಯಾಗಿ ಬಳಸಿಕೊಂಡವ ಶ್ರೀಮಂತ, ಕಣ್ಣು ಮುಚ್ಚಿಕೊಂಡು ಇವುಗಳಿಗೆಲ್ಲ ಬೆನ್ನು ಮಾಡಿದವ ಬಡವ.

ತತ್ವತ: ಎಲ್ಲವೂ ಸಂಪತ್ತೇ, ಆದ್ದರಿಂದ ಎಲ್ಲರೂ ಸಿರಿವಂತರೇ. ಭಗವಂತ ಎಲ್ಲರಿಗೂ, ಎಲ್ಲವನ್ನೂ ಸಮನಾಗಿಯೇ ಕೊಟ್ಟಿದ್ದಾನೆ. ಆದರೆ ಮನುಷ್ಯ ತನ್ನ ಸ್ವಾರ್ಥದಿಂದ, ಕೆಲವು ವಸ್ತುಗಳನ್ನು ಶ್ರೀಮಂತಿಕೆಯ ಸಂಕೇತಗಳೆಂದು ಆರಿಸಿಕೊಂಡು, ಶ್ರೇಷ್ಠ, ಕನಿಷ್ಠ ಎಂದು ಮಾಡಿಕೊಂಡಿದ್ದಾನೆ. ಕಗ್ಗ ಆ ಮಾತನ್ನು ತಿಳಿಯುವಂತೆ ಹೇಳುತ್ತದೆ. ಬಂಗಾರದ ಓಲೆಗಳನ್ನು ಹಾಕಿಕೊಂಡರೆ ಕಿವುಡುತನ ಹೋದೀತೇ? ಬಂಗಾರದ ಓಲೆ ದೇಹದ ಹೊರಗಿನದು, ಅದು ದೇಹಶಕ್ತಿಯನ್ನು ಬದಲಿಸಲಾಗದು. ಅಂತೆಯೇ ಶ್ರೀಮಂತಿಕೆ ಇದೆಯೆಂದು ನಿತ್ಯ ಮೃಷ್ಟಾನ್ನ ತಿಂದರೆ, ಬೊಜ್ಜು ಬೆಳೆದು ಚರ್ಮ ಜೋತುಬಿದ್ದು ಅಸಹ್ಯವಾಗುತ್ತದೆ. ಮರದ ಹಡಗೊಂದು, ಚಿನ್ನದ ಹಡಗೊಂದು ಸಮುದ್ರದಲ್ಲಿ ಸಾಗಿದವು. ಬಿರುಗಾಳಿ ಎದ್ದಿತು. ಎರಡೂ ಒಡೆದು ಚಿಂದಿಯಾದವು. ಸಮುದ್ರಕ್ಕೆ ಬಂಗಾರದ, ಮರದ ವ್ಯತ್ಯಾಸವಿಲ್ಲ. ನಮ್ಮ ಬದುಕಿನ ಸಮುದ್ರದಲ್ಲೂ ಸಾಗುವ ನಮಗೆ ಕೊನೆಗೆ ದೊರಕುವ ಸಂತೋಷ ಮಾತ್ರ ನಮ್ಮದು, ಕೂಡಿ ಹಾಕಿದ ವಸ್ತುಗಳಲ್ಲ. ಯಮರಾಜ ಯಾವುದನ್ನು ವ್ಯತ್ಯಾಸ ಮಾಡದೆ ನೋಡುವ ಸಮವರ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.