ADVERTISEMENT

ಬೆರಗಿನ ಬೆಳಕು – ಗುರುರಾಜ ಕರಜಗಿ ಅಂಕಣ| ಎರಡು ದೃಷ್ಟಿಗಳು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 19:30 IST
Last Updated 23 ಮಾರ್ಚ್ 2023, 19:30 IST
ಗುರುರಾಜ ಕರಜಗಿ
ಗುರುರಾಜ ಕರಜಗಿ    

ಸ್ಥಿರ ಹಿಮಾಚಲ ಬೊಮ್ಮ, ಚರ ಚಾಹ್ನವಿಯೆ ಮಾಯೆ |
ಪರಸ್ತ್ವಘನದ ವಿದ್ರವರೂಪ ವಿಶ್ವ ||
ಪರಮಾರ್ಥಕೊಂದಕ್ಷಿ ವೆವಹಾರಕಿನ್ನೊಂದು |
ಎರಡುಮೊಂದಾಂತರ್ಯ – ಮಂಕುತಿಮ್ಮ|| 848 ||

ಪದ-ಅರ್ಥ: ಬೊಮ್ಮ=ಬ್ರಹ್ಮ, ಚರ=ಚಲಿಸುವ, ಜಾಹ್ನವಿ=ಗಂಗೆ, ವಿದ್ರವ=ದ್ರವ ರೂಪಿ, ಪರಮಾರ್ಥಕೊಂದಕ್ಷಿ=ಪರಮಾರ್ಥಕೆ+
ಒಂದು+ಅಕ್ಷಿ(ಕಣ್ಣು), ವೆವಹಾರಕಿನ್ನೊಂದು=ವೆವಹಾರಕೆ(ವ್ಯವಹಾರಕ್ಕೆ)+ಇನ್ನೊಂದು. ಎರಡುಮೊಂದಾಂತರ್ಯ=ಎರಡುಂ
(ಎರಡೂ)+ಒಂದು+ಆಂತರ್ಯ.

ವಾಚ್ಯಾರ್ಥ: ಬ್ರಹ್ಮ ಹಿಮಾಚಲದಂತೆ ಸ್ಥಿರ, ಅಲ್ಲಿಂದ ಹೊರಡುವ ಚಲನಶೀಲೆಯಾದ ಗಂಗೆಯೇ ಮಾಯೆ. ಅದರಂತೆಯೇ ಪರಸತ್ವವೆನ್ನುವುದು ಘನವಾದರೆ ಮಾಯೆಯ ಕೇಂದ್ರವಾದ ಈ ವಿಶ್ವ, ಆ ಘನದ ದ್ರವರೂಪ. ಪರಮಾರ್ಥಕ್ಕೆ ಮತ್ತು ವ್ಯವಹಾರಕ್ಕೆ ನೋಡುವ ದೃಷ್ಟಿಗಳು ಬೇರೆಯಾದರೂ, ಆಂತರ್ಯದಲ್ಲಿ ಅವೆರಡೂ ಒಂದೇ.

ADVERTISEMENT

ವಿವರಣೆ: ಹಿಮಾಚಲ ಅಂದಿನಿಂದ ಇಂದಿನವರೆಗೆ ಹಾಗೆಯೇ ಅಚಲವಾಗಿ ನಿಂತಿದೆ. ಆದರೆ ಅದರ ಮೇಲೆ ಬಿದ್ದ ಹಿಮ ಕರಗಿ, ನೀರಾಗಿ, ಹರಿದು ಬಂದು ಗಂಗೆಯಾಗಿದೆ. ಈ ಉದಾಹರಣೆಯನ್ನು ಕಗ್ಗ, ಭಗವಂತ ಮತ್ತು ಜಗತ್ತುಗಳ ನಡುವಿನ ಸಂಬಂಧವನ್ನು ತಿಳಿಸಲು ಬಳಸಿಕೊಳ್ಳುತ್ತದೆ.
ಬ್ರಹ್ಮ ಹಿಮಾಚಲ ಮತ್ತು ಗಂಗೆ ಮಾಯೆ. ಆದಿಶಂಕರರು ಜಗತ್ತು ಮಿಥ್ಯೆ ಎಂದಿದ್ದರೂ.
ಮಿಥ್ಯೆ ಎಂದರೆ ಸುಳ್ಳು ಅಥವಾ ಅಸ್ತಿತ್ವವೇ ಇಲ್ಲದಿರುವುದು ಎಂದಲ್ಲ. ಬ್ರಹ್ಮ ಪರಮಸತ್ಯವಾದರೆ, ಜಗತ್ತು ನಾಮ, ರೂಪಗಳಿದ್ದ ವ್ಯವಹಾರಿಕ ಸತ್ಯ. ಛಾಂದೋಗ್ಯ ಉಪನಿಷತ್ತಿನಲ್ಲಿ ಉದ್ದಾಲಕ ಮಣ್ಣು, ಚಿನ್ನ, ಕಬ್ಬಿಣದ ಉದಾಹರಣೆ ಕೊಡುತ್ತಾನೆ. ಮಣ್ಣು ಮೂಲದಲ್ಲಿ ಒಂದೇ ಆದರೂ ಅದರಿಂದ ಮಡಕೆ ಮುಂತಾದ ವಸ್ತುಗಳನ್ನು ಮಾಡಿದಾಗ ಅದಕ್ಕೆ ನಾಮ, ರೂಪಗಳು ಬರುತ್ತವೆ. ಹಾಗೆಯೇ ಚಿನ್ನ. ಒಂದೇ ಆದರೂ ವ್ಯವಹಾರಿಕ ಜಗತ್ತಿನಲ್ಲಿ, ಅದರಿಂದಾದ ಆಭರಣಗಳಲ್ಲಿ ವೈವಿಧ್ಯತೆ ಬರುತ್ತದೆ. ಈ ವ್ಯವಹಾರಿಕ ಸತ್ಯವನ್ನು ಮಾಯೆ ಎಂದು ಕರೆದಿದ್ದಾರೆ. ಇದನ್ನು ಸರಳವಾಗಿ ಹೇಳುವುದಾದರೆ ಇರುವುದನ್ನು ಇಲ್ಲದಂತೆ, ಇಲ್ಲದಿರುವುದನ್ನು ಇರುವಂತೆ ತೋರಿಸುವುದೇ ಮಾಯೆ. ಬ್ರಹ್ಮ ಮೂಲ, ಜಗತ್ತು ಮಾಯೆಯೆಂದರೆ, ಜಗತ್ತು ಕಾಣುತ್ತಿಲ್ಲವೆ, ಅದನ್ನು ಅನುಭವಿಸುತ್ತಿಲ್ಲವೆ? ಎಂಬ ಪ್ರಶ್ನೆಗಳು ಮೂಡುತ್ತವೆ.

ಈ ಮಾಯೆಗೆ ಆವರಣ ಶಕ್ತಿ ಮತ್ತು ವಿಕ್ಷೇಪ ಶಕ್ತಿ ಎಂಬ ವಿಶಿಷ್ಟ ಶಕ್ತಿಗಳಿವೆ. ಮೊದಲನೆಯ ಆವರಣ ಶಕ್ತಿಯಿಂದ ವಸ್ತುಗಳ ನಿಜರೂಪ ಮಾಯವಾಗುತ್ತದೆ. ಎರಡನೆಯ ವಿಕ್ಷೇಪ ಶಕ್ತಿಯಿಂದ ನಿಜವಾದ ವಸ್ತುಗಳ ಬದಲಾಗಿ ಬೇರೆಯೇ ವಸ್ತುಗಳು ತೋರುತ್ತವೆ. ಮಡಕೆಯನ್ನು ಕಂಡಾಗ ಮಣ್ಣು ಮರೆತುಹೋಗುವಂತೆ, ಆಭರಣವನ್ನು ಕಂಡಾಗ ಚಿನ್ನ ಮರೆತು ಹೋಗುವಂತೆ, ಮೇಜನ್ನು ಕಂಡಾಗ ಮರ ಮರೆಯಾಗುವಂತೆ ಕಾಣುತ್ತದೆ. ಆದರೆ ಬ್ರಹ್ಮದರ್ಶನವಾದಾಗ ಮಾಯೆಯ ಪೊರೆ ಕಳಚಿ ಹೋಗುತ್ತದೆ.

ಅದಕ್ಕೆ ಕಗ್ಗ ತಿಳಿಸುತ್ತದೆ, ನಮಗೆ ಎರಡು ದೃಷ್ಟಿಗಳಿರಬೇಕು. ಪರಮಾರ್ಥಿಕವಾಗಿ ಬ್ರಹ್ಮವೊಂದೇ ಸತ್ಯ ಎಂದು ತಿಳಿದರೂ ವ್ಯಾವಹಾರಿಕವಾಗಿ ಜಗತ್ತನ್ನು ಒಪ್ಪಿಕೊಳ್ಳಬೇಕು. ಬ್ರಹ್ಮದ ಒಂದು ಶಕ್ತಿಯೇ ಮಾಯೆಯಾದ್ದರಿಂದ ಅವೆರಡೂ ಬೇರೆಯಲ್ಲ, ಒಂದೇ. ಆದ್ದರಿಂದ ನಮ್ಮ ದೃಷ್ಟಿಗಳು ಮೇಲ್ನೋಟಕ್ಕೆ ಎರಡೆನ್ನಿಸಿದರೂ, ಮೂಲದಲ್ಲಿ, ಆಂತರ್ಯದಲ್ಲಿ ಅವು ಒಂದೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.