ADVERTISEMENT

ಬಂಡವಾಳ ಮಾರುಕಟ್ಟೆ| ಮ್ಯೂಚುವಲ್ ಫಂಡ್: ಬೇಕೇ ‘ಎನ್‌ಎಫ್‌ಒ’ ಹೂಡಿಕೆ?

ಅವಿನಾಶ್ ಕೆ.ಟಿ
Published 26 ಸೆಪ್ಟೆಂಬರ್ 2021, 19:30 IST
Last Updated 26 ಸೆಪ್ಟೆಂಬರ್ 2021, 19:30 IST
   

ಮ್ಯೂಚುವಲ್ ಫಂಡ್ ಹೌಸ್‌ಗಳು ಹೊಸ ಫಂಡ್ ಆರಂಭಿಸುವಾಗ ಬಹಳಷ್ಟು ಸುದ್ದಿಯಾಗುತ್ತದೆ. ಎಲ್ಲೆಡೆ ಜಾಹೀರಾತುಗಳು, ಟಿ.ವಿ. ವಾಹಿನಿಗಳಲ್ಲಿ ಫಂಡ್ ಮ್ಯಾನೇಜರ್ ಸಂದರ್ಶನಗಳು ನಡೆಯುತ್ತವೆ. ಈ ರೀತಿಯ ಒಂದು ಅಬ್ಬರದ ಪ್ರಚಾರ ನಡೆಯುತ್ತಿರುವಾಗ ಸಹಜವಾಗಿಯೇ ಗೊಂದಲಕ್ಕೆ ಒಳಗಾಗಿ, ಪೂರ್ವಾಪರ ಯೋಚಿಸದೆಯೇ ನೀವು ಹೊಸ ಫಂಡ್‌ನಲ್ಲಿ ಹೂಡಿಕೆ ಮಾಡುವ ನಿರ್ಧಾರಕ್ಕೆ ಬಂದುಬಿಡುತ್ತೀರಿ. ಆದರೆ, ಮ್ಯೂಚುವಲ್ ಫಂಡ್ ಕಂಪನಿಗಳ ಹೊಸ ಫಂಡ್‌ಗಳಲ್ಲಿ, ಅಂದರೆ ಎನ್‌ಎಫ್‌ಒಗಳಲ್ಲಿ ಹೂಡಿಕೆ ಮಾಡಬೇಕೇ? ಇದರಿಂದ ಯಾರಿಗೆ ಲಾಭ? ಯಾರಿಗೆ ನಷ್ಟ?

ಅವಿನಾಶ್ ಕೆ.ಟಿ.

ಏನಿದು ‘ಎನ್‌ಎಫ್ಒ’?: ನ್ಯೂ ಫಂಡ್ ಆಫರ್ ಎಂಬುದು ‘ಎನ್ಎಫ್ಒ’ದ ವಿಸ್ತೃತ ರೂಪ. ಮ್ಯೂಚುವಲ್ ಫಂಡ್ ಹೌಸ್‌ಗಳು ಹೊಸದಾಗಿ ಒಂದು ಮ್ಯೂಚುವಲ್ ಫಂಡ್ ಆರಂಭಿಸುವ ಸಲುವಾಗಿ ಹೂಡಿಕೆದಾರರಿಂದ ನಿಧಿ ಸಂಗ್ರಹಿಸುವುದನ್ನು ಸರಳವಾಗಿ ನ್ಯೂ ಫಂಡ್ ಆಫರ್ ಎಂದು ಕರೆಯಬಹುದು.

ಮ್ಯೂಚುವಲ್ ಫಂಡ್ ಹೌಸ್‌ಗಳು ಎನ್‌ಎಫ್‌ಒ ಆರಂಭಿಸುವಾಗ ಹಣ ತೊಡಗಿಸಲು ಹೂಡಿಕೆದಾರರಿಗೆ ಕೆಲವು ದಿನಗಳ (ಸಾಮಾನ್ಯವಾಗಿ 15 ದಿನಗಳು) ಕಾಲಾವಕಾಶ ನೀಡುತ್ತವೆ. ಈ ಕಾಲಾವಕಾಶ ಮುಗಿದ ಮೇಲೆ, ಇಂತಹ ಬಹುತೇಕ ಮ್ಯೂಚುಯಲ್ ಫಂಡ್‌ಗಳು ಓಪನ್ ಎಂಡೆಡ್ ಫಂಡ್‌ಗಳಾಗಿ ಬದಲಾಗುತ್ತವೆ. ಓಪನ್ ಎಂಡೆಡ್ ಫಂಡ್‌ಗಳಾದ ಮೇಲೆ ಮತ್ತೆ ಹೊಸ ಹೂಡಿಕೆಗಳನ್ನು ಆ ಫಂಡ್‌ಗೆ ಪಡೆಯಬಹುದು. ಅಂದರೆ ಮತ್ತೆ ಯಾರು ಬೇಕಾದರೂ ಹೂಡಿಕೆ ಮಾಡುವ ಅವಕಾಶ ಸಿಗುತ್ತದೆ. ಸಾಮಾನ್ಯವಾಗಿ ‘ಎನ್‌ಎಫ್ಒ’ಗಳು ಹೀಗೆ ರಚನೆಯಾಗುತ್ತವೆ.

ADVERTISEMENT

‘ಎನ್‌ಎಫ್ಒ’ಗಳಲ್ಲಿ ಎಷ್ಟು ವಿಧ, ಯಾವುದನ್ನು ಪರಿಗಣಿಸಬೇಕು?: ‘ಎನ್‌ಎಫ್ಒ’ ಮ್ಯೂಚುವಲ್ ಫಂಡ್ ಓಪನ್ ಎಂಡೆಡ್ ಮಾದರಿಯದ್ದಾ ಅಥವಾ ಕ್ಲೋಸ್ ಎಂಡೆಡ್ ಮಾದರಿಯದ್ದಾ ಎಂದು ನೋಡುವುದು ಬಹಳ ಮುಖ್ಯ. ಓಪನ್ ಎಂಡೆಡ್ ಆಗಿದ್ದರೆ ಮೇಲೆ ಹೇಳಿರುವ ಹಾಗೆ ಹೊಸ ಹೂಡಿಕೆಗಳನ್ನು ಪಡೆಯಲು ಅವಕಾಶವಿರುತ್ತದೆ. ಆದರೆ, ಕ್ಲೋಸ್ ಎಂಡೆಡ್‌ ಫಂಡ್‌ನಲ್ಲಿ ಹೊಸ ಹೂಡಿಕೆಗಳಿಗೆ ಅವಕಾಶವಿರುವುದಿಲ್ಲ. ‘ಎನ್‌ಎಫ್ಒ’ ಅವಧಿ ಮುಗಿದ ಮೇಲೆ ಯಾವುದೇ ಹೂಡಿಕೆಗಳನ್ನೂ ಕ್ಲೋಸ್ ಎಂಡೆಡ್ ಫಂಡ್‌ನಲ್ಲಿ ಪಡೆಯುವಂತಿಲ್ಲ. ‘ಎನ್‌ಎಫ್ಒ’ ಕ್ಲೋಸ್ ಎಂಡೆಡ್ ಆಗಿದ್ದಲ್ಲಿ ಹೂಡಿಕೆ ಪರಿಗಣಿಸಬಹುದು. ಆದರೆ ಓಪನ್ ಎಂಡೆಡ್ ಆದಲ್ಲಿ ಎಚ್ಚರಿಕೆ ಬಹಳ ಮುಖ್ಯ.

‘ಎನ್‌ಎಫ್‌ಒ’ ಪೂರ್ವಾಪರ ತಿಳಿಯಲು ಸಾಧ್ಯವಿಲ್ಲ: ಯಾವುದೇ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವ ಮುನ್ನ ಅದರ ಪೂರ್ವಾಪರ ತಿಳಿದು ಮುನ್ನಡೆಯುತ್ತೇವೆ. ಈ ಹಿಂದೆ ಆ ಫಂಡ್ ಎಷ್ಟು ಲಾಭ ಕೊಟ್ಟಿದೆ, ಅದರ ಫಂಡ್ ಮ್ಯಾನೇಜರ್ ಯಾರು, ರೇಟಿಂಗ್ ಎಷ್ಟಿದೆ, ಬೇರೆ ಫಂಡ್‌ಗಳಿಗೆ ಹೋಲಿಸಿದರೆ ನಿರ್ದಿಷ್ಟ ಫಂಡ್ ಎಷ್ಟು ಉತ್ತಮ, ಯಾವ ಕಂಪನಿಗಳಲ್ಲಿ ಮತ್ತು ವಲಯಗಳಲ್ಲಿ ಹೂಡಿಕೆ ಮಾಡಲಾಗಿದೆ ಎಂಬ ಅಂದಾಜು ತೆಗೆದುಕೊಳ್ಳುತ್ತೇವೆ. ಆದರೆ ‘ಎನ್ಎಫ್ಒ’ ಮೂಲಕ ಸೃಷ್ಟಿಯಾಗುವ ಹೊಸ ಫಂಡ್‌ನಲ್ಲಿ ಈ ಯಾವ ಅಂಶಗಳನ್ನೂ ಅಳೆಯಲು ಸಾಧ್ಯವಿಲ್ಲ. ಫಂಡ್ಹೊಸದಾಗಿ ಆಗುತ್ತಿರುವ ಕಾರಣ ಪೂರ್ವಾಪರ ತಿಳಿದು ಹೂಡಿಕೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಹೊಸ ಫಂಡ್ ರೂಪಿಸಿದಾಗ ಅದನ್ನು ಲಾಭದ ಹಳಿಗೆ ತರಲು ಫಂಡ್ ಮ್ಯಾನೇಜರ್‌ಗಳು ಸಮಯ ತೆಗೆದುಕೊಳ್ಳುತ್ತಾರೆ.

ಈ ಎಲ್ಲ ಅಂಶಗಳನ್ನು ಪರಿಗಣಿಸಿ ನೋಡಿದಾಗ ಹೂಸ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಬದಲು ಇರುವ ಫಂಡ್‌ಗಳನ್ನೇ ಅಳೆದು–ತೂಗಿ ನೋಡಿ, ಒಂದು ಉತ್ತಮ ಫಂಡ್ ಆಯ್ದುಕೊಳ್ಳುವುದು ಲೇಸು.

‘ಎನ್‌ಎಫ್ಒ’ ಅಂದರೆ ಐಪಿಒ ಅಲ್ಲ: ‘ಎನ್‌ಎಫ್ಒ’ ಒಂದು ರೀತಿಯಲ್ಲಿ ಆರಂಭಿಕ ಸಾರ್ವಜನಿಕ ಹೂಡಿಕೆ (ಐಪಿಒ) ರೀತಿಯೇ ಎಂದು ಕೆಲವರು ದಿಕ್ಕು ತಪ್ಪಿಸುತ್ತಾರೆ. ಅಂಥವರ ಬಗ್ಗೆ ಜಾಗೃತರಾಗಿರಿ. ಐಪಿಒದಲ್ಲಿ ಸೀಮಿತ ಸಂಖ್ಯೆಯ ಷೇರುಗಳನ್ನು ಸಾರ್ವಜನಿಕರಿಗೆ ಮೊದಲ ಬಾರಿಗೆ ಒದಗಿಸಲಾಗುತ್ತದೆ. ಆದರೆ ಒಪನ್ ಎಂಡೆಡ್ ‘ಎನ್ಎಫ್ಒ’ದಲ್ಲಿ ನಿಧಿ ಬೆಳೆಯುತ್ತಲೇ ಹೋಗುತ್ತದೆ. ಇಲ್ಲಿ ನಿಧಿಗೆ ಮಿತಿ ಎನ್ನುವುದಿಲ್ಲ.

‘ಎನ್ಎಫ್ಒ’ ದುಬಾರಿ: ಪ್ರತಿ ಮ್ಯೂಚುವಲ್ ಫಂಡ್‌ಗೂ ನಿರ್ವಹಣಾ ಶುಲ್ಕವಿರುತ್ತದೆ. ಆದರೆ ‘ಎನ್ಎಫ್ಒ’ಗಳಲ್ಲಿ ವೆಚ್ಚ ಅನುಪಾತ ಜಾಸ್ತಿ. ಭಾರತದಲ್ಲಿ ಮ್ಯೂಚುವಲ್ ಫಂಡ್ ಕಂಪನಿ ನಿರ್ವಹಿಸುವ ಒಟ್ಟು ಮೊತ್ತ ಕಡಿಮೆಯಿದ್ದರೆ ಹೆಚ್ಚು ಶುಲ್ಕ ವಿಧಿಸಲು ಅವಕಾಶವಿದೆ. ಹಾಗಾಗಿ ‘ಎನ್ಎಫ್ಒ’ಗಳಲ್ಲಿ ಶುಲ್ಕ ಹೆಚ್ಚಿಗೆಯಾಗಿ ಹೂಡಿಕೆದಾರನಿಗೆ ಅದರ ಹೊರೆ ವರ್ಗಾವಣೆಯಾಗುತ್ತದೆ.

ದಾಖಲೆ ಬರೆದ ಸೆನ್ಸೆಕ್ಸ್

ಷೇರುಪೇಟೆ ಸೂಚ್ಯಂಕಗಳು ಸತತ ಐದನೇ ವಾರವೂ ಏರಿಕೆ ಕಂಡಿವೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 60,333 ಮತ್ತು17,947 ಅಂಶಗಳನ್ನು ತಲುಪಿ ಹೊಸ ದಾಖಲೆ ಬರೆದಿವೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಶೇ 1.75ರಷ್ಟು ಗಳಿಕೆ ಕಂಡಿದ್ದರೆ, ನಿಫ್ಟಿ ಶೇ 1.52ರಷ್ಟು ಗಳಿಕೆ ಕಂಡಿದೆ.

ಆರ್ಥಿಕ ಚೇತರಿಕೆ, ಕೋವಿಡ್ ಮೂರನೇ ಅಲೆಯ ತೀವ್ರತೆ ಅಷ್ಟಾಗಿ ಇರದು ಎಂಬ ಆಶಾಭಾವ, ಮುಂಬರುವ ತ್ರೈಮಾಸಿಕ ಫಲಿತಾಂಶಗಳು ಸಕಾರಾತ್ಮಕವಾಗಿರುವ ನಿರೀಕ್ಷೆ, ಅಮೆರಿಕದ ಫೆಡರಲ್ ಬ್ಯಾಂಕ್ ಸದ್ಯಕ್ಕೆ ಬಡ್ಡಿ ದರ ಪರಿಷ್ಕರಣೆ ಮಾಡುವುದಿಲ್ಲ ಎಂದು ಹೇಳಿರುವುದು, ಚೀನಾದ ಅತಿ ದೊಡ್ಡ ರಿಯಲ್ ಎಸ್ಟೇಟ್ ಸಂಸ್ಥೆ ಎವರ್‌ಗ್ರಾಂದೆ ಬಿಕ್ಕಟ್ಟಿನ ನಡುವೆಯೂ ರಿಯಲ್ ಎಸ್ಟೇಟ್ ಷೇರುಗಳಲ್ಲಿ ಖರೀದಿ ಭರಾಟೆ ಕಂಡುಬಂದದ್ದು, ದೇಶಿ ಸಾಂಸ್ಥಿಕ ಹೂಡಿಕೆದಾರರು ಹೆಚ್ಚು ಹೂಡಿಕೆ ಮಾಡಿದ್ದು ಸೇರಿ ಹಲವು ಅಂಶಗಳು ಸೆನ್ಸೆಕ್ಸ್ 60,000 ಅಂಶಗಳ ಗಡಿ ದಾಟಿ ದಾಖಲೆ ಬರೆಯಲು ಕಾರಣವಾದವು.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಬಜಾಜ್ ಫಿನ್‌ಸರ್ವ್ ಶೇ 10ರಷ್ಟು, ಎಚ್‌ಸಿಎಲ್ ಟೆಕ್ ಶೇ 7ರಷ್ಟು, ಒಎನ್‌ಜಿಸಿ ಶೇ 6ರಷ್ಟು, ಕೋಲ್ ಇಂಡಿಯಾ ಶೇ 6ರಷ್ಟು, ಬಜಾಜ್ ಫೈನಾನ್ಸ್ ಶೇ 5ರಷ್ಟು ಗಳಿಸಿವೆ. ಟಾಟಾ ಸ್ಟೀಲ್ ಶೇ 8ರಷ್ಟು, ಬಿಪಿಸಿಎಲ್ ಶೇ 5ರಷ್ಟು, ಟಾಟಾ ಕನ್ಸೂಮರ್ ಶೇ 4ರಷ್ಟು, ಶ್ರೀ ಸಿಮೆಂಟ್ ಶೇ 4ರಷ್ಟು ಕುಸಿದಿವೆ.

60 ಸಾವಿರ ದಾಟಿದ ಸೆನ್ಸೆಕ್ಸ್, ನಿವೇನು ಮಾಡಬೇಕು?: ಸೆನ್ಸೆಕ್ಸ್ 60 ಸಾವಿರ ಅಂಶಗಳ ಗಡಿ ದಾಟಿದೆ. ವಾಸ್ತವದಲ್ಲಿ ಇಷ್ಟು ವೇಗವಾಗಿ ಏರಿಕೆ ಕಂಡಿರುವ ಮಾರುಕಟ್ಟೆ ಮುಂದೊಂದು ದಿನ ಬೀಳಲೇಬೇಕು. ಆದರೆ ಯಾವಾಗ ಮಾರುಕಟ್ಟೆ ಮುಗ್ಗರಿಸುತ್ತದೆ ಎಂದು ನಿಖರವಾಗಿ ಹೇಳಲು ಯಾರಿಗೂ ಸಾಧ್ಯವಿಲ್ಲ.

ಬಹಳಷ್ಟು ಷೇರುಗಳ ಬೆಲೆ ಅವುಗಳ ಅಸಲಿ ಮೌಲ್ಯಕ್ಕಿಂತ ಹೆಚ್ಚಾಗಿದೆ. ಅಂದರೆ ಮುಂದಿನ ಎರಡು ಮೂರು ವರ್ಷಗಳ ನಂತರದಲ್ಲಿ ಇರಬೇಕಿದ್ದ ದರ ಈಗಲೇ ಇದೆ. ಬಹುತೇಕ ಹೂಡಿಕೆದಾರರು ಮಾರುಕಟ್ಟೆ ಕುಸಿತ ಕಂಡಾಗ ಇರುವ ಎಲ್ಲ ಷೇರುಗಳನ್ನು ಮಾರಾಟ ಮಾಡಲು ಹೋಗಿ ನಷ್ಟ ಮಾಡಿಕೊಳ್ಳುತ್ತಾರೆ. ಅದೇ ದೊಡ್ಡ ತಪ್ಪು. ಬಿದ್ದ ಮಾರುಕಟ್ಟೆ ಮತ್ತೆ ಏಳುತ್ತದೆ
ಎನ್ನುವುದನ್ನು ಇತಿಹಾಸ ಹೇಳಿಕೊಟ್ಟಿದೆ. ಆರ್ಥಿಕವಾಗಿ ಉತ್ತಮವಾಗಿರುವ ಒಳ್ಳೆಯ ಕಂಪನಿಗಳ ಮೇಲೆ ಹೂಡಿಕೆ ಮಾಡಿದರೆ ಮಾರುಕಟ್ಟೆ ಏರಿಳಿತಗಳಿಗೆ ತಲೆ ಕೆಡಿಸಿಕೊಳ್ಳಬೇಕಿಲ್ಲ.

ಅಳತೆ ಅಂದಾಜಿಲ್ಲದೆ ಸಿಕ್ಕ ಸಿಕ್ಕ ಕಂಪನಿಗಳ ಷೇರುಗಳನ್ನು ಖರೀದಿಸಿದರೆ ನಷ್ಟಕ್ಕೆ ಸಿಲುಕುವುದು ನಿಶ್ಚಿತ. ತರಕಾರಿ ಖರೀದಿಸುವಾಗ ಮಾಡುವ ಶೋಧನೆಯನ್ನು ಷೇರುಗಳ ಖರೀದಿ ಮಾಡುವ ಮುನ್ನ ಮಾಡಿದರೆ ನೀವು ಖಂಡಿತ ಷೇರು ಮಾರುಕಟ್ಟೆಯಲ್ಲಿ ಯಾವ ಪರಿಸ್ಥಿತಿಯಲ್ಲೂ ಏರಿಳಿತದ ಭಯವಿಲ್ಲದೆ ಹೂಡಿಕೆ ಮಾಡಬಹುದು.

(ಲೇಖಕ: ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.