ADVERTISEMENT

ವೈ.ಗ.ಜಗದೀಶ್‌ ಅಂಕಣ–ಗತಿಬಿಂಬ | ಚರಿತ್ರೆ ಸೃಷ್ಟಿಸೋ ಅವಕಾಶ

ನೆಲದ ದನಿಗೆ ಕಿವಿಗೊಡುವ, ನೊಂದವರಿಗೆ ನೆರಳಾಗುವ ಹೃದಯವಂತಿಕೆ ತೋರಲಿ ಬೊಮ್ಮಾಯಿ

ವೈ.ಗ.ಜಗದೀಶ್‌
Published 16 ಸೆಪ್ಟೆಂಬರ್ 2021, 6:23 IST
Last Updated 16 ಸೆಪ್ಟೆಂಬರ್ 2021, 6:23 IST
   

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಸವಾಲಿನೊಂದಿಗೆ ಮುಖ್ಯಮಂತ್ರಿ ಗಾದಿಗೇರಿರುವ ಬಸವರಾಜ ಬೊಮ್ಮಾಯಿ ಅವರ ಸತ್ವಪರೀಕ್ಷೆಗೆ ಹೆಚ್ಚು ಕಾಲವೇನೂ ಇಲ್ಲ. ಆರು ತಿಂಗಳು ‘ಮಧುಚಂದ್ರ’ದ ಅವಧಿಯೆಂದು ಅವರು ಸುಮ್ಮನೆ ಕಾಲ ತಳ್ಳಲಾಗದು. ಅಧಿಕಾರ ಹಿಡಿದ ಮೊದಲ ದಿನದಿಂದಲೇ ಸರ್ಕಾರವನ್ನು ಹಳಿಗೆ ತರುವ ಜವಾಬ್ದಾರಿ ಅವರ ಹೆಗಲಿಗೆ ಬಿದ್ದಿದೆ. ಹಿಡಿತ ತಪ್ಪದ ಮಾತುಗಾರಿಕೆ, ಸರಳತೆಯಿಂದಾಗಿ ತಿಂಗಳೊಪ್ಪತ್ತಿನಲ್ಲಿ ಸರ್ಕಾರಕ್ಕೆ ವರ್ಚಸ್ಸು ತಂದು ಕೊಡುವತ್ತ ಹೆಜ್ಜೆ ಇಟ್ಟಿದ್ದಾರೆ.

ವೈ.ಗ ಜಗದೀಶ್‌

ಆದರೆ, ಬರೀ ಚೆಂದದ ಮಾತುಗಳು ಹೊಟ್ಟೆ ತುಂಬಿ ಸುವುದಿಲ್ಲ; ಬದುಕೇ ಬೇಡವೆನ್ನುವಷ್ಟು ಬವಣೆಯಲ್ಲಿ ಬೇಯುತ್ತಿರುವ ಶ್ರಮಿಕ ಸಮುದಾಯದವರಲ್ಲಿ ವಿಶ್ವಾಸ ವನ್ನೂ ತರುವುದಿಲ್ಲ. ಹೊಟ್ಟೆ ತುಂಬಿದ ಮಂದಿಯ ಮೆಚ್ಚುಗೆಗಷ್ಟೇ ಇದು ಸೀಮಿತವಾಗುತ್ತದೆ. ಮಾತಿನಲ್ಲಿ ಕಟ್ಟಿದ ಗೋಪುರ ಹೆಚ್ಚುಕಾಲ ಬಾಳುವುದೂ ಇಲ್ಲ.

ಬಿ.ಎಸ್‌.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ, ‘ಮಾತನಾಡುವುದೇ ಸಾಧನೆಯಾಗಬಾರದು; ಸಾಧನೆಗಳೇ ಮಾತನಾಡಬೇಕು’ ಹಾಗೂ ‘ಕೊಟ್ಟ ಕುದುರೆಯನೇರಲರಿಯದವರು ವೀರರೂ ಅಲ್ಲ, ಶೂರರೂ ಅಲ್ಲ, ಧೀರರೂ ಅಲ್ಲ’ ಎಂದು ಹೋದಲ್ಲಿ– ಬಂದಲ್ಲಿ ಹೇಳುತ್ತಲೇ ಇದ್ದರು. ಅದು ಅವರ ಆಚರಣೆಯಲ್ಲಿ ಕಾಣಲಿಲ್ಲ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು, ಬೊಮ್ಮಾಯಿ ಅವರನ್ನು ಕರೆದು ಕುದುರೆಯನ್ನು ಕೊಟ್ಟಿದ್ದಾರೆ. ಏಕೆಂದರೆ, ಯಡಿಯೂರಪ್ಪನವರ ಆಡಳಿತದ ತೇರಿಗೆ ಪದೇಪದೇ ಅಡೆತಡೆ ಹಾಕುವವರು ಇದ್ದರು. ಹಾಗಾಗಿ, ಅವರ ಕುದುರೆಯೂ ಓಡಲಿಲ್ಲ; ತೇರೂ ಮುಂಚಲಿಸಲಿಲ್ಲ. ಬೊಮ್ಮಾಯಿ ಅವರಿಗೆ ಮೋದಿ– ಶಾ ಶ್ರೀರಕ್ಷೆ ಇದೆ. ಸರ್ಕಾರವನ್ನು ಸಾಂಗವಾಗಿ ನಡೆಸುವಷ್ಟು ಶಾಸಕರ ಬಲವೂ ಇದೆ. ಶಾಸಕರು ಕೈಕೊಟ್ಟರೆ ಕೈ ಹಿಡಿಯಲು ದೇವೇಗೌಡರಿ ದ್ದಾರೆ. ಹೀಗಂದ ಮೇಲೆ, ಚರಿತ್ರೆಯನ್ನು ಸೃಷ್ಟಿಸುವ ವಿಶಾಲ ಅವಕಾಶವೂ ಇದೆ.

ADVERTISEMENT

ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಅವರು ಭ್ರಷ್ಟಾಚಾರವನ್ನು ತೊಡೆದುಹಾಕುವ ಸಂಕಲ್ಪಬಲದಲ್ಲಿ ದೇಶಕ್ಕೆ ಮಾದರಿಯಾದ ಲೋಕಾಯುಕ್ತ ರಚಿಸಿದರು. ಆದರೆ, ಅವರ ಕಾಲದಲ್ಲಿ ಭ್ರಷ್ಟಾಚಾರದ ಹಗರಣಗಳು ನಡೆದಿದ್ದವು ಎಂಬುದನ್ನು ಮರೆಯಲಾಗದು. ಆದರೆ, ಲೋಕಾಯುಕ್ತವು ಕರ್ನಾಟಕದ ಹೆಮ್ಮೆಯ ಸಂಸ್ಥೆ ಆಗಿದ್ದು, ಮುಖ್ಯಮಂತ್ರಿ, ಮಂತ್ರಿಗಳನ್ನೂ ಬಿಡದೆ ‘ಸ್ವಚ್ಛ’ ಗೊಳಿಸುವ ಕೈಂಕರ್ಯ ಮಾಡಿದ ಕಾರಣಕ್ಕೆ. ಅದೇ ಭಯದಿಂದಲೋ ಏನೋ ಸಿದ್ದರಾಮಯ್ಯ, ಲೋಕಾ ಯುಕ್ತಕ್ಕೆ ಪರ್ಯಾಯವಾಗಿ ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸಿ, ಲೋಕಾಯುಕ್ತದ ಹಲ್ಲು, ಬಾಯಿ, ಕೋರೆ ಎಲ್ಲವನ್ನೂ ಕಿತ್ತು ಸತ್ತ ಮೊಸಳೆಯಾಗಿಸಿದರು.

ಹೆಗಡೆ ಸಮಕಾಲೀನರಾದ ಎಸ್.ಆರ್.ಬೊಮ್ಮಾಯಿ ಅವರ ಮಗನಾದ ಬಸವರಾಜ ಬೊಮ್ಮಾಯಿ, ಆ ತಲೆಮಾರಿನ ರಾಜಕೀಯದ ಮೌಲ್ಯಗಳನ್ನು ಹತ್ತಿರದಿಂದ ಬಲ್ಲವರು. ಬಡತನ, ಬರ, ನಿರುದ್ಯೋಗದಷ್ಟೇ ನಾಡನ್ನು ಸುಡುತ್ತಿರುವುದು ಭ್ರಷ್ಟಾಚಾರ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕು ಎಂಬುದು ಕೇವಲ ಬಯಕೆಯಾಗಿ ಉಳಿದೀತು. ಆದರೆ, ಜನಪ್ರತಿನಿಧಿಗಳು, ಅಧಿಕಾರಶಾಹಿಯ ಕೊಡುಕೊಳುವಿಕೆಯಲ್ಲಿ ಹೆಮ್ಮರವಾಗಿ ಬೆಳೆದಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತವನ್ನು ಮತ್ತೆ ಬಲಗೊಳಿಸಲೇಬೇಕಾದ ತುರ್ತಂತೂ ಇದೆ. ದೊಡ್ಡ ಯೋಜನೆಗಳನ್ನು ಕೈಗೊಂಡು ಅಭಿವೃದ್ಧಿಯ ನವ ಕರ್ನಾಟಕ ನಿರ್ಮಿಸುವುದು ಅಪಾರ ಸಂಪನ್ಮೂಲವನ್ನು ಬೇಡುತ್ತದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಲೋಕಾಯುಕ್ತ ಬಲಗೊಳಿಸುವುದಕ್ಕೆ ಸಂಕಲ್ಪಶಕ್ತಿ
ಯೊಂದೇ ಸಾಕಾಗುತ್ತದೆ. ಆ ದಿಸೆಯಲ್ಲಿ ಬೊಮ್ಮಾಯಿ ದಿಟ್ಟ ಹೆಜ್ಜೆ ಇಟ್ಟರೆ ಚರಿತ್ರೆ ಸೃಷ್ಟಿಸಲು ಮುಂದಡಿ
ಇಟ್ಟಂತಾಗುತ್ತದೆ.

ಮೌಲ್ಯಾಧಾರಿತ ರಾಜಕಾರಣ ಎಂಬ ಮಾತು ಹೆಗಡೆಯವರ ಕಾಲದಲ್ಲಿ ಹೆಚ್ಚು ಚಾಲ್ತಿಯಲ್ಲಿತ್ತು. ಈಗ ಹುಸಿ ಶಬ್ದಗಳ ಅಬ್ಬರದಲ್ಲಿ ಮಾತಿನ ಮೌಲ್ಯವೇ ಕಳೆದು ಹೋಗಿದೆ. ಮೌತಿಗೆ ಮೌಲ್ಯ, ಘನತೆ ಮತ್ತು ವಿಶ್ವಾಸಾರ್ಹತೆ ತರಲು ಬೊಮ್ಮಾಯಿ ಅವರು ಮುನ್ನುಡಿ ಬರೆಯಬೇಕಿದೆ.

ಹೆಗಡೆ ನೇತೃತ್ವದ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅಬ್ದುಲ್ ನಜೀರ್‌ಸಾಬ್ ಅವರು ಅಧಿಕಾರ ವಿಕೇಂದ್ರೀ ಕರಣದ ಮೊದಲ ಪಾಠವನ್ನು ದೇಶಕ್ಕೆ ಕಲಿಸಿದರು. ಪಂಚಾಯತ್ ರಾಜ್ ವ್ಯವಸ್ಥೆಯ ಹೊಸ ಮಾದರಿಯನ್ನು ಸೃಜಿಸಿದರು. ಸಿದ್ದರಾಮಯ್ಯನವರು ಕೆ.ಆರ್.ರಮೇಶ್‌ ಕುಮಾರ್ ನೇತೃತ್ವದ ಸಮಿತಿ ರಚಿಸಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಬಲಗೊಳಿಸುವ ಮಹತ್ವದ ಹೆಜ್ಜೆಯನ್ನೂ ಇಟ್ಟರು. ನಂತರ ಬಂದವರು ಅದನ್ನು ಜಾಳುಗೊಳಿಸಿ ಹಾಳು ಮಾಡಿದರು. ಮತ್ತೆ ಅದಕ್ಕೆ ಪುನರುಜ್ಜೀವ ಕೊಡಬೇಕಾದ ಹೊಣೆ ಬೊಮ್ಮಾಯಿ ಅವರ ಮೇಲಿದೆ.

ನೆರೆಯ ತಮಿಳುನಾಡಿನಲ್ಲಿ ಎಂ.ಕರುಣಾನಿಧಿ ಅವರ ಮಗ ಎಂ.ಕೆ.ಸ್ಟಾಲಿನ್ ಮುಖ್ಯಮಂತ್ರಿ. ಬೊಮ್ಮಾಯಿ ಅವರಿಗಿಂತ ಕೆಲವೇ ತಿಂಗಳ ಮೊದಲು ಈ ಹುದ್ದೆ ಹಿಡಿದ ಸ್ಟಾಲಿನ್ ಅನೇಕ ಸುಧಾರಣೆಗಳನ್ನು ತರುತ್ತಿದ್ದಾರೆ. ಮಗ್ಗುಲಿನ ರಾಜ್ಯದಲ್ಲಿ ನಡೆಯುತ್ತಿರುವ ಸುಧಾರಣೆ
ಗಳತ್ತ ಗಮನಹರಿಸಿದರೆ ಬೊಮ್ಮಾಯಿ ಅವರಿಗೆ ಹೊಸ ಹೊಳಹುಗಳು ಹೊಳೆಯಲಂತೂ ಸಾಧ್ಯವಿದೆ.

ಕನ್ನಡ ಅನ್ನದ ಭಾಷೆಯಾಗಬೇಕು ಎಂಬ ಬೇಡಿಕೆ ಹಳೆಯದು. ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸುವ, ಅಲ್ಲಿ ಕಲಿತವರಿಗೆ ಉದ್ಯೋಗ ಪಕ್ಕಾ ಎಂಬ ವಾತಾವರಣ ಸೃಷ್ಟಿ ಮಾಡಬೇಕಿದೆ. ಅದಕ್ಕೇನೂ ಗುಜರಾತಿಗೋ ಉತ್ತರಪ್ರದೇಶಕ್ಕೋ ಹೋಗಬೇಕಿಲ್ಲ; ಮುಖ್ಯಮಂತ್ರಿ ತಮ್ಮ ವರಿಷ್ಠರನ್ನು ನೋಡಲು ಆಗಾಗ ದೆಹಲಿಗೆ ಹೋದಾಗಲೆಲ್ಲ ಅಲ್ಲಿನ ಶಾಲೆಗಳ ಕಡೆ ಒಮ್ಮೆ ಇಣುಕಿ ಬಂದರೆ, ಶಿಕ್ಷಣ ವ್ಯಾಪಾರೀಕರಣದಿಂದಾಗಿ ಕತ್ತಲಲ್ಲೇ ದಿಕ್ಕೆಟ್ಟು ಕುಳಿತಿರುವ ಕನ್ನಡದ ಮಕ್ಕಳ ಕಡೆಗೆ ಅರಿವಿನ ಕೋಲ್ಮಿಂಚಾದರೂ ಕಾಣಿಸೀತು.

ಪ್ರತಿನಿತ್ಯ ಜನರಿಂದ ಅಹವಾಲು ಸ್ವೀಕರಿಸುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಿದ್ದಾರೆ. ಕಲಬುರ್ಗಿ, ಬಾಗಲಕೋಟೆಯಂತಹ ದೂರದೂರಿನಿಂದ, ಪಡಿತರ ಚೀಟಿ ಸಿಕ್ಕಿಲ್ಲ, ಮನೆ ಬಿದ್ದುದಕ್ಕೆ ಪರಿಹಾರ ಸಿಕ್ಕಿಲ್ಲ ಎಂದು ದೂರು ಹೊತ್ತು ಬರುವ ಬಡವರ ಕಷ್ಟ ಆಲಿಸುತ್ತಿ
ದ್ದಾರೆ. ಮುಖ್ಯಮಂತ್ರಿಯೇ ಇಂತಹದನ್ನೆಲ್ಲ ಮಾಡುತ್ತಾ ಕೂರುವುದಾದರೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವ್ಯವಸ್ಥೆಗಳೆಲ್ಲ ಏಕಿರಬೇಕು? 75 ವರ್ಷ ಕಳೆದರೂ ನೆಟ್ಟಗೆ ಒಂದು ಪಡಿತರ ಚೀಟಿ ಪಡೆಯುವ, ಹುಟ್ಟಿದ ಮೇಲೆ ಎಂದೂ ಬದಲಾಗದ ಜಾತಿ ದೃಢೀಕರಣವನ್ನು ಪದೇಪದೇ ಪಡೆಯಬೇಕಾದ ಪಡಿಪಾಟಲು ನಿವಾರಿಸಲಾಗದ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? ಇದಕ್ಕೆಲ್ಲ ಶಾಶ್ವತ ವ್ಯವಸ್ಥೆಯೊಂದನ್ನು ಮಾಡಿದರೆ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಕ್ಕೆ ಜನ ಕೃತಾರ್ಥರಾದಾರು!

ಮಾಧ್ಯಮವೊಂದರ ಸಂವಾದದಲ್ಲಿ ಪಾಲ್ಗೊಂಡ ಬೊಮ್ಮಾಯಿ ಅವರು ಇಬ್ಬರು ಮಕ್ಕಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದ ತಾಯಿಯೊಬ್ಬರಿಗೆ ‘ಇಬ್ಬರುಮಕ್ಕಳು ಹೋದರೆಂದು ಬೇಸರ ಪಟ್ಟುಕೊಳ್ಳ ಬೇಡ. ನಾನೂ ನಿನ್ನ ಮಗನೇ’ ಎಂದು ಧೈರ್ಯ ತುಂಬಿದ್ದರು. ಇದು ಕೇವಲ ಬೊಮ್ಮಾಯಿ ಅವರ ಭಾವನೆ ಯಾದರೆ ಸಾಲದು. ನಾಡಿನ ಪ್ರತಿಯೊಬ್ಬ ಅಮ್ಮನಲ್ಲೂ ‘ನನಗೊಬ್ಬ ಮಗನಿದ್ದಾನೆ’ ಎಂಬ ವಿಶ್ವಾಸ ಮೂಡಿಸುವ ಕೆಲಸ ಕಾಯಕದ ಮೂಲಕವೇ ಆಗಬೇಕಿದೆ. ಶಾಸಕನಿಷ್ಠ ಮುಖ್ಯಮಂತ್ರಿ ಆಗುವ ಬದಲು ಜನನಿಷ್ಠ ಮುಖ್ಯಮಂತ್ರಿಯಾದರೆ, ಪ್ರತಿಯೊಬ್ಬರಲ್ಲೂ ಈ ಥರನ ಭರವಸೆ ಹುಟ್ಟೀತು.

ಕೊನೆಯದಾಗಿ; ಹೆಸರು ಬದಲಾವಣೆಯ ಸದ್ದು ದೊಡ್ಡದಾಗಿದೆ. ಇಂತಹ ಕ್ಷುಲ್ಲಕ ರಾಜಕಾರಣಕ್ಕೆ ಸೊಪ್ಪು ಹಾಕಬೇಕಿಲ್ಲ. ಇಂದಿರೆಯ ಅಥವಾ ಅನ್ನಪೂರ್ಣೇಶ್ವರಿಯ ಹೆಸರಿದ್ದರೂ ಅಲ್ಲಿ ಸಿಗುವ ಊಟವೊಂದೇ. ಮಳೆ ಬಂದಾಗ ಓಡಿ ಹೋಗಿ ಮರದ ಕೆಳಗೆ ನಿಲ್ಲುವವನು ಅದು ಯಾವ ಜಾತಿಯ ಮರವೆಂದು ನೋಡುವುದಿಲ್ಲ; ಹಸಿದವನು ತನ್ನ ಒಡಲ ಸಂಕಟ ನೀಗಲು ಅದು ಇಂದಿರಾ ಕ್ಯಾಂಟೀನೊ, ಸಿ.ಟಿ.ರವಿ ಕ್ಯಾಂಟೀನೊ ಎಂದು ನೋಡುವುದಿಲ್ಲ. ಅಂತಹ ರಗಳೆ ಗಳೆಲ್ಲ ಹೊಟ್ಟೆ ತುಂಬಿದವರ ಉಸಾಬರಿ. ಜನ ನಿಜಕ್ಕೂ ಹಾಗೆ ನೋಡಿದ್ದರೆ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್‌ ಕೊಟ್ಟ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲುತ್ತಿರಲಿಲ್ಲ; ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುತ್ತಿತ್ತು. ವಿವಾದದ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳು ವುದಕ್ಕಿಂತ ಚಳಿಯಲ್ಲಿ, ಹಸಿವಿನಲ್ಲಿ ಕಂಗೆಟ್ಟವ
ರನ್ನು ಬೆಚ್ಚಗೆ, ನೆಮ್ಮದಿಯಿಂದ ಇಡುವುದು ಹೇಗೆಂದು ಚಿಂತಿಸುವುದು ಮುಖ್ಯಮಂತ್ರಿಯ ಆದ್ಯತೆಯಾಗಲಿ. ನೆಲದ ದನಿ ಕೇಳಿಸುವ ಆರ್ದ್ರತೆಯನ್ನು ತೋರಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.