ADVERTISEMENT

ಜನರಾಜಕಾರಣ: ಬದಲಾವಣೆ ನಿರಂತರ; ರಾಜಕೀಯ ಮಂತ್ರ

ವರಿಷ್ಠರ ಮುದ್ರೆ ಹಾಗೂ ಅಚ್ಚರಿಯ ಅಂಶ ಬಿಜೆಪಿಯಲ್ಲಿ ಗೋಚರಿಸುತ್ತಿರುವ ವಿಶಿಷ್ಟ ಲಕ್ಷಣ

ಪ್ರೊ. ಸಂದೀಪ್ ಶಾಸ್ತ್ರಿ
Published 20 ಸೆಪ್ಟೆಂಬರ್ 2021, 4:20 IST
Last Updated 20 ಸೆಪ್ಟೆಂಬರ್ 2021, 4:20 IST
ರಾಜಕೀಯ ಮತ್ತು ರಾಜಕೀಯ ಪಕ್ಷಗಳು–ಪ್ರಾತಿನಿಧಿಕ ಚಿತ್ರ
ರಾಜಕೀಯ ಮತ್ತು ರಾಜಕೀಯ ಪಕ್ಷಗಳು–ಪ್ರಾತಿನಿಧಿಕ ಚಿತ್ರ   

ಬದಲಾವಣೆಯಷ್ಟೇ ನಿರಂತರ. ಇದು, ಸಮಕಾಲೀನ ಭಾರತೀಯ ರಾಜಕಾರಣದ ಹೊಸ ನಿಯಮವೆಂಬಂತೆ ತೋರುತ್ತಿದೆ. ಭಾರತದ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ವಿಚಾರದಲ್ಲೂ ವಿಶೇಷವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ವಿಚಾರದಲ್ಲಿ ಇದು ನಿಜ ಎನಿಸುತ್ತದೆ. ರಾಷ್ಟ್ರ ಮಟ್ಟದಲ್ಲಿ ಕೇಂದ್ರ ಸಂಪುಟದಲ್ಲಿನ ಭಾರಿ ಬದಲಾವಣೆ ಗಳನ್ನು ರಾಷ್ಟ್ರ ಕಂಡಿದೆ. ಪ್ರಶ್ನಾತೀತ ನಿಷ್ಠೆ ಹಾಗೂ ಕಾರ್ಯನಿರ್ವಹಣೆಯ ಸಾಕ್ಷ್ಯ ಇಲ್ಲಿ ಮುಖ್ಯವಾಗಿತ್ತೆಂಬಂತೆ ತೋರಿತ್ತು.

ಕಳೆದ ಕೆಲವು ತಿಂಗಳುಗಳಲ್ಲಿ ಮೂರು ಪ್ರಮುಖ ರಾಜ್ಯಗಳಲ್ಲಿ ನಾಯಕತ್ವ ಬದಲಾವಣೆಯನ್ನು ಬಿಜೆಪಿ ಕಂಡಿದೆ. ಪಂಜಾಬ್‌ನಲ್ಲಿ ಕಾಂಗ್ರೆಸ್‌ ಈಗ ನಾಯಕತ್ವ ಬದಲಾವಣೆ ಮಾಡಿದೆ. ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವು ಕೆಲವೊಮ್ಮೆ ಕಾಂಗ್ರೆಸ್ ಅನ್ನು ಓಲೈಸುತ್ತಾ ಮತ್ತೆ ಕೆಲವು ಬಾರಿ ಬಿಜೆಪಿ ಜೊತೆ ಸೇರಿಕೊಳ್ಳುತ್ತಾ ತನ್ನ ಮಿತ್ರಪಕ್ಷವನ್ನು ನಿರಂತರವಾಗಿ ಬದಲಿಸುತ್ತಲೇ ಇರುತ್ತದೆ. ಸ್ಥಳೀಯ ಸಂಸ್ಥೆಗಳಲ್ಲಿ ಅದು ವಿವಿಧ ಪಕ್ಷಗಳ ಜೊತೆ ಸಖ್ಯ ಹೊಂದಿರುತ್ತದೆಯಾದರೂ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಮಾತ್ರ ತನ್ನ ನಿಲುವನ್ನು ನಿರಂತರವಾಗಿ ಬದಲಿಸುತ್ತಲೇ ಇರುತ್ತದೆ.

ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆಗೆ ತೃಣಮೂಲ ಕಾಂಗ್ರೆಸ್ ಏರಿದ ನಂತರ, ತೃಣಮೂಲ ಪಕ್ಷಕ್ಕೆ ‘ಸೇರ್ಪಡೆಯಾಗುವವರ’ ಅಥವಾ ‘ಮರಳಿ ಬರುವ’ ಬಿಜೆಪಿ ನಾಯಕರ ಮೆರವಣಿಗೆಯನ್ನೇ ನಾವು ನೋಡಿದೆವು. ಗುಜರಾತ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆಯಷ್ಟೇ ಅಲ್ಲ, ಒಬ್ಬರೂ ಹಳೆ ಸಚಿವರಿಲ್ಲದಂತಹ ಪೂರ್ಣ ಹೊಸಬರೇ ಇರುವ ಸಚಿವ ಸಂಪುಟದ ಪುನರ್ ರಚನೆಯ ತಿರುಳು ಏನೆಂದರೆ, ಬದಲಾವಣೆ ಮಾತ್ರವೇ ನಿರಂತರ!

ADVERTISEMENT

ಗುಜರಾತ್‌ನಲ್ಲಿನ ಬೆಳವಣಿಗೆಗಳು ಎಲ್ಲರ ಗಮನದ ಕೇಂದ್ರಬಿಂದುವಾಗಿವೆ. ಮೊದಲಿಗೆ, ಮುಖ್ಯಮಂತ್ರಿ ಇದ್ದಕ್ಕಿದ್ದಂತೆ ರಾಜೀನಾಮೆ ಸಲ್ಲಿಸಿದರು. ಅವರ ಉತ್ತರಾಧಿ ಕಾರಿ ಯಾರು ಎಂಬುದರ ಬಗ್ಗೆ ತೀವ್ರ ಊಹಾಪೋಹ ಗಳಿದ್ದವು. ಅಚ್ಚರಿಯ ಹೆಸರೊಂದನ್ನು ಬಿಜೆಪಿಯ ಕೇಂದ್ರೀಯ ನಾಯಕತ್ವ ಪ್ರಕಟಿಸಲಿದೆ ಎಂಬಂತಹ ವಾದವನ್ನು ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮ ಗಳಲ್ಲಿ ನಾನು ಮಂಡಿಸಿಕೊಂಡೇ ಬಂದಿದ್ದೆ. ಅದೇ ನಿಜ ವಾಯಿತು. 2014ರಿಂದ ಹೊಸ ಮುಖ್ಯಮಂತ್ರಿಗಳ ಆಯ್ಕೆಯ ವಿಚಾರಕ್ಕೆ ಸಂಬಂಧಿಸಿದಂತೆ, ಆಯ್ಕೆಯನ್ನು ಮಾಡುವಲ್ಲಿ ಕೇಂದ್ರೀಯ ನಾಯಕತ್ವದ ಮುದ್ರೆ ಹಾಗೂ ಅಚ್ಚರಿಯ ಅಂಶವು ಬಿಜೆಪಿಯಲ್ಲಿ ಕಂಡುಬರುತ್ತಿರುವ ವಿಶಿಷ್ಟ ಲಕ್ಷಣವಾಗಿದೆ. ಹರಿಯಾಣ, ಜಾರ್ಖಂಡ್, ಉತ್ತರಪ್ರದೇಶ, ಗೋವಾ, ಉತ್ತರಾಖಂಡ, ಕರ್ನಾಟಕ ಹಾಗೂ ಈಗ ಗುಜರಾತ್ (ರೂಪಾನಿಯವರು ಮುಖ್ಯಮಂತ್ರಿಯಾದಾಗ ಹಾಗೂ ಈಗ ಪಟೇಲ್ ಅಧಿಕಾರ ವಹಿಸಿಕೊಂಡಾಗಲೂ) ರಾಜ್ಯಗಳಲ್ಲಿ ಕಂಡು ಬಂದಿರುವುದು ಇದೇ.

ಸಂದೀಪ್ ಶಾಸ್ತ್ರಿ

ಇದು, ಕೆಲವು ರೀತಿಗಳಲ್ಲಿ, 1970ರ ಹಾಗೂ 1980ರ ದಶಕಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿ ದ್ದುದನ್ನೇ ನೆನಪಿಸುತ್ತದೆ. ಹೈಕಮಾಂಡ್‌ನ ಇಚ್ಛೆಯ ಅನುಸಾರ ಮುಖ್ಯಮಂತ್ರಿಗಳು ಪದೇ ಪದೇ ಬದಲಾವಣೆಯಾಗುವುದನ್ನು ಕಾಂಗ್ರೆಸ್ ಅಧಿಕಾರದಲ್ಲಿದ್ದ ರಾಜ್ಯಗಳು ಕಂಡಿದ್ದವು. ಶಾಸಕಾಂಗ ಪಕ್ಷವು ‘ಸರ್ವಾನು ಮತದಿಂದ ಚುನಾಯಿಸಬೇಕಾದ’ ಹೊಸ ನಾಯಕನ ಹೆಸರನ್ನು ‘ಬಲಿಷ್ಠ’ ಕೇಂದ್ರೀಯ ವೀಕ್ಷಕರು ತರುತ್ತಿದ್ದರು. ಕಾಂಗ್ರೆಸ್ ಹೈಕಮಾಂಡ್‌ಗೆ ಸಂಬಂಧಿಸಿದಂತೆ ಒಂದು ಸುಪ್ರಸಿದ್ಧ ಕಥೆ ಇದೆ. ರಾಜ್ಯವೊಂದರಲ್ಲಿ ನಾಯಕತ್ವ ಬದಲಾವಣೆಯಾಗಬೇಕಿತ್ತು. ಆದರೆ ಹೊಸ ನಾಯಕರು ಯಾರಾಗಬೇಕು ಎಂಬ ಬಗ್ಗೆ ಹೈಕಮಾಂಡ್‌ಗೆ ಖಚಿತತೆ ಇರಲಿಲ್ಲ. ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿತ್ತು. ರಾಜ್ಯ ರಾಜಧಾನಿಗೆ ದೆಹಲಿಯಿಂದ ‘ಕೇಂದ್ರೀಯ ವೀಕ್ಷಕರು’ ಹೊರಡುವವರಿದ್ದರು. ಅವರಿಗೆ ಮೂರು ಹೆಸರುಗಳಿರುವ ಮೂರು ಲಕೋಟೆಗಳನ್ನು ಹಸ್ತಾಂತರಿಸಿ, ಯಾವ ಹೆಸರು ಪ್ರಕಟಿಸಬೇಕು ಎಂಬ ಬಗ್ಗೆ ಹೈಕಮಾಂಡ್‌ನ ಅಂತಿಮ ನಿರ್ಣಯಕ್ಕೆ ಕಾಯಬೇಕೆಂದು ಸೂಚಿಸಲಾಗಿತ್ತು. ಆದರೆ ವೀಕ್ಷಕರು ತಪ್ಪಾದ ಲಕೋಟೆಯನ್ನು ತೆರೆದು ಹೆಸರು
ಪ್ರಕಟಿಸಿದ್ದರು ಎಂಬುದೊಂದು ಕಥೆಯಿದೆ. ಆ ವ್ಯಕ್ತಿ ಸರ್ವಾನುಮತದಿಂದ ಆಯ್ಕೆಯಾಗಿ ಎರಡು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದರು!

ಗುಜರಾತ್‌ನಲ್ಲಿ ಮುಖ್ಯಮಂತ್ರಿ ಆಯ್ಕೆಯ ವಿಚಾರವು ಅಚ್ಚರಿಯದು ಮಾತ್ರವಲ್ಲ, ಇನ್ನೂ ಹೆಚ್ಚಿನ ಕುತೂಹಲ ಕಾಯ್ದುಕೊಂಡಿತ್ತು. ಈ ಹಿಂದಿನ ಸಂಪುಟದಲ್ಲಿದ್ದ ಯಾವ ಸಚಿವರೂ ಇಲ್ಲದ ಸಚಿವ ಸಂಪುಟದ ನೇತೃತ್ವವನ್ನು ಹೊಸ ಮುಖ್ಯಮಂತ್ರಿ ವಹಿಸಲಿದ್ದರು. ಈ ಭಾರಿ ಬದಲಾವಣೆಗಳನ್ನು ಸಾರ್ವಜನಿಕವಾಗಿ ಬೆಂಬಲಿಸಿ ತಮ್ಮ ಉತ್ತರಾ ಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ರೂಪಾನಿ ಸಂಪುಟದ ಸಚಿವರು ಪಾಲ್ಗೊಂಡಾಗಲೇ ಕೇಂದ್ರೀಯ ನಾಯಕತ್ವದ ಫರ್ಮಾನಿನ ಎಳೆ ಸ್ಪಷ್ಟವಾಗಿ ಗೋಚರವಾಗಿತ್ತು. ಬಹು ಹಂತಗಳಲ್ಲಿ ಬಿಜೆಪಿಯ ಕೇಂದ್ರೀಯ ನಾಯಕತ್ವದ ಫರ್ಮಾನನ್ನು ಪಾಲಿಸಲಾಗಿದೆ. ಕೇಂದ್ರ ಸಂಪುಟದ ಪುನರ್‌ರಚನೆ, ಉತ್ತರಾಖಂಡ, ಕರ್ನಾಟಕ ಹಾಗೂ ಈಗ ಗುಜರಾತ್‌ನಲ್ಲಿನ ನಾಯಕತ್ವ ಬದಲಾವಣೆಗಳಲ್ಲಿ ಇದು ಕಂಡುಬಂದಿದೆ.

ಕರ್ನಾಟಕ ಹಾಗೂ ಗುಜರಾತ್‌ನಲ್ಲಿನ ಘಟನಾವಳಿ ಗಳಲ್ಲಿ ಕೆಲವು ಮುಖ್ಯ ಸಾಮ್ಯತೆಗಳು ಹಾಗೂ ವಿಭಿನ್ನತೆಗಳು ಕಂಡುಬಂದಿವೆ. ಸಾಮ್ಯತೆಗಳು ಏನು? ಬದಲಾವಣೆಯ ಸಮಯವನ್ನು ಪಕ್ಷದ ಕೇಂದ್ರೀಯ ನಾಯಕತ್ವ ನಿರ್ಧರಿಸಿದ್ದು ಸ್ಪಷ್ಟವಾಗಿತ್ತು. ಹೊಸ ನಾಯಕನ ಆಯ್ಕೆಗೆ ಪಕ್ಷದ ಕೇಂದ್ರೀಯ ನಾಯಕತ್ವದ ಅಂಗೀಕಾರದ ಮುದ್ರೆ ಸ್ಪಷ್ಟವಾಗಿತ್ತು. ಸಚಿವ ಸಂಪುಟ ರಚನೆ ರೀತಿಯಲ್ಲೂ ಕೇಂದ್ರೀಯ ನಾಯಕತ್ವ ವಹಿಸಿದ ಪಾತ್ರವು ಎದ್ದು ಕಾಣುವಂತಿತ್ತು. ಈ ಸಾಮ್ಯತೆಗಳು ಇಲ್ಲಿಗೇ ಅಂತ್ಯವಾಗುತ್ತವೆ. ಕರ್ನಾಟಕದಲ್ಲಿ 1989ರಿಂದಲೂ (ಮೂರು ದಶಕಗಳಿಗೂ ಹೆಚ್ಚು ಕಾಲ) ಪ್ರತೀ ಐದು ವರ್ಷಗಳಿಗೊಮ್ಮೆ ಆಡಳಿತ ಪಕ್ಷವನ್ನು ಮತದಾರರು ಬದಲಿಸಿಕೊಂಡೇ ಬಂದಿದ್ದಾರೆ. ಆದರೆ ಗುಜರಾತ್‌ನಲ್ಲಿ ಮೂರು ದಶಕಗಳಿಂದ ನಿರಂತರವಾಗಿ ಅಧಿಕಾರದಲ್ಲಿರುವ ಬಿಜೆಪಿಯು ಮುಂದಿನ ವರ್ಷ ಚುನಾವಣೆಯನ್ನು ಎದುರಿಸಲಿದೆ. ಆಡಳಿತ ವಿರೋಧಿ ಅಲೆಯ ಸಾಧ್ಯತೆಯ ಕಿಂಚಿತ್ತು ಛಾಯೆಯನ್ನೂ ದೂರವಿರಿಸಿ ಅಧಿಕಾರಕ್ಕೆ ಮರಳುವ ಯತ್ನವು ಗುಜರಾತ್‌ನಲ್ಲಿನ ಪೂರ್ಣ ಹೊಸ ದಾದ ಸಚಿವ ಸಂಪುಟ ರಚನೆಯ ಕಸರತ್ತಿನ ಹಿಂದಿದೆ. ಸರ್ಕಾರದಲ್ಲಿನ ಸಂಪೂರ್ಣ ಹೊಸ ನಾಯಕರ ‘ತಂಡ’ ವನ್ನು ಮತದಾರರ ಎದುರು ಪ್ರದರ್ಶಿಸುವುದೂ ಆಡಳಿತ ವಿರೋಧಿ ಅಲೆಯನ್ನು ದೂರವಿರಿಸುವ ಒಂದು ಮಾರ್ಗ ವಾಗಿದೆ. ಈ ಕಾರ್ಯತಂತ್ರವು ರಾಜಕೀಯ ಲಾಭ ತಂದು ಕೊಡುವುದೇ ಎಂಬುದು ಮುಂದಿನ ವರ್ಷ ತಿಳಿಯಲಿದೆ.

ಕರ್ನಾಟಕದಲ್ಲೂ ಸಚಿವ ಸಂಪುಟ ರಚನೆಯಲ್ಲಿ ಕೇಂದ್ರೀಯ ನಾಯಕತ್ವದ ಎದ್ದು ಕಾಣಿಸುವ ಸ್ಪಷ್ಟ ಪ್ರಭಾವವನ್ನು ಗುರುತಿಸಬಹುದು. ಉಪಮುಖ್ಯಮಂತ್ರಿಗಳನ್ನು ನೀಡದಿರುವುದು, ಹಳೆಯ ತಂಡದ ಕೆಲವು ಪ್ರಮುಖರನ್ನು ಉಳಿಸಿಕೊಳ್ಳದೆ ಹೊಸಬರನ್ನು ತಂದಿರುವಂತಹದ್ದು ಇಲ್ಲಿನ ಕಾರ್ಯತಂತ್ರ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಎಂದೂ ಸ್ಪಷ್ಟ ಬಹುಮತ ಪಡೆದಿಲ್ಲ. ಹೀಗಾಗಿ, ಸಮತೋಲಿತ ಕಸರತ್ತು ಅಗತ್ಯವಾಗಿತ್ತು.

ಕಾಂಗ್ರೆಸ್ ಪಕ್ಷದಲ್ಲೂ ಬದಲಾವಣೆಯ ಪರ್ವ. ಪಂಜಾಬ್‌ನಲ್ಲಿ ದೀರ್ಘಕಾಲ ಅಧಿಕಾರ ಅನುಭವಿಸಿದ ಆ ಪಕ್ಷದ ಮುಖ್ಯಮಂತ್ರಿ ರಾಜೀನಾಮೆ ನೀಡಿ ಹೊಸ ನಾಯಕತ್ವಕ್ಕೆ ಹಾದಿ ಮಾಡಿಕೊಟ್ಟಿದ್ದಾರೆ. ಹೀಗಿದ್ದೂ, ಕಾಂಗ್ರೆಸ್ ವಿಚಾರದಲ್ಲಿ, ಕೇಂದ್ರೀಯ ನಾಯಕತ್ವದಲ್ಲಿನ ಸ್ಪಷ್ಟತೆ ಹಾಗೂ ಸ್ಥಿರತೆಯ ಕೊರತೆಯು ‘ಕಮಾಂಡ್’ ಮಾಡಬಹುದಾದ ‘ಹೈಕಮಾಂಡ್’ನ ಸಾಮರ್ಥ್ಯವನ್ನು ಸ್ವಲ್ಪಮಟ್ಟಿಗೆ ದುರ್ಬಲವಾಗಿಸಿದೆ. ಈ ಹಿಂದೆ, ಇಂತಹ ಬದಲಾವಣೆಗಳಾದಾಗ ನಾಯಕರು ಕಾಂಗ್ರೆಸ್‌ನಿಂದ ಹೊರ ಹೋಗಿ ತಮ್ಮದೇ ಪಕ್ಷಗಳನ್ನು ಸ್ಥಾಪಿಸಿಕೊಳ್ಳಲು ಕಾರಣವಾಗಿದೆ. ಇದು ಪಶ್ಚಿಮ ಬಂಗಾಳ ಹಾಗೂ ಆಂಧ್ರಪ್ರದೇಶದಲ್ಲಿ ಆಗಿತ್ತು. ಇಂತಹ ಬೆಳವಣಿಗೆಗಳಿಂದಾಗಿ ಮಧ್ಯಪ್ರದೇಶದಲ್ಲಿ ಸರ್ಕಾರ ಬಿದ್ದಿತ್ತು ಹಾಗೂ ಅಸ್ಸಾಂನಲ್ಲಿ ಸರ್ಕಾರ ದುರ್ಬಲಗೊಂಡಿತ್ತು. ಈ ಹಿಂದಿನ ಕಾಂಗ್ರೆಸ್ ನಾಯಕನೇ ಈಗ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ. ತನ್ನ ಕೇಂದ್ರೀಯ ನಾಯಕತ್ವಕ್ಕೆ ಸಂಬಂಧಿಸಿದಂತೆ ಸ್ಪಷ್ಟತೆ ಹಾಗೂ ನಿರ್ಣಾಯಕತೆಯ ಅಂಶವನ್ನು ಕಾಂಗ್ರೆಸ್ ತರುವವರೆಗೂ ಕೆಳಹಂತಗಳಲ್ಲಿ ಯಾವುದೇ ಬದಲಾವಣೆಗಳಿಗೂ ಅವುಗಳದೇ ಅಡೆತಡೆಗಳು ಹಾಗೂ ಸಮಸ್ಯೆಗಳಿರುತ್ತವೆ.

ಹೀಗಾಗಿ, ಬದಲಾವಣೆಗೆ ಸಂಬಂಧಿಸಿದಂತೆ ಎರಡು ಮಾದರಿಗಳಿವೆ. ಒಂದು, ಬಿಜೆಪಿಯಿಂದ ಅಂಗೀಕೃತಗೊಂಡದ್ದು, ಮತ್ತೊಂದು ಕಾಂಗ್ರೆಸ್ ಅಳವಡಿಸಿಕೊಂಡಿ ರುವಂತಹದ್ದು. ಬರಲಿರುವ ತಿಂಗಳುಗಳಲ್ಲಿ ಹಾಗೂ ಮುಂದಿನ ವರ್ಷದ ಮಹತ್ವದ ಚುನಾವಣೆಗಳಲ್ಲಿ ರಾಜಕೀಯ ಹೇಗೆ ರೂಪು ತಳೆಯುತ್ತದೆ ಎಂಬುದು ಈ ಬದಲಾವಣೆಗಳ ಪರಿಣಾಮವನ್ನು ನಿರ್ಧರಿಸುವುದಲ್ಲದೆ ಈ ಬದಲಾವಣೆಗಳ ವ್ಯಾಖ್ಯೆಯೂ ದಕ್ಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.