ADVERTISEMENT

ಏನಾದ್ರೂ ಕೇಳ್ಬೋದು| ...ಅದೇನು ಕಾಮಾಸಕ್ತಿಯೋ ಅಥವಾ ಮಾನಸಿಕ ಕಾಯಿಲೆಯೋ?

ನಡಹಳ್ಳಿ ವಂಸತ್‌
Published 2 ಏಪ್ರಿಲ್ 2021, 9:58 IST
Last Updated 2 ಏಪ್ರಿಲ್ 2021, 9:58 IST
ಪ್ರಾತಿನಿಧಿಕ ಚಿತ್ರ (Getty Images)
ಪ್ರಾತಿನಿಧಿಕ ಚಿತ್ರ (Getty Images)   

* ತಾಯಿಗೆ 73 ವರ್ಷ. 30 ವರ್ಷಗಳಿಂದ ಮಾನಸಿಕ ತೊಂದರೆಗಳಿಗೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಅವರು ಯೋನಿಯನ್ನು ಉಜ್ಜಿಕೊಳ್ಳಲು ಆರಂಭಿಸಿದ್ದಾರೆ. ನವೆ ಆಗಿದೆಯೇ ಎಂದು ಕೇಳಿದರೆ ಇಲ್ಲವೆನ್ನುತ್ತಾರೆ. ಕೆಲವೊಮ್ಮೆ ಜೋರಾಗಿ ಕಿರುಚುತ್ತಾರೆ. ಇಳಿವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಇರುತ್ತದೆಯೇ? ಇವರ ವರ್ತನೆ ಮುಜುಗರ ತರಿಸುತ್ತದೆ. ಇದಕ್ಕೆ ಚಿಕಿತ್ಸೆಯೇನಾದರೂ ಇದೆಯೇ?

ಹೆಸರು, ಊರು ತಿಳಿಸಿಲ್ಲ.

ಮೂವತ್ತು ವರ್ಷಗಳಿಂದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿರುವ ವೃದ್ಧ ತಾಯಿಗೆ ಏನಾಗುತ್ತಿದೆ ಎಂದು ತಿಳಿಯುವುದಾದರೂ ಹೇಗೆ? ಇಳಿವಯಸ್ಸಿನಲ್ಲಿ ಲೈಂಗಿಕ ಆಸಕ್ತಿ ಇರುವುದು ಅಸಹಜವೇನಲ್ಲ. ಆದರೆ ಅದೊಂದೇ ವಿಚಾರವನ್ನು ನೀವು ಮುಜುಗರವನ್ನಾಗಿ ತೆಗೆದುಕೊಂಡು ಅವರ ಮಾನಸಿಕ ಕಷ್ಟಗಳನ್ನು ಕಡೆಗಣಿಸುತ್ತಿದ್ದೀರಲ್ಲವೇ? ಮುಜಗರ ಉಂಟುಮಾಡುವ ವರ್ತನೆಯನ್ನು ತೋರಿಸಿದಾಗ ಅವರನ್ನು ಖಾಸಗಿ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಮಾಧಾನಪಡಿಸಿ. ನಿಮ್ಮ ಮುಜುಗರ, ಸಿಟ್ಟು, ಕೀಳುದೃಷ್ಟಿ ಅವರ ಮಾನಸಿಕ ಕಷ್ಟಗಳನ್ನು ಹೆಚ್ಚಿಸುತ್ತದೆ. ಸಹಾನುಭೂತಿಯಿಂದ ಮಾತನಾಡಿಸಿ ಅವರ ಕಷ್ಟಗಳನ್ನು ತಿಳಿಯಲು ಯತ್ನಿಸಿ. ಎಲ್ಲವೂ ವಿಫಲವಾದರೆ ಕೊನೆಯವರೆಗೆ ಮಗುವಂತೆ ಅವರನ್ನು ನೋಡಿಕೊಳ್ಳುವುದೊಂದೇ ಉಳಿದಿರುವ ದಾರಿ.

ADVERTISEMENT

* 29 ವರ್ಷದ ಅವಿವಾಹಿತೆ. ಎಂಸಿಎ ಪದವೀಧರೆ. ಪಿಸಿಒಡಿ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದರಿಂದ ಮಕ್ಕಳಾಗುವುದು ಕಷ್ಟ. ವಯಸ್ಸಾಗಿರುವುದರಿಂದ ಅದರಲ್ಲಿ ಆಸಕ್ತಿಯೂ ಇಲ್ಲ. ಮದುವೆಯಾಗಿಲ್ಲವೆಂದು ಜನ ಆಡಿಕೊಳ್ಳುತ್ತಾರೆ. ನನಗೆ ಸರಿಯಾದ ಕೆಲಸವೂ ಸಿಗದೆ ರೋಸಿಹೋಗಿದ್ದೇನೆ. ಇಷ್ಟಪಟ್ಟಿರುವ ಹುಡುಗ ಜೂಜಾಡಿ ಮನೆಸಾಲ ತೀರಿಸಿ ಒಂದು ವರ್ಷದ ನಂತರ ಮದುವೆಯಾಗುತ್ತೇನೆ ಎಂದು ಹೇಳುತ್ತಿದ್ದಾನೆ. ಅವನ ಜೊತೆ ದೈಹಿಕ ಸಂಪರ್ಕವಾಗಿರುವುದರಿಂದ ಬೇರೆಯವರನ್ನು ಮದುವೆಯಾಗಲು ಭಯ. ಎಲ್ಲರೂ ದೈಹಿಕ ಸಂಪರ್ಕಕ್ಕೆ ಹಾತೊರೆಯುತ್ತಾರೆ. ವಯಸ್ಸಿನ ಕಾರಣ ಕೆಲಸವೂ ಸಿಗುತ್ತಿಲ್ಲ. ಜೀವನ ನಿಂತುಹೋಗಿದೆ. ಕೀಳರಿಮೆ, ಅವಮಾನ, ಹಿಂಸೆ. ಮನೆಯವರಿಗೆ ಭಾರವಾಗಿದ್ದೇನೆ ಅನ್ನಿಸುತ್ತದೆ. ಒಳ್ಳೆಯ ಕೆಲಸ ಸಿಕ್ಕರೆ ಎಲ್ಲದಕ್ಕೂ ಪರಿಹಾರವೆನ್ನಿಸುತ್ತಿದೆ. ಸಹಾಯಮಾಡಿ.

ಹೆಸರು, ಊರು ಇಲ್ಲ.

ದೀರ್ಘವಾದ ಪತ್ರದಲ್ಲಿ ನಿಮ್ಮ ಮಾನಸಿಕ ನೋವು, ಹೋರಾಟಗಳನ್ನು ಸ್ಪಷ್ಟವಾಗಿ ನಿರೂಪಿಸಿದ್ದೀರಿ. ಪಿಸಿಒಡಿ ಸಮಸ್ಯೆ ಮಕ್ಕಳಾಗುವುದಕ್ಕೆ ತೊಂದರೆ ಕೊಡಬಹುದಾದರೂ ನೀವಂದುಕೊಂಡಷ್ಟು ಭಯಾನಕವಾದದ್ದಲ್ಲ. ನಿಮ್ಮನ್ನು ಅದು ಆವರಿಸಿರುವ ರೀತಿಯನ್ನು ನೋಡಿದರೆ ನಿಮ್ಮ ಸಂಪೂರ್ಣ ವ್ಯಕ್ತಿತ್ವ ಅದರಿಂದ ಕುಸಿದುಹೋಗಿದೆ ಎನ್ನಿಸುತ್ತಿದೆ. ಅದರ ಹೊರತಾಗಿ ನಿಮ್ಮೊಳಗಿರುವ ಅಗಾಧ ಶಕ್ತಿಯನ್ನೇಕೆ ಬಳಸುತ್ತಿಲ್ಲ? ನೀವಲ್ಲದೆ ಇನ್ನಾರು ಅದನ್ನು ಗುರುತಿಸುವವರು? “ಸರಿಯಾದ ಕೆಲಸ”ದ ಯೋಚನೆ ಬಿಟ್ಟು ಅತ್ಮಗೌರವದಿಂದ ಮಾಡಬಹುದಾದ ಕೆಲಸವೊಂದನ್ನು ಹುಡುಕಿಕೊಳ್ಳಿ. ನಿಂತು ಹೋಗಿರುವ ಬದುಕು ಅಂಬೆಗಾಲಿಡಲಿ. ಜೊತೆಜೊತೆಗೆ ನಿಮ್ಮ ವಿದ್ಯೆಗೆ ಹೊಂದುವ ಉದ್ಯೋಗವನ್ನು ಅರಸುವುದನ್ನು ಮುಂದುವರೆಸಿ. ನಿಮ್ಮ ಕೀಳರಿಮೆ, ಹತಾಶೆಗಳು ಜೂಜುಕೊರನ ಸಾಂಗತ್ಯವನ್ನಾದರೂ ಒಪ್ಪಿಕೊಳ್ಳುವುದಕ್ಕೆ ಪ್ರೇರೇಪಿಸುತ್ತಿದೆಯೇ ಯೋಚಿಸಿ. ಮದುವೆಯ ಯೋಚನೆಯನ್ನು ಸದ್ಯಕ್ಕೆ ಮುಂದೂಡಿ ನಿಮ್ಮೊಳಗಿರುವ ಪ್ರಬುದ್ಧ ಮಹಿಳೆಯನ್ನು ಹುಡುಕಿ ಹೊರತೆಗೆದರೆ ಹೇಗಿರುತ್ತದೆ? ನಿಮ್ಮನ್ನು ಗೌರವಿಸುವ, ಪ್ರೀತಿಸುವ ಸಂಗಾತಿ ತಾನಾಗಿಯೇ ಹುಡುಕಿ ಬರಬಹುದಲ್ಲವೇ?

* 23ರ ಯುವಕ. ಬಹಳ ವರ್ಷಗಳಿಂದ ಪ್ರತಿ ರಾತ್ರಿ ಐದಾರು ಆತಂಕ ಹುಟ್ಟಿಸುವ, ವಾಸ್ತವಕ್ಕೆ ಸಂಬಂಧವಿಲ್ಲದ ಭಯಾನಕ ಕನಸುಗಳು ಬೀಳುತ್ತವೆ. ಇದರಿಂದ ಎಚ್ಚರವಾಗಿ ನಿದ್ದೆ ಅಪೂರ್ಣವಾಗುತ್ತದೆ. ಕೆಲವೊಮ್ಮೆ ತಲೆನೋವು ಬರುತ್ತದೆ. ಕನಸುಗಳಿಲ್ಲದೆ ಮಲಗುವುದು ಹೇಗೆ ಎಂದು ತಿಳಿಸಿ.

ಗಜೇಂದ್ರ, ಬೆಂಗಳೂರು.

ಕನಸುಗಳು ಎಲ್ಲರಿಗೂ ಬೀಳುತ್ತವೆ. ನಿಮಗೆ ಅದು ಭಯ ಹುಟ್ಟಿಸುತ್ತದೆ ಎಂದರೆ ಹಲವಾರು ವಿಷಯಗಳ ಕುರಿತಾದ ನಿಮ್ಮ ಆತಂಕ ಕನಸಾಗಿ ಕಾಣಿಸಿಕೊಳ್ಳುತ್ತದೆ ಎಂದರ್ಥ. ಕನಸಿನಿಂದ ಎಚ್ಚರವಾದಾಗ ನಿಧಾನವಾಗಿ, ಆಳವಾಗಿ ಉಸಿರಾಡುತ್ತಾ ದೇಹವನ್ನು ಶಾಂತಗೊಳಿಸಿ. ಕನಸಿನ ಕುರಿತಾದ ನೆನಪಿಗೆ ಬಂದಷ್ಟು ವಿವರಗಳನ್ನು ಬರೆದಿಡುತ್ತಾ ಹೋಗಿ. ಹೀಗೆ ಸಾಕಷ್ಟು ದಿನಗಳು ಮಾಡಿದರೆ ನಿಮ್ಮನ್ನು ಕಾಡುವ ಆತಂಕದ ಬಗೆಗಿನ ಚಿತ್ರಣ ದೊರಕುತ್ತದೆ. ದೀರ್ಘಕಾಲದಿಂದ ಕಾಡುವ ಇಂತಹ ಆತಂಕಗಳಿಗೆ ಪರಿಹಾರವನ್ನು ಹುಡುಕಿದಾಗ ಕನಸುಗಳು ಬಿದ್ದರೂ ಭಯಾನಕವಾಗಿರುವುದಿಲ್ಲ. ಅಗತ್ಯವೆನ್ನಿಸಿದರೆ ತಜ್ಞ ಮನೋಚಿಕಿತ್ಸಕರ ಸಹಾಯ ಪಡೆಯಬಹುದು.

* ತಾಯಿ ತೀರಿಹೋಗಿದ್ದಾರೆ. ನಾನು ಬೇರೆ ಊರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ಸ್ನೇಹಿತರಿಲ್ಲದಿರುವುದರಿಂದ ಒಂಟಿತನ ಕಾಡುತ್ತಿದೆ. ಸರಿಯಾಗಿ ಓದಲಾಗದೆ ಬೇಸರದಿಂದಿದ್ದೇನೆ. ಪರಿಹಾರ ತಿಳಿಸಿ.

ಉಷಾ, ಊರಿನ ಹೆಸರಿಲ್ಲ.

ತಾಯಿಯನ್ನು ಕಳೆದುಕೊಂಡ ನೋವು ಈಗಲೂ ಕಾಡುತ್ತಿರಬೇಕಲ್ಲವೇ? ಹೊಸ ಊರಿನಲ್ಲಿ ಹೊಸ ಸ್ನೇಹಿತರನ್ನು ಹುಡುಕಲು ಈ ನೋವು ತಡೆಯಾಗುತ್ತಿದೆಯೇ? ತಾಯಿಯಿಂದ ಸಿಗುವ ಸಾಂತ್ವನದಂತೆಯೇ ಸ್ನೇಹಿತರಿಂದ ಸಿಗುವ ಪ್ರೀತಿಯೂ ಇರಬೇಕೆಂದು ನೀವು ನಿರೀಕ್ಷಿಸುತ್ತಿದ್ದೀರಾ? ಸ್ನೇಹದ ಅನುಭವವೇ ಬೇರೆಯಾಗಿರುತ್ತದೆಯಲ್ಲವೇ? ಒಂದು ಒಳ್ಳೆಯ ಸ್ನೇಹವನ್ನು ಹುಡುಕಲು ನೂರಾರು ಜನರ ಜೊತೆ ಒಡನಾಡಲೇಬೇಕು. ನಿಧಾನವಾಗಿ ಎಲ್ಲರ ಜೊತೆ ಬೆರೆಯುತ್ತಾ ಹೋಗಿ. ಕೆಲವಾದರೂ ಉತ್ತಮ ಸ್ನೇಹಿತರು ಸಿಗಲೇಬೇಕಲ್ಲವೇ?

* ನಮ್ಮ ತಂದೆ– ತಾಯಿಗೆ ಮೂವರು ಗಂಡುಮಕ್ಕಳು. ಅಕ್ಕ, ತಂಗಿ ಇಲ್ಲ ಎನ್ನುವುದು ನನ್ನನ್ನು ಕಾಡುತ್ತಿದೆ. ತಾಯಿಗೆ ಈಗಾಗಲೇ ಸಂತಾನಹರಣ ಶಸ್ತ್ರಚಿಕಿತ್ಸೆಯಾಗಿದೆ. ತಾಯಿಯ ಗರ್ಭದಿಂದ ತಂಗಿಯನ್ನು ಪಡೆಯುವುದು ಹೇಗೆ?

ರಮೇಶ, ಊರಿನ ಹೆಸರಿಲ್ಲ.

ಅಕ್ಕ– ತಂಗಿಯರ ಪ್ರೀತಿಗಾಗಿ ನೀವು ಹಂಬಲಿಸುವುದು ಸಹಜ. ಆದರೆ ಹುಟ್ಟನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಪ್ರಕೃತಿ ನಮಗೆ ನೀಡಿಲ್ಲ. ತಾಯಿಯ ಗರ್ಭದ ಮೇಲೆ ನಿಮಗೆ ಅಧಿಕಾರವಿದಲು ಹೇಗೆ ಸಾಧ್ಯ? ನಿಮಗೆ ಅಕ್ಕ– ತಂಗಿಯರ ಪ್ರೀತಿಯ ಅನುಭವ ಬೇಕೆನ್ನಿಸಿದರೆ ಸುತ್ತಲೂ ಸಾಕಷ್ಟು ಅವಕಾಶಗಳಿರಬಹುದಲ್ಲವೇ? ಅನಾಥಾಶ್ರಮಗಳಲ್ಲಿ ಪ್ರಾಮಾಣಿಕ ಪ್ರೀತಿಗಾಗಿ ಕಾತರಿಸುವವರಲ್ಲಿ ಅಕ್ಕತಂಗಿಯರನ್ನು ಹುಡುಕಬಹುದಲ್ಲವೇ?

* ಅಂತಿಮ ಬಿಎ ವಿದ್ಯಾರ್ಥಿ. ನನಗೆ ಮೊದಲಿನಿಂದಲೂ ಹೆಸರು ಗಳಿಸಬೇಕೆಂದಿದೆ. ಇತ್ತಿಚೆಗೆ ಐಎಎಸ್‌ ಆಫೀಸರ್‌ ಆಗಿ ಸಮಾಜಸೇವೆ ಮಾಡಬೇಕೆನ್ನಿಸುತ್ತಿದೆ. ಓದುವ ಹಂಬಲ ಮತ್ತು ಆತ್ಮಸ್ಥೈರ್ಯವಿದೆ. ಆದರೆ ಆಲಸ್ಯದ ಸಮಸ್ಯೆ ಎದುರಾಗುತ್ತಿದೆ. ಪರಿಹಾರವೇನು?

ಹೆಸರು, ಊರು ತಿಳಿಸಿಲ್ಲ.

ಪತ್ರದಲ್ಲಿ ಬಳಸಿರುವ ಶಬ್ದಗಳನ್ನು ನೋಡಿದರೆ ನಿಮ್ಮೊಳಗೆ ಬಹಳ ಅಸ್ಪಷ್ಟತೆಯಿದೆ ಅನ್ನಿಸುತ್ತಿದೆ. ಹೆಸರು ಗಳಿಸುವುದು, ಸಮಾಜಸೇವೆ ಮಾಡುವುದು ಒಳ್ಳೆಯ ಉದ್ದೇಶಗಳಾಗಿದ್ದರೂ ನಿಮ್ಮ ದಾರಿಗಳ ಬಗ್ಗೆ ಸ್ಪಷ್ಟತೆಯಿಲ್ಲದಿದ್ದಾಗ ಅವು ಕೇವಲ ಕನಸುಗಳಾಗಿ ಉಳಿಯುತ್ತವೆ. ಹೀಗೆ ಕಲ್ಪನೆ– ಕನಸುಗಳಿಗೆ ಸ್ಪಷ್ಟ ರೂಪ ಸಿಗದಿದ್ದರೆ ಅದರಲ್ಲಿ ತೊಡಗಿಕೊಳ್ಳಲಾಗದೆ ಆಲಸ್ಯ ಮೂಡುವುದು ಸಹಜ. ನನ್ನ ಆಸಕ್ತಿಗಳೇನು? ಅಂತಹ ಕ್ಷೇತ್ರದಲ್ಲಿರುವ ಸಾಧ್ಯತೆಗಳೇನು? ನಾನು ಅದರಲ್ಲಿ ತೊಡಗಿಕೊಳ್ಳುವುದು ಸಾಧ್ಯವೇ? ಸಾಧ್ಯವಿದ್ದರೆ ಹೇಗೆ? ಈ ಎಲ್ಲದರ ಬಗೆಗೆ ಮಾಹಿತಿ ಸಂಗ್ರಹಣೆ ಮಾಡಿ. ಸೋಲುಗಳನ್ನು ಸಹಿಸಿಕೊಳ್ಳುತ್ತಾ ಹಂತಹಂತವಾಗಿ ಮುಂದುವರೆಯ ಪ್ರಯತ್ನ ಮಾಡಿ.

* 18ರ ಯುವಕ. ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತಿದ್ದೇನೆ. ದಿನಕ್ಕೆ 12 ಗಂಟೆ ಓದುತ್ತೇನೆ. ನೂರಕ್ಕೆ ಮೂವತ್ತರಷ್ಟು ಮಾತ್ರ ನೆನಪಿರುತ್ತದೆ. ನೆನಪಿನ ಶಕ್ತಿಯನ್ನು ವೃದ್ಧಿಸಿಕೊಳ್ಳುವುದು ಹೇಗೆ?

ದರ್ಶನ್‌, ಊರಿನ ಹೆಸರಿಲ್ಲ.

ತನಗೆ ಆಸಕ್ತಿದಾಯಕವಾದದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಎಲ್ಲರ ಮೆದುಳಿಗೂ ಇದ್ದೇ ಇರುತ್ತದೆ. ಓದುವ ವಿಷಯಗಳನ್ನು ಆಸಕ್ತಿದಾಯಕವಾಗಿ ಮಾಡಿಕೊಳ್ಳುವುದು ಹೇಗೆ ಎಂದು ಯೋಚಿಸಿ. 12 ಗಂಟೆ ಓದುತ್ತಾ 30 ಪ್ರತಿಶತ ನೆನಪಿಟ್ಟುಕೊಳ್ಳುವುದರ ಬದಲು 8 ಗಂಟೆ ಓದಿ 80 ಪ್ರತಿಶತ ನೆನಪಿಟ್ಟುಕೊಳ್ಳುವುದು ಸಾಧ್ಯವಿದೆ. ವಿಷಯಗಳಲ್ಲಿ ತಲ್ಲೀನವಾಗುವುದೇ ಇದಕ್ಕೆ ಸರಳ ಪರಿಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.