ADVERTISEMENT

ಜಿ.ವಿ.ಜೋಶಿ ಲೇಖನ: ಬಾಧ್ಯತೆಗೆ ಕಾಯುತ್ತಿದೆ ಆದ್ಯತಾ ರಂಗ

ಈ ಕ್ಷೇತ್ರಕ್ಕೆ ಸಾಲ ಪೂರೈಸುವುದು ಸಮಸ್ಯೆಯಾಗಿಯೇ ಉಳಿದಿದೆ

ಜಿ.ವಿ.ಜೋಶಿ
Published 10 ನವೆಂಬರ್ 2020, 20:30 IST
Last Updated 10 ನವೆಂಬರ್ 2020, 20:30 IST
ಜಿ.ವಿ.ಜೋಶಿ
ಜಿ.ವಿ.ಜೋಶಿ   
""

‘ಪ್ರಯೋಗ ಮತ್ತು ಪ್ರಮಾದ’ದ ವಿಧಾನವನ್ನು ಅನುಸರಿಸುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2007ರ ಏ. 30ರ ಹೊತ್ತಿಗೆ, ಪರಿಷ್ಕೃತಗೊಂಡ ಆದ್ಯತಾ ರಂಗವನ್ನು ಪರಿಚಯಿಸಿದ್ದಕ್ಕೆ ಈಗಲೂ ಮಹತ್ವವಿದೆ. ಅದು ಆಗ ಕೃಷಿ, ಸಣ್ಣ ಕೈಗಾರಿಕೆ, ಚಿಲ್ಲರೆ ವ್ಯಾಪಾರ, ಕಿರು ಹಣಕಾಸು, ಶಿಕ್ಷಣ, ಗೃಹ ನಿರ್ಮಾಣವನ್ನು ಆದ್ಯತಾ ರಂಗದ ಪ್ರಮುಖ ಕ್ಷೇತ್ರಗಳೆಂದು ಪರಿಗಣಿಸಿತ್ತು. ವರ್ಷ ಕಳೆದಂತೆ ಆದ್ಯತಾ ರಂಗದ ತಾಕತ್ತು ಸುಧಾರಿಸದಿದ್ದರೂ ಅದರ ವಿಸ್ತಾರ ಹೆಚ್ಚುತ್ತಾ ಹೋಗಿದೆ. ಸಾರ್ವಜನಿಕ ಮೂಲ ಸೌಕರ್ಯ, ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ದಿಮೆ (ಎಂಎಸ್ಎಂಇ) ಹಾಗೂ ನವೀಕರಿಸಬಹುದಾದ ಶಕ್ತಿ ಮೂಲಗಳು ಕೂಡ ಆದ್ಯತಾ ರಂಗದ ವ್ಯಾಪ್ತಿಗೆ ಸೇರಿವೆ.

ನವೋದ್ಯಮಗಳನ್ನೂ ಆರ್‌ಬಿಐ ಆದ್ಯತಾ ರಂಗದ ಕಕ್ಷೆಯಲ್ಲಿ ಸೇರಿಸಿದ್ದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ವಾಗತಿಸಿದ್ದಾರೆ. ಸಾಂಸ್ಥಿಕ ಹಣಕಾಸಿನ ಕೊರತೆಯಿಂದ ಸಂಕಷ್ಟಕ್ಕೀಡಾದ ಆದ್ಯತಾ ರಂಗಕ್ಕೆ ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು ಜತೆ ಜತೆಯಾಗಿ ಸಾಲ ನೀಡುವುದನ್ನು ಪ್ರೋತ್ಸಾಹಿಸುವುದಾಗಿ ಇದೇ 4ರಂದು ಆರ್‌ಬಿಐ ಘೋಷಿಸಿದ್ದು ಮಹತ್ವದ ಬೆಳವಣಿಗೆಯಾಗಿದೆ. ಆದ್ಯತಾ ರಂಗಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಂಸ್ಥಿಕ ಸಾಲ ಪೂರೈಕೆಯಾಗುವುದು ತೀರ ಅಗತ್ಯವೆನ್ನುವುದು ರಿಸರ್ವ್ ಬ್ಯಾಂಕಿನ ನಿಲುವು.

ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಇತ್ತೀಚೆಗೆ ಬಿಡುಗಡೆಗೊಳಿಸಿದ ವಿಶ್ವ ಆರ್ಥಿಕ ಮುನ್ನೋಟದ ವರದಿ, 2020-25ರ ಅವಧಿಯಲ್ಲಿ ಭಾರತದ ಆರ್ಥಿಕತೆ ಗಣನೀಯವಾಗಿ ಕುಸಿಯುವ ಸಾಧ್ಯತೆಯನ್ನು ತೋರಿಸಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿದೆ ಎಂದೇ ಹೇಳಬಹುದು. ಕೊರೊನಾ ಬಾಧೆಯಿಂದ ದುರ್ಬಲವಾಗಿರುವ ಆದ್ಯತಾ ರಂಗ ಮತ್ತಷ್ಟು ಶಕ್ತಿ ಕಳೆದುಕೊಳ್ಳಲಿದೆ ಎಂಬುದು ವರದಿಯನ್ನು ಓದಿದರೆ ಸುಲಭವಾಗಿ ಮನದಟ್ಟಾಗುವ ಸಂಗತಿ.

ADVERTISEMENT

ಹೆಸರಿನಲ್ಲಷ್ಟೇ ಆಕರ್ಷಕವಾಗಿ ತೋರುವ ಆದ್ಯತಾ ರಂಗದ ಪ್ರಗತಿಯು ವಾಸ್ತವದಲ್ಲಿ ನಿರಾಶಾದಾಯಕ ಆಗಿರುವುದು ನಿಜ ಎನ್ನುವುದು ಕೊರೊನಾ ಹಾವಳಿ ಶುರುವಾಗುವ ಮೊದಲೇ ಬಯಲಿಗೆ ಬಂದಿತ್ತು. ನೋಟು ರದ್ದತಿ ಮತ್ತು ಜಿಎಸ್‌ಟಿ ಈ ರಂಗಕ್ಕೆ ಬಲವಾದ ಏಟು
ನೀಡಿದ್ದವು. ರಿಸರ್ವ್ ಬ್ಯಾಂಕ್ ಒಮ್ಮೊಮ್ಮೆ ಆದ್ಯತಾ ರಂಗದ ಆರ್ಥಿಕ ಸುಧಾರಣೆಗೆ ರಭಸದಿಂದ ಮುಂದಾದರೂ ನಂತರ ಅದು ನಿರೀಕ್ಷಿತ ಫಲಿತಾಂಶ ಕಾಣಲಾರದೆ ಬೇಗನೆ ಅಸಹಾಯಕ ಪ್ರೇಕ್ಷಕನಾಗಿ ಬಿಡುತ್ತದೆ.

ಆದ್ಯತಾ ರಂಗಕ್ಕೆ ನಿಗದಿಯಾದ ಸಾಲದ ಗುರಿ ತಲುಪಲು ಬೇಕಾದ ವಿಧಾನಗಳನ್ನು ಸೂಚಿಸಲು ಅವಶ್ಯವಿದ್ದಾಗ ಪ್ರತ್ಯೇಕ ಸಮಿತಿ ರಚಿಸುವ ನೀತಿಯನ್ನು ರಿಸರ್ವ್ ಬ್ಯಾಂಕ್ ಅನುಸರಿಸಿಕೊಂಡು ಬಂದಿದ್ದಂತೂ ಹೌದು. ಪ್ರತೀ ಸಮಿತಿಯೂ ಆದ್ಯತಾ ರಂಗಕ್ಕೆ ಬ್ಯಾಂಕುಗಳು ನೀಡಬೇಕಾದ ಸಾಲದ ಪ್ರಮಾಣವನ್ನು ಹೆಚ್ಚಿಸಿದ್ದರೂ ಅದನ್ನು ಪ್ರತಿಪಾದಿಸುವ ಗೋಜಿಗೇ ಹೋಗಿಲ್ಲ. ರಿಸರ್ವ್ ಬ್ಯಾಂಕಿಗೇ ಬೇಕಾದ ಪ್ರಮಾಣದಲ್ಲಿ ಬಾಧ್ಯತೆ ಪ್ರದರ್ಶಿಸಲು ಸಾಧ್ಯವಾಗದಿರುವಾಗ ಸರ್ಕಾರದ ಸುಪರ್ದಿಯಲ್ಲಿರುವ ವಾಣಿಜ್ಯ, ಪ್ರಾದೇಶಿಕ ಗ್ರಾಮೀಣ, ಸಹಕಾರಿ ಬ್ಯಾಂಕುಗಳಿಗೆ ಮತ್ತು ವಿದೇಶಿ ಬ್ಯಾಂಕುಗಳಿಗೆ ಸಾಧ್ಯವಾಗುವುದಾದರೂ ಹೇಗೆ? ಈ ರಂಗಕ್ಕೆ ಸಾಲ ಪೂರೈಸುವ ಕಾರ್ಯದಲ್ಲಿ ಗೆಲುವಿಗೆ ನಿಧಾನವಾಗಿ ಪ್ರಯತ್ನಿಸುವುದು ಮತ್ತು ಸೋಲಿಗೆ ಕೂಡಲೇ ತಯಾರಾಗುವುದು ಎಲ್ಲಾ ಬ್ಯಾಂಕುಗಳು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದ ವಾಡಿಕೆ.

1967ರ ಅಂತ್ಯದಲ್ಲಿ ರಾಷ್ಟ್ರ ಮಟ್ಟದಲ್ಲಿ ಉದಯಿಸಿ ಖಾಸಗಿ ರಂಗದ ವಾಣಿಜ್ಯ ಬ್ಯಾಂಕುಗಳಿಗೆ ಅನ್ವಯಿಸಿದ ಸಾಮಾಜಿಕ ನಿಯಂತ್ರಣ ಕಾನೂನು, ಆದ್ಯತಾ ರಂಗವೆಂದು ಕೃಷಿ, ಸಣ್ಣ ಕೈಗಾರಿಕೆ, ಸಾರ್ವಜನಿಕ ರಂಗ ಮತ್ತು ಸ್ವತಂತ್ರ ಉದ್ಯೋಗಗಳನ್ನು ಪರಿಗಣಿಸಿತ್ತು. ಇವುಗಳಿಗೆ ಕೊಡುವ ಸಾಲದ ವಿಧಾನ, ಮೊತ್ತ, ಗುರಿ ಮುಟ್ಟುವ ಬಗೆ ಮತ್ತು ಗುರಿ ಮುಟ್ಟದಿದ್ದರೆ ಮುಂದೆ ಅನುಸರಿಸಬೇಕಾದ ಕ್ರಮಗಳನ್ನು ನಿರ್ಧರಿಸುವ ಪ್ರಯತ್ನ ರಿಸರ್ವ್ ಬ್ಯಾಂಕಿನಿಂದ ಆಗಿರಲಿಲ್ಲ. ವಾಣಿಜ್ಯ ಬ್ಯಾಂಕುಗಳಿಗೆ 1968ರಲ್ಲಿ ಆಗಿನ ಅದರ ಗವರ್ನರ್ ಕಳಿಸಿದ ಸುತ್ತೋಲೆಯಲ್ಲಿ, ಬ್ಯಾಂಕುಗಳು ಈ ವರ್ಷ ತಾವು ಸಂಗ್ರಹಿಸಿದ ಹೊಸ ಠೇವಣಿಯ ಶೇ 15ರಷ್ಟನ್ನು ಕೃಷಿ ರಂಗಕ್ಕೂ ಸಾಲದ ರೂಪದಲ್ಲಿ ವಿನಿಯೋಗಿಸಲು ಒಪ್ಪಿವೆ ಎಂದು ಸಾರಿ ಆಶ್ಚರ್ಯ ಹುಟ್ಟಿಸಿಬಿಟ್ಟರು. ಉಳಿದ ಆದ್ಯತಾ ವಲಯಗಳಿಗೆ ಸಂಬಂಧಿಸಿದಂತೆ ಅವರು ಮೌನಕ್ಕೆ ಶರಣಾಗಿ ಬಿಟ್ಟಿದ್ದರು! ಬ್ಯಾಂಕಿಂಗ್‌ ತಜ್ಞ ಎನ್.ಕೆ.ತಿಂಗಳಾಯ ಅವರು 2001ರಲ್ಲಿ ತಿಳಿಸಿದಂತೆ, ಆದ್ಯತಾ ರಂಗದ ಸಾಲ ಪೂರೈಕೆಯ ಗುರಿಗಳ ಆವಿಷ್ಕಾರಕ್ಕೆ ಅಂಕಿ-ಅಂಶಗಳ ಆಧಾರ ಇರಲಿಲ್ಲ, ಸಾಧಕ-ಬಾಧಕಗಳ ವಿಮರ್ಶೆಯಿರಲಿಲ್ಲ.

ಸಾಮಾಜಿಕ ನಿಯಂತ್ರಣವು ಅಲ್ಪಾಯುವಾಗಿ 1969ರ ಜುಲೈನಲ್ಲಿ 14 ಪ್ರಮುಖ ಖಾಸಗಿ ವಾಣಿಜ್ಯ ಬ್ಯಾಂಕುಗಳು ರಾಷ್ಟ್ರೀಕರಣಗೊಂಡವು. 1980ರ ಏಪ್ರಿಲ್‌ನಲ್ಲಿ ಮತ್ತೆ ಆರು ಖಾಸಗಿ ಬ್ಯಾಂಕುಗಳು ಸರ್ಕಾರಿ ಬ್ಯಾಂಕುಗಳಾಗಿ ಪರಿವರ್ತನೆಗೊಂಡವು. ಇಂದಿರಾ ಗಾಂಧಿ ನೇತೃತ್ವದ ಸರ್ಕಾರದಲ್ಲಿ ಆದ್ಯತಾ ರಂಗ ವಿಸ್ತರಣೆಯಾಗುತ್ತಾ ಹೋಯಿತು. ಇಂದಿಗೂ ಆದ್ಯತಾ ರಂಗದ ಪಟ್ಟಿ ಬೆಳೆಸುವುದಾಗಿರಲಿ, ಬೆಳೆದ ಪಟ್ಟಿಯಲ್ಲಿರುವ ವಲಯಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದಾಗಿರಲಿ ರಿಸರ್ವ್‌ ಬ್ಯಾಂಕ್ ಮತ್ತು ಸಂಬಂಧಪಟ್ಟ ವಾಣಿಜ್ಯ ಬ್ಯಾಂಕುಗಳ ಪಾಲಿಗೆ ಹೇಗಾದರೂ ನಿಗದಿತ ಗುರಿ ಮುಟ್ಟುವುದೇ ಮಹತ್ವವಾಗಿ ಬಿಡುತ್ತದೆ. ಕಿರು ಹಣಕಾಸು ಸಂಸ್ಥೆಗಳು ಬ್ಯಾಂಕುಗಳಿಂದ ಕೇವಲ ಶೇ 12ರ ಬಡ್ಡಿ ದರದಲ್ಲಿ ಸಾಲ ಪಡೆದು ಆದ್ಯತಾ ರಂಗದ ಸ್ವಸಹಾಯ ಗುಂಪುಗಳಿಗೆ ಶೇ 26ರ ಬಡ್ಡಿ ದರದಲ್ಲಿ ಸಾಲ ನೀಡಿ ಭರ್ಜರಿ ಲಾಭ ಹೊಡೆದುಕೊಂಡ ಪ್ರಕರಣಗಳೂ ಬೇಕಾದಷ್ಟಿವೆ. ಯಾವ ಸೀಮೆಯ ನ್ಯಾಯ ಇದು?

ಪ್ರತೀ ವರ್ಷ ಬ್ಯಾಂಕುಗಳಿಗೆ ಅವು ನೀಡುವ ಒಟ್ಟು ಸಾಲದ ಮೊತ್ತದ ಶೇ 40ರಷ್ಟು ಪಾಲನ್ನು ಆದ್ಯತಾ ರಂಗಕ್ಕೆ ನಿಯಮಾನುಸಾರ ಹಂಚಲು ಸಾಧ್ಯವಾಗದಿದ್ದರೆ ಉಳಿದ ಭಾಗವನ್ನು ಗ್ರಾಮೀಣ ಮೂಲಸೌಕರ್ಯ ನಿಧಿಗೆ ವರ್ಗಾವಣೆ ಮಾಡಬೇಕೆಂಬ ನಿಯಮವಿದೆ. ಇದರ ಜಾರಿಗಾಗಿ ಬ್ಯಾಂಕುಗಳು ಸಾಲ ನೀಡಲು ಮುಂದಾದರೂ ಆದ್ಯತಾ ರಂಗಕ್ಕೆ ಅದನ್ನು ಪಡೆದು ಸಮರ್ಪಕವಾಗಿ ವಿನಿಯೋಗಿಸಲು ಸಾಧ್ಯವಾಗದೆ ಹೋಗಿದ್ದೇ ಕಾರಣ. ಅಧಿಕ ಸಂಖ್ಯೆಯಲ್ಲಿರುವ ಸಣ್ಣ ಉದ್ದಿಮೆಗಳಿಗೆ ಸಾಲ ಕೊಡುವುದು ಬ್ಯಾಂಕುಗಳಿಗೆ ಹೆಚ್ಚಿನ ನಿರ್ವಹಣಾ ವೆಚ್ಚಕ್ಕೆ ದಾರಿಯಾಗಿದೆ. ಆದ್ಯತಾ ರಂಗಕ್ಕೆ ಸಾಲ ಕೊಡುವುದಕ್ಕೆ ಪ್ರಾಶಸ್ತ್ಯ ನೀಡುವುದರಿಂದ ಇತರ ಕ್ಷೇತ್ರಗಳ ಬೇಡಿಕೆಯನ್ನು ಪೂರೈಸುವುದು ಬ್ಯಾಂಕುಗಳಿಗೆ ಕಷ್ಟವೇ. ಸಾಲ ವಿತರಣೆಯಲ್ಲಿ ಪ್ರಾದೇಶಿಕ ಅಸಮಾನತೆ ತಲೆದೋರಿದ್ದಲ್ಲದೆ, ಮರುಪಾವತಿ ತೃಪ್ತಿಕರವಾಗಿಲ್ಲವೆಂಬ ದೂರು ವ್ಯಾಪಕವಾಗಿದೆ. ಅಂದರೆ ಆದ್ಯತಾ ರಂಗಕ್ಕೆ ತೃಪ್ತಿಕರವಾದ ಷರತ್ತುಸಹಿತ ಸಾಲ ಅವಶ್ಯವಾದರೂ ಅದೇ ಸರ್ವಸ್ವವಲ್ಲ ಎನ್ನುವುದು ಸಹ ಬೆಳಕಿನಷ್ಟೇ ತಿಳಿ.

ನರಸಿಂಹಮ್ ಸಮಿತಿಯು (1991) ಬ್ಯಾಂಕು ನೀಡುವ ಸಾಲದ ಮೊತ್ತದ ಶೇ 10ರಷ್ಟು ಭಾಗವನ್ನಷ್ಟೇ ಆದ್ಯತಾ ರಂಗಕ್ಕೆ ಮೀಸಲಿಡುವಂತೆ ಶಿಫಾರಸು ಮಾಡಿತ್ತು. ಆದ್ಯತಾ ರಂಗದ ಕೆಲವು ಕ್ಷೇತ್ರಗಳ ಒತ್ತಡಕ್ಕೆ ಮಣಿದ ಆಗಿನ ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಈ ಶಿಫಾರಸಿಗೆ ಮಾತ್ರ ಕಾಸಿನ ಬೆಲೆ ಕೊಡಲಿಲ್ಲ. ಹಿಂದಿನ ಸಾಲದ ಪ್ರಮಾಣವೇ ಮುಂದುವರಿದಿದ್ದರಿಂದ ಬ್ಯಾಂಕುಗಳೇ ಸಾಲ ನೀಡುವಲ್ಲೂ ಸಾಲ ಮರಳಿ ಪಡೆಯುವಲ್ಲೂ ಮತ್ತೆ ಮತ್ತೆ ಫೇಲಾಗುತ್ತಿವೆ!

ಆರ್‌ಬಿಐ 2005-06ನೇ ಸಾಲಿನ ವಾರ್ಷಿಕ ನೀತಿ ಪ್ರಕಟಣೆಯಲ್ಲಿ, ಕೃಷಿ ಮತ್ತು ಸಣ್ಣ ಕೈಗಾರಿಕೆಗಳು ಮಾತ್ರ ಆದ್ಯತಾ ರಂಗವಾಗಿ ಮುಂದುವರಿಯಬೇಕೆಂದು ಹೇಳಿದ್ದು ಜಾರಿಗೆ ಬರಲಿಲ್ಲ. 2020ರ ಪ್ರಾರಂಭದಲ್ಲೇ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮುಂಬೈನಲ್ಲಿ ನೀಡಿದ ಉಪನ್ಯಾಸದಲ್ಲಿ, ಅನೇಕರಿಗೆ ಬದುಕುವ ದಾರಿ ಕಲ್ಪಿಸುವ ಕೃಷಿ ಮತ್ತು ಕೃಷಿಯೇತರ ವಲಯಗಳನ್ನು ಆದ್ಯತಾ ರಂಗವನ್ನಾಗಿ ಪರಿಗಣಿಸಿ ಸಾಂಸ್ಥಿಕ ಸಾಲ ನೀತಿಯನ್ನು ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಪ್ರಮಾದ ಎಸಗಲಿಕ್ಕಾಗಿಯೇ ಪ್ರಯೋಗ ಮಾಡುವ ವಿಧಾನ ಮಾತ್ರ ಮತ್ತೆ ಜಾರಿಯಾಗದಿರಲಿ ಎನ್ನುವುದು ಸದ್ಯದ ಒತ್ತಾಸೆ.

ಲೇಖಕ: ಅರ್ಥಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.