ADVERTISEMENT

ಸೂರ್ಯ ನಮಸ್ಕಾರ: ರಾಜ್ಯಗಳಿಗೆ ರವಾನೆಯಾದ ಕಠಿಣ ಸಂದೇಶ

ಉನ್ನತ ನ್ಯಾಯಾಂಗದ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳದವರು ಪೆಟ್ಟು ತಿನ್ನಬೇಕಾಗುತ್ತದೆ

ಎ.ಸೂರ್ಯ ಪ್ರಕಾಶ್
Published 25 ಜುಲೈ 2021, 21:42 IST
Last Updated 25 ಜುಲೈ 2021, 21:42 IST
ರಾಜ್ಯಗಳಿಗೆ ರವಾನೆಯಾದ ಕಠಿಣ ಸಂದೇಶ
ರಾಜ್ಯಗಳಿಗೆ ರವಾನೆಯಾದ ಕಠಿಣ ಸಂದೇಶ   

ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ವಿಚಾರದಲ್ಲಿ ತನ್ನ ದೃಢ ನಿಲುವನ್ನು ಸುಪ್ರೀಂ ಕೋರ್ಟ್‌ ಮತ್ತೆ ಮತ್ತೆ ಸ್ಪಷ್ಟಪಡಿಸುತ್ತಿದೆ. ಭಯೋತ್ಪಾದನೆ ವಿರೋಧಿ ಕಾನೂನುಗಳ ಬಳಕೆ ಹಾಗೂ ಜನರ ಜೀವವನ್ನು ಅಪಾಯಕ್ಕೆ ಒಡ್ಡುವ ನಿರ್ಣಯಗಳ ವಿಚಾರದಲ್ಲಿ ಎಲ್ಲ ರಾಜ್ಯಗಳೂ ಪೊಲೀಸ್ ಇಲಾಖೆಗಳೂ ಎಚ್ಚರಿಕೆಯಿಂದ ಹೆಜ್ಜೆ ಇರಿಸುವಂತೆ ಆಗಿದೆ.

ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಕೆಲವು ಆದೇಶಗಳು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್.ವಿ. ರಮಣ ಸೇರಿದಂತೆ ಕೆಲವು ನ್ಯಾಯಮೂರ್ತಿಗಳು ಆಡಿರುವ ಮಾತುಗಳನ್ನು ಗಮನಿಸಿ ಹೇಳುವುದಾದರೆ, ರಾಷ್ಟ್ರೀಯ ಭದ್ರತಾ ಕಾಯ್ದೆ ಹಾಗೂ ಅದರಂತಹ ಇತರ ಕೆಲವು ಕಾನೂನುಗಳನ್ನು ರಾಜ್ಯ ಸರ್ಕಾರಗಳು ತಮ್ಮ ರಾಜಕೀಯ ವಿರೋಧಿಗಳಲ್ಲಿ ಭೀತಿ ಸೃಷ್ಟಿಸಲು ಬಳಸಿಕೊಳ್ಳಲು ಇನ್ನು ಸಾಧ್ಯವಿಲ್ಲ. ಹಾಗೆಯೇ, ಕೋವಿಡ್ ಸಾಂಕ್ರಾಮಿಕ ತಂದಿತ್ತಿರುವ ವಿಪತ್ತನ್ನು ಗಮನಿಸಿ, ಕೆಲವು ವರ್ಗದವರ ಧಾರ್ಮಿಕ ಭಾವನೆಗಳನ್ನು ಅಥವಾ ಇತರ ನಂಬಿಕೆಗಳನ್ನು ತುಷ್ಟೀ ಕರಿಸಲು ರಾಜ್ಯಗಳು ತೆಗೆದುಕೊಳ್ಳುವ ತೀರ್ಮಾನವನ್ನು ಬೆಂಬಲಿಸಲು ಆಗುವುದಿಲ್ಲ ಎಂದೂ ಕೋರ್ಟ್‌ ಸ್ಪಷ್ಟ
ಪಡಿಸಿದೆ. ಸರ್ಕಾರಗಳು ತಮ್ಮ ಧೋರಣೆ ಬದಲಿಸಿಕೊಳ್ಳದಿದ್ದರೆ ತಾವು ಮೂಕ ಪ್ರೇಕ್ಷಕರಾಗಿ ಕುಳಿತುಕೊಳ್ಳುವುದಿಲ್ಲ ಎಂದು ಹಲವು ಹೈಕೋರ್ಟ್‌ಗಳು ಹೇಳಿವೆ.

ಮಣಿಪುರದ ಸಾಮಾಜಿಕ ಕಾರ್ಯಕರ್ತನೊಬ್ಬನ ಬಂಧನದ ವಿಚಾರವಾಗಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿನ ಕನ್ವರ್ ಯಾತ್ರೆ ವಿಚಾರವಾಗಿ, ಬಕ್ರೀದ್ ಸಂದರ್ಭದಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಮಾ
ವಳಿಗಳಲ್ಲಿ ತಂದ ಕೆಲವು ಸಡಿಲಿಕೆಗಳ ವಿಚಾರವಾಗಿ ನೀಡ ಲಾಗಿರುವ ಆದೇಶಗಳು, ನಿರ್ದೇಶನಗಳು ಕೋರ್ಟ್‌ನ ಮನಸ್ಸಿನಲ್ಲಿ ಏನಿದೆ ಎಂಬುದನ್ನು ತೋರಿಸುತ್ತವೆ.

ADVERTISEMENT

ಸಗಣಿ ಹಾಗೂ ಗೋಮೂತ್ರದ ಕುರಿತು ಫೇಸ್‌ ಬುಕ್‌ನಲ್ಲಿ ಬರಹವೊಂದನ್ನು ಪ್ರಕಟಿಸಿದ್ದ ಪ್ರಕರಣದಲ್ಲಿ, ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಮಣಿಪುರ ಸರ್ಕಾರ ಬಂಧಿಸಿದ್ದ ಕಾರ್ಯಕರ್ತ ಎರೆಂಡ್ರೊ ಲೀಚೊಂಬಮ್ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರ್ಟ್‌ ಹಿಂದಿನ ವಾರ ಆದೇಶಿಸಿತು. ಬಿಜೆಪಿಯ ಮಣಿಪುರ ರಾಜ್ಯ ಘಟಕದ ಅಧ್ಯಕ್ಷ ಕೋವಿಡ್‌ನಿಂದಾಗಿ ಮೃತಪಟ್ಟ ನಂತರ ಅವರು ಈ ಬರಹ ಪ್ರಕಟಿಸಿದ್ದರು. ‘ಕೊರೊನಾಕ್ಕೆ ಔಷಧಿ ಸಗಣಿ ಅಥವಾ ಗೋಮೂತ್ರ ಅಲ್ಲ; ವಿಜ್ಞಾನ ಮತ್ತು ಸಾಮಾನ್ಯಜ್ಞಾನ ಇದಕ್ಕೆ ಔಷಧಿ’ ಎಂದು ಅವರು ಬರೆದಿದ್ದರು.

ಈ ಬರಹ ಪ್ರಕಟಿಸಿದ ನಂತರ ಮಣಿಪುರ ಪೊಲೀಸರು ಅವರನ್ನು ಬಂಧಿಸಿದರು. ಎರಡು ತಿಂಗಳಿಗೂ ಹೆಚ್ಚು ಅವಧಿಗೆ ಜೈಲಿನಲ್ಲಿ ಇರಿಸಿದರು. ಈ ವಿಚಾರವು ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ದಿನಗಳ ಹಿಂದೆ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರು ಇದ್ದ ನ್ಯಾಯಪೀಠವು, ಲೀಚೊಂಬಮ್ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಆದೇಶಿಸಿತು, ‘ಇವರನ್ನುಒಂದು ದಿನವೂ ವಶದಲ್ಲಿ ಇರಿಸಿಕೊಳ್ಳಬಾರದು’ ಎಂದು ಹೇಳಿತು ಎನ್ನುತ್ತವೆ ಮಾಧ್ಯಮ ವರದಿಗಳು. ತನ್ನ ಆದೇಶವನ್ನು ಪಾಲಿಸುವಂತೆ, ಅರ್ಜಿಯ ವಿಚಾರಣೆ ನಡೆಸಿದ ದಿನವೇ ಸಂಜೆ 5 ಗಂಟೆಯೊಳಗೆ ಲೀಚೊಂಬಮ್ ಅವರನ್ನು ಬಿಡುಗಡೆ ಮಾಡುವಂತೆ ನ್ಯಾಯಪೀಠವು ಮಣಿಪುರ ಸರ್ಕಾರಕ್ಕೆ ಸೂಚಿಸಿತು. ಲೀಚೊಂಬಮ್ ಅವರ ಬರಹವು ಒಳ್ಳೆಯ ಅಭಿರುಚಿಯಿಂದ ಕೂಡಿರ ಲಿಲ್ಲ. ಆದರೆ, ಅದು ರಾಷ್ಟ್ರೀಯ ಭದ್ರತಾ ಕಾಯ್ದೆಯ ಉಲ್ಲಂಘನೆ ಆಗುತ್ತಿತ್ತೇ?

ನಂತರ ಬಂದಿದ್ದು ಕನ್ವರ್ ಯಾತ್ರೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ. ಇದನ್ನು ಸುಪ್ರೀಂ ಕೋರ್ಟ್‌ಸ್ವಯಂಪ್ರೇರಿತವಾಗಿ ವಿಚಾರಣೆಗೆ ಎತ್ತಿಕೊಂಡಿತ್ತು. ಈ ಯಾತ್ರೆಯಲ್ಲಿ ಲಕ್ಷಾಂತರ ಜನ ಹರಿದ್ವಾರದಿಂದ ಗಂಗಾಜಲ ತೆಗೆದುಕೊಂಡು, ಮಡಕೆಗಳಲ್ಲಿ ಅದನ್ನು ತುಂಬಿಸಿ ಕೊಂಡು, ನೂರಾರು ಕಿ.ಮೀ. ದೂರದ ತಮ್ಮ ಹಳ್ಳಿಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಾರೆ. ಉತ್ತರ ಭಾರತದ ಹಲವು ಕಡೆಗಳಿಂದ ಜನ ಈ ಯಾತ್ರೆಗೆ ಬರುತ್ತಾರೆ. ಯಾತ್ರಿಕರು ತಮ್ಮ ಹಳ್ಳಿಗಳಲ್ಲಿ ಇರುವ ಶಿವನಿಗೆ ಈ ಜಲವನ್ನು ಅಭಿಷೇಕ ಮಾಡುವುದರ ಮೂಲಕ ಯಾತ್ರೆಯು ಕೊನೆಗೊಳ್ಳುತ್ತದೆ. ಕೋವಿಡ್‌ ಕಾರಣದಿಂದಾಗಿ ಹಿಂದಿನ ವರ್ಷ ಈ ಯಾತ್ರೆಯನ್ನು ನಿಷೇಧಿಸಲಾಗಿತ್ತು. ಆದರೆ, ಈ ವರ್ಷ ಉತ್ತರಾಖಂಡ (ಅಲ್ಲಿಂದ ಗಂಗಾಜಲವನ್ನು ಒಯ್ಯಲಾಗುತ್ತದೆ) ಮತ್ತು ಉತ್ತರಪ್ರದೇಶ (ಯಾತ್ರಿಗಳು ಈ ರಾಜ್ಯದ ಮೂಲಕ ಸಾಗುತ್ತಾರೆ) ರಾಜ್ಯಗಳು ಯಾತ್ರೆ ನಡೆಸುವ ಮನಸ್ಸು ಹೊಂದಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ರಾಜಿ ಸಾಧ್ಯವಿಲ್ಲ ಎಂದು ಘೋಷಿಸಿದ ನಂತರ ಉತ್ತರಾಖಂಡ ಸಚಿವ ಸಂಪುಟವು ಈ ಯಾತ್ರೆಯನ್ನು ರದ್ದುಪಡಿಸಲು ತೀರ್ಮಾನಿಸಿತು. ಆದರೆ, ಸುಪ್ರೀಂ ಕೋರ್ಟ್ ಮಧ್ಯ‍ಪ್ರವೇಶ ಮಾಡುವವರೆಗೂ ಉತ್ತರಪ್ರದೇಶ ರಾಜ್ಯ ಖಚಿತ ನಿಲುವಿಗೆ ಬಂದಿರಲಿಲ್ಲ. ನ್ಯಾಯಮೂರ್ತಿಗಳಾದ ಆರ್.ಎಫ್. ನರಿಮನ್ ಮತ್ತು ಬಿ.ಆರ್. ಗವಾಯಿ ಅವರನ್ನು ಒಳಗೊಂಡ ನ್ಯಾಯಪೀಠವು ಯಾತ್ರೆ ನಡೆಸುವ ತೀರ್ಮಾನವನ್ನು ಮರುಪರಿಶೀಲಿಸುವಂತೆ ಉತ್ತರಪ್ರದೇಶಕ್ಕೆ ಸೂಚಿಸಿತು.

ಹೀಗೆ ಸೂಚನೆ ನೀಡುವ ಸಂದರ್ಭದಲ್ಲಿ ನ್ಯಾಯಪೀಠವು, ದೇಶದ ನಾಗರಿಕರ ಆರೋಗ್ಯ ಮತ್ತು ಅವರ ಬದುಕುವ ಹಕ್ಕು ಇತರೆಲ್ಲವುಗಳಿಗಿಂತ ಹೆಚ್ಚು ಮಹತ್ವದವು ಎಂದು ಹೇಳಿತು. ಬದುಕುವ ಹಕ್ಕು ಅತ್ಯಂತ ಮೂಲಭೂತವಾದುದು, ಎಲ್ಲ ಬಗೆಯ ಭಾವನೆಗಳು ಈ ಹಕ್ಕಿಗೆ ಅಧೀನವಾಗಿರಬೇಕು ಎಂದು ಪೀಠ ಹೇಳಿತು. ಸಂವಿಧಾನದ 21ನೆಯ ವಿಧಿಯು ಎಲ್ಲರಿಗೂ ರಕ್ಷಣೆ ನೀಡುತ್ತದೆ ಎಂದಿತು. ರಾಜ್ಯ ಸರ್ಕಾರಕ್ಕೆ ತನ್ನ ತೀರ್ಮಾನ ಮರುಪರಿಶೀಲಿಸಲು ಸಮಯ ನೀಡಿತು. ಸೂಚನೆ ಪಾಲಿಸಿದ ಸರ್ಕಾರವು, ಯಾತ್ರೆಯನ್ನು ರದ್ದುಪಡಿಸುವ ತೀರ್ಮಾನ ಪ್ರಕಟಿಸಿತು. ಈ ನಡುವೆ ಕೋರ್ಟ್‌ ಮುಂದೆ ಇನ್ನೊಂದು ವಿಚಾರ ಬಂದಿತ್ತು. ಬಕ್ರೀದ್‌ಗೆ ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲು ಕೇರಳ ಸರ್ಕಾರವು ಕೋವಿಡ್‌ ಮಾರ್ಗಸೂಚಿಗಳನ್ನು ಸಡಿಲಿಸಿತ್ತು.

ಒತ್ತಡಕ್ಕೆ ಬಾಗಿ, ನಿರ್ಬಂಧಗಳನ್ನು ಸಡಿಲಗೊಳಿಸಿದ ಕೇರಳ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್‌, ಕನ್ವರ್ ಯಾತ್ರೆ ಪ್ರಕರಣದಲ್ಲಿ ತಾನು ನೀಡಿದ ಆದೇಶವನ್ನು ಈ ಪ್ರಕರಣದಲ್ಲಿಯೂ ಪಾಲಿಸುವಂತೆ ಹೇಳಿತು. ಮಾರ್ಗಸೂಚಿಗಳಲ್ಲಿನ ಸಡಿಲಿಕೆಯಿಂದಾಗಿ ಕೋವಿಡ್‌ ಹರಡಿದರೆ ಸಡಿಲಿಕೆಯ ತೀರ್ಮಾನ ಕೈಗೊಂಡ ವರ ವಿರುದ್ಧ ತಾನು ಕ್ರಮ ಜರುಗಿಸುವುದಾಗಿ ಕೋರ್ಟ್‌ ಎಚ್ಚರಿಕೆ ನೀಡಿತು.

ಅಮೆರಿಕದ ವಕೀಲರ ಸಂಘವು ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನ್ಯಾಯ ಮೂರ್ತಿ ಚಂದ್ರಚೂಡ್ ಅವರು, ಭಯೋತ್ಪಾದನೆ ವಿರೋಧಿ ಕಾನೂನುಗಳು ಸೇರಿದಂತೆ ಕ್ರಿಮಿನಲ್ ಅಪರಾಧಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ಅಭಿಪ್ರಾಯಭೇದ ಹತ್ತಿಕ್ಕಲು ಅಥವಾ ಪ್ರಜೆಗಳಿಗೆ ಕಿರುಕುಳ ನೀಡಲು ಬಳಸಬಾರದು ಎಂದು ಹೇಳಿದರು. ಕಾರ್ಯಾಂಗ ಅಥವಾ ಶಾಸಕಾಂಗ ಮೂಲಭೂತ ಮಾನವ ಹಕ್ಕುಗಳನ್ನು ಉಲ್ಲಂಘಿಸಿದಾಗ ಸಂವಿಧಾನದ ರಕ್ಷಕನಾಗಿ ಸುಪ್ರೀಂ ಕೋರ್ಟ್, ಅಂತಹ ಕೆಲಸಕ್ಕೆ ತಡೆ ಒಡ್ಡಬೇಕಾಗುತ್ತದೆ ಎಂದು ಅವರು ಹೇಳಿದರು.

ಪಿ.ಡಿ. ದೇಸಾಯಿ ಸಂಸ್ಮರಣಾ ಭಾಷಣದಲ್ಲಿ ನ್ಯಾಯಮೂರ್ತಿ ರಮಣ ಅವರು ಕೆಲವು ಗಮನಾರ್ಹ ಮಾತುಗಳನ್ನು ಹೇಳಿದರು. ‘ನ್ಯಾಯ ಮತ್ತು ಸಮಾನತೆಯ ಆದರ್ಶಗಳನ್ನು ಮೈಗೂಡಿಸಿಕೊಳ್ಳದೆ ಇದ್ದರೆ ಕಾನೂನನ್ನು ‘ಕಾನೂನು’ ಎಂದು ಕರೆಯಲು ಆಗುವುದಿಲ್ಲ ಎಂದು ಖ್ಯಾತ ವಿದ್ವಾಂಸರು ವಾದಿಸಿದ್ದಾರೆ. ನ್ಯಾಯಸಮ್ಮತವಲ್ಲದ ಕಾನೂನಿಗೆ ನ್ಯಾಯಸಮ್ಮತವಾಗಿರುವ ಕಾನೂನಿ ನಲ್ಲಿ ಇರುವಂತಹ ನೈತಿಕ ಅರ್ಹತೆ ಇಲ್ಲದಿರಬಹುದು. ಸಾರ್ವಭೌಮ ವ್ಯವಸ್ಥೆಯ ಬೆಂಬಲ ಇರುವ ಯಾವುದೇ ಕಾನೂನಿಗೆ ಕೆಲವು ಆದರ್ಶಗಳು ಅಥವಾ ನ್ಯಾಯದ ಸ್ಪರ್ಶ ಬೇಕು. ಇಂತಹ ಕಾನೂನುಗಳು ಇರುವ ದೇಶದಲ್ಲಿ ಮಾತ್ರ ‘ಕಾನೂನಿನ ಆಡಳಿತ’ ಇದೆ ಎಂದು ಹೇಳಬಹುದು’ ಎಂದು ನ್ಯಾಯಮೂರ್ತಿ ರಮಣ ಹೇಳಿದರು.

ಮೇಲೆ ಉಲ್ಲೇಖಿಸಿರುವ ಆದೇಶಗಳು, ಮಾತುಗಳನ್ನು ಗಮನಿಸಿದರೆ, ಸುಪ್ರೀಂ ಕೋರ್ಟ್‌ನಿಂದ ಬರುತ್ತಿರುವ ಸಂದೇಶ ಬಹಳ ಸ್ಪಷ್ಟವಾಗಿದೆ ಎಂಬುದು ಗೊತ್ತಾಗುತ್ತದೆ. ಉನ್ನತ ನ್ಯಾಯಾಂಗದಲ್ಲಿನ ಮನಃಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗುವವರು ಇಂದಲ್ಲ ನಾಳೆ ಪೆಟ್ಟು ತಿನ್ನಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.