ADVERTISEMENT

ದಿನದ ಸೂಕ್ತಿ: ಸಜ್ಜನ ದುರ್ಜನ

ಎಸ್.ಸೂರ್ಯಪ್ರಕಾಶ ಪಂಡಿತ್
Published 30 ಮೇ 2021, 2:23 IST
Last Updated 30 ಮೇ 2021, 2:23 IST
ಬಂಗಾರ
ಬಂಗಾರ   

ಅತಿಕುಪಿತಾ ಅಪಿ ಸುಜನಾ
ಯೋಗೇನ ಮೃದೂ ಭವನ್ತಿ ನ ತು ನೀಚಾಃ |
ಹೇಮ್ನಃ ಕಠಿನಸ್ಯಾಪಿ
ದ್ರವಣೋಪಾಯೋsಸ್ತಿ ನ ತೃಣಾನಾಮ್ ||

ಇದರ ತಾತ್ಪರ್ಯ ಹೀಗೆ:

‘ಸಜ್ಜನರು ಕೋಪಗೊಂಡಾಗಲೂ ಅವಶ್ಯವಿದ್ದಲ್ಲಿ ಮೃದುವಾಗುತ್ತಾರೆ; ಆದರೆ ನೀಚರು ಮಾತ್ರ ಹೀಗಲ್ಲ. ಬಂಗಾರ ಗಟ್ಟಿಯಾಗಿದ್ದರೂ ಅದು ಕರಗಬಲ್ಲದು; ಆದರೆ ಹುಲ್ಲು ಹೀಗಲ್ಲ.’

ADVERTISEMENT

ಜೀವನದಲ್ಲಿ ನಮಗೆ ಎಲ್ಲ ರೀತಿಯ ಪ್ರತಿಕ್ರಿಯೆಗಳೂ ಬೇಕಾಗುತ್ತವೆ. ನಗು, ಅಳು, ಆತಂಕ, ಹಿಂಜರಿಕೆ, ಧೈರ್ಯ, ಭಯ – ಹೀಗೆ ಎಲ್ಲವೂ ಬೇಕಾಗುತ್ತವೆ. ಆಯಾ ಸಂದರ್ಭಕ್ಕೆ ತಕ್ಕ ಪ್ರತಿಕ್ರಿಯೆ ಬೇಕೇ ಬೇಕು; ಆಯಾ ಸಂದರ್ಭಕ್ಕೆ ತಕ್ಕ ರೀತಿಯಲ್ಲಿ ಇವು ಪ್ರಕಟವಾದಾಗ ಇವುಗಳಲ್ಲಿ ಯಾವುದೂ ನಕಾರಾತ್ಮಕ ಪ್ರತಿಕ್ರಿಯೆ ಎಂದೋ ನಮಗೆ ಬೇಡವಾದ ಪ್ರತಿಕ್ರಿಯೆ ಎಂದೋ ಆಗುವುದಿಲ್ಲ. ಸಾಮಾನ್ಯವಾಗಿ ನಾವು ಕೋಪವನ್ನು ಕೆಟ್ಟದ್ದು ಎಂದೇ ಪರಿಗಣಿಸುತ್ತೇವೆ. ಆದರೆ ಕೋಪ ಕೂಡ ನಮಗೆ ಬೇಕಾಗುತ್ತದೆ; ಆದರೆ ಅದು ಯಾವ ಸಂದರ್ಭದಲ್ಲಿ ಬರಬೇಕೋ ಎಷ್ಟು ಪ್ರಮಾಣದಲ್ಲಿ ಬರಬೇಕೋ ಅಷ್ಟೇ ಬರಬೇಕು, ಅಷ್ಟೆ!

ಸಜ್ಜನರಿಗೆ ಕೋಪವೇ ಬರುವುದಿಲ್ಲ ಎಂದೇನೂ ಇಲ್ಲ. ಅವರಿಗೂ ಕೋಪ ಬರುತ್ತದೆ; ಬರಬೇಕು ಕೂಡ. ವಾಲ್ಮೀಕಿಮಹರ್ಷಿಗಳು ಧರ್ಮವಂತನ ಲಕ್ಷಣವನ್ನು ವರ್ಣಿಸಬೇಕಾದರೆ ‘ಅವನು ಕೋಪವನ್ನು ಗೆದ್ದಿರಬೇಕು, ಆದರೆ ಕೋಪ ಬಂದರೆ ದೇವತೆಗಳೂ ಹೆದರಬೇಕು‘ ಎಂದಿದ್ದಾರೆ.

ಸುಭಾಷಿತ ಹೇಳುತ್ತಿದೆ, ಸಜ್ಜನನಿಗೆ ಕೋಪದ ಬೆಲೆ ಗೊತ್ತಿರುತ್ತದೆ. ಹೀಗಾಗಿ ಅವನಿಗೆ ಅಗತ್ಯ ಎನಿಸಿದಾಗ ಕೋಪಿಸಿಕೊಳ್ಳುವುದೂ ಗೊತ್ತಿರುತ್ತದೆ; ಕೋಪದ ಆವಶ್ಯಕತೆ ಇನ್ನು ಇಲ್ಲ ಎಂದಾದರೆ ಅದನ್ನು ವಿಸರ್ಜಿಸಲೂ ಅವನಿಗೆ ಗೊತ್ತಿರುತ್ತದೆ. ಇಲ್ಲಿ ಸುಭಾಷಿತ ಸುಂದರವಾದ ಹೋಲಿಕೆಯ ಮೂಲಕ ಈ ವಿಷಯವನ್ನು ನಿರೂಪಿಸಿದೆ. ಬಂಗಾರ ತುಂಬ ಕಠಿನವಾದ ಲೋಹ, ನಿಜ. ಆದರೆ ಅದು ಕರಗಬಲ್ಲದು; ಬೆಂಕಿಯಲ್ಲಿ ಅದು ಕರಗುತ್ತದೆ. ಹೀಗೆಯೇ ಸಜ್ಜನ. ಆದರೆ ದುರ್ಜನ ಹೀಗೆ ಕರಗುವುದಿಲ್ಲ; ಅವನು ಎಂದಿಗೂ ಒಂದೇ ಭಾವದಲ್ಲಿರುತ್ತಾನೆ. ಅವನಿಗೆ ಕೋಪಿಸಿಕೊಳ್ಳುವುದು ಮಾತ್ರವೇ ಗೊತ್ತಿರುತ್ತದೆ. ಕೋಪ ಎಂದರೆ ಬೆಂಕಿ ತಾನೆ? ಚಿನ್ನವನ್ನು ಬೆಂಕಿಯಲ್ಲಿ ಹಾಕಿದರೆ ಅದು ಕರಗುತ್ತದೆ. ಅದೇ ಬೆಂಕಿಯಲ್ಲಿ ಹುಲ್ಲನ್ನು ಹಾಕಿದರೆ ಏನಾಗುತ್ತದೆ?

ಇದೇ ಸಜ್ಜನನಿಗೂ ದುರ್ಜನನಿಗೂ ಇರುವ ವ್ಯತ್ಯಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.