ADVERTISEMENT

ದಿನದ ಸೂಕ್ತಿ: ಭಿಕ್ಷಾವೃತ್ತಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 18 ಜುಲೈ 2021, 5:15 IST
Last Updated 18 ಜುಲೈ 2021, 5:15 IST
ಭಿಕ್ಷು
ಭಿಕ್ಷು   

ತೀಕ್ಷ್ಣಧಾರೇಣ ಖಡ್ಗೇನ ವರಂ ಜಿಹ್ವಾ ದ್ವಿಧಾ ಕೃತಾ ।

ನ ತು ಮಾನಂ ಪರಿತ್ಯಜ್ಯ ದೇಹಿ ದೇಹೀತಿ ಭಾಷಣಮ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಮಾನ–ಮರ್ಯಾದೆಗಳನ್ನು ಬಿಟ್ಟು ’ದೇಹಿ ದೇಹಿ’ ಎಂದು ಬೇಡಿಕೊಳ್ಳುವುದಕ್ಕಿಂತಲೂ ಹರಿತವಾದ ಕತ್ತಿಯಿಂದ ತನ್ನ ನಾಲಗೆಯನ್ನು ಸೀಳಿಕೊಳ್ಳುವುದೇ ಒಳ್ಳೆಯದು.’

ಇನ್ನೊಬ್ಬರ ಮುಂದೆ ಕೈ ಚಾಚಿ ಬೇಡುವುದು ನಮಗೆ ಒದಗಬಹುದಾದ ಅತ್ಯಂತ ಕೆಟ್ಟ ಸ್ಥಿತಿ. ಅದನ್ನು ಕುರಿತು ಸುಭಾಷಿತ ಮಾತನಾಡುತ್ತಿದೆ.

ನಾವು ಇನ್ನೊಬ್ಬರಲ್ಲಿ ಸಹಾಯಕ್ಕಾಗಿ ಬೇಡುವಂಥ ಪರಿಸ್ಥಿತಿ ಹಲವು ಕಾರಣಗಳಿಂದ ಬರಬಹುದು. ನಮಗೆ ದುಡಿಯುವ ಶಕ್ತಿ ಇಲ್ಲದಿದ್ದಾಗ ಇನ್ನೊಬ್ಬರಲ್ಲಿ ಬೇಡುವುದು ಅನಿವಾರ್ಯವಾಗಬಹುದು. ನಮಗೆ ಶಕ್ತಿಯಿದ್ದರೂ ನಮ್ಮ ಸೋಮಾರಿತನವೇ ಇನ್ನೊಬ್ಬರ ಮುಂದೆ ಕೈ ಒಡ್ಡುವಂಥ ಸ್ಥಿತಿಯನ್ನು ಒಡ್ಡಬಹುದು. ಕಾರಣ ಏನೇ ಇರಲಿ, ಆದರೆ ಇನ್ನೊಬ್ಬರಲ್ಲಿ ಬೇಡುವಂಥ ಸಂದರ್ಭ ಎದುರಾಗುವುದು ಸಂತೋಷದ ಸಂಗತಿ ಏನಲ್ಲ. ಅದಕ್ಕೇ ಸುಭಾಷಿತ ಹೇಳುತ್ತಿದೆ, ದೇಹಿ ದೇಹಿ – ಕೊಡು ಕೊಡು – ಎಂದು ಬೇಡುವುದು ಅಪಮಾನದ ಕೆಲಸ. ನಮ್ಮ ಅಭಿಮಾನವನ್ನು ಗಾಳಿಗೆ ತೂರಿ ನಾವು ಬೇಡಬೇಕಾಗುತ್ತದೆ. ಇಂಥ ಹೀನಾಯ ಪರಿಸ್ಥಿತಿಯನ್ನು ತಂದುಕೊಳ್ಳುವುದಕ್ಕಿಂತಲೂ ನಾಲಗೆಯನ್ನು ಖಡ್ಗದಿಂದ ಸೀಳಿಕೊಳ್ಳುವುದೇ ಒಳ್ಳೆಯದು.

ಆದರೆ ಬೇಡುವುದು ಎಲ್ಲರ ವಿಷಯದಲ್ಲೂ ಅಪಮಾನಕರ ಆಗಲಾರದು. ನಮ್ಮ ಸಂಸ್ಕೃತಿಯಲ್ಲಿ ಸನ್ಯಾಸಿಗಳಂಥ ಕೆಲವರು ಹೀಗೆ ಬೇಡಿಕೊಂಡೇ ಹೊಟ್ಟೆಯನ್ನು ತುಂಬಿಸಿಕೊಳ್ಳಬೇಕೆಂಬ ವಿಧಿ ಇದೆ. ಅವರು ಭಿಕ್ಷಾಟನೆಯನ್ನು ಮಾಡಿಯೇ ಜೀವಿಸಬೇಕು. ಆದರೆ ಇಂದು ನಮ್ಮ ಬಹುಪಾಲು ಸನ್ಯಾಸಿಗಳ ಜೀವನವಿಧಾನ ಇದಕ್ಕಿಂತ ವಿಪರೀತವಾಗಿಯೇ ಇದೆಯೆನ್ನಿ!

ನಮಗೆ ದುಡಿಯುವ ಶಕ್ತಿಯೇ ಇಲ್ಲದಿದ್ದಾಗ ಇನ್ನೊಬ್ಬರನ್ನು ಆಶ್ರಯಿಸುವುದು ಅನಿವಾರ್ಯವಾಗುತ್ತದೆ. ಆದರೆ ನಮ್ಮ ಜಡತೆಯಿಂದಲೋ ಮೈಗಳ್ಳತನದಿಂಲೋ ಕಷ್ಟಗಳನ್ನು ನಾವೇ ತಂದುಕೊಂಡು, ಆಗ ಇನ್ನೊಬ್ಬರನ್ನು ದೇಹಿ ದೇಹಿ ಎಂದು ಅಂಗಲಾಚುವುದು ಮೋಸವೂ ಆಗುತ್ತದೆ, ಪಾಪವೇ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.