ADVERTISEMENT

ಆತ್ಮಶುದ್ಧಿಯ ಪ್ರತೀಕ ‘ಈದ್ ಉಲ್‌ ಫಿತ್ರ್’

ಮಹಮ್ಮದ್ ನೂಮಾನ್
Published 12 ಮೇ 2021, 19:53 IST
Last Updated 12 ಮೇ 2021, 19:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ರಂಜಾನ್‌ ತಿಂಗಳು ಕೊನೆಗೊಂಡಿದ್ದು, ಜಗತ್ತಿನಾದ್ಯಂತ ಮುಸ್ಲಿಮರು ‘ಈದ್‌ ಉಲ್‌ ಫಿತ್ರ್’ ಆಚರಿಸಲಿದ್ದಾರೆ. 30 ದಿನಗಳ ಉಪವಾಸದ ಬಳಿಕ ಬರುವ ಈ ಹಬ್ಬ ಆತ್ಮಶುದ್ಧಿಯ ಪ್ರತೀಕವಾಗಿದ್ದು, ಸಮಾನತೆಯ ಸಂದೇಶವನ್ನು ಸಾರುತ್ತದೆ.

ಮುಸ್ಲಿಮರ ಪ್ರಮುಖ ಹಬ್ಬಗಳಲ್ಲಿ ಒಂದೆನಿಸಿರುವ ‘ಈದ್‌ ಉಲ್‌ ಫಿತ್ರ್’ ಮತ್ತೆ ಬಂದಿದೆ. ರಂಜಾನ್‌ ತಿಂಗಳ ಉಪವಾಸದ ಕೊನೆಯಲ್ಲಿ ಈ ಹಬ್ಬ ಆಚರಿಸಲಾಗುತ್ತದೆ. ರಂಜಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಚಂದ್ರದರ್ಶನದೊಂದಿಗೆ ಕೊನೆಗೊಳ್ಳುತ್ತದೆ. ಶವ್ವಾಲ್‌ ತಿಂಗಳ ಮೊದಲ ದಿನ ‘ಈದುಲ್ ಫಿತ್ರ್‌’ ಹಬ್ಬದ ಸಂಭ್ರಮ.

ರಂಜಾನ್‌ ತಿಂಗಳನ್ನು ಉಪವಾಸ, ಪ್ರಾರ್ಥನೆ, ಅಧ್ಯಾತ್ಮದಲ್ಲೇ ಕಳೆದು ಕೊನೆಯಲ್ಲಿ ಹಬ್ಬದ ಸಂತಸದಲ್ಲಿ ಪಾಲ್ಗೊಳ್ಳುವರು. ಕೋವಿಡ್ ಎರಡನೇ ಅಲೆ ಇಡೀ ದೇಶಕ್ಕೆ ಆತಂಕ ಒಡ್ಡಿರುವ ಸಮಯದಲ್ಲೇ ‘ಈದ್‌ ಉಲ್‌ ಫಿತ್ರ್’ ಬಂದಿದ್ದು, ಕಳೆದ ವರ್ಷದಂತೆ ಈ ಬಾರಿಯೂ ಆಚರಣೆ ಸರಳವಾಗಿ ನಡೆಯಲಿದೆ.

ADVERTISEMENT

ಈದ್‌ ಉಲ್‌ ಫಿತ್ರ್ ಸಮಾನತೆಯನ್ನು ಸಾರುತ್ತದೆ. ಮನುಷ್ಯನು ಕೇವಲ ತನ್ನ ವೈಯಕ್ತಿಕ ಏಳಿಗೆಯಲ್ಲಿ ಸಂತಸಪಡದೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಿತವನ್ನೂ ಬಯಸಬೇಕು ಎಂಬ ಸಂದೇಶವನ್ನು ನೀಡುತ್ತದೆ.

‘ಈದ್ ಉಲ್‌ ಫಿತ್ರ್’ ಪರಸ್ಪರರ ನಡುವಿನ ಸಂಬಂಧ, ಬಾಂಧವ್ಯವನ್ನು ಬಲಪಡಿಸುವ ದಿನವಾಗಿದೆ. ಆದ್ದರಿಂದ ಪ್ರಾರ್ಥನೆಯ ಬಳಿಕ ಸಂಬಂಧಿಕರ, ಗೆಳೆಯರ ಮನೆಗೆ ಭೇಟಿ ನೀಡುವರು. ಯೋಗಕ್ಷೇಮ ವಿಚಾರಿಸುವರು. ಹಬ್ಬದ ದಿನ ಮನೆಗಳಲ್ಲಿ ವಿಶೇಷ ಖಾದ್ಯ ಸಿದ್ಧಪಡಿಸುವರು.

ಫಿತ್ರ್‌ ಝಕಾತ್‌ (ಕಡ್ಡಾಯ ದಾನ): ಹಬ್ಬದ ದಿನ ಆಹಾರ ಧಾನ್ಯವನ್ನು ಬಡವರಿಗೆ ದಾನವಾಗಿ ಕೊಡಬೇಕು ಎಂದು ಇಸ್ಲಾಂ ಆದೇಶಿಸಿದೆ. ಈದ್‌ ನಮಾಜ್‌ಗಾಗಿ ಮಸೀದಿಗೆ ಹೋಗುವ ಮುನ್ನ ಕಡ್ಡಾಯ ದಾನ ಮಾಡಲೇಬೇಕು. ಅದನ್ನು ‘ಫಿತ್ರ್‌ ಝಕಾತ್‌’ ಎನ್ನುವರು.

ಫಿತ್ರ್‌ ಝಕಾತ್‌ನ ಪ್ರಮಾಣ ಸುಮಾರು ಎರಡೂವರೆ ಕೆ.ಜಿ. ಆಗಿದೆ. ಆಯಾ ಪ್ರದೇಶದ ಜನರು ಸಾಮಾನ್ಯವಾಗಿ ತಿನ್ನುವ ಆಹಾರವನ್ನು (ಅಕ್ಕಿ, ಗೋಧಿ, ಜೋಳ, ಬೇಳೆ) ದಾನದ ರೂಪದಲ್ಲಿ ನೀಡಬೇಕು. ಝಕಾತ್‌ ಪಡೆಯುವವರ ಆಹಾರ ಪದ್ಧತಿಯನ್ನರಿತು, ಅವರ ಊರಿನ ಆಹಾರ ಪದ್ಧತಿಯಂತೆಯೇ ಝಕಾತ್‌ ನೀಡಬೇಕು.

ಈ ಝಕಾತ್‌ ಪ್ರತಿಯೊಬ್ಬನ ಮೇಲೂ ಕಡ್ಡಾಯ. ಮನೆಯ ಯಜಮಾನ ಆ ಮನೆಯಲ್ಲಿರುವ ಪ್ರತಿ ಸದಸ್ಯನ ಪರವಾಗಿ ತಲಾ ಎರಡೂವರೆ ಕೆ.ಜಿ. (ಉದಾ: ಒಂದು ಮನೆಯಲ್ಲಿ 4 ಸದಸ್ಯರಿದ್ದರೆ 10 ಕೆ.ಜಿ.) ಆಹಾರವಸ್ತುವನ್ನು ಬಡವನ ಮನೆಗೆ ತಲುಪಿಸಬೇಕು. ಆ ಬಳಿಕವೇ ಹಬ್ಬದ ಪ್ರಾರ್ಥನೆಗೆ ಮಸೀದಿಗೆ ತೆರಳಬೇಕು.

ತನ್ನ ಮತ್ತು ತನ್ನ ಕುಟುಂಬ ಸದಸ್ಯರ ಆಹಾರ, ಬಟ್ಟೆ ಮತ್ತು ಮೂಲ ಅಗತ್ಯಗಳಿಗಿಂತ ಹೆಚ್ಚು ಸಂಪತ್ತು ಇರುವ ಪ್ರತಿಯೊಬ್ಬ ಮುಸ್ಲಿಮನಿಗೆ ‘ಫಿತ್ರ್ ಝಕಾತ್’ ಕಡ್ಡಾಯ. ಬಡವರಿಗೂ ಹಬ್ಬದ ಸಂಭ್ರಮ ಆಚರಿಸಲು ಸಾಧ್ಯವಾಗಬೇಕು ಎಂಬುದು ಇದರ ಉದ್ದೇಶ. ಝಕಾತ್‌ ಅನ್ನು (ದಾನ) ಹಬ್ಬದೊಂದಿಗೆ ಜೋಡಿಸಿರುವ ಕ್ರಮದಿಂದಾಗ ಇದು ಬಡವರ ಪಾಲಿನ ಹಬ್ಬ ಎನಿಸಿಕೊಂಡಿದೆ.

ಮನೆಗಳಲ್ಲೇ ಈದ್‌ ನಮಾಜ್
ಕೋವಿಡ್‌ನಿಂದಾಗಿ ಈ ಬಾರಿ ಹಬ್ಬ ಸರಳವಾಗಿ ನಡೆಯಲಿದ್ದು, ಮನೆಗಳಿಗೆ ಸೀಮಿತವಾಗಿರಲಿದೆ. ಲಾಕ್‌ಡೌನ್‌ ಬಿಗಿ ನಿಯಮ ಇರುವುದರಿಂದ ಹೊರಗಡೆ ಓಡಾಟಕ್ಕೆ ನಿರ್ಬಂಧವಿದೆ. ಮಸೀದಿ ಅಥವಾ ಈದ್ಗಾಗಳಲ್ಲಿ ನಡೆಯುವ ‘ಈದ್‌ ನಮಾಜ್‌’ ಈ ಹಬ್ಬದ ಪ್ರಮುಖ ಆಕರ್ಷಣೆಯಾಗಿದೆಯಾದರೂ, ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧವಿರುವುದರಿಂದ ಈದ್‌ ನಮಾಜ್‌ ಮನೆಗಳಲ್ಲೇ ನಿರ್ವಹಿಸಲಾಗುತ್ತದೆ.

ಎಲ್ಲರೂ ಮನೆಗಳಲ್ಲೇ ಈದ್‌ ನಮಾಜ್‌ ನಿರ್ವಹಿಸುವಂತೆ ರಾಜ್ಯದ ವಿವಿಧ ಖಾಝಿಗಳು ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.