ADVERTISEMENT

ಸುಗ್ಗಿಯ ಹಬ್ಬ | ಬನ್ನಿ, ದೀವರ ಸಂಕ್ರಾಂತಿಗೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2023, 19:30 IST
Last Updated 14 ಜನವರಿ 2023, 19:30 IST
ದೀವರ ಸಂಕ್ರಾಂತಿ
ದೀವರ ಸಂಕ್ರಾಂತಿ   

ಎಲ್ಲ ಕಡೆಗಳಲ್ಲಿ ಸಾಮಾನ್ಯವಾಗಿ ಸುಗ್ಗಿಯ ಹಬ್ಬವಾಗಿ ಆಚರಿಸಲ್ಪಡುವ ಸಂಕ್ರಾಂತಿಗೆ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ಹೆಸರಿದೆ. ಒಕ್ಕಲು ಮುಗಿದು ಬೆಳೆದ ಫಸಲು ಮನೆ ತುಂಬಿದ ಸಡಗರವೇ ಹಬ್ಬದ ಬಹುಮುಖ್ಯ ಆಶಯ. ಸಂಕ್ರಾಂತಿಯನ್ನು ವಿಭಿನ್ನವಾಗಿ ಆಚರಿಸುವ ಮಲೆನಾಡಿನ ದೀವರು ಸುಗ್ಗಿ ಹಬ್ಬಕ್ಕೆ ಪೂರ್ವದಲ್ಲಿ ಭತ್ತದ ತೆನೆ ಕಟ್ಟುವ ಸಮಯದಲ್ಲಿಯೇ ಭೂಮಣ್ಣಿ ಹಬ್ಬದ ಮೂಲಕ ಭೂತಾಯಿಯ ಫಲವಂತಿಕೆಯ ಪ್ರತೀಕವಾಗಿ ಸೀಮಂತವನ್ನು ವಿಭಿನ್ನವಾಗಿ ಆಚರಿಸುತ್ತಾರೆ. ಹಾಗಾಗಿ ಸಂಕ್ರಾಂತಿ ಮಲೆನಾಡಿನ ದೀವರಲ್ಲಿ ವಿಶೇಷ ಎನಿಸದಿದ್ದರೂ ವಿಭಿನ್ನವಾಗಿ ಆಚರಣೆಗಳನ್ನು ನೋಡಬಹುದು.

ನೆಲಮೂಲದ ದೇಶಿ ಸಂಸ್ಕೃತಿಯ ಆರಾಧಕರಾದ ಇವರಿಗೆ ಬಾವಿ, ಕೆರೆ, ನದಿ, ಭೂಮಿ, ಮರ, ಗಿಡ ಎಲ್ಲವೂ ದೈವದ ಸ್ವರೂಪ. ಮೂಲತಃ ಅರಣ್ಯವಾಸಿಗಳಾದ ಇವರು ಕೃಷಿಯೊಂದಿಗೆ ಯೋಧರಾಗಿ, ಸೇನಾ ನಾಯಕರಾಗಿ ವಿಜಯನಗರ ಹಾಗೂ ಮೈಸೂರು ಅರಸರ ಸೈನ್ಯವನ್ನು ಮುನ್ನಡೆಸಿದವರು.

ತಮ್ಮ ಸಾಂಪ್ರದಾಯಿಕ ಹಬ್ಬ ಹರಿದಿನ, ದೈವ, ದೇವರು ಪೂಜೆಗಳಲ್ಲಿ ಅವರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಸಂಕ್ರಾಂತಿ ಹಬ್ಬ ಆರಂಭವಾಗುವುದೇ ಬೆಳ್ಳಂಬೆಳಗ್ಗೆ ತಾಯಂದಿರು ತಮ್ಮ ಮಕ್ಕಳಿಗೆ ‘ಅಪೀ ಗದ್ದಿಗೆ ಹೋಗಿ ಗೊಣಬೆ ಸುತ್ತ ಬೂರೆಬೂದಿ ಬಿಟ್ಟು, ಗೊಣಬೆ ಮೇಲಿಕ್ಕೆ ನಿಧಾನುಕ್ಕೆ ಹತ್ಯೋಗಿ ಬೆನಪ್ಪುಗೆ ಮಾಯ್ನತೊಳಲು ಕಟ್ಟಿ ಅಳ್ಕಾಳು ಚಪ್ಪೆರೊಟ್ಟಿ ಬೀರಿ ಬರೇಳು’ ಎಂಬುವುದರೊಂದಿಗೆ. ಉಪ್ಪು ಹಾಕದ ಅಕ್ಕಿ ಹಿಟ್ಟಿನಿಂದ ಮಾಡಿದ ಪುಟ್ಟ ಪುಟ್ಟ ರೊಟ್ಟಿಗಳೇ ಚಪ್ಪೆರೊಟ್ಟಿ, ಭತ್ತವನ್ನು ಹುರಿದು ತಯಾರಿಸಿದ್ದೇ ಅರಳು.

ADVERTISEMENT

ದೀಪಾವಳಿ ಹಬ್ಬಕ್ಕೆ ಎರಡು ದಿನ ಮುಂಚಿತವಾಗಿ ಬರುವ ಬೂರೆ ಹಬ್ಬದಂದು ಅಡುಗೆ ಮಾಡುವಾಗ ಐದು ರೀತಿಯ ಮರದ (ಹಲಸು, ಮಾವು, ಆಲ, ಅರಳಿ, ಬೇವು) ಸೌದೆ ಬಳಸುವುದು ರೂಢಿ. ಆ ದಿನದ ಸೌದೆಯ ಬೂದಿಯನ್ನು ಹಾಗೇ ಎತ್ತಿಟ್ಟಿರುತ್ತಾರೆ. ಹಾಗೆ ಎತ್ತಿಟ್ಟ ಬೂದಿಗೆ ಬೂರೆಬೂದಿ ಎಂದು ಕರೆಯುತ್ತಾರೆ. ಆ ಬೂದಿಗೆ ಕುಣ, ಗುಬ್ಬಿ, ಗುಡ್ಡೆಗೇರು ಮರದ ಕಾಯಿ ಹಾಕಿ ಅದನ್ನು ಭತ್ತದ ಗೊಣಬೆಯ ಸುತ್ತ, ಮನೆಯ ಸುತ್ತ, ಕಣಜದ ಸುತ್ತ ಬಿಡುತ್ತಾರೆ. ಬಹುಶಃ ಐದು ಬೇರೆ ಬೇರೆ ಔಷಧಿಯ ಸಸ್ಯಗಳ ಸೌದೆಯಿಂದ ಆದ ಬೂದಿಯಲ್ಲಿ ಕ್ರಿಮಿಕೀಟಗಳ ನಿಯಂತ್ರಣ, ಬೇಸಿಗೆಯಲ್ಲಿ ಇಲಿಗಳ ನಿಯಂತ್ರಣಕ್ಕೆ ಬಳಸುತ್ತಿರಬೇಕು ಎನಿಸುತ್ತದೆ.

ಗೊಣಬೆಯನ್ನು ಹಾಕಿದ ಮೇಲೆ ಅದರ ತುದಿಯಲ್ಲಿ ವಿರಾಜಮಾನವಾಗುವುದು ದೀವರ ಬೆನವ. ಗದ್ದೆಯಲ್ಲಿ ಚಚ್ಚೌಕದ ಆಕಾರದಲ್ಲಿ ಮಣ್ಣಿನಲ್ಲಿ ಕೊಯ್ದು ಎತ್ತಿದ ಮಣ್ಣು ಹೆಂಟೆಯೇ ದೀವರ ಬೆನವ, ಬೆನಪ್ಪ. ಅದು ದೀವರ ಗೊಣಬೆಯನ್ನು ಕಾಯುವ ದೈವ. ಒಕ್ಕಲು ಮುಗಿದು ಕಣಬ್ಬದವರೆಗೆ ಜೊತೆಯಲ್ಲಿರುವ ಈ ದೈವವನ್ನು ಕೊನೆಯ ದಿನ ನೀರಿಗೆ ಬಿಡುತ್ತಾರೆ. ಗಣೇಶನನ್ನು ಪೂಜೆಯ ನಂತರ ನೀರಿಗೆ ಬಿಡುವ ಪರಿಪಾಟ ಇದೆ. ಈ ಗಣೇಶನೇ ಮೂಲದಲ್ಲಿ ಬೆನವ, ಬೆನಪ್ಪನಾಗಿರಬಹುದು. ಮನೆಯಲ್ಲಿ ದೋಸೆ, ತರಕಾರಿ ಸಾರು, ಪಾಯಸ ಮಾಡಿ ಮನೆಯ ಇಡುಕಲಿಗೆ ಎಡೆ ಇಟ್ಟು ಊಟ ಮಾಡುತ್ತಾರೆ. ಸಂಕ್ರಾಂತಿಯ ದಿನದಂದು ಮಾವಿನ ತೋರಣವನ್ನು ಎತ್ತುಗಳ ಕೊಂಬು, ನೊಗ, ನೇಗಿಲು, ಈಸಿಗೆ ಕಟ್ಟಿ, ಅರಿಸಿಣ ಕುಂಕುಮ ಹಚ್ಚಿ, ನೇಗಿಲು ಕಟ್ಟಿ ಹ್ವಾಕೆ ಹೂಡಲು ಕಟ್ಟುವ (ಹ್ವಾಕೆ-ಮೊದಲ ಉಳುಮೆ) ಸಂಪ್ರದಾಯವಿದೆ.

ಆಗಷ್ಟೇ ನೆಲದ ತೇವವೆಲ್ಲ ಒಣಗಲು ಆರಂಭವಾಗಿ ಹೂಡಲು ಸರಿಯಾದ ಹದ ಇರುತ್ತದೆ. ಚಳಿಗಾಲ ಕಳೆಯುತ್ತಾ ಬೇಸಿಗೆ ಆರಂಭವಾಗುವ ಕಾಲ. ಭೂಮಿಯನ್ನು ಉಳುಮೆ ಮಾಡುವುದರಿಂದ ಮಣ್ಣು ಗಾಳಿಗೆ ತೆರೆದುಕೊಳ್ಳುತ್ತದೆ. ಮುಂದಿನ ಇಚ್ಚಾಲು (ಎರಡನೇ ಉಳುಮೆ) ಸಮಯಕ್ಕೆ ಬಿಸಿಲಿಗೆ ಕಾದ ಮಣ್ಣು ಸಡಿಲಗೊಳ್ಳುತ್ತದೆ. ಕ್ರಿಮಿಕೀಟಗಳು ಮೇಲಕ್ಕೆ ಬರುವುದರಿಂದ ಅವುಗಳನ್ನು ಪಕ್ಷಿಗಳು ಹಿಡಿದು ತಿನ್ನುತ್ತವೆ. ಪಕ್ಷಿಗಳಿಗೆ ಆಹಾರ ಸಿಕ್ಕರೆ ರೈತನಿಗೆ ತನ್ನ ಹೊಲವು ಕೀಟಮುಕ್ತವಾಗುತ್ತದೆ. ಕೆಲವು ಊರುಗಳಲ್ಲಿ ತಮ್ಮ ಊರು ಬಿಟ್ಟು ಪರ ಊರುಗಳಿಗೆ ಹೋಗಬಾರದೆನ್ನುವ ನಂಬಿಕೆ ಇದೆಯಾದರೂ ಇದನ್ನು ಯಾರೂ ಅಷ್ಟಾಗಿ ಪಾಲಿಸುವುದಿಲ್ಲ.

ಸಂಕ್ರಾಂತಿ ಮುಗಿದ ನಂತರವೇ ಒಕ್ಕಲು ಆರಂಭಿಸುತ್ತಾರೆ. ಭತ್ತರಾಶಿ, ಹುತ್ರಿ, ಬೆನವನನ್ನು ಪೂಜಿಸಿ ಕಣಬ್ಬ ಮಾಡುವುದರೊಂದಿಗೆ ಅವರ ಸುಗ್ಗಿಯು ಮುಗಿಯುತ್ತದೆ. ಕೆಲವು ಕಡೆ ಸಂಕ್ರಾಂತಿ ಬಂದಿದೆ ಎಂದು ಮೂರು ದೋಸೆಯನ್ನು ಎಡೆ ಇಟ್ಟು ಪೂಜೆ ಮಾಡುವ ಪದ್ಧತಿಯೂ ಇದೆ.

ಸಂಕ್ರಾಂತಿ ಆಚರಣೆ ಇತ್ತೀಚೆಗೆ ಇಲ್ಲಿಯೂ ಬದಲಾಗಿದೆ. ನಗರದ ಅಂಗಡಿಯಲ್ಲಿ ಸಿಗುವ ಬಣ್ಣ ಬಣ್ಣದ ಎಳ್ಳಿನ ಕಾಳುಗಳನ್ನು ಹಂಚುವ ಹೊಸ ಪದ್ಧತಿಯೂ ಆರಂಭವಾಗಿದೆ. ಹೀಗೆ ಹಳತದರ ಜೊತೆ ಹೊಸತು ಸೇರಿ ಸಂಕ್ರಾಂತಿಯ ಸೊಬಗನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.