ADVERTISEMENT

ದಿನದ ಸೂಕ್ತಿ: ಒಬ್ಬನೇ ಬೇಡ

ಎಸ್.ಸೂರ್ಯಪ್ರಕಾಶ ಪಂಡಿತ್
Published 17 ಜೂನ್ 2021, 5:40 IST
Last Updated 17 ಜೂನ್ 2021, 5:40 IST
ಪ್ರಯಾಣ
ಪ್ರಯಾಣ   

ಏಕಃ ಸ್ವಾದು ನ ಭುಂಜೀತ ನೈಕ ಕಾರ್ಯಂ ವಿಚಿಂತಯೇತ್‌ ।

ಏಕೋ ನ ಗಚ್ಛೇತ್ಪಂಥಾನಾಂ ನೈಕಃ ಸುಪ್ತೇಷು ಜಾಗೃಯಾತ್‌ ।।

ಇದರ ತಾತ್ಪರ್ಯ ಹೀಗೆ:

ADVERTISEMENT

‘ಒಬ್ಬನೇ ಸಿಹಿಯನ್ನು ತಿನ್ನಬಾರದು; ಒಬ್ಬನೇ ಕಾರ್ಯವನ್ನು ಕುರಿತು ಚಿಂತಿಸಬಾರದು; ಒಬ್ಬನೇ ದೂರದ ಪ್ರಯಾಣವನ್ನು ಮಾಡಬಾರದು; ಎಲ್ಲರೂ ನಿದ್ರಿಸುತ್ತಿರುವಾಗ ಒಬ್ಬನೇ ಎಚ್ಚರವಾಗಿರಬಾರದು.’

ಕೆಲವೊಂದು ಕೆಲಸಗಳನ್ನು ಒಬ್ಬನೇ ಮಾಡಬೇಕು; ಇನ್ನು ಕೆಲವನ್ನು ಜೊತೆಯಾಗಿ ಮಾಡಬೇಕಾಗುತ್ತದೆ. ಯಾವ ಕೆಲಸವನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳುವುದೇ ವಿವೇಕ.

ಸುಭಾಷಿತ ಹೇಳುತ್ತಿದೆ, ಒಬ್ಬನೇ ಸಿಹಿಯನ್ನು ತಿನ್ನಬಾರದು. ಏಕೆಂದರೆ ಇದಕ್ಕೆ ಎರಡು ಕಾರಣಗಳು. ಒಂದು: ಹೀಗೆ ಒಳ್ಳೆಯ ಊಟವನ್ನು ಒಬ್ಬನೇ ತಿಂದರೆ ಅವನನ್ನು ಸ್ವಾರ್ಥಿ, ಜಿಪುಣ – ಹೀಗೆಲ್ಲ ಜನರು ಆಡಿಕೊಳ್ಳುವ, ಟೀಕಿಸುವ ಸಾಧ್ಯತೆ ಇರುತ್ತದೆ. ಎರಡು: ಒಬ್ಬನಿಗಾಗಿಯೇ ಸಿದ್ಧಪಡಿಸಿ ಊಟ ಅಪಾಯ; ಅದರಲ್ಲಿ ಬೇರೆ ಏನಾದರನ್ನು ಬೆರೆಸಿದ್ದರೆ ಗೊತ್ತಾಗುವುದಿಲ್ಲ.

ಒಬ್ಬನೇ ಒಂದು ಕೆಲಸದ ಬಗ್ಗೆ ಆಲೋಚನೆ ಮಾಡಬಾರದು. ಇದು ಏಕೆಂದರೆ, ಒಬ್ಬನೇ ಯೋಚಿಸಿದರೆ ಆ ಕೆಲಸದ ಬಗ್ಗೆ ಎಷ್ಟು ಆಯಾಮಗಳು ಹೊಳೆದೀತು? ಅದೇ ನಾಲ್ಕು ಜನರ ಆಲೋಚನೆ ಸೇರಿದರೆ ಹತ್ತು ದಿಕ್ಕುಗಳಿಂದ ಯೋಚಿಸಲು ಸಾಧ್ಯ. ಮಾತ್ರವಲ್ಲ, ಸಮಸ್ಯೆಗಳೂ ಬೇಗ ಬಗೆಹರಿಯುತ್ತವೆ.

ಒಬ್ಬನೇ ದೂರದ ಪ್ರಯಾಣವನ್ನೂ ಮಾಡಬಾರದು ಎನ್ನುತ್ತಿದೆ ಸುಭಾಷಿತ. ಮಾರ್ಗದಲ್ಲಿ ತೊಂದರೆಗಳು ಎದುರಾದರೆ ಒಬ್ಬನಿಂದಲೇ ಅವನ್ನು ನಿವಾರಿಸಿಕೊಳ್ಳಲು ಸಾಧ್ಯವಾಗದಿಬಹುದು. ಅಷ್ಟೇ ಅಲ್ಲ, ಜೊತೆಯಿಲ್ಲದೆ ಪ್ರಯಾಣಮಾಡುತ್ತಿದರೆ ಮಾರ್ಗಾಯಾಸವೂ ಹೆಚ್ಚು; ಅದೇ ಜೊತೆಗೆ ಯಾರಾದರೂ ಇದ್ದರೆ ಮಾತುಕತೆಯನ್ನು ನಡೆಸುತ್ತ ಪ್ರಯಾಣಿಸಿದರೆ ಬೇಸರವೂ ಎದುರಾಗದು.

ಹೊಸದಾದ ಜಾಗದಲ್ಲಿ ಎಲ್ಲರೂ ಮಲಗಿರುವಾಗ ಒಬ್ಬನೇ ಎದ್ದಿರಬಾರದು. ಏಕೆಂದರೆ ಅವನ ಮೇಲೆ ಇತರರಿಗೆ ಸಂಶಯ ಬರುತ್ತದೆ. ಇವನೇನೋ ರಹಸ್ಯಕಾರ್ಯವನ್ನು ನಡೆಸಲು ಕಾಯುತ್ತಿದ್ದಾನೆ ಎಂಬ ಅನುಮಾನ ಮೂಡುತ್ತದೆ.

ಸುಭಾಷಿತಗಳು ನಮಗೆ ಲೋಕಶಿಕ್ಷಣವನ್ನು ನೀಡುತ್ತವೆ ಎಂಬುದಕ್ಕೆ ಈ ಸುಭಾಷಿತ ಒಂದು ಒಳ್ಳೆಯ ಉದಾಹರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.