ADVERTISEMENT

ಬೆಳಗಾವಿ: ಮತ್ತೊಂದು ಕೊಳವೆಬಾವಿ ದುರಂತ; 2 ವರ್ಷದ ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 15:18 IST
Last Updated 18 ಸೆಪ್ಟೆಂಬರ್ 2021, 15:18 IST
ಅಗ್ನಿಶಾಮಕ ದಳದ ಸಿಬ್ಬಂದಿ ಮಗುವನ್ನು ಹೊರತೆಗೆದು ತಂದರು
ಅಗ್ನಿಶಾಮಕ ದಳದ ಸಿಬ್ಬಂದಿ ಮಗುವನ್ನು ಹೊರತೆಗೆದು ತಂದರು   

ಹಾರೂಗೇರಿ (ಬೆಳಗಾವಿ): ರಾಯಬಾಗ ತಾಲ್ಲೂಕು ಅಲಖನೂರು ಗ್ರಾಮದಲ್ಲಿ 2 ವರ್ಷದ ಬಾಲಕ ಕೊಳವೆಬಾವಿಗೆ ಬಿದ್ದು ಮೃತಪಟ್ಟಿದ್ದಾನೆ.

‘ಶರತ ಸಿದ್ದಪ್ಪ ಹಸಿರೆ ಮೃತ. ಆತ ಕಾಣೆಯಾಗಿರುವ ಕುರಿತು ಹಾರೂಗೇರಿ ಪೊಲೀಸ್ ಠಾಣೆಗೆ ಪೋಷಕರು ಶುಕ್ರವಾರ ದೂರು ನೀಡಿದ್ದರು. ಆದರೆ, ಆತ ಕೊಳವೆಬಾವಿಗೆ ಬಿದ್ದಿರುವುದು ಶನಿವಾರ ಖಚಿತವಾಗಿತ್ತು. ತಾಲ್ಲೂಕು ಆಡಳಿತ, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಾತ್ರಿ ದೇಹವನ್ನು ಮೇಲಕ್ಕೆ ತೆಗೆದಿದ್ದಾರೆ. 5ರಿಂದ 8 ಅಡಿ ಆಳದಲ್ಲಿ ದೇಹ ಸಿಲುಕಿತ್ತು’ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹೊಲದಲ್ಲಿ ಕೊರೆಯಿಸಿದ್ದ ಕೊಳವೆಬಾವಿ ಹಾಳಾಗಿತ್ತು. ಆಟವಾಡುತ್ತಿದ್ದ ಬಾಲಕ ಆಕಸ್ಮಿಕವಾಗಿ ಅದರೊಳಗೆ ಬಿದ್ದಿದ್ದಾನೆ ಎಂದು ಗೊತ್ತಾಗಿದೆ. ಮೃಹದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ವಿವರ ತಿಳಿದುಬರಲಿದೆ. ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಅಥಣಿ ತಾಲ್ಲೂಕಿನ ಝುಂಜರವಾಡ ಗ್ರಾಮದಲ್ಲಿ 6 ವರ್ಷದ ಬಾಲಕಿ ಕಾವೇರಿ ಕೊಳವೆಬಾವಿಗೆ ಬಿದ್ದಿದ್ದಳು. 54 ಗಂಟೆಗಳ ಕಾರ್ಯಾಚರಣೆ ಬಳಿಕ (2017ರ ಏ.25) ಮೃತದೇಹವನ್ನು ಹೊರ ತೆಗೆಯಲಾಗಿತ್ತು.

ರಾಯಬಾಗ ತಾಲ್ಲೂಕು ಸುಲ್ತಾನಪೂರ ಗ್ರಾಮದ ನಾಯಕ ತೋಟದ ಶಾಲೆ ಸಮೀಪದ ಹೊಲದಲ್ಲಿ ಲಕ್ಕಪ್ಪ ಸಂಗಪ್ಪ ದೊಡಮನಿ (38) ಕೊಳವೆಬಾವಿಗೆ ಬಿದ್ದು ಸಾವಿಗೀಡಾಗಿದ್ದರು. ಈ ಘಟನೆ 2020ರ ಮೇ 11ರಂದು ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.