ADVERTISEMENT

ಮಲಪ್ರಭಾ ಒಡಲೂ ಬರಿದಾಗುತ್ತಿದೆ...!

ನೀರು ಕಣ್ಣೀರು

ಸದಾಶಿವ ಮಿರಜಕರ
Published 3 ಮೇ 2019, 19:31 IST
Last Updated 3 ಮೇ 2019, 19:31 IST
ಸವದತ್ತಿ ಬಳಿಯ ಮಲಪ್ರಭಾ ನದಿ ನೀರು ಬತ್ತಿಹೋಗಿರುವ ದೃಶ್ಯ
ಸವದತ್ತಿ ಬಳಿಯ ಮಲಪ್ರಭಾ ನದಿ ನೀರು ಬತ್ತಿಹೋಗಿರುವ ದೃಶ್ಯ   

ಸವದತ್ತಿ: ಈ ಭಾಗದ ಜನರ ಜೀವನದಿ ಮಲಪ್ರಭಾ ನದಿಯ ಒಡಿಲು ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಸಂಚಕಾರ ಬರಲಿದೆ ಎನ್ನುವ ಆತಂಕ ಇಲ್ಲಿನ ಜನರಲ್ಲಿ ಮೂಡುತ್ತಿದೆ.

ಖಾನಾಪುರದಲ್ಲಿ ಹುಟ್ಟಿ ಹರಿಯುವ ಮಲಪ್ರಭಾ, ರಾಮದುರ್ಗ, ಬೈಲಹೊಂಗಲ ಮೂಲಕ ಸವದತ್ತಿಗೆ ತಲುಪುತ್ತದೆ. ಸವದತ್ತಿಯ ನವೀಲುತೀರ್ಥ ಜಲಾಶಯದಲ್ಲಿ ನೀರು ಸಂಗ್ರಹಿಸಿ, ಸುತ್ತಮುತ್ತಲಿನ ಗ್ರಾಮಗಳಿಗೆ ಪೂರೈಸಲಾಗುತ್ತಿದೆ. ಸವದತ್ತಿ ಪಟ್ಟಣ, ಹಳ್ಳಿಗಳು ಹಾಗೂ ನವಲಗುಂದ, ನರಗುಂದ, ಬದಾಮಿ ರೋಣದ ವರೆಗೆ ಕುಡಿಯುವ ನೀರು ನೀಡಲಾಗುತ್ತದೆ. ಈ ಭಾಗದ ಕೃಷಿಗೆ ಕೂಡ ನೀರು ಪೂರೈಸಲಾಗುತ್ತಿದೆ.

ಕಳೆದ ವರ್ಷ ಮುಂಗಾರು ಹಾಗೂ ಪ್ರಸಕ್ತ ಮುಂಗಾರು ಪೂರ್ವ ಮಳೆ ಕ್ಷೀಣಿಸಿದೆ. ಹೀಗಾಗಿ ನದಿಗೆ ಹೊಸ ನೀರು ಹರಿದುಬಂದಿಲ್ಲ. ಇದರಿಂದಾಗಿ ನೀರಿನ ಕೊರತೆ ಉಂಟಾಗಿದೆ. ಕೆಲವೇ ದಿನಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಪಡಬೇಕಾದ ಪರಸ್ಥಿತಿ ಎದುರಾಗಲಿದೆ.

ADVERTISEMENT

ಶಾಸಕರ ಒತ್ತಡ:

‘ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಶಾಸಕರ ಒತ್ತಾಯದ ಮೇರೆಗೆ ನವಿಲುತೀರ್ಥ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಇದರಿಂದಾಗಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳೀಯರಿಗೆ ನೀರಿನ ಕೊರತೆ ಉಂಟಾಗುತ್ತಿದೆ’ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡ ಮಹಾರಾಜಗೌಡ ಪಾಟೀಲ ದೂರಿದರು.

‘ಜಲಾಶಯ ನಿರ್ಮಿಸಿ ನಾಲ್ಕು ದಶಕಗಳು ಕಳೆದಿದ್ದರೂ ಇದುವರೆಗೆ ನದಿ ಪಾತ್ರದ ಭೂಮಿಗಳಿಗೆ ನೀರಾವರಿ ಒದಗಿಸಲು ಸಾಧ್ಯವಾಗಿಲ್ಲ. ಜಲಾಶಯ ನಿರ್ಮಿಸಲು ಆಸ್ತಿ ಪಾಸ್ತಿ ಕಳೆದುಕೊಂಡ ರೈತರಿಗೂ ನೀರು ನೀಡಲು ಸಾಧ್ಯವಾಗಿಲ್ಲ’ ಎಂದು ನ್ಯೂ ಸ್ಟಾರ್‌ ಗ್ರೂಪ್‌ನ ಅಧ್ಯಕ್ಷ ಶಂಕರ ಇಜಂತಕರ ಹೇಳಿದರು.

ರೈತ ಸೇನಾ ಸಂಚಾಲಕ ಜಯಶಂಕರ ವನ್ನೂರ ಮಾತನಾಡಿ, ‘ಮಹಾದಾಯಿ ನೀರು ಜೋಡಣೆಗಾಗಿ ನಿರಂತರ ಹೋರಾಟ ನಡೆದಿದ್ದರ ಪರಿಣಾಮ ಕಳಸಾ ಬಂಡೂರಿ ನಾಲಾಗಳ ನೀರು ಜೋಡಣೆಗೆ ನ್ಯಾಯಮಂಡಳಿಯ ಅನುಮತಿ ದೊರೆತಿದೆ. ಆದಷ್ಟು ಬೇಗನೇ ನಾಲಾ ಜೋಡಿಸುವ ಕಾಮಗಾರಿಗೆ ರಾಜ್ಯ ಸರ್ಕಾರ ತಕ್ಷಣ ಮುಂದಾಗಬೇಕಾಗಿದೆ. ಇದಲ್ಲದೇ, ಜಲಾಶಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಹೂಳು ತೆಗೆಸಲು ಕೂಡ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.