ADVERTISEMENT

ಉದ್ಯಾನ ನಗರಿಗೆ ಮತ್ತೆ ಕಳೆ: ಸಾರ್ವಜನಿಕ ಸಾರಿಗೆ ಪೂರ್ಣ ಪ್ರಮಾಣದಲ್ಲಿ ಆರಂಭ

ಪುನರಾರಂಭಗೊಂಡ ಶಾಪಿಂಗ್ ಮಾಲ್‌ಗಳು * ದೇಗುಲಗಳಲ್ಲಿ ದರ್ಶನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 22:07 IST
Last Updated 5 ಜುಲೈ 2021, 22:07 IST
ಬೆಂಗಳೂರು ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸೋಮವಾರ ಮೈಸೂರು ಕಡೆಗೆ ಹೊರಟ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡು ಬಂದ ಪ್ರಯಾಣಿಕರು
ಬೆಂಗಳೂರು ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಸೋಮವಾರ ಮೈಸೂರು ಕಡೆಗೆ ಹೊರಟ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡು ಬಂದ ಪ್ರಯಾಣಿಕರು   

ಬೆಂಗಳೂರು: ಸುಮಾರು ಎರಡೂವರೆ ತಿಂಗಳ ಬಳಿಕ ನಗರ ಸಹಜ ಸ್ಥಿತಿಯತ್ತ ಮರಳಿತು. ಮೆಟ್ರೊ ರೈಲು, ಬಿಎಂಟಿಸಿ ಬಸ್‌ಗಳು ಸೋಮವಾರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಇಳಿದರೆ, ಶಾಪಿಂಗ್‌ ಮಾಲ್‌, ರೆಸ್ಟೋರೆಂಟ್‌ಗಳೂ ಗ್ರಾಹಕರಿಗೆ ತೆರೆದುಕೊಂಡವು. ಜಿಮ್‌ಗಳೂ ಪುನರಾರಂಭಗೊಂಡರೆ, ದೇಗುಲಗಳಲ್ಲಿ ಭಕ್ತರ ಸಡಗರ ಕಂಡು ಬಂತು.

ದೇವಾಲಯ ಮತ್ತು ಶಾಪಿಂಗ್‌ ಮಾಲ್‍ಗಳ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಯಂತ್ರಗಳನ್ನು ಅಳವಡಿಸಲಾಗಿತ್ತಲ್ಲದೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿತ್ತು. ಮಾಸ್ಕ್‌ ಧರಿಸಿದ್ದವರಿಗೆ ಮಾತ್ರ ಪ್ರವೇಶಾವಕಾಶವಿತ್ತು. ಅಂತರ ನಿಯಮ ಪಾಲನೆಯತ್ತ ಸಿಬ್ಬಂದಿ ಗಮನ ನೀಡಿದ್ದರು.

ಹೋಟೆಲ್‌ ಮತ್ತು ಬಾರ್‌ಗಳಲ್ಲಿ ರಾತ್ರಿ 9ರವರೆಗೆ ಅವಕಾಶ ಇದ್ದುದರಿಂದ ಈ ಸ್ಥಳಗಳಲ್ಲಿಯೂ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. 20 ಸಾವಿರಕ್ಕೂ ಹೆಚ್ಚು ಹೋಟೆಲ್‌–ರೆಸ್ಟೋರೆಂಟ್‌ಗಳು ಪೂರ್ಣ ಪ್ರಮಾಣದಲ್ಲಿ ಸೇವೆಯನ್ನು ಪುನರಾರಂಭಿಸಿದವು.

ADVERTISEMENT

ಕಳೆಗಟ್ಟಿದ ಶಾಪಿಂಗ್ ಮಾಲ್‌: ನಗರದಲ್ಲಿರುವ ಸುಮಾರು 70 ಶಾಪಿಂಗ್‌ ಮಾಲ್‌ಗಳು ಸೋಮವಾರ ಕಳೆಗಟ್ಟಿದ್ದವು. ಬೆಳಿಗ್ಗೆ 10ರಿಂದ ರಾತ್ರಿ 9ರವರೆಗೆ ತೆರೆದಿದ್ದವು. ಸೀಮಿತ ಸಂಖ್ಯೆಯಲ್ಲಿ ಪ್ರವೇಶಾವಕಾಶ ಇದ್ದುದರಿಂದ ಗ್ರಾಹಕರ ಸಂಖ್ಯೆ ಹೆಚ್ಚಾಗಿರಲಿಲ್ಲ. ಹೋಟೆಲ್‌, ಬಾರ್‌ಗಳಲ್ಲಿ ಕಂಡು ಬಂದ ಜನಸಂದಣಿ ಶಾಪಿಂಗ್‌ ಮಾಲ್‌ಗಳಲ್ಲಿ ಕಂಡು ಬರಲಿಲ್ಲ. ಮಾಲ್‌ಗಳಲ್ಲಿ ಥಿಯೇಟರ್‌ಗಳಲ್ಲಿ ಚಿತ್ರಪ್ರದರ್ಶನಕ್ಕೆ ಮತ್ತು ಮಕ್ಕಳ ಆಟಗಳಿಗೆ ಅವಕಾಶ ಇಲ್ಲದಿದ್ದರಿಂದಲೂ ಹೆಚ್ಚು ಜನ ಕಂಡು ಬರಲಿಲ್ಲ.

ಬ್ರಿಗೇಡ್‌ ರಸ್ತೆ ಬಳಿಯಲ್ಲಿನ ಗರುಡಾ ಮಾಲ್‌ನಲ್ಲಿ ಒಂದು ಲಸಿಕಾ ಕೇಂದ್ರವನ್ನು ತೆರೆಯುವ ಮೂಲಕ ಪುನರಾರಂಭಿಸಲಾಯಿತು. ಮಾಲ್‌ನ ಸಿಬ್ಬಂದಿ ಮತ್ತು ಕೆಲವು ಗ್ರಾಹಕರಿಗೆ ಲಸಿಕೆ ಹಾಕಲಾಯಿತು.

ಬೆಂಗಳೂರು ನಗರದ ಮಂತ್ರಿಮಾಲ್‌ ಎದುರು ಸೋಮವಾರ ಕಂಡು ಬಂದ ನೋಟ

ದೇಗುಲಗಳಲ್ಲಿ ದರ್ಶನ:ನಗರದ ದೇವಸ್ಥಾನಗಳಲ್ಲಿ ಯಾವುದೇ ವಿಶೇಷ ಸೇವೆಗಳು ಇರಲಿಲ್ಲ. ದರ್ಶನಕ್ಕೆ ಮಾತ್ರ ಅವಕಾಶ ಇದ್ದುದರಿಂದ ಭಕ್ತರು ಬಂದು ದೇವರ ದರ್ಶನ ಪಡೆದರು. ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ದೇವಾಲಯಗಳ ಆವರಣಗಳಲ್ಲಿ ವೃತ್ತಾಕಾರದ ಪಟ್ಟಿಗಳನ್ನು ಹಾಕಲಾಗಿತ್ತು. ಪ್ರಮುಖ ದೇವಾಲಯಗಳ ಮುಖ್ಯ ದ್ವಾರದಲ್ಲೇ ಭಕ್ತರ ಕೈಗೆ ಸ್ಯಾನಿಟೈಸರ್‌ ಹಾಕಲಾಗುತ್ತಿತ್ತು. ಅಲ್ಲದೆ, ದೇಹದ ಉಷ್ಣಾಂಶ ಪರೀಕ್ಷಿಸಿ ಒಳಬಿಡಲಾಗುತ್ತಿತ್ತು. ತೀರ್ಥ, ಪ್ರಸಾದ ವಿನಿಯೋಗ ಇರಲಿಲ್ಲ. ಮಂಗಳಾರತಿ ಆಯಾ ದೇಗುಲಗಳ ಅರ್ಚಕರ ವಿವೇಚನೆಗೆ ಬಿಡಲಾಗಿತ್ತು.

ನಗರದ ಬನಶಂಕರಿ ದೇವಾಲಯಕ್ಕೆ ಸುಮಾರು 700 ಮಂದಿ ಬಂದು ದೇವಿಯ ದರ್ಶನ ಪಡೆದರು.

ತರಕಾರಿ, ಹೂವು ಮತ್ತು ಹಣ್ಣಿನ ಮಾರುಕಟ್ಟೆಗಳಲ್ಲಿ ಎಂದಿನ ಜನಸಂದಣಿ ಕಂಡು ಬಂತು. ಪ್ರವಾಸಿ ತಾಣಗಳನ್ನು ತೆರೆಯಲೂ ಅವಕಾಶವಿದ್ದುದರಿಂದ ನಗರದ ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಪ್ರವಾಸಿಗರು ಭೇಟಿ ನೀಡಿ ಪ್ರಾಣಿ–ಪಕ್ಷಿಗಳನ್ನು ವೀಕ್ಷಿಸಿದರು.

ಬೆಂಗಳೂರು ನಗರದ ಸಂಜಯನಗರದಲ್ಲಿನ ರಾಧಾಕೃಷ್ಣ ದೇಗುಲದಲ್ಲಿ ಸೋಮವಾರ ಭಕ್ತರು ದೇವರ ದರ್ಶನ ಪಡೆದರು –ಪ್ರಜಾವಾಣಿ ಚಿತ್ರಗಳು

ಬಿಎಂಟಿಸಿ ಬಸ್‌ನಲ್ಲಿ 15 ಲಕ್ಷ ಜನರ ಪ್ರಯಾಣ
‌ಬಿಎಂಟಿಸಿಯ 4,500 ಬಸ್‌ಗಳು 40 ಸಾವಿರ ಟ್ರಿಪ್‌ನಲ್ಲಿ ಸೋಮವಾರ ರಸ್ತೆಗಿಳಿದವು. ಸುಮಾರು 15 ಲಕ್ಷದಿಂದ 16 ಲಕ್ಷ ಜನ ಪ್ರಯಾಣಿಸಿದರು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

ಮೆಜೆಸ್ಟಿಕ್, ಶಾಂತಿನಗರ, ಮೈಸೂರು ರಸ್ತೆಯ ಸ್ಯಾಟಲೈಟ್‌ ನಿಲ್ದಾಣ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ಜನ ದಟ್ಟಣೆ ಹೆಚ್ಚಾಗಿತ್ತು.

ರಾತ್ರಿ ಪಾಳಿ ಬಸ್‌ಗಳು ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದಿದ್ದವು. ಈ ವೇಳೆ ನಿಲ್ದಾಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆಳಿಗ್ಗೆ 10ರ ವೇಳೆಗೆ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಾಯಿತು. ಶೇ 100ರಷ್ಟು ಆಸನ ಭರ್ತಿ ಪ್ರಯಾಣಕ್ಕೆ ಅವಕಾಶ ಇದ್ದುದರಿಂದ ಅನುಕೂಲವಾಯಿತು. ಕೋವಿಡ್‌ ಮಾರ್ಗಸೂಚಿಗಳ ಪಾಲನೆಗೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದುದು ಕಂಡು ಬಂತು.

ಮೆಟ್ರೊ ರೈಲು: ಲಕ್ಷ ಜನರ ಪ್ರಯಾಣ
ನಮ್ಮ ಮೆಟ್ರೊ ರೈಲುಗಳು ದಿನದಲ್ಲಿ 13 ತಾಸು ಸೇವೆ ನೀಡಿದ್ದು, ಒಂದು ಲಕ್ಷಕ್ಕೂ ಹೆಚ್ಚು ಜನ ಪ್ರಯಾಣಿಸಿದರು. ಸ್ಮಾರ್ಟ್‌ ಕಾರ್ಡ್ ಮಾತ್ರವಲ್ಲದೆ ಟೋಕನ್ ಖರೀದಿಸಿ ಪ್ರಯಾಣಿಸಲು ಅವಕಾಶ ಇದ್ದುದರಿಂದ ಕಳೆದ ವಾರಕ್ಕಿಂತ ಹೆಚ್ಚು ಪ್ರಯಾಣಿಕರು ಕಂಡು ಬಂದರು.

ದಟ್ಟಣೆಯ ಅವಧಿಯಲ್ಲಿ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣ ಮತ್ತು ವಿಧಾನಸೌಧದ ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣ ಸೇರಿದಂತೆ ಪ್ರಮುಖ ನಿಲ್ದಾಾಣಗಳಲ್ಲಿ ಪ್ರಯಾಣಿಕರ ದಟ್ಟಣೆ ಕಂಡು ಬಂತು. ಬೇರೆ ಅವಧಿಯಲ್ಲಿ, ಮೆಜೆಸ್ಟಿಕ್‌ ನಿಲ್ದಾಣ ಹೊರತು ಪಡಿಸಿ ಉಳಿದ ನಿಲ್ದಾಣಗಳಲ್ಲಿ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು.

ಬೆಳಿಗ್ಗೆ 7ರಿಂದ ರಾತ್ರಿ 8ರವರೆಗೆ ನೇರಳೆ ಮತ್ತು ಹಸಿರು ಮಾರ್ಗಗಳು ಸೇರಿ 220 ಟ್ರಿಪ್‌ಗಳಲ್ಲಿ 1,06,069 ಜನರು ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.