ADVERTISEMENT

‘ಲಸಿಕೆ ಪಡೆಯದವರಿಗೆ ಸೌಲಭ್ಯ ವಂಚನೆ ಸರಿಯಲ್ಲ’

ಗೊಂದಲ ನಿವಾರಣೆಗೆ ಆದೇಶ ಹೊರಡಿಸುವಂತೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:13 IST
Last Updated 16 ಸೆಪ್ಟೆಂಬರ್ 2021, 20:13 IST
   

ಬೆಂಗಳೂರು: ‘ಕೋವಿಡ್ ಲಸಿಕೆ ಪಡೆಯದವರನ್ನು ವಿವಿಧ ಸರ್ಕಾರಿ ಹಾಗೂ ಖಾಸಗಿ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡಲಾಗುತ್ತಿದೆ. ಲಸಿಕೆ ಪಡೆಯುವುದು ಕಡ್ಡಾಯವಲ್ಲ ಎಂದು ಈಗಾಗಲೇ ಹೇಳಿದ್ದರೂ ಈ ಬಗ್ಗೆ ಸ್ಪಷ್ಟವಾದ ಆದೇಶವನ್ನು ಸರ್ಕಾರ ಹೊರಡಿಸಬೇಕು’ ಎಂದು ನಾಡಿನ ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರುಆಗ್ರಹಿಸಿದ್ದಾರೆ.

ಈ ಬಗ್ಗೆ ಅವರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಚಿಂತಕರಾದಡಾ.ಜಿ. ರಾಮಕೃಷ್ಣ, ಬರಗೂರು ರಾಮಚಂದ್ರಪ್ಪ, ಸಿದ್ದನಗೌಡ ಪಾಟೀಲ, ದಲಿತ ಸಂಘರ್ಷ ಸಮಿತಿ ಅಧ್ಯಕ್ಷಮಾವಳ್ಳಿ ಶಂಕರ್,ಭಾರತೀಯ ವಿಚಾರವಾದಿ ಸಂಘಟನೆಗಳ ಒಕ್ಕೂಟದಅಧ್ಯಕ್ಷಪ್ರೊ. ನರೇಂದ್ರ ನಾಯಕ್,ಜನವಾದಿ ಮಹಿಳಾ ಸಂಘಟನೆಯ ಕೆ. ನೀಲಾ, ಮಾನಸಿಕ ಆರೋಗ್ಯ ತಜ್ಞರಾದ ಡಾ.ಪಿ.ವಿ. ಭಂಡಾರಿ,ಡಾ. ಶಶಿಧರ ಬೀಳಗಿ,ಸ್ತ್ರೀರೋಗ ತಜ್ಞೆಡಾ. ವಾಣಿ ಕೋರಿ,ಜೀವರಸಾಯನ ವಿಜ್ಞಾನದ ಪ್ರಾಧ್ಯಾಪಕಡಾ. ಎರಿಕ್ ಲೋಬೊ, ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ,ಮಕ್ಕಳ ಶಿಕ್ಷಣ ತಜ್ಞಶಂಕರ ಹಲಗತ್ತಿ,ಚಲನಚಿತ್ರ ನಿರ್ದೇಶಕಕೇಸರಿ ಹರವೂ ಸೇರಿದಂತೆ 25 ಮಂದಿ ಪತ್ರದಲ್ಲಿ ಲಸಿಕೆ ಬಗೆಗಿನ ಗೊಂದಲ ನಿವಾರಣೆಗೆ ಆಗ್ರಹಿಸಿದ್ದಾರೆ.

ADVERTISEMENT

‘ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದವರನ್ನು ಬಹಿಷ್ಕರಿಸುವುದು ಅಥವಾ ಅವರನ್ನು ಅಪರಾಧಿಗಳಂತೆ ಬಿಂಬಿಸುವುದು ತಪ್ಪು.ಲಸಿಕೆ ಪಡೆಯುವುದು ಐಚ್ಛಿಕವೆಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಹೇಳಿದೆ.ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದವರನ್ನು ವಿವಿಧ ಸೇವೆಗಳಿಂದ ಅಥವಾ ಪ್ರವೇಶಾತಿಗಳಿಂದ ಹೊರಗುಳಿಸುವುದು ಸರಿಯಲ್ಲವೆಂದು ಗುಜರಾತ್, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಹೈಕೋರ್ಟ್‌ಗಳು ಈಗಾಗಲೇ ಆದೇಶಗಳನ್ನು ನೀಡಿವೆ.ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಹೈಕೋರ್ಟ್‌ಗಳಲ್ಲಿಯೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ವಿಚಾರಣೆಯಲ್ಲಿವೆ’ ಎಂದು ತಿಳಿಸಿದ್ದಾರೆ.

‘ಲಸಿಕೆ ಪಡೆಯದವರಿಗೆ ಪಡಿತರ ಇಲ್ಲ, ಜಿಲ್ಲಾಧಿಕಾರಿ ಕಚೇರಿಗೆ ಪ್ರವೇಶವಿಲ್ಲ, ಕಾಲೇಜುಗಳಿಗೆ ಬರುವ ಹಾಗಿಲ್ಲ, ಅನ್ಯ ರಾಜ್ಯದವರು ರಾಜ್ಯದೊಳಕ್ಕೆ ಬರುವಂತಿಲ್ಲ ಎಂಬುವಂತಹ ಆದೇಶಗಳು ಸರ್ಕಾರದಿಂದ ಹೊರಬಿದ್ದಿವೆ.‌ ಇದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

ಲಸಿಕೆಗೆ ವಿರೋಧವಿಲ್ಲ:‘ಲಸಿಕೆಯನ್ನು ವಿರೋಧಿಸುವ ಅಥವಾ ಪ್ರಶ್ನಿಸುವ ಯಾವುದೇ ಉದ್ದೇಶವನ್ನೂ ನಾವು ಹೊಂದಿಲ್ಲ. ವೈದ್ಯಕೀಯ ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರು ಲಸಿಕೆ ಪಡೆದಿಲ್ಲ. ಅವರನ್ನು ಜೀವನದ ಎಲ್ಲ ಚಟುವಟಿಕೆಗಳಿಂದ ಬಹಿಷ್ಕರಿಸುವುದು ಅಥವಾ ಅಸ್ಪೃಶ್ಯರನ್ನಾಗಿ ನೋಡುವುದನ್ನು ಯಾವ ರೀತಿಯಿಂದಲೂ ಒಪ್ಪಲು ಸಾಧ್ಯವಿಲ್ಲ. ಲಸಿಕೆ ಹಾಕಿಸಿಕೊಳ್ಳದವರನ್ನು ಕೆಟ್ಟದಾಗಿ ಬಿಂಬಿಸುವುದನ್ನು ಈ ಕೂಡಲೇ ಕೊನೆಗೊಳಿಸಬೇಕು’ ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.