
ಬೆಂಗಳೂರು: ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ (ಆಕ್ಸಿಜನ್) ಕೊರತೆ ಉಂಟಾಗುತ್ತಿರುವುದರಿಂದ ನಗರದಲ್ಲಿ ಕೆಲವರು ಮುನ್ನೆಚ್ಚರಿಕೆಯಾಗಿ ಆಕ್ಸಿಜನ್ ಸಿಲಿಂಡರ್ಗಳನ್ನು ಮನೆಗೆ ಒಯ್ಯಲಾರಂಭಿಸಿದ್ದಾರೆ. ಇದರಿಂದಾಗಿ ಸಮಸ್ಯೆ ಮತ್ತಷ್ಟು ಹೆಚ್ಚಿದೆ.
2.24 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳು ನಗರದಲ್ಲಿದ್ದು, ತೀವ್ರ ನಿಗಾ ಘಟಕಕ್ಕೆ ದಾಖಲಾಗುವವರ ಸಂಖ್ಯೆ ಹೆಚ್ಚಳವಾಗಿದೆ. ಸೋಂಕಿತರಲ್ಲಿ ಶೇ 10ರಷ್ಟು ಮಂದಿ ತೀವ್ರ ಅಸ್ವಸ್ತೆಯಿಂದ ಆಸ್ಪತ್ರೆಗೆ ದಾಖಲಾಗಲಾರಂಭಿಸಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹಚ್ಚಿದೆ. ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದಲ್ಲಿ ಬೇಡಿಕೆ 3–4 ಪಟ್ಟು ಹೆಚ್ಚಳವಾಗಿದೆ.
ಖಾಸಗಿ ಆಸ್ಪತ್ರೆಗಳು ಪ್ರತಿನಿತ್ಯ 300 ಟನ್ ಆಕ್ಸಿಜನ್ಗೆ ಬೇಡಿಕೆ ಇಡುತ್ತಿವೆ. ಆದರೆ, ಶೇ 50ರಷ್ಟು ಆಮ್ಲಜನಕವನ್ನು ಮಾತ್ರ ಪೂರೈಕೆದಾರರು ಒದಗಿಸುತ್ತಿದ್ದಾರೆ. ಇದರಿಂದಾಗಿ ಕೆಲ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುತ್ತಿವೆ. ಇನ್ನೂ ಕೆಲವು ಆಸ್ಪತ್ರೆಗಳು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಮುಂದಾಗುತ್ತಿವೆ. ಹೀಗಾಗಿ, ಪೀಣ್ಯ ಸೇರಿದಂತೆ ವಿವಿಧೆಡೆಯಿಂದ ಮನೆಗೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ‘ಪೂರೈಕೆದಾರರು ದುಪ್ಪಟ್ಟು ಹಣಕ್ಕೆ ಸಣ್ಣ ಆಕ್ಸಿಜನ್ ಸಿಲಿಂಡರ್ಗಳನ್ನು ಮಾರುತ್ತಿದ್ದಾರೆ. ಇದರಿಂದಾಗಿ ಆಮ್ಲಜನಕದ ಅಭಾವ ಮತ್ತಷ್ಟು ಹೆಚ್ಚಳವಾಗಿದೆ’ ಎಂದು ವೈದ್ಯರು ಆರೋಪಿಸಿದ್ದಾರೆ.
ಹೆಚ್ಚಿದ ಬೇಡಿಕೆ: ‘ಕೋವಿಡ್ ಕಾಣಿಸಿಕೊಳ್ಳುವ ಮೊದಲು ಸಹ ಮನೆಗೆ ಕೊಂಡೊಯ್ಯಬಹುದಾದ ಆಕ್ಸಿಜನ್ ಸಿಲಿಂಡರ್ಗಳಿಗೆ ಕೆಲವರು ಬೇಡಿಕೆ ಇಡುತ್ತಿದ್ದರು. ಆಗ ಪೂರೈಕೆ ಮಾಡಲಾಗುತ್ತಿತ್ತು. ಕೋವಿಡ್ ಕಾಣಿಸಿಕೊಂಡ ಬಳಿಕ ಆಸ್ಪತ್ರೆಗಳಿಗೆ ಅಗತ್ಯಕ್ಕೆ ಅನುಸಾರವಾಗಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಮನೆಗೆ ಕೊಂಡೊಯ್ಯಬಹುದಾದ ಸಿಲಿಂಡರ್ಗಳಿಗೆ ಪ್ರತಿನಿತ್ಯ 100ರಿಂದ 200 ಮಂದಿ ವಿಚಾರಿಸುತ್ತಿದ್ದಾರೆ. ತುರ್ತಾಗಿ ಅಗತ್ಯ ಇರುವವರಿಗೆ, ವೈದ್ಯರ ಶಿಫಾರಸು ಪತ್ರ ಹೊಂದಿರುವವರಿಗೆ ಒದಗಿಸುತ್ತಿದ್ದೇವೆ’ ಎಂದು ಪೀಣ್ಯದ ಆಕ್ಸಿಜನ್ ಸಿಲಿಂಡರ್ ವಿತರಕರೊಬ್ಬರು ತಿಳಿಸಿದರು.
‘ಸಮಾಲೋಚನೆ ನಡೆಸದಿದ್ದಲ್ಲಿ ಅಪಾಯ’
‘ಸ್ವಯಂ ಆರೈಕೆ ಯಾವಾಗಲೂ ಅಪಾಯ. ಯಾವುದೇ ರೋಗಿ ಮನೆಗೆ ಆಕ್ಸಿಜನ್ ಸಿಲಿಂಡರ್ ಕೊಂಡೊಯ್ಯುವ ಮೊದಲು ವೈದ್ಯರ ಜತೆಗೆ ಸಮಾಲೋಚನೆ ನಡೆಸಬೇಕು. ಶ್ವಾಸಕೋಶಕ್ಕೆ ಹಾನಿಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಾನಿಯಾಗಿಲ್ಲ ಎಂದಾದಲ್ಲಿ ಮನೆಯಲ್ಲಿ ಆಕ್ಸಿಜನ್ ಪಡೆದುಕೊಳ್ಳಬಹುದು. ಇಲ್ಲವಾದಲ್ಲಿ ಶ್ವಾಸಕೋಶಕ್ಕೆ ಸಂಪೂರ್ಣ ಹಾನಿಯಾಗಿ, ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇರುತ್ತದೆ. ಶ್ವಾಸಕೋಶಕ್ಕೆ ಹಾನಿಯಾಗಲು 3–4 ದಿನಗಳು ಬೇಕಾಗುತ್ತವೆ.’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಡಾ. ಶಿವಕುಮಾರ್ ತಿಳಿಸಿದರು.
‘ವೈದ್ಯರ ಮಾರ್ಗದರ್ಶನ ಪಡೆದು, ಮನೆಯಲ್ಲಿಯೇ ಆಕ್ಸಿಜನ್ ಸಿಲಿಂಡರ್ ಅಳವಡಿಸಿಕೊಳ್ಳಬಹುದು. ರಕ್ತದಲ್ಲಿನ ಆಮ್ಲಜನಕದ ಪ್ರಮಾಣ ಪರೀಕ್ಷೆ ಮಾಡಿಕೊಳ್ಳುತ್ತಿರಬೇಕು. ಕೆಲವರು ಪೂರೈಕೆದಾರರಿಂದ ನೇರವಾಗಿ ಪಡೆದು, ಮನೆಗೆ ಕೊಂಡೊಯ್ಯುತ್ತಿದ್ದಾರೆ. ಇದರಿಂದ ಇನ್ನಷ್ಟು ಅಭಾವ ಸೃಷ್ಟಿಯಾಗುತ್ತಿದೆ’ ಎಂದು ಬೆಂಗಳೂರು ನಗರ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅನ್ಸರ್ ಅಹಮದ್ ತಿಳಿಸಿದರು.
‘ಮನೆಯಲ್ಲಿ ಶೇಖರಿಸಿದ್ದಲ್ಲಿ ಸಮಸ್ಯೆ’
‘ಆಮ್ಲಜನಕದ ಕೊರತೆ ಮುಂದುವರಿದಿದೆ. ನಮ್ಮ ಕೈಲಾದಪ್ರಯತ್ನ ಮಾಡುತ್ತಿದ್ದೇವೆ. ನಾವು 40 ಕೋವಿಡ್ ಪೀಡಿತರಿಗೆ ಚಿಕಿತ್ಸೆಒದಗಿಸುತ್ತಿದ್ದೇವೆ. 20 ಮಂದಿ ಸ್ಥಿತಿ ಗಂಭೀರವಾಗಿದೆ. ನಮಗೆ ಪ್ರತಿನಿತ್ಯ 40ರಿಂದ 45 ಜಂಬೋ ಸಿಲಿಂಡರ್ ಅಗತ್ಯವಿದೆ. ಆದರೆ, 25ರಿಂದ 30 ಸಿಲಿಂಡರ್ ಸಿಗುತ್ತಿದೆ’ ಎಂದು ಆತ್ರೇಯಾ ಆಸ್ಪತ್ರೆಯ ಡಾ. ನಾರಾಯಣಸ್ವಾಮಿ ಅವರು ತಿಳಿಸಿದರು.
‘ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದ ಕಾರಣ ಕೆಲವರು ದುಪ್ಪಟ್ಟು ಹಣನೀಡಿ, ಪೂರೈಕೆದಾರರಿಂದ ಖರೀದಿಸುತ್ತಿದ್ದಾರೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.