ADVERTISEMENT

ಜಿಲ್ಲಾಡಳಿತ ವಿರುದ್ಧ ಹಿಂಜಾವೆ ಆಕ್ರೋಶ

ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಅನುಮತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2021, 13:48 IST
Last Updated 21 ಸೆಪ್ಟೆಂಬರ್ 2021, 13:48 IST
ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ಅವರು ವಿದ್ಯಾಗಣಪತಿ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು
ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ್‌ ಅವರು ವಿದ್ಯಾಗಣಪತಿ ಮಂಡಳಿಯ ಪದಾಧಿಕಾರಿಗಳು ಹಾಗೂ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು   

ಚಾಮರಾಜನಗರ: ನಗರದ ಶ್ರೀ ವಿದ್ಯಾಗಣಪತಿ ಮಂಡಳಿಯು ಪ್ರತಿಷ್ಠಾಪಿಸಿರುವ ಭೂಮಂಡಲ ರಕ್ಷ ಗಣಪತಿ ಮೂರ್ತಿಯ ವಿಸರ್ಜನಾ ಮೆರವಣಿಗೆಗೆ ಅವಕಾಶ ನೀಡದ ಜಿಲ್ಲಾಡಳಿತದ ವಿರುದ್ಧ ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್‌ ಕಾರಂತ ಅವರು ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದರು.

ನಗರಕ್ಕೆ ಭೇಟಿ ನೀಡಿ ಗಣಪತಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ‘ಇಲ್ಲಿನ ಐತಿಹಾಸಿಕ ಗಣೇಶೋತ್ಸವದ ವಿಸರ್ಜನಾ ಕಾರ್ಯ ಮುಗಿಯಬೇಕಿತ್ತು. ಆದರೆ, ಅಧಿಕಾರಶಾಹಿಯ ಅನಗತ್ಯ ಮಧ್ಯಪ್ರವೇಶದಿಂದಾಗಿ ವಿಸರ್ಜನೆ ಕಾರ್ಯಕ್ರಮ ಡೋಲಾಯಮಾನ ಸ್ಥಿತಿಗೆ ತಲುಪಿದೆ. ಗಣೇಶನ ಆರಾಧನೆಯನ್ನು ಸಾವಿರಾರು ವರ್ಷಗಳಿಂದ ಮಾಡುತ್ತಾ ಬಂದಿರುವ ಸಮಾಜ ನಮ್ಮದು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಾಲಗಂಗಾಧರ ತಿಲಕ್‌ ಅವರು ಜನರಲ್ಲಿ ಹೋರಾಟದ ಕಿಡಿಯನ್ನು ಹತ್ತಿಸುವ ಉದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆರಂಭಿಸಿದರು. ಆದರೆ, ಸ್ವಾತಂತ್ರ್ಯ ನಂತರದಲ್ಲೂ ಗಣೇಶೋತ್ಸವ ಹಾಗೂ ವಿಸರ್ಜನೆಗೆ ಅನಗತ್ಯವಾಗಿ ಅಡ್ಡಿ ತರುವುದರ ಹಿಂದೆ ಅಧಿಕಾರಶಾಹಿಯ ದುರುದ್ದೇಶ ಏನು ಎಂಬುದು ಪ್ರಶ್ನೆಯಾಗಿ ಉಳಿದಿದೆ’ ಎಂದರು.

‘ಗಣಪತಿ ಮೂರ್ತಿಯ ವಿಸರ್ಜನೆಗೆ ಅಡ್ಡಿ ಮಾಡುವವರನ್ನು ನಾವು ಲೆಕ್ಕಿಸುವುದಿಲ್ಲ. ಅಧಿಕಾರಿಗಳು ಈ ರೀತಿಯ ಅವಿವೇಕಿ ವರ್ತನೆಯನ್ನು ನಿಲ್ಲಿಸಬೇಕು. ವಿಸರ್ಜನೆ ವಿಳಂಬಕ್ಕೆ ಕಾರಣರಾದವರನ್ನು ನಾವು ಸುಮ್ಮನೆ ಬಿಡುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬಲಿದಾನ ಇಲ್ಲದೆ ಬದಲಾವಣೆ ಇಲ್ಲ: ‘ಚಾಮರಾಜನಗರದ ಗಣೇಶೋತ್ಸವಕ್ಕೆ ಇತಿಹಾಸ ಇದೆ. ಮನೋರಂಜನೆಗಾಗಿ ಗಣೇಶೋತ್ಸವವನ್ನು ಆಚರಿಸುತ್ತಿಲ್ಲ. ಈ ಉತ್ಸವವು ಧೈರ್ಯದ ಪಾಠ ಹೇಳುತ್ತದೆ. ಧೈರ್ಯವು ಸಮಾಜ ಹಾಗೂ ಮನೆಯನ್ನು ಉಳಿಸುತ್ತದೆ. ಹಲವು ರಾಷ್ಟ್ರನಾಯಕರು ತಮ್ಮ ಪ್ರಾಣವನ್ನು ಬದಲಿದಾನ ಮಾಡಿ ಸ್ವಾತಂತ್ರ್ಯ ತಂದುಕೊಟ್ಟರು. ಬಲಿದಾನ ಇಲ್ಲದೆ ಬದಲಾವಣೆ ಇಲ್ಲ. ಹುಟ್ಟುವುದು ಒಮ್ಮೆ, ಸಾಯುವುದೂ ಒಮ್ಮೆಯೇ. ಸಾವಿಗೆ ಅಂಜುವ ವ್ಯಕ್ತಿ ಬದುಕುವುದಿಲ್ಲ. ಬದುಕುವ ವ್ಯಕ್ತಿ ಸಾವಿಗೆ ಹೆದರುವುದಿಲ್ಲ.ಧರ್ಮ, ದೇಶ, ಹಕ್ಕು, ಸ್ವಾತಂತ್ರ್ಯಕ್ಕಾಗಿ ಸಾಯುವ ತಲೆಮಾರನ್ನು ಸೃಷ್ಟಿ ಮಾಡಿದಾಗ ಮುಂದಿನ ಪೀಳಿಗೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತದೆ. ನಾಯಿ, ನರಿಗಳು ಸತ್ತಂತೆ ಹಿಂದುಗಳ ಬದುಕು ಆಗಬಾರದು’ ಎಂದು ಜಗದೀಶ್‌ ಕಾರಂತ ಅವರು ಹೇಳಿದರು.

ಚುಡಾ ಅಧ್ಯಕ್ಷ ಶಾಂತಮೂರ್ತಿ, ಗಣಪತಿ ಮಂಡಳಿಯ ಅಧ್ಯಕ್ಷ ಚಿಕ್ಕರಾಜು, ಗೌರವ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ, ಬಿಜೆಪಿ ಮುಖಂಡ ನಿಜಗುಣ ರಾಜು, ನಗರಸಭಾ ಸದಸ್ಯ ರಾಘವೇಂದ್ರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.