
ಕೊಪ್ಪ: ‘ಜಮೀನು ಖಾತೆದಾರ ವ್ಯಕ್ತಿ ಮೃತಪಟ್ಟ 60 ದಿನಗಳೊಳಗೆ ಸಂಬಂಧಿಸಿದವರು ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿ ಗಮನಕ್ಕೆ ತಂದು, ಪೌತಿ ಖಾತೆ ಮಾಡಿಸಿಕೊಳ್ಳಬೇಕು’ ಎಂದು ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜ್ ತಿಳಿಸಿದರು.
ತಾಲ್ಲೂಕಿನ ಹರಿಹರಪುರ ಹೋಬಳಿ ಕುರುಕಬಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಿರಕರಡಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪೌತಿ ಖಾತೆ ಮಾಡಿಸಿಕೊಳ್ಳದಿದ್ದಲ್ಲಿ ಬೆಳೆ ಪರಿಹಾರ, ಪ್ರಕೃತಿ ವಿಕೋಪ ಪರಿಹಾರ, ಕಿಸಾನ್ ಸಮ್ಮಾನ್ ಯೋಜನೆ, ಬ್ಯಾಂಕ್ ನಲ್ಲಿ ಸಾಲ, ಸೌಲಭ್ಯ ಪಡೆಯಲು ಅಡ್ಡಿಯಾಗುತ್ತದೆ‘ ಎಂದರು.
‘ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಸಮಾನ ಹಕ್ಕಿದೆ. ಮೊದಲು ಜಮೀನು ವಾರಸುದಾರನ ಪತ್ನಿ ಹೆಸರಿಗೆ ಖಾತೆ ಬದಲಾಗಬೇಕು. ಪತ್ನಿ ಒಪ್ಪಿಗೆ ನೀಡಿದರೆ ಮಾತ್ರ ಮಕ್ಕಳ ಹೆಸರಿಗೆ ಖಾತೆ ಮಾಡಲು ಅವಕಾಶವಿದೆ. ಪೌತಿ ಖಾತೆಗೆ ಸಂಬಂಧಿಸಿದ ಜಿಲ್ಲೆಯಲ್ಲಿ 12,450 ಪ್ರಕರಣ ಬಾಕಿ ಇವೆ’ ಎಂದು ತಿಳಿಸಿದರು.
‘ಜಮೀನು ದಾಖಲೆಗಳಲ್ಲಿ ಹೆಸರು, ಹಿಸ್ಸಾ ನಂಬರ್, ತಪ್ಪಾಗಿ ನಮೂದಾಗಿದ್ದಲ್ಲಿ, ಅರ್ಜಿ ಸಲ್ಲಿಸಿ ಅದನ್ನು ಸರಿಪಡಿಸಿಕೊಳ್ಳಬಹುದು. ಕೃಷಿ ಇಲಾಖೆಯ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡರೆ, ಸರ್ಕಾರದ ಯೋಜನೆಗಳ ಮಾಹಿತಿ ಸಿಗುತ್ತದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಎನ್.ರಾಮಸ್ವಾಮಿ ಮಾತನಾಡಿ, ‘ಗ್ರಾಮ ವಾಸ್ತವ್ಯ ಕೇವಲ ಒಂದು ಗ್ರಾಮಕ್ಕೆ ಸೀಮಿತವಾಗದೇ, ಇಡೀ ಪಂಚಾಯಿತಿಗೆ ವಿಸ್ತರಣೆ ಆಗಬೇಕು. ಇದರಿಂದ ಹಲವಾರು ಸಮಸ್ಯೆಗಳು ಇತ್ಯರ್ಥವಾಗುತ್ತವೆ. ಈ ಭಾಗದಲ್ಲಿ ಸೊಪ್ಪಿನಬೆಟ್ಟ ಜಾಗ ಇರುವುರಿಂದ 94ಸಿ ಅಡಿಯಲ್ಲಿ ಹಕ್ಕುಪತ್ರಕ್ಕೆ ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.
ತಹಶೀಲ್ದಾರ್ ಎಚ್.ಎಸ್. ಪರಮೇಶ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಕೆ.ಕಿರಣ್, ಕಾರ್ಯನಿರ್ವಹಣಾಧಿಕಾರಿ ಎಚ್.ಡಿ. ನವೀನ್ ಕುಮಾರ್, ಉಪ ತಹಶೀಲ್ದಾರ್ ನಾಗರಾಜ್, ಕಂದಾಯ ನಿರೀಕ್ಷಕ ಸುಧೀರ್, ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ, ಉಪಾಧ್ಯಕ್ಷೆ ಲೀಲಾವತಿ ಇದ್ದರು.
ಸಮಸ್ಯೆ ಇತ್ಯರ್ಥಕ್ಕೆ ಭರವಸೆ: ‘ಜಮೀನು ಆರ್.ಟಿ.ಸಿಯಲ್ಲಿ ಶೃಂಗೇರಿ ಶ್ರೀಮಠದ ಅನುಭವದಾರ ಎಂದು ಬರುತ್ತಿದೆ. ಮ್ಯುಟೇಷನ್ ಆಗಿಲ್ಲ, ಪಹಣಿ ಸಿಗುತ್ತಿಲ್ಲ. ಇದರಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ’ ಎಂದು ಶಿರಕರಡಿ ಗ್ರಾಮಸ್ಥ ನಾಗೇಂದ್ರ ಅವರು, ಗ್ರಾಮದ ಒಟ್ಟು 56 ಜನರಿಗೆ ಸಂಬಂಧಿಸಿದ 120 ಎಕರೆ ಜಮೀನು ಭೂಮಿ ಸಮಸ್ಯೆ ಬಗ್ಗೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ನಾಗರಾಜ್, ’ನಾಡ ಕಚೇರಿ ಮೂಲಕ ಅರ್ಜಿ ಸಲ್ಲಿಸಿದರೆ, ಸಮಸ್ಯೆ ಪರಿಹರಿಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.