ADVERTISEMENT

ಚುನಾವಣೆ ನಂತರ ಬಾಗಿನ ವಿತರಣೆ: ಸುಧಾಕರ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2023, 4:32 IST
Last Updated 21 ಮಾರ್ಚ್ 2023, 4:32 IST
ಸುಧಾಕರ ಎಸ್.ಶೆಟ್ಟಿ
ಸುಧಾಕರ ಎಸ್.ಶೆಟ್ಟಿ   

ಕೊಪ್ಪ: ‘ಶೃಂಗೇರಿ ಕ್ಷೇತ್ರದಲ್ಲಿ ಜನರನ್ನು ಭಯಬೀಳಿಸಿ, ಜೆಡಿಎಸ್ ಅಭ್ಯರ್ಥಿಯನ್ನು ಹಿಮ್ಮೆಟ್ಟಿಸಬಹುದು ಎಂದುಕೊಂಡಿದ್ದರೆ ಅದು ಎರಡು ರಾಷ್ಟ್ರೀಯ ಪಕ್ಷಗಳ ಕನಸಿನ ಮಾತು ಮತ್ತು ಮೂರ್ಖತನ’ ಎಂದು ನಿಯೋಜಿತ ಜೆ.ಡಿ.ಎಸ್ ಅಭ್ಯರ್ಥಿ ಸುಧಾಕರ ಎಸ್.ಶೆಟ್ಟಿ ಎಂದರು.

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ‘ಹೆಗ್ಗಾರು ಕೊಡಿಗೆ ಯಲ್ಲಿ ಜೆಡಿಎಸ್ ವತಿಯಿಂದ ಬಾಗಿನ ಕೊಡುವಾಗ ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರು ಪೊಲೀಸ ರನ್ನು ಬಳಸಿಕೊಂಡು ಬಾಗಿನ ವಶಪಡಿಸಿ ಕೊಂಡಿದ್ದಾರೆ. ಆದರೆ, ಬಿಜೆಪಿಯವರು 12 ಸಾವಿರ ಸೀರೆ ವಿತರಿಸುವಾಗ, ಕಾಂಗ್ರೆಸ್ ಕುಕ್ಕರ್ ವಿತರಿಸುವಾಗ ಪೊಲೀಸರು ರಕ್ಷಣೆ ನೀಡಿದ್ದಾರೆ. ಮೂರೂ ಪಕ್ಷಗಳಿಗೆ ಕಾನೂನು ಬೇರೆ ಬೇರೆ ಇದೆಯೇ’ ಎಂದು ಪ್ರಶ್ನಿಸಿದರು.

‘ಬನ್ನೂರಿನಲ್ಲಿ ಜನರ ಸಮಸ್ಯೆ ಆಲಿಸಲು ಹೋದಾಗ ಬಿಜೆಪಿ ಕಡೆಯ ವರು ನಮ್ಮನ್ನು ತಡೆದಿದ್ದಾರೆ. ಕ್ಷೇತ್ರದಲ್ಲಿ ಬಡವರು, ಪರಿಶಿಷ್ಟ, ಶೋಷಿತರು ಒಂದು ಪರವಾಗಿ ಇದ್ದಾರೆ. ತೋಳ್ಬಲ, ಬಲಾಢ್ಯರೇ ಒಂದು ಪರವಿದ್ದಾರೆ. ಚುನಾವಣೆಯನ್ನು ದ್ವೇಷ ಹರಡುವ ಮೂಲಕ ಎದುರಿಸಲು ರಾಷ್ಟ್ರೀಯ ಪಕ್ಷಗಳು ಮುಂದಾಗಿವೆ’ ಎಂದರು.

ADVERTISEMENT

‘ಮೂರ್ನಾಲ್ಕು ವರ್ಷಗಳಿಂದ ನಾನು ಅಮ್ಮ ಫೌಂಡೇ ಷನ್ ಹೆಸರಿನಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದೇನೆ. ಕೇವಲ ಚುನಾವಣೆ ಸಂದರ್ಭದಲ್ಲಿ ಮಾತ್ರ ಬಾಗಿನ ಕೊಟ್ಟಿಲ್ಲ, ಇಂದಿನಿಂದ ಅದನ್ನೂ ನಿಲ್ಲಿಸಿದ್ದೇನೆ. ಚುನಾವಣೆ ನಂತರ ಮುಂದೆಯೂ ಬಾಗಿನ ಕೊಡುವುದನ್ನು ಮುಂದು ವರಿಸುತ್ತೇನೆ’ ಎಂದು ತಿಳಿಸಿದರು.

‘ನಾನು ಮೈಸೂರಿನಲ್ಲಿ ದುಡಿದು ಹಳ್ಳಿಗೆ ಜನಸೇವೆಗಾಗಿ ಬಂದಿದ್ದೇನೆ. ಆದರೆ, ಇಲ್ಲಿರುವವರು ಕ್ಷೇತ್ರದಲ್ಲಿ ಕೊಳ್ಳೆ ಹೊಡೆದು ಬೆಂಗಳೂರಿನಲ್ಲಿ ಆಸ್ತಿ ಮಾಡಿದ್ದಾರೆ. ಅದರ ವಿರುದ್ಧ ಪ್ರಕರಣ ಕೂಡ ದಾಖಲಾಗಿದೆ. ನೀವು ಹಳ್ಳಿಯಿಂದ ಸಿಟಿಗೆ ಪಲಾಯನ ಮಾಡಿದ್ದೀರಿ, ಆದರೆ ನಾನು ಸಿಟಿಯಿಂದ ಹಳ್ಳಿಗೆ ಬಂದಿದ್ದೇನೆ’ ಎಂದರು.

ಕ್ಷೇತ್ರ ಜೆಡಿಎಸ್ ಘಟಕದ ಅಧ್ಯಕ್ಷ ಭಂಡಿಗಡಿ ದಿವಾಕರ್ ಭಟ್, ತಾಲ್ಲೂಕು ಘಟಕದ ಅಧ್ಯಕ್ಷ ಕಗ್ಗಾ ರಾಮಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕಣಿವೆ, ಪಕ್ಷದ ಮುಖಂಡರಾದ ಎಚ್.ಎಸ್.ಕಳಸಪ್ಪ, ಎಸ್.ಎಸ್ ಸಂಜಯ್, ಫ್ರಾನ್ಸಿಸ್ ಕಾರ್ಡೋಜ ಇದ್ದರು.

ಕಣ್ಣೀರಿಟ್ಟ ಸುಧಾಕರ

‘ಬಿಜೆಪಿಯ ರೋಹಿತ್ ಎಂಬಾತ ನನ್ನ ಬಗ್ಗೆ ಕೀಳುಮಟ್ಟದ ಪದ ಪ್ರಯೋಗ ಮಾಡಿದ್ದಾರೆ. ಇದು ರೋಹಿತ್‌ಗೆ, ಜೀವರಾಜ್‌ ಅವರಿಗೆ ಶೋಭೆ ತರುವುದಿಲ್ಲ. ನಾನು ಸಂಸ್ಕಾರವಂತ ಕುಟುಂಬದ ಹಿನ್ನೆಲೆಲೆಯಿಂದ ಬಂದವನು. ಇಂತಹ ಆಡಿಯೋವನ್ನು ಕಾಂಗ್ರೆಸ್‌ನವರು ರಾಜಕೀಯ ಲಾಭಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟರು.

‘ರೋಹಿತ್ ಕ್ಷಮೆ ಕೇಳಿದ್ದರಿಂದ ನಾನು ಕೇಸು ದಾಖಲಿಸಲಿಲ್ಲ. ನಮ್ಮ ಪಕ್ಷದವರು ಪ್ರತಿಭಟನೆ ಮಾಡುವುದಾಗಿ ಹೇಳಿದರು. ಆದರೆ, ದ್ವೇಷ ಹರಡುವುದು ಬೇಡ ಎಂದು ನಾನು ತಡೆದಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.