ADVERTISEMENT

ಕ್ರೀಡಾಂಗಣಕ್ಕೆ ಬೇಕು ಕಾಯಕಲ್ಪ

ನರಸಿಂಹರಾಜಪುರ ತಾಲ್ಲೂಕು ಕ್ರೀಡಾಂಗಣ

ಕೆ.ವಿ.ನಾಗರಾಜ್
Published 21 ಮಾರ್ಚ್ 2021, 2:43 IST
Last Updated 21 ಮಾರ್ಚ್ 2021, 2:43 IST
ನರಸಿಂಹರಾಜಪುರದ ಸರ್ಕಾರಿ ಪದವಿಪೂರ್ವ ಕಾಲೇಜು ವ್ಯಾಪ್ತಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣ
ನರಸಿಂಹರಾಜಪುರದ ಸರ್ಕಾರಿ ಪದವಿಪೂರ್ವ ಕಾಲೇಜು ವ್ಯಾಪ್ತಿಯಲ್ಲಿರುವ ತಾಲ್ಲೂಕು ಕ್ರೀಡಾಂಗಣ   

ನರಸಿಂಹರಾಜಪುರ: ತಾಲ್ಲೂಕು ಕೇಂದ್ರದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಾಣವಾಗಿರುವ ಕ್ರೀಡಾಂಗಣ, ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

ತಾಲ್ಲೂಕು ಕ್ರೀಡಾಂಗಣ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜು ಕಟ್ಟಡಕ್ಕೆ ಊರಿನ ದಾನಿ ಎಚ್.ಎಸ್.ನಿರವಾಣಪ್ಪ ಅವರು 1.21 ಎಕರೆ ಜಾಗವನ್ನು ಜುಲೈ17, 1967ರಂದು ದಾನವಾಗಿ ನೀಡಿದ್ದರು. ಈ ಜಾಗವನ್ನು ಪ್ರಾಥಮಿಕ, ಪ್ರೌಢ ಹಾಗೂ ಕಾಲೇಜು ವಿದ್ಯಾರ್ಥಿಗಳು ಆಟದ ಮೈದಾನವನ್ನಾಗಿ ಬಳಸಲಾಗುತ್ತಿತ್ತು. ಇದೇ ಜಾಗದ ವ್ಯಾಪ್ತಿಯಲ್ಲಿ ಶಾಲಾ ಮತ್ತು ಕಾಲೇಜು ಕಟ್ಟಡ ಸಹ ನಿರ್ಮಿಸಲಾಗಿತ್ತು. ಡಿ.ಬಿ.ಚಂದ್ರೇಗೌಡ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾ ಗಿದ್ದ ಸಂದರ್ಭದಲ್ಲಿ ಕ್ರೀಡಾಂಗಣ ಅಭಿವೃದ್ಧಿಪಡಿಸಿ, ಒಂದು ಭಾಗದಲ್ಲಿ ಪ್ರೇಕ್ಷಕರ ಗ್ಯಾಲರಿ ನಿರ್ಮಿಸಿ, 2004ರಲ್ಲಿ ಇದಕ್ಕೆ ‘ರಾಷ್ಟ್ರಕವಿ ಕುವೆಂಪು ಕ್ರೀಡಾಂಗಣ’ ಎಂದು ನಾಮಕರಣ ಮಾಡಲಾಗಿತ್ತು.

ನಂತರದಲ್ಲಿ ಡಿ.ಎನ್.ಜೀವರಾಜ್ ಶಾಸಕರಾಗಿದ್ದ ಅವಧಿಯಲ್ಲಿ ಪ್ರೇಕ್ಷಕರು ಕುಳಿತುಕೊಳ್ಳುವ ಸ್ಥಳಕ್ಕೆ ಚಾವಣಿ ಅಳವಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಪ್ರಸ್ತುತ ಜಿಲ್ಲಾ ಪಂಚಾಯಿತಿ ಅನುದಾನದಿಂದ ನೂತನವಾಗಿ ಧ್ವಜದಕಟ್ಟೆ ನಿರ್ಮಾಣ ಹಾಗೂ ಚರಂಡಿ ವ್ಯವಸ್ಥೆ ಕಲ್ಪಿಸುವ ಕಾಮಗಾರಿ ನಡೆಸಲಾಗಿದೆ.

ADVERTISEMENT

ತಾಲ್ಲೂಕು ಕೇಂದ್ರದಲ್ಲಿರುವ ಪ್ರಮುಖ ಕ್ರೀಡಾಂಗಣ ಇದಾಗಿರುವುದರಿಂದ ಬಹುತೇಕ ಕ್ರೀಡಾಕೂಟಗಳು ಇಲ್ಲಿ ನಡೆಯುತ್ತವೆ. ಹಾಗಾಗಿ ಕ್ರೀಡಾಂಗಣಕ್ಕೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ, ವಾಯುವಿಹಾರಕ್ಕೆ ತೆರಳುವವರಿಗೆ ಬೇಸಿಗೆ ಮತ್ತು ಮಳೆಗಾಲದ ಸಂದರ್ಭದಲ್ಲಿ ವಾಯುವಿಹಾರ ಮಾಡಲು ವಾಕಿಂಗ್ ಪಾಥ್ ನಿರ್ಮಾಣ, ಪ್ರೇಕ್ಷಕರ ಗ್ಯಾಲರಿ ನಿರ್ಮಾಣ, ಬೆಳಕಿನ ವ್ಯವಸ್ಥೆ, ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯ ಒದಗಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಬೇಡಿಕೆಯಾಗಿದೆ.

ಜಿಲ್ಲೆಯಲ್ಲಿರುವ ಉತ್ತಮ ಕ್ರೀಡಾಂಗಣಗಳಲ್ಲಿ ಈ ಕ್ರೀಡಾಂಗಣವೂ ಒಂದಾಗಿದ್ದು ಇದನ್ನು ಅಭಿವೃದ್ಧಿ
ಪಡಿಸಿ ಸುಸಜ್ಜಿತ ಸೌಲಭ್ಯ ಒದಗಿಸುವಂತೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿದೆ ಎಂದು ಚೈತನ್ ಯುವಕ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ತಿಳಿಸಿದರು.

‘ತಾಲ್ಲೂಕು ಕ್ರೀಡಾಂಗಣ ಅಭಿವೃದ್ಧಿಗೆ ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗಿದೆ. ಯುವಜನ ಮತ್ತು ಕ್ರೀಡಾ ಸಚಿವರು ಹಾಗೂ ಶಿಕ್ಷಣ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆಗೆ ಯತ್ನಿಸಲಾಗುವುದು’ ಎಂದು ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.