ADVERTISEMENT

98 ಪರೀಕ್ಷಾ ಕೇಂದ್ರ: 23,428 ವಿದ್ಯಾರ್ಥಿಗಳು

ಮಾರ್ಚ್ 31ರಿಂದ ಏ.15ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2023, 6:16 IST
Last Updated 22 ಮಾರ್ಚ್ 2023, 6:16 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಮಾತನಾಡಿದರು.
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಂಬಂಧಿಸಿದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಮಾತನಾಡಿದರು.   

ಚಿತ್ರದುರ್ಗ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಮಾರ್ಚ್‌ 31ರಿಂದ ಆರಂಭವಾಗಲಿವೆ. ಜಿಲ್ಲೆಯ 98 ಪರೀಕ್ಷಾ ಕೇಂದ್ರಗಳಲ್ಲಿ 23,428 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಲೋಪದೋಷ ಉಂಟಾಗದಂತೆ ಪರೀಕ್ಷೆ ನಡೆಸಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್‌.ಜೆ ಸೂಚನೆ
ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಂಬಂಧಿಸಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪರೀಕ್ಷಾ ಪತ್ರಿಕೆಗಳನ್ನು
ಸಂಗ್ರಹಿಸಿಡುವ ತಾಲ್ಲೂಕು ಖಜಾನೆಗಳಲ್ಲಿ ಹೆಚ್ಚಿನ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಬೇಕು. ಮೂರು ಪಾಳಿಗಳಲ್ಲಿ ಪೊಲೀಸರು ಕಾವಲು ಕಾಯಬೇಕು. ಬಿಇಒ ನೇತೃತ್ವದ ಸಮಿತಿಯ ಸಮ್ಮುಖದಲ್ಲಿಯೇ ಪ್ರಶ್ನೆಪತ್ರಿಕೆಗಳನ್ನು ಆಯಾ ತಾಲ್ಲೂಕು ಖಜಾನೆಗಳಿಂದ ಪರೀಕ್ಷೆ ಕೇಂದ್ರಗಳಿಗೆ ರವಾನಿಸಬೇಕು’ ಎಂದು
ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ಸ್ಥಾಪಿಸಿದ 98 ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್‌ ಸಿಬ್ಬಂದಿ ನೇಮಕ ಮಾಡಬೇಕು. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಹೊರಡಿಸಲಾಗುತ್ತದೆ. ಪರೀಕ್ಷೆ ಬರೆಯವ ವಿದ್ಯಾರ್ಥಿ ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳನ್ನು ಹೊರತು ಪಡೆಸಿ ಅನ್ಯರು ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ. ನಕಲು ಹಾಗೂ ಇತರ ಅಕ್ರಮಗಳು ನಡೆಯದಂತೆ ಕಡಿವಾಣ ಹಾಕಬೇಕು’
ಎಂದರು.

ಡಿಡಿಪಿಐ ಕೆ. ರವಿಶಂಕರ್‌ ರೆಡ್ಡಿ ಮಾತನಾಡಿ, ‘ಮಾರ್ಚ್ 31ರಿಂದ ಏ.15ರವರೆಗೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿವೆ. ಕಳೆದ ಬಾರಿ 97 ಪರೀಕ್ಷಾ ಕೇಂದ್ರಗಳಿದ್ದವು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಿರಿಯೂರು ತಾಲ್ಲೂಕಿನ ಆರನಕಟ್ಟೆಯಲ್ಲಿ ಹೊಸದಾಗಿ ಪರೀಕ್ಷಾ ಕೇಂದ್ರ ಸ್ಥಾಪಿಸಲಾಗಿದೆ. 12,002 ಬಾಲಕರು, 11,426 ಬಾಲಕಿಯರು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿಡಲು ಚಿತ್ರದುರ್ಗ ನಗರದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ಭದ್ರತಾ ಕೊಠಡಿ ಸ್ಥಾಪಿಸಿಲಾಗಿದೆ. ಮಂಡಳಿ ಸೂಚಿಸುವ ಜಿಲ್ಲೆಗೆ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ಕಳುಹಿಸಿಕೊಡಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಚಿತ್ರದುರ್ಗ ನಗರದಲ್ಲಿ 6 ಕಡೆ ವಿಷಯವಾರು ಮೌಲ್ಯಮಾಪನ ಕೇಂದ್ರಗಳನ್ನು ತೆರೆಯಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಎಸ್. ದಿವಾಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.