ADVERTISEMENT

ಮಂಗಳೂರು: ‘ಕರ್ಷಕಶ್ರೀ’ ಹಾಲು, ಮೊಸರು ಇಂದಿನಿಂದ ಲಭ್ಯ

ಹಾಲು, ಮೊಸರು ಉತ್ಪನ್ನ ಬಿಡುಗಡೆ ಮಾಡಿದ ಶಾಸಕ ಯು.ಟಿ. ಖಾದರ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 11:30 IST
Last Updated 31 ಆಗಸ್ಟ್ 2021, 11:30 IST
ಮಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಯು ಟಿ ಖಾದರ್‌ ‘ಕರ್ಷಕಶ್ರೀ’ ಪೋಸ್ಟರ್‌ ಅನಾವರಣಗೊಳಿಸುವ ಮೂಲಕ ಹಾಲು, ಮೊಸರು ಉತ್ಪನ್ನನ್ನು ಬಿಡುಗಡೆ ಮಾಡಿದರು. (ಎಡದಿಂದ) ಸಂಸ್ಥೆಯ ಸಜಿತ್‌ ಕುಮಾರ್‌, ರವೀಂದ್ರನ್‌, ಇ. ಅಬ್ದುಲ್ಲ ಕುಂಞಿ, ಚಂದ್ರಶೇಖರ್‌ ಇದ್ದರು –ಪ್ರಜಾವಾಣಿ ಚಿತ್ರ
ಮಂಗಳೂರಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಸಕ ಯು ಟಿ ಖಾದರ್‌ ‘ಕರ್ಷಕಶ್ರೀ’ ಪೋಸ್ಟರ್‌ ಅನಾವರಣಗೊಳಿಸುವ ಮೂಲಕ ಹಾಲು, ಮೊಸರು ಉತ್ಪನ್ನನ್ನು ಬಿಡುಗಡೆ ಮಾಡಿದರು. (ಎಡದಿಂದ) ಸಂಸ್ಥೆಯ ಸಜಿತ್‌ ಕುಮಾರ್‌, ರವೀಂದ್ರನ್‌, ಇ. ಅಬ್ದುಲ್ಲ ಕುಂಞಿ, ಚಂದ್ರಶೇಖರ್‌ ಇದ್ದರು –ಪ್ರಜಾವಾಣಿ ಚಿತ್ರ   

ಮಂಗಳೂರು: ಗುಣಮಟ್ಟ ಹಾಗೂ ಆರೋಗ್ಯಪೂರ್ಣ ತಾಜಾ ಹಾಲಿಗೆ ಕೇರಳ ಹಾಗೂ ಗಡಿನಾಡು ಕಾಸರಗೋಡಿನಲ್ಲಿ ಮನೆಮಾತಾಗಿರುವ ‘ಕರ್ಷಕಶ್ರೀ’ ಬುಧವಾರದಿಂದ ಮಂಗಳೂರು, ಬಂಟ್ವಾಳ, ಉಳ್ಳಾಲದ ಗಡಿ ಪ್ರದೇಶಗಳಲ್ಲಿ ಲಭಿಸಲಿದೆ.

‘ಕರ್ಷಕಶ್ರೀ’ ಉತ್ಪನ್ನಗಳನ್ನು ಕರ್ನಾಟಕದ ಗ್ರಾಹಕರಿಗಾಗಿ ಅಧಿಕೃತ ಬಿಡುಗಡೆ ಕಾರ್ಯಕ್ರಮ ನಗರದಲ್ಲಿ ಮಂಗಳವಾರ ನಡೆಯಿತು. ಶಾಸಕ ಯು.ಟಿ. ಖಾದರ್‌ ‘ಕರ್ಷಕಶ್ರೀ’ ಹಾಲು, ಮೊಸರು ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

‘ಕರ್ಷಕಶ್ರೀ’ ಪರಿಶುದ್ಧತೆ, ಗುಣಮಟ್ಟ ಹಾಗೂ ಆರೋಗ್ಯ ಕಾಳಜಿಯಲ್ಲಿ ರಾಜಿ ಮಾಡದೆ ಜನರಿಗೆ ಉತ್ತಮ ಹಾಗೂ ತಾಜಾ ಹಾಲನ್ನೇ ನೀಡುತ್ತಾರೆ ಎಂಬ ವಿಶ್ವಾಸ ನನಗಿದೆ. ‘ಕರ್ಷಕಶ್ರೀ’ ನಿರ್ದೇಶಕ ಇ. ಅಬ್ದುಲ್ಲ ಕುಂಞಿ, ದ.ಕ. ಜಿಲ್ಲಾ ಘಟಕದ ವ್ಯವಸ್ಥಾಪಕ ಚಂದ್ರ ಶೇಖರ್‌ ಉಸ್ತುವಾರಿಯಲ್ಲಿ, ಕಾಸರಗೋಡು ಜಿಲ್ಲೆಯ ವ್ಯವಸ್ಥಾಪಕ ರವೀಂದ್ರನ್‌ ಅನುಭವದೊಂದಿಗೆ ಚೆನ್ನಾಗಿ ವಿತರಣೆಯಾಗಲಿ ಎಂದು ಹಾರೈಸಿದರು. ಈ ಘಟಕಕ್ಕೆ ಹಾಗೂ ವಿತರಣೆಗೆ ನಮ್ಮ ಬೆಂಬಲ, ಸಹಕಾರ ಇದೆ. ಆದರೆ ಗುಣಮಟ್ಟ, ಆರೋಗ್ಯ, ಪರಿಶುದ್ಧತೆಯಲ್ಲಿ ರಾಜಿ ಇಲ್ಲ. ಎಲ್ಲ ಅಂಗಡಿಗಳಲ್ಲೂ, ಎಲ್ಲಕಡೆಯೂ ಜನರಿಗೆ ಲಭಿಸಬೇಕು ಎಂದು ಶಾಸಕ ಖಾದರ್‌ ತಿಳಿಸಿದರು. ಜಿಲ್ಲೆಯ ಗಡಿಭಾಗದಲ್ಲಿ ‘ಕರ್ಷಕಶ್ರೀ’ ಅತಿ ದೊಡ್ಡ ಘಟಕ ನಿರ್ಮಾಣವಾಗಲಿ ಎಂದು ಹಾರೈಸಿದರು.

ADVERTISEMENT

ನಗರದಲ್ಲಿ ಮಂಗಳವಾರ ನಡೆದ ‘ಕರ್ಷಕಶ್ರೀ’ (ಕೃಷಿಕಸಿರಿ) ಹಾಲು ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಇ. ಅಬ್ದುಲ್ಲ ಕುಂಞಿ, ‘‘ಕರ್ಷಕಶ್ರೀ’ ಹಾಲು, ಮೊಸರು ಕೇರಳ ಹಾಗೂ ಗಡಿನಾಡು ಕಾಸರಗೋಡು ಪ್ರದೇಶಗಳಲ್ಲಿ ಈಗಾಗಲೇ ಜನಪ್ರಿಯವಾಗಿದೆ. ಗುಣಮಟ್ಟ, ತಾಜಾತನ, ರುಚಿ, ಪರಿಶುದ್ಧತೆ, ಸ್ವಚ್ಛ ಪ್ಯಾಕಿಂಗ್‌, ವಿತರಣೆಗಳಿಗಾಗಿ ಹೆಸರುವಾಸಿಯಾಗಿದೆ. ಕೇರಳ ಸರ್ಕಾರಿ ಸ್ವಾಮ್ಯದ ‘ಮಿಲ್ಮಾ’ ಹಾಲು ಉತ್ಪನ್ನಗಳನ್ನು ಬಳಸುತ್ತಿದ್ದವರೂ ಅಲ್ಲಿ ಈಗ ‘ಕರ್ಷಕಶ್ರೀ’ ಬಳಕೆಗೆ ಬದಲಾಗಿದ್ದಾರೆ. ಇದೀಗ ಕರ್ನಾಟಕ್ಕೂ ಹೆಜ್ಜೆ ಇರಿಸಿದ್ದು ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು, ಸುಳ್ಯ ಪ್ರದೇಶಗಳಲ್ಲಿ ವಿತರಣೆ ನಡೆಯಲಿದೆ. ಈಗಾಗಲೇ ಸುಳ್ಯ, ಜಾಲ್ಸೂರು, ಮಂಗಳೂರು ಬಳಿ ತಲಪಾಡಿ ಆಸುಪಾಸಿನ ಜನರಿಗೆ ಈ ಹಾಲು, ಮೊಸರು ಉತ್ಪನ್ನಗಳ ಪರಿಚಯ ಇದೆ’ ಎಂದರು.

‘ದೇರಳಕಟ್ಟೆ, ಮುಡಿಪು, ಬಿ.ಸಿ. ರೋಡ್‌ ಪ್ರದೇಶಗಳಲ್ಲಿ ಬುಧವಾರ ಬೆಳಿಗ್ಗೆಯೇ ‘ಕರ್ಷಕಶ್ರೀ’ ಹಾಲು ಗ್ರಾಹಕರಿಗೆ ಲಭ್ಯವಿದೆ. ವಿತರಣೆ ಆರಂಭವಾಗಿದೆ. ಕೃಷಿಕರಿಂದ (ಹೈನುಗಾರರು) ಹಾಲು ಖರೀದಿಸಿ ಸದನ್ನು ಪಾಶ್ಚರೀಕರಿಸಿದ, ಟೋನ್ಡ್, ಹೋಮೊಜೀನ್‌ ಹಾಲು 400 ಮಿ.ಲೀ. ಪ್ಯಾಕೆಟ್‌ಗಳಲ್ಲಿ ಲಭ್ಯವಿದೆ. ಯಾವುದೇ ವಿಧದ ರಾಸಾಯನಿಕಗಳ ಬಳಕೆಯಾಗಲೀ, ಕೆನೆ ಮತ್ತಿತರ ಅಂಶಗಳನ್ನು ಸೋಸುವುದಾಗಲೀ ಮಾಡದೆ ತಾಜಾ ಹಾಲನ್ನೇ ಶುದ್ಧವಾಗಿ, ಆರೋಗ್ಯ ‍ಊರ್ಣ ವಿಧಾನದಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ವಿಶ್ವಾಸ ಈಗಾಗಲೇ ಜನರಲ್ಲಿ ಮೂಡಿದೆ ಎಂದು ಅಬ್ದುಲ್ಲ ಕುಂಞಿ ತಿಳಿಸಿದರು.

ಉಳ್ಳಾಲದ ತೊಕ್ಕೊಟ್ಟು ಚೆಂಬುಗುಡ್ಡೆಯಲ್ಲಿ ‘ಕರ್ಷಕಶ್ರೀ’ ಕಾರ್ಯಾಲಯ ಆರಂಭಿಸಿದ್ದು, ಚಂದ್ರಶೇಖರ್‌ ಇಲ್ಲಿನ ವ್ಯವಸ್ಥಾಪ‍ಕರಾಗಿದ್ದಾರೆ. ದಕ್ಷಿಣ ಕನ್ನಡ (ಮಂಗಳೂರು) ಜಿಲ್ಲೆಯ ಗಡಿಭಾಗದಲ್ಲಿ ‘ಕರ್ಷಕಶ್ರೀ’ ಹಾಲು ಸಂಸ್ಕರಣ ಘಟಕವನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು. ಜಾಗ ಇಷ್ಟರಲ್ಲೇ ನಿಗದಿಯಾಗಲಿದೆ. ಹಾಲು ಉತ್ಪನ್ನಗಳ ಪ್ಯಾಕೆಟ್‌ಗಳಲ್ಲಿ ಕನ್ನಡ ಬಳಕೆ ನಮ್ಮ ವಿಶೇಷ. ಕನ್ನಡ ನೆಲದಲ್ಲಿ ಕನ್ನಡತನ ಉಳಿಸಲಾಗುವುದು ಎಂದು ಅಚ್ಚಕನ್ನಡದಲ್ಲೇ ತಿಳಿಸಿದರು.

‘ಕರ್ಷಕಶ್ರೀ’ ಕಾಸರಗೋಡು ಜಿಲ್ಲೆ ಘಟಕದ ವ್ಯವಸ್ಥಾಪಕ ರವೀಂದ್ರನ್‌, ಸಜಿತ್‌ ಕುಮಾರ್‌ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.