ADVERTISEMENT

ಬಡ ಕುಟುಂಬಗಳ ಆಧಾರ ಸ್ತಂಭಗಳೇ ಬಲಿ

ಬಸವನಕೋಟೆ: ಮೃತ ಕೂಲಿಕಾರರ ಮನೆಗಳಲ್ಲಿ ಕವಿದ ಕತ್ತಲು

ಡಿ.ಶ್ರೀನಿವಾಸ
Published 22 ಮಾರ್ಚ್ 2023, 6:00 IST
Last Updated 22 ಮಾರ್ಚ್ 2023, 6:00 IST

ಜಗಳೂರು: ಬಿಸಿಲು, ಮಳೆ ಎನ್ನದೆ ಇಡೀ ದಿನ ಮೈಮುರಿದು ದುಡಿದು ಕುಟುಂಬಗಳನ್ನು ಸಲಹುತ್ತಿದ್ದ ಇಬ್ಬರು ಕಾರ್ಮಿಕರು ಚರಂಡಿ ಸ್ವಚ್ಛಗೊಳಿಸಲು ತೆರಳಿದಾಗ ಹಠಾತ್ ಸಾವಿಗೀಡಾಗಿದ್ದರಿಂದ ಎರಡು ಮನೆಗಳಲ್ಲಿ ಕತ್ತಲು ಆವರಿಸಿದೆ.

ತಾಲ್ಲೂಕಿನ ಬಸವನಕೋಟೆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ದಿನಗೂಲಿ ನೌಕರರಾದ ದಲಿತ ಸಮುದಾಯದ ಸತ್ಯಪ್ಪ ಮತ್ತು ಮೈಲಪ್ಪ ಅವರು ಸೋಮವಾರ ಚರಂಡಿ ಸ್ವಚ್ಛಗೊಳಿಸುತ್ತಿದ್ದಾಗ ವಿಷ ಗಾಳಿ ಸೇವನೆಯಿಂದ ಮೃತಪಟ್ಟಿದ್ದು, ಎರಡೂ ಕುಟುಂಬಗಳ ಸದಸ್ಯರಲ್ಲಿ ಆಘಾತ ತಂದಿದೆ.

ಅಂಗೈಯಷ್ಟೂ ಜಮೀನಿಲ್ಲದ, ಹೊಟ್ಟೆಪಾಡಿಗಾಗಿ ನಿತ್ಯ ಬೇರೆಯವರ ಹೊಲ–ಮನೆಗಳಲ್ಲಿ ದುಡಿದು ಕುಟುಂಬಗಳನ್ನು ಪೊರೆಯುತ್ತಿದ್ದ ಸತ್ಯಪ್ಪ ಮತ್ತು ಮೈಲಪ್ಪ ಅಣ್ಣತಮ್ಮಂದಿರ ಮಕ್ಕಳು. ಗ್ರಾಮ ಪಂಚಾಯಿತಿ ಪಿಡಿಒ ಶಶಿಧರ್ ಪಾಟೀಲ್ ಹಾಗೂ ಅಧ್ಯಕ್ಷೆಯ ಪತಿ ಭೀಮಪ್ಪ ಅವರ ಸೂಚನೆಯಂತೆ ಅಪಾರ ತ್ಯಾಜ್ಯ ಕಟ್ಟಿಕೊಂಡಿದ್ದ ಚರಂಡಿಯನ್ನು ಸ್ವಚ್ಛಗೊಳಿಸಲು ಹೋಗಿದ್ದರು.

ADVERTISEMENT

ಕೈಗವಸು, ಮುಖ ಗವಸು ಸೇರಿದಂತೆ ಯಾವುದೇ ಸುರಕ್ಷತಾ ಸಾಧನಗಳನ್ನು ಕೊಡದೆ ಏಕಾಏಕಿ ಚರಂಡಿ ಸ್ವಚ್ಛತೆಗೆ ಇಳಿಸಲಾಗಿತ್ತು. ಅಪಾಯದ ಅರಿವಿಲ್ಲದ ಅನಕ್ಷರಸ್ಥ ಕೂಲಿ ಕಾರ್ಮಿಕರಿಬ್ಬರೂ ಮೂರ್ನಾಲ್ಕು ಅಡಿ ಆಳದ ಚರಂಡಿಯಲ್ಲಿ ಇಳಿದು ಸಲಿಕೆಯಿಂದ ನಿರಂತರವಾಗಿ ತ್ಯಾಜ್ಯವನ್ನು ಎತ್ತಿ ಹೊರ ಹಾಕುತ್ತ ತ್ಯಾಜ್ಯದಿಂದ ಉತ್ಪತ್ತಿಯಾದ ವಿಷಗಾಳಿಯನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೇ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಮತ್ತೊಂದು ಬದಿಯ ಚರಂಡಿಯನ್ನು ಇನ್ನೂ ಇಬ್ಬರು ಕೂಲಿಕಾರ್ಮಿಕರಾದ ನಾಗರಾಜ್ ಮತ್ತು ಪರಸಪ್ಪ ಸ್ವಚ್ಛಗೊಳಿಸುತ್ತಿದ್ದರು. ಸತ್ಯಪ್ಪ ಮತ್ತು ಮೈಲಪ್ಪ ಅಸ್ವಸ್ಥರಾಗಿದ್ದರಿಂದ ಅವರನ್ನು ಉಪಚರಿಸಲು ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ.

ಸತ್ಯಪ್ಪ ಮತ್ತು ಮೈಲಪ್ಪ ಗ್ರಾಮದ ಚರಂಡಿಗಳನ್ನು, ಬೀದಿಗಳನ್ನು ಸ್ವಚ್ಛಗೊಳಿಸುವುದು, ಶ್ರೀಮಂತರ, ಜಮೀನ್ದಾರರ ಹೊಲ, ಮನೆಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಕುಟುಂಬ ವನ್ನು ಸಲಹುತ್ತಿದ್ದರು. ಮೃತ ಸತ್ಯಪ್ಪ ನಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೈಲಪ್ಪ ನಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.

ದಶಕಗಳ ಹಿಂದೆ ಸರ್ಕಾರದ ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಪುಟ್ಟ ಮನೆಗಳಲ್ಲಿ ಎರಡೂ ಕುಟುಂಬಗಳು ಪ್ರತ್ಯೇಕವಾಗಿ ವಾಸವಾಗಿವೆ. ಬಡತನವನ್ನೇ ಹಾಸಿಹೊದ್ದ ಕುಟುಂಬದ ಸದಸ್ಯರಿಗೆ ಜೀವನಾಧರವಾಗಿದ್ದವರ ದಿಢೀರ್ ಅಗಲಿಕೆಯಿಂದ ಅನಾಥಭಾವ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.