ADVERTISEMENT

ಗಾರೆ ಕಾರ್ಮಿಕನ ಪುತ್ರ ಕಲಾ ವಿಭಾಗದಲ್ಲಿ ಬೇಲೂರು ತಾಲ್ಲೂಕಿಗೇ ದ್ವಿತೀಯ

ಕಲಾ ವಿಭಾಗದಲ್ಲಿ ತಾಲ್ಲೂಕಿಗೆ ಎರಡನೇ ಸ್ಥಾನ

ಎಚ್.ಎಸ್.ಅನಿಲ್ ಕುಮಾರ್
Published 18 ಜುಲೈ 2020, 2:18 IST
Last Updated 18 ಜುಲೈ 2020, 2:18 IST
ಶರತ್ ಕೆ.ಪಿ.
ಶರತ್ ಕೆ.ಪಿ.   

ಹಳೇಬೀಡು: ಬೇಲೂರು ತಾಲ್ಲೂಕಿನ ಗಡಿ ಗ್ರಾಮದ ದೊಡ್ಡಕೋಡಿಹಳ್ಳಿಯ ಕಟ್ಟಡ ನಿರ್ಮಾಣ ಕಾರ್ಮಿಕರೊಬ್ಬರ ಪುತ್ರ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದಿ ಕಲಾವಿಭಾಗದಲ್ಲಿ ತಾಲ್ಲೂಕಿಗೆ ದ್ವಿತೀಯ ಸ್ಥಾನ ಗಳಿಸಿದ್ದಾನೆ.

ಸಾಣೇನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶರತ್ ಕೆ.ಪಿ ಸಾಧಕ ವಿದ್ಯಾರ್ಥಿ. ಬಡ ಕುಟುಂಬದ ವಿದ್ಯಾರ್ಥಿಯ ಸಾಧನೆಗೆ ಉಪನ್ಯಾಸಕ ವೃಂದ ಮೆಚ್ಚುಗೆ ವ್ಯಕ್ತಪಡಿಸಿದೆ.

ಶರತ್‌ ಶೇ 92 ಅಂಕ ಪಡೆದಿದ್ದಾನೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 84 ಅಂಕ ಪಡೆದಿದ್ದ. ಮನೆಯಲ್ಲಿ ತಂದೆ, ತಾಯಿ ಅನುಭವಿಸುತ್ತಿದ್ದ ಬಡತನವನ್ನು ಅರ್ಥಮಾಡಿಕೊಂಡ ಶರತ್ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡದೆ ಗ್ರಾಮಕ್ಕೆ ಹತ್ತಿರದ ಸಾಣೇನಹಳ್ಳಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಕಲಾ ವಿಭಾಗ ಆಯ್ಕೆ ಮಾಡಿಕೊಂಡನು.

ADVERTISEMENT

ಸಾಧಿಸುವ ಛಲದಿಂದ ಅಧ್ಯಯನದಲ್ಲಿ ತೊಡಗಿದ ಶರತ್‌ನನ್ನು ಗಮನಿಸಿದ ಉಪನ್ಯಾಸಕ ವೃಂದ ಬೆನ್ನೆಲುಬಾಗಿ ನಿಂತಿತು. ಅದರ ಫಲವಾಗಿ ಶರತ್ ಈಗ ತಾಲ್ಲೂಕಿಗೆ ಎರಡನೇ ಸ್ಥಾನ ಪಡೆದಿದ್ದಾನೆ.

ಸ್ನಾತಕೊತ್ತರ ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ಉದ್ಯೋಗ ಪಡೆಯುವ ಹಂಬಲ ಹೊಂದಿರುವ ಶರತ್‌ನ ಸಾಧನೆಗೆ ತಂದೆ ಪುಟ್ಟಸ್ವಾಮಿ, ತಾಯಿ ಲೋಲಾಕ್ಷಿ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಾ ವಿಭಾಗ ಅಧ್ಯಯನ ಸುಲಭ ಎಂದು ಮೇಲ್ನೋಟಕ್ಕೆ ಕಾಣಿಸುತ್ತದೆ. ಆದರೆ, ಕಲೆ ವಿಷಯದಲ್ಲಿ ಹೆಚ್ಚು ಅಂಕ ಗಳಿಸುವುದು ಸುಲಭವಲ್ಲ. ಶರತ್ ಪಾಠ ಪ್ರವಚನವನ್ನು ಗಮನವಿಟ್ಟು ಕೇಳಿಸಿಕೊಂಡು, ಅಂದಿನ ಪಾಠವನ್ನು ಅದೇ ದಿನ ಅಧ್ಯಯನ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದ. ಹೀಗಾಗಿ ತಾಲ್ಲೂಕಿಗೆ ಎರಡನೇ ಸ್ಥಾನಪಡೆಯಲು ಸಾಧ್ಯವಾಯಿತು ಎಂದು ಹಿರಿಯ ಉಪನ್ಯಾಸಕ ಇಂದ್ರೇಶ್ ತಿಳಿಸಿದರು.

ಕಲೆ ಹಾಗೂ ವಾಣಿಜ್ಯ ವಿಭಾಗಗಳಿಂದ ಪರೀಕ್ಷೆಗೆ ಹಾಜರಾಗಿದ್ದ ಕಾಲೇಜಿನ 48 ವಿದ್ಯಾರ್ಥಿಗಳ ಪೈಕಿ 40 ಮಂದಿ ಉತ್ತೀರ್ಣರಾಗಿದ್ದು, ಶೇ 83 ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ 23 ವಿದ್ಯಾರ್ಥಿಗಳ ಪೈಕಿ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ 26 ವಿದ್ಯಾರ್ಥಿಗಳ ಪೈಕಿ 19 ಮಂದಿ ತೇರ್ಗಡೆಯಾಗಿದ್ದಾರೆ. ಶರತ್ ಕೆ.ಪಿ ಕಲಾ ವಿಭಾಗದಲ್ಲಿ ಶೇ 92, ರಕ್ಷತಾ ಕೆ.ಎಂ.ವಾಣಿಜ್ಯ ವಿಭಾಗದಲ್ಲಿ ಶೇ 90 ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.