ADVERTISEMENT

ಮಡಿಕೇರಿ: ಹೊರಗುತ್ತಿಗೆ ನೌಕರರ ಪ್ರತಿಭಟನೆ

ಜಿಲ್ಲಾ ಕೋವಿಡ್‌ ಆಸ್ಪತ್ರೆ ಎದುರು ಕೆಲಸ ಸ್ಥಗಿತಗೊಳಿಸಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2021, 12:09 IST
Last Updated 1 ಸೆಪ್ಟೆಂಬರ್ 2021, 12:09 IST
ಮಡಿಕೇರಿಯಲ್ಲಿರುವ ಕೋವಿಡ್‌ ಆಸ್ಪತ್ರೆಯ ಎದುರು ಹೊರಗುತ್ತಿಗೆ ನೌಕರರು ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು
ಮಡಿಕೇರಿಯಲ್ಲಿರುವ ಕೋವಿಡ್‌ ಆಸ್ಪತ್ರೆಯ ಎದುರು ಹೊರಗುತ್ತಿಗೆ ನೌಕರರು ಬುಧವಾರ ದಿಢೀರ್‌ ಪ್ರತಿಭಟನೆ ನಡೆಸಿದರು   

ಮಡಿಕೇರಿ: ಹೊರ ಗುತ್ತಿಗೆ ನೌಕರರ ನಿರ್ವಹಣೆಯನ್ನು ಹೊಸ ಏಜೆನ್ಸಿ ವಹಿಸಿಕೊಂಡಿದ್ದು, ಇದರಿಂದ ವೇತನ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ ಹೊರಗುತ್ತಿಗೆ ನೌಕರರು ಜಿಲ್ಲಾ ಕೋವಿಡ್‌ ಆಸ್ಪತ್ರೆ ಎದುರು ಬುಧವಾರ ಬೆಳಿಗ್ಗೆ ದಿಢೀರ್‌ ಪ್ರತಿಭಟನೆ ನಡೆಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆಸ್ಪತ್ರೆಯ ಹೊರ ಗುತ್ತಿಗೆ ನೌಕರರ ನಿರ್ವಹಣೆ ಗುತ್ತಿಗೆ ಪಡೆದಿದ್ದ ಸಂಸ್ಥೆಯ ಬದಲಾವಣೆಯಾಗಿದ್ದು, ಬುಧವಾರದಿಂದ ನೂತನ ಏಜೆನ್ಸಿ ಈ ಜವಾಬ್ದಾರಿ ಹೊತ್ತಿದೆ. ಇದು ನೌಕರರ ಆತಂಕಕ್ಕೆ ಕಾರಣವಾಗಿದೆ. ಕೆಲಸ ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದರು.

5 ವರ್ಷಗಳಿಂದ ಒಂದೇ ವೇತನಕ್ಕೆ ಕೆಲಸ ನಿರ್ವಹಿಸುತ್ತಿದ್ದೇವೆ. ಮೊದಲು ಶ್ರೀರಂಗನಾಥ್ ಎಂಬ ಏಜೆನ್ಸಿ ಕಾರ್ಯನಿರ್ವಹಿಸುತ್ತಿತ್ತು. ಈಗ ಏಜೆನ್ಸಿ ಬದಲಾಗಿದೆ ಎಂದು ಹೇಳಲಾಗುತ್ತಿದೆ. ಏಜೆನ್ಸಿಯವರು ಖುದ್ದಾಗಿ ಬಂದು ನೌಕರರ ಗೊಂದಲ ನಿವಾರಿಸಬೇಕು ಎಂದು ಪ್ರತಿಭಟನಕಾರರು ಪಟ್ಟುಹಿಡಿದರು.

ADVERTISEMENT

ಜಿಲ್ಲೆಯಲ್ಲಿ 300ರಿಂದ 400 ಮಂದಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ನೂತನ ಏಜೆನ್ಸಿ ಪಡೆದ ಸಂಸ್ಥೆಯು ವೇತನ ಹೆಚ್ಚು ಮಾಡಬೇಕು ಎಂದು ಆಗ್ರಹಿಸಿದರು.

ಗುತ್ತಿಗೆ ನೌಕರರಾದ ದೀಪ್ತಿ ಮಾತನಾಡಿ, ಸಿಬ್ಬಂದಿಯನ್ನು ಇದೀಗ ಹೊಸದಾಗಿ ಸುರಭಿ ಎಂಬ ಏಜೆನ್ಸಿ ತೆಗೆದುಕೊಂಡಿದೆ. ಒಪ್ಪಂದಕ್ಕೆ ಸಹಿ ಮಾಡುವಂತೆ ಒತ್ತಡ ಹೇರುತ್ತಿದೆ. ಅಲ್ಲದೆ, 50 ವರ್ಷ ಮೀರಿದ ನೌಕರರನ್ನು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಿದೆ. ಏಕಾಏಕಿ ಈ ನಿಯಮ ಹೇರಿದರೆ ನೌಕರರಿಗೆ ತೊಂದರೆಯಾಗಲಿದೆ. ನಮ್ಮ ಬದುಕು ಬೀದಿಗೆ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಧನಲಕ್ಷ್ಮಿ ಮಾತನಾಡಿ, ಕನಿಷ್ಠ ವೇತನ ಘೋಷಣೆ ಮಾಡಬೇಕು. ಕಾರ್ಮಿಕರ ಕಾಯ್ದೆಯಂತೆ ವಿವಿಧ ಇಲಾಖೆಯಲ್ಲಿ ಕೆಲಸ ನಿರ್ವಹಿಸುವವರಿಗೆ ವೃತ್ತಿ ಆಧಾರದಲ್ಲಿ ವೇತನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂಕಷ್ಟದ ಕಾಲದಲ್ಲಿ ಕೂಡ ಪ್ರಾಣದ ಹಂಗು ತೊರೆದು ನೌಕರರು ಕಾರ್ಯ ನಿರ್ವಹಿಸಿದ್ದೇವೆ. ಏಜೆನ್ಸಿ ನೌಕರರ ಬಳಿ ಬಂದು ಗೊಂದಲ ನಿವಾರಿಸಬೇಕು ಎಂದು ಒತ್ತಾಯಿಸಿದರು. ನೌಕರರ ಪ್ರತಿಭಟನೆಗೆ ಕೊಡಗು ರಕ್ಷಣಾ ವೇದಿಕೆ ಬೆಂಬಲ ವ್ಯಕ್ತಪಡಿಸಿತ್ತು. ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.