ADVERTISEMENT

ಕಾಫಿನಾಡಿನ ಸಮಸ್ಯೆಗೆ ದನಿಯಾದ ಸಮ್ಮೇಳನ

ಕಾಡನ್ನು ಉಳಿಸಿಕೊಂಡೇ ನಾಡು ಕಟ್ಟಲು ಕರೆ; ಹಲವು ಜ್ವಲಂತ ಸಮಸ್ಯೆಗಳ ಪ್ರಸ್ತಾಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 6:23 IST
Last Updated 5 ಮಾರ್ಚ್ 2023, 6:23 IST
ಗೋಣಿಕೊಪ್ಪಲುವಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎಂ.ಪಿ.ರೇಖಾ ಮಾತನಾಡಿದರು
ಗೋಣಿಕೊಪ್ಪಲುವಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಎಂ.ಪಿ.ರೇಖಾ ಮಾತನಾಡಿದರು   

ಮಡಿಕೇರಿ: ‘ಕಾಡನ್ನು ಉಳಿಸಿಕೊಂಡು ನಾಡು ಕಟ್ಟೋಣ ಹಾಗೂ ಕೊಡಗನ್ನು ಕೊಡಗಾಗಿಯೇ ಉಳಿಸಿಕೊಳ್ಳೋಣ’ ಎಂಬ ಆಶಯವನ್ನು ಗೋಣಿಕೊಪ್ಪಲಿನಲ್ಲಿ ಶನಿವಾರ ಆರಂಭವಾದ 16ನೇ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಎಂ.ಪಿ.ರೇಖಾ ವ್ಯಕ್ತಪಡಿಸಿದರು.

ಮಾನವ– ವನ್ಯಜೀವಿ ಸಂಘರ್ಷ, ಕೊಡಗನ್ನು ಬಿಟ್ಟು ಬೇರೆ ನಗರಗಳಿಗೆ ವಲಸೆ ಹೋಗುತ್ತಿರುವ ಯುವಸಮೂಹ, ಹೆಚ್ಚುತ್ತಿರುವ ನವ ಪ್ರವಾಸೋದ್ಯಮ, ವ್ಯಾಪಿಸಿರುವ ಜಾಗತೀಕರಣದ ಬಳಸಿ, ಬಿಸಾಡು ಸಂಸ್ಕೃತಿ... ಹೀಗೆ ಕೊಡಗು ಜಿಲ್ಲೆಯ ಸಾಲು ಸಾಲು ಸಮಸ್ಯೆಗಳು ಸಮ್ಮೇಳನದ ಅಧ್ಯಕ್ಷರ ಭಾಷಣದಲ್ಲಿ ಪ್ರತಿಧ್ವನಿಸಿದವು.

ಸರ್ವಾಧ್ಯಕ್ಷೆ ವಹಿಸಿದ್ದ ಎಂ.ಪಿ.ರೇಖಾ ಅವರು, ‘ಹೊರ ಊರಲ್ಲಿರುವ ಕೊಡಗಿನವರು ಮಾತೃ ಸಂಸ್ಕೃತಿಯನ್ನು ಮರೆಯಬಾರದು. ಹೊರಗಿಂದ ಕೊಡಗಿಗೆ ಬಂದವರು ನಿಂತ ನೆಲದ ಭಾಷೆ ಮತ್ತು ಸಂಸ್ಕೃತಿಯನ್ನು ಪ್ರೀತಿಸಬೇಕು ಹಾಗೂ ಗೌರವಿಸಬೇಕು’ ಎಂದು ಪ್ರತಿಪಾದಿಸಿದರು.

ADVERTISEMENT

ಮಾನವ - ವನ್ಯಜೀವಿ ಗಳ ಸಂಘರ್ಷದಲ್ಲಿ ಜೀವ ಕಳೆದುಕೊಳ್ಳುತ್ತಿ ರುವವರು ಶ್ರೀಮಂತರು, ಅಧಿಕಾರಿಗಳಲ್ಲ. ಬಹುಪಾಲು ಗಿರಿಜನರು, ಕಾರ್ಮಿಕರು ಮತ್ತು ಅವರ ಮಕ್ಕಳೇ ಆಗಿದ್ದಾರೆ ಎಂಬುದನ್ನು ಅವರು ಬೊಟ್ಟು ಮಾಡಿದರು.

‘ಅರಣ್ಯದ ಸುತ್ತ ಸೋಲಾರ್ ತಂತಿಗಳನ್ನು, ಬ್ಯಾರಿಕೇಡ್‍ಗಳನ್ನು ಅಳವಡಿಸಿ ಪ್ರಾಣಿಗಳ ಚಲನೆ ಯನ್ನು ನಿರ್ಬಂಧಿಸುವ ಬದಲು ರಕ್ಷಿತಾರಣ್ಯಗಳಲ್ಲಿ ತೇಗ ಮತ್ತು ಬೀಟೆಯ ಮರಗಳನ್ನು ಬೆಳೆಸುವ ಬದಲಿಗೆ ಆನೆಗೆ ಆಹಾರವಾಗಬಲ್ಲ ಗಿಡಮರಗಳನ್ನು ಹೆಚ್ಚು ಬೆಳೆಸುವಂತಾದರೆ ಸ್ವಲ್ಪಮಟ್ಟಿಗೆ ಸಮಸ್ಯೆ ಪರಿಹಾರವಾಗಬಹುದು’ ಎಂಬ ಹೊಸ ಹೊಳವನ್ನೂ ಅವರೂ ತಮ್ಮ ಭಾಷಣದಲ್ಲಿ ನೀಡಿದರು.

ನಿವೇಶನ ರಹಿತರಿಗೆ ಸೂರು ನೀಡುವುದು, ಕೊಡಗಿನ ಜಮ್ಮಾ ಸಮಸ್ಯೆ, ಕೋವಿಯ ಹಕ್ಕಿನ ವಿಚಾರ, ಖಾತೆ, ಪೌತಿಖಾತೆಗಳ ವಿಚಾರ ಹೀಗೆ ಹಲವು ಸಮಸ್ಯೆಗಳನ್ನು ಪ್ರಸ್ತಾಪಿಸಿದರು.

‘ಪ್ರವಾಸೋದ್ಯ ಮಕ್ಕೆ ವಿಫುಲ ಅವಕಾಶವಿರುವು ದನ್ನು ಗಮನಿಸಿ ಆದರ ಪ್ರೋತ್ಸಾಹಕ್ಕೆ ಬೇಕಾದ ಮೂಲ ಸೌಕರ್ಯಗಳನ್ನು ಸ್ಥಳೀಯರಿಗೆ ತೊಂದರೆಯಾಗದಂತೆ ಒದಗಿಸಬೇಕಾದ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕು’ ಎಂಬ ಕಿವಿಮಾತನ್ನೂ ಹೇಳಿದರು.

ತಂತ್ರಜ್ಞಾನ ಮನುಷ್ಯ ಸಂಬಂಧಗಳನ್ನು ಕತ್ತರಿಸುವ ಕತ್ತರಿ ಯಾಗಬಾರದು, ಬದಲಿಗೆ ಹೊಲಿದು ಸೇರಿಸುವ ಸೂಜಿಯಾಗಬೇಕು ಎಂದ ರೇಖಾ ಅವರು, ‘ವಾಟ್ಸ್‌ಆ್ಯಪ್‌ನಲ್ಲಿ ಅನಾವಶ್ಯಕ ಸಂದೇಶಗಳನ್ನು ಹಾಕುವುದು, ಮನೆಯೊಳಗಿನ ಗಂಡ- ಹೆಂಡತಿಯ ನಡುವಿನ ಖಾಸಗಿ ಸಂಬಂಧದಿಂದ ಆರಂಭಿಸಿ ಜಾತಿ- ಜಾತಿಗಳ ನಡುವೆ, ಧರ್ಮ- ಧರ್ಮಗಳೊಳಗೆ, ಪಕ್ಷ- ಪಕ್ಷಗಳ ನಡುವೆ ದ್ವೇಷ, ಅಸೂಯೆ, ಅಪನಂಬಿಕೆಗಳನ್ನು ಸೃಷ್ಟಿಸಲು ಇವು ಕಾರಣವಾಗುತ್ತಿವೆ’ ಎಂಬ ಅತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.