ADVERTISEMENT

ಹಾರಂಗಿ ಜಲಾಶಯಕ್ಕೆ ಹೆಚ್ಚಿದ ಭದ್ರತೆ

ಅಣೆಕಟ್ಟೆಗೆ ರಾಜ್ಯ ಕೈಗಾರಿಕೆ ಭದ್ರತಾ ಪಡೆಯ ಕಣ್ಗಾವಲು

ರಘು ಹೆಬ್ಬಾಲೆ
Published 18 ಜುಲೈ 2021, 5:42 IST
Last Updated 18 ಜುಲೈ 2021, 5:42 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಉದ್ಯಾನ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು (ಎಡ ಚಿತ್ರ). ಹಾರಂಗಿ ಜಲಾಶಯ ಮೇಲ್ಭಾಗದಲ್ಲಿ ಪೊಲೀಸ್ ಭದ್ರತೆ
ಕುಶಾಲನಗರ ಸಮೀಪದ ಹಾರಂಗಿ ಜಲಾಶಯದ ಉದ್ಯಾನ ವೀಕ್ಷಣೆಗೆ ಬರುವ ಪ್ರವಾಸಿಗರನ್ನು ಭದ್ರತಾ ಸಿಬ್ಬಂದಿ ತಪಾಸಣೆ ನಡೆಸಿದರು (ಎಡ ಚಿತ್ರ). ಹಾರಂಗಿ ಜಲಾಶಯ ಮೇಲ್ಭಾಗದಲ್ಲಿ ಪೊಲೀಸ್ ಭದ್ರತೆ   

ಕುಶಾಲನಗರ: ಕೊಡಗಿನ ಪ್ರಮುಖ ಜಲಾಶಯವಾದ ಹಾರಂಗಿಗೆ ರಾಜ್ಯ ಸರ್ಕಾರ ಭದ್ರತೆ ಹೆಚ್ಚಿಸಿದ್ದು, ಕರ್ನಾಟಕ ರಾಜ್ಯ ಕೈಗಾರಿಕೆ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಕಣ್ಗಾವಲಿದೆ.

ಜಲಾಶಯದ ಸುತ್ತಲೂ ಭದ್ರತಾ ಪಡೆಯ 23 ಪೊಲೀಸರು ಕಾವಲು ಕಾಯುತ್ತಿದ್ದಾರೆ.

ಕೊಡಗು ಸೇರಿದಂತೆ ಮೈಸೂರು ಹಾಗೂ ಹಾಸನ ಜಿಲ್ಲೆಗಳ ಐದು ತಾಲ್ಲೂಕಿನ ರೈತಾಪಿ ವರ್ಗ ಇದೇ ಜಲಾಶಯದ ನೀರನ್ನು ಅವಲಂಬಿಸಿದ್ದಾರೆ. ಜಲಾಶಯದಿಂದ 1.65 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲಾಗುತ್ತಿದೆ. 2,859 ಅಡಿ ಎತ್ತರವಿರುವ ಜಲಾಶಯ 8.5 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯವಿದೆ. 4 ಕ್ರೆಸ್ಟ್‌ ಗೇಟ್‌ಗಳನ್ನು ಜಲಾಶಯ ಹೊಂದಿದೆ.

ADVERTISEMENT

ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಭದ್ರತೆಗೆ ಸರ್ಕಾರ ಹೆಚ್ಚಿನ ಗಮನ ಹರಿಸಿದ್ದು, ಕಳೆದ ಒಂಬತ್ತು ತಿಂಗಳಿಂದ ಸಿಐ ಕೆ.ಎಸ್.ಚಂದ್ರಶೇಖರ್ ನೇತೃತ್ವದಲ್ಲಿ ಒಬ್ಬರು ಪಿಎಸ್‌ಐ, ಮೂವರು ಹೆಡ್‌ ಕಾನ್‌ಸ್ಟೆಬಲ್‌ಗಳು ಹಾಗೂ 20 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಜಲಾಶಯದ ಮುಖ್ಯದ್ವಾರ, ಮೇಲ್ಭಾಗದ ಗೇಟ್, ಪವರ್ ಹೌಸ್ ಬಳಿ ಕೆಎಸ್‌ಐಎಸ್‌ಎಫ್ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೊದಲು ಜಲಾಶಯ ರಕ್ಷಣೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜನೆ ಮಾಡಲಾಗಿತ್ತು. ಅಣೆಕಟ್ಟೆಯ ಎಡದಂಡೆ, ಬಲದಂಡೆ ಸೇರಿದಂತೆ ಅಗತ್ಯವಿರುವ ಕಡೆಗಳಲ್ಲಿ ಮೀಸಲು ಪಡೆ, ಸಿವಿಲ್ ಹಾಗೂ ಖಾಸಗಿ ಭದ್ರತಾ ಸಿಬ್ಬಂದಿ ರಕ್ಷಣಾ ಕಾರ್ಯ ಮಾಡುತ್ತಿದ್ದರು.

ಭದ್ರತಾ ಪಡೆ ಸಿಬ್ಬಂದಿಗೆ ಬಂದೂಕು ನೀಡಲಾಗಿದ್ದು, ಬಲದಂಡೆ ಕಾಲುವೆಯ ಕೊನೇ ಹಂತದ ತನಕ ಸಿಬ್ಬಂದಿ ವಾಹನದ ಮೂಲಕ ಗಸ್ತು ತಿರುಗುತ್ತಿದ್ದಾರೆ. ಈ ಮೊದಲು ಇದ್ದ ಸಿವಿಲ್ ಪೊಲೀಸರು ಲಾಠಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದರು. ಬಂದೂಕು ನೀಡಿರುವುದರಿಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಯುವುದನ್ನೂ ತಪ್ಪಿಸಬಹುದಾಗಿದೆ.

ಅನುಮತಿ ಪಡೆದರೆ ಅವಕಾಶ: ಅಣೆಕಟ್ಟೆ ಪ್ರವೇಶ ದ್ವಾರದ ಬಳಿ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪ್ರವೇಶ ದ್ವಾರದಿಂದ ಅಣೆಕಟ್ಟೆ ಬಳಿ ತೆರಳಲು ಈ ಮೊದಲು ನೀರಾವರಿ ಇಲಾಖೆ ಅನುಮತಿ ಪಡೆದ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿತ್ತು. ಆದರೆ, ಈಗ ಕೆಎಸ್‌ಐಎಸ್‌ಎಫ್ ಭದ್ರತೆ ನಿಯೋಜಿಸಿದ್ದರಿಂದ ಖಾಸಗಿ ವಾಹನಗಳ ಪ್ರವೇಶಕ್ಕೆ ಪೊಲೀಸ್ ಪಡೆಯ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿದೆ.

ಜನಪ್ರತಿನಿಧಿಗಳಾಗಲಿ, ಪ್ರಭಾವಿಗಳ ಕಡೆಯಿಂದ ಕರೆ ಮಾಡಿಸಿ ವಾಹನಗಳ ಪ್ರವೇಶಕ್ಕೆ ಇನ್ನು ಮುಂದೆ ಅವಕಾಶವಿರುವುದಿಲ್ಲ.

ಅನೈತಿಕ ಚಟುವಟಿಕೆಗೆ ಕಡಿವಾಣ: ಹಾರಂಗಿ ಜಲಾಶಯ ಹಿನ್ನೀರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳಿಗೆ ಭದ್ರತಾ ಪಡೆ ಕಡಿವಾಣ ಹಾಕಿದೆ. ಕೆಲ ಪುಂಡರು ಜಲಾಶಯ ಎಡಭಾಗದ ಮರಗಳ ತೋಪಿನಲ್ಲಿ ಪಾರ್ಟಿ ಮೋಜುಮಸ್ತಿ ಮಾಡುತ್ತಿದ್ದರು. ಜೊತೆಗೆ ಪ್ರೇಮಿಗಳು ಆಸುಪಾಸಿನಲ್ಲಿ ಅಡ್ಡಾಡುತ್ತ ಸಮಯ ಕಳೆಯುತ್ತಿದ್ದರು. ಸ್ಥಳೀಯರು ಅನಗತ್ಯವಾಗಿ ಯಾರ ಅನುಮತಿಯಿಲ್ಲದೆ ಅಣೆಕಟ್ಟೆ ಮೇಲೆ ಓಡಾಡುತ್ತಿದ್ದರು. ಶಿಫಾರಸ್ಸು ಮಾಡಿಸಿಕೊಂಡು ಪ್ರವಾಸಿ ಮಂದಿರಕ್ಕೆ ಬಂದು ಮೋಜು ಮಾಡುವ ತಂಡಗಳಿಗೂ ಭದ್ರತಾ ಪಡೆ ಕಡಿವಾಣ ಹಾಕಿದೆ.

ಪ್ರವಾಸಿಗರ ಸುರಕ್ಷತೆ: ಹಾರಂಗಿ ಉದ್ಯಾನ ಹಾಗೂ ರಾತ್ರಿ ಸಂಗೀತ ಕಾರಂಜಿ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಭದ್ರತಾ ಪಡೆ ಸಂಪೂರ್ಣ ರಕ್ಷಣೆ ನೀಡುತ್ತಿದೆ. ಜಲಾಶಯದ ಒಳಗೆ ಬರುವಾಗಲೇ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತದೆ. ವಾಹನಗಳಲ್ಲಿ ಬರುವ ಪ್ರವಾಸಿಗರ ಮಾಹಿತಿ ಹಾಗೂ ವಾಹನ ಪರೀಕ್ಷಿಸಿ ನಂಬರ್ ದಾಖಲು‌ ಮಾಡಿಕೊಳ್ಳಲಾಗುತ್ತದೆ.

‘ಅತ್ಯುತ್ತಮ ತರಬೇತಿ ಪಡೆದ ಶಸ್ತ್ರಸಜ್ಜಿತ ಪಡೆ ಅಣೆಕಟ್ಟೆ ಕಾವಲು ಕಾಯುತ್ತಿದೆ. ಜಲಾಶಯದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಇದ್ದು, ಪ್ರವಾಸಿಗರು ಹಾಗೂ ಸಾರ್ವಜನಿಕರು ಭದ್ರತಾ ಪಡೆ ಸಿಬ್ಬಂದಿಗೆ ಸಹಕಾರ ನೀಡಬೇಕು’ ಎಂದು ರಾಜ್ಯ ಕೈಗಾರಿಕೆ ಭದ್ರತಾ ಪಡೆಯ ಸಿಐ ಕೆ.ಎಸ್.ಚಂದ್ರಶೇಖರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.