ADVERTISEMENT

ಮುಳ್ಳೂರು: ಅಟ್ಟಣಿಗೆಯಲ್ಲಿ ಆನ್‌ಲೈನ್‌ ಕ್ಲಾಸ್‌

ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡ ಶಾಲಾ ಶಿಕ್ಷಕ

ಶ.ಗ.ನಯನತಾರಾ
Published 27 ಜೂನ್ 2021, 19:30 IST
Last Updated 27 ಜೂನ್ 2021, 19:30 IST
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಅವರ ಮನೆಯಂಗಳದ ಮಾಮರದ ಮೇಲೆ ಆನ್ ಲೈನ್ ಕ್ಲಾಸ್ ರೂಂ
ಶನಿವಾರಸಂತೆ ಸಮೀಪದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್ ಅವರ ಮನೆಯಂಗಳದ ಮಾಮರದ ಮೇಲೆ ಆನ್ ಲೈನ್ ಕ್ಲಾಸ್ ರೂಂ   

ಶನಿವಾರಸಂತೆ (ಕೊಡಗು): ನೆಟ್‌ವರ್ಕ್‌ ಸಮಸ್ಯೆ ಇರುವುದರಿಂದ ಮುಳ್ಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ.ಎಸ್.ಸತೀಶ್, 20 ಅಡಿ ಎತ್ತರದಲ್ಲಿ ಮರದ ಅಟ್ಟಣಿಗೆ ನಿರ್ಮಿಸಿ ಆನ್‌ಲೈನ್‌ ಕ್ಲಾಸ್‌ ಮಾಡಲು ಉಪಾಯ ಕಂಡುಕೊಂಡಿದ್ದಾರೆ.

ಚಿಕ್ಕಕೊಳತ್ತೂರು ಗ್ರಾಮದ ಮನೆಯ ಆವರಣದಲ್ಲಿ ಬೊಂಬು, ಬೈನೆ ಮರದ ತಡಿಕೆಗಳು, ತಂತಿ, ಬಲೆ ಹಾಗೂ ಹುಲ್ಲು ಬಳಸಿ ‘ಟ್ರೀ ಹೌಸ್’ ಮಾದರಿಯಲ್ಲಿ ತರಗತಿ ಕೋಣೆ ನಿರ್ಮಿಸಿದ್ದಾರೆ.

ಮೊಬೈಲ್ ಫೋನ್‌ ಬಳಸಿ ಅವರು ತರಗತಿ ನಡೆಸುತ್ತಾರೆ. ₹ 500 ವೆಚ್ಚದ ಮೊಬೈಲ್ ಸ್ಟ್ಯಾಂಡ್ ಮತ್ತು ರೆಕಾರ್ಡರ್ ಖರೀದಿಸಿ ಬೋಧನೆಗೆ ಬಳಸಿಕೊಂಡಿದ್ದಾರೆ. ವಿದ್ಯಾರ್ಥಿಗಳನ್ನು ಆಕರ್ಷಿಸುವಂಥ ಚಟುವಟಿಕೆಗಳನ್ನು ಮಾಡಿಸುತ್ತಾರೆ. ಪಾಠ ಮಾಡಲು 3 ಬಗೆಯ ಕಪ್ಪು ಹಲಗೆಗಳು ಹಾಗೂ ಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸುತ್ತಾರೆ.

ADVERTISEMENT

ಪಠ್ಯದ ಜೊತೆಗೆ ಯೋಗಾಸನ, ಒಳಾಂಗಣ ಆಟಗಳು, ಕಥೆ, ಇಂಗ್ಲಿಷ್‌, ಸಾಕು ಪ್ರಾಣಿಗಳ ಮಾಹಿತಿ ನೀಡುತ್ತಾರೆ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿ ಮಕ್ಕಳ ಕಲಿಕೆಗೆ ನೆರವಾಗುತ್ತಿದ್ದಾರೆ.

‘ಲಾಕ್‌ಡೌನ್‌ ಸಮಯದಲ್ಲಿ ವಿದ್ಯಾರ್ಥಿಗಳೊಂದಿಗೆ ಕಲಿಕಾ ಸಂಪರ್ಕ ಸಾಧಿಸುವ ಕಾರ್ಯಕ್ರಮ ನಡೆಯುತ್ತಿದೆ. ಸ್ಮಾರ್ಟ್ ಫೋನ್ ಇರುವ ಮಕ್ಕಳಿಗೆ ಆನ್‌ಲೈನ್ ಮೂಲಕ ಬೋಧನೆ, ವಾಟ್ಸ್‌ಆ್ಯಪ್ ಮೂಲಕ ಹೋಮ್‌ ವರ್ಕ್‌ ಮಾಡಿಸುತ್ತಾರೆ. ನೆಟ್‌ವರ್ಕ್‌ ಸಮಸ್ಯೆ ಇದ್ದರೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಸತೀಶ್‌ ಅವರು ನೆಟ್‌ವರ್ಕ್‌ ಸಮಸ್ಯೆಗೆ ಪರಿಹಾರ ಕಂಡುಕೊಂಡಿರುವುದು ವಿಶೇಷವಾಗಿದೆ’ ಎಂದು ಸೋಮವಾರಪೇಟೆ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು ಹೇಳುತ್ತಾರೆ.

ಆಯುಕ್ತರಿಂದ ಪ್ರಶಂಸೆ: ‘ರಾಜ್ಯ ಸರ್ಕಾರವು ವಿದ್ಯಾಗಮ ಯೋಜನೆ ಆರಂಭಿಸುವ ಮೊದಲೇ ಅಂತಹ ಕಾರ್ಯಕ್ರಮ ಮುಳ್ಳೂರಿನಲ್ಲಿ ನಡೆಯುತ್ತಿತ್ತು. ಇಲಾಖೆಯ ಆಯುಕ್ತರು ಶಿಕ್ಷಕ ಸತೀಶ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು’ ಎಂದು ಹಂಡ್ಲಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಟಿ.ಮನೋಹರ್ ಪ್ರತಿಕ್ರಿಯಿಸುತ್ತಾರೆ.

‘ಶಿಕ್ಷಕರು ನಮಗೆ ಬೆಳಗ್ಗಿನ ಅವಧಿಯಲ್ಲಿ ಕಲಿಕಾಂಶದ ಮಾಹಿತಿ ಒಳಗೊಂಡಿರುವ ಕಾರ್ಡ್‌ನ ಫೋಟೊ ಮತ್ತು ಅದನ್ನು ವಿವರಿಸುವ ವಾಯ್ಸ್ ರೆಕಾರ್ಡ್‌ ಕಳುಹಿಸುತ್ತಾರೆ. ಅದನ್ನು ನಾವು ಸಂಜೆವರೆಗೂ ಅಭ್ಯಾಸ ಮಾಡುತ್ತೇವೆ’ ಎಂದು ವಿದ್ಯಾರ್ಥಿನಿ ಪುಣ್ಯಾ ಹೇಳುತ್ತಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.