ADVERTISEMENT

‘ಮಹಿಳೆಯರೆಂಬ ಸಹಾನುಭೂತಿ ಬೇಕಿಲ್ಲ’

ಕೊಡಗಿನಲ್ಲಿ ಮಹಿಳಾ ಸಂಭ್ರಮ; ಮತದಾರರ ಹೆಸರು ಸೇರ್ಪಡೆಯಲ್ಲಿ ಮಹಿಳೆಯರೇ ಮುಂದು– ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 16:28 IST
Last Updated 8 ಮಾರ್ಚ್ 2023, 16:28 IST
ಮಡಿಕೇರಿಯ ಬಾಲಭವನದಲ್ಲಿ ಬುಧವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಇದ್ದರು
ಮಡಿಕೇರಿಯ ಬಾಲಭವನದಲ್ಲಿ ಬುಧವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಕಾರ್ಯಕ್ರಮವನ್ನು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ರಾಜ್ಯ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಇದ್ದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸೈಕ್ಲೊಥಾನ್, ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ಜತೆಗೆ ಅಂಗನವಾಡಿಯಲ್ಲಿ ಕರ್ತವ್ಯನಿಷ್ಠೆ ತೋರಿದ ಮಹಿಳೆಯರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಸೋಮವಾರಪೇಟೆಯಲ್ಲಿ ಮಹಿಳೆಯರಿಗಾಗಿ ಕ್ರಿಕೆಟ್ ಪಂದ್ಯಾವಳಿ ಜರುಗಿದರೆ, ಕೊಡಗು ಪ್ರೆಸ್ ಕ್ಲಬ್, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕ
ರ್ತರ ಸಂಘದಿಂದ ಕುಶಾಲನಗರದ ಎಪಿಸಿಎಂಎಸ್ ಸುವರ್ಣ ಮಹೋತ್ಸವ ಭವನದಲ್ಲಿ ವಿಶ್ವ ಮಹಿಳಾ ದಿನದ ಪ್ರಯುಕ್ತ ಹಲವು ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು. ಇದಲ್ಲದೇ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಮಹಿಳೆಯರು ಭಾಗಿಯಾದರು.

ವಿವಿಧ ಇಲಾಖೆಯ ಸಹಯೋಗದಲ್ಲಿ ಮಡಿಕೇರಿಯ ಬಾಲಭವನದಲ್ಲಿ ಬುಧವಾರ ನಡೆದ ‘ಅಂತರರಾಷ್ಟ್ರೀಯ ಮಹಿಳಾ ದಿನ’ದ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಚಾಲನೆ ನೀಡಿದರು.

ADVERTISEMENT

ಈ ವೇಳೆ ಮಾತನಾಡಿದ ಅವರು, ಮಹಿಳೆಯರು ಸೇನೆ, ವಿಮಾನಯಾನ, ಕ್ರೀಡೆ, ಸಿನಿಮಾ, ಆಡಳಿತ ಹೀಗೆ ಪ್ರತೀ ರಂಗದಲ್ಲಿಯೂ ಮುಂಚೂಣಿಯಲ್ಲಿದ್ದು, ತಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಮಹಿಳೆಯರು ಎಂಬ ಸಹಾನುಭೂತಿ ಅವರಿಗೆ ಬೇಕಿಲ್ಲ ಎಂದು ಹೇಳಿದರು.

‘ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಇದಕ್ಕೆ ಪೂರಕ ಎಂಬಂತೆ ಮತದಾರರ ಸಂಖ್ಯೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಮುಂದೆ ಇದ್ದಾರೆ’ ಎಂದು ಹೇಳಿದರು.
‘ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಒಂದು ಸಾವಿರ ಪುರುಷರಿಗೆ, 1,026 ಮಹಿಳೆಯರು ಇದ್ದಾರೆ’ ಎಂದೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ದಿನಪತ್ರಿಕೆಗಳಲ್ಲಿ ಮಹಿಳೆಯರ ಸಾಧನೆಗೆ ಸಂಬಂಧಿಸಿದಂತೆ ಪ್ರಕಟವಾಗಿರುವ ಸುದ್ದಿಗಳನ್ನು ಎಲ್ಲರೂ ಓದಬೇಕು ಎಂದು ಸಲಹೆ ನೀಡಿದರು.

ರಾಜ್ಯ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ‘ನಮ್ಮ ರಾಷ್ಟ್ರದಲ್ಲಿ ಮಹಿಳೆಯರಿಗೆ ಮಾತೃ ಸ್ಥಾನ ನೀಡಲಾಗಿದೆ. ಭಾರತ ಸ್ವಾತಂತ್ರ್ಯಕ್ಕಾಗಿ ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ಮಹಿಳೆಯರು ಹೋರಾಡಿದ್ದಾರೆ. ಅಂತವರನ್ನು ಸದಾ ಸ್ಮರಿಸಬೇಕು’ ಎಂದರು.

ಅಂಗನವಾಡಿ ಕಾರ್ಯಕರ್ತರಾದ ಭಾಗ್ಯವತಿ, ದಮಯಂತಿ, ಜಯಲಲಿತಾ ಅವರನ್ನು ಗೌರವಿಸಲಾಯಿತು.

ಸಂಜೀವಿನಿ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಎಸ್.ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್.ಮಂಜುನಾಥ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಎಂ.ಉಮಾ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ವಿಮಲಾ, ಸಿಡಿಪಿಒ ಸೀತಾಲಕ್ಷ್ಮಿ ಇದ್ದರು.

ನಿಲ್ಲದ ಶೋಷಣೆ; ಅನಿತಾ ಪೂವಯ್ಯ ಬೇಸರ

ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ‘ಸ್ವ ಪ್ರತಿಭೆ ಮತ್ತು ಹೋರಾಟದಿಂದ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಇದ್ದಾರೆ. ಹಿಂದೆ ಮಹಿಳೆ ಅಬಲೆ ಎಂಬ ಮನಸ್ಥಿತಿ ಇತ್ತು. ಆದರೆ, ಈಗ ಎಲ್ಲಾ ಕ್ಷೇತ್ರದಲ್ಲಿಯೂ ಮುಂದೆ ಇದ್ದಾರೆ. ಹೆಣ್ಣು ಎಷ್ಟೇ ಸಮಾನವಾಗಿ ಬದುಕಲು ಪ್ರಯತ್ನಿಸಿದರೂ ಸಹ ಶೋಷಣೆಗೆ ಒಳಗಾಗುವುದು ಅಲ್ಲಲ್ಲಿ ಕೇಳಿ ಬರುತ್ತದೆ. ಇದು ಕೊನೆಯಾಗಬೇಕು’ ಎಂದರು.

ಮಡಿಕೇರಿಯಲ್ಲಿ ಸೈಕ್ಲೊಥಾನ್

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಗ್ರೀನ್ ಸಿಟಿ ಫೋರಂ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ‘ಆರೋಗ್ಯವಂತ ಮಹಿಳೆಯಿಂದ ಆರೋಗ್ಯಕರ ಭಾರತ’ ಎನ್ನುವ ಘೋಷ ವಾಕ್ಯದೊಂದಿಗೆ ಮತದಾನದ ಮಹತ್ವ ಮತ್ತು ವಾಯುಮಾಲಿನ್ಯ ತಡೆಯುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಬುಧವಾರ ನಡೆದ ಸೈಕ್ಲೊಥಾನ್ ಜಾಥಾಕ್ಕೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಚಾಲನೆ ನೀಡಿದರು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಿಂದ ಹೊರಟು ಜನರಲ್ ತಿಮ್ಮಯ್ಯ ವೃತ್ತ-ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ-ಕೆಎಸ್‍ಆರ್‌ಟಿಸಿ ಬಸ್‌ ನಿಲ್ದಾಣ-ಕೈಗಾರಿಕಾ ಬಡಾವಣೆ-ರೇಸ್‍ಕೋರ್ಸ್ ರಸ್ತೆ ಮೂಲಕ ಗ್ರೇಟರ್ ರಾಜಸೀಟ್‌ ಉದ್ಯಾನದವರೆಗೆ ಜಾಥಾ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಂಜುಂಡಯ್ಯ, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಡಾ.ಗೋಪಿನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.