ADVERTISEMENT

ಬೆಳೆ ವಿಮೆ ನೋಂದಣಿಗೆ ರೈತರ ಹಿಂದೇಟು; ನಂಬಿಕೆ ಕಳೆದುಕೊಳ್ಳುತ್ತಿರುವ ಅನ್ನದಾತರು

ವಿಮಾ ಯೋಜನೆ: ನಂಬಿಕೆ ಕಳೆದುಕೊಳ್ಳುತ್ತಿರುವ ರೈತರು

ಎಂ.ಎನ್.ಯೋಗೇಶ್‌
Published 20 ಸೆಪ್ಟೆಂಬರ್ 2021, 4:14 IST
Last Updated 20 ಸೆಪ್ಟೆಂಬರ್ 2021, 4:14 IST
ಮಂಡ್ಯ ತಾಲ್ಲೂಕು ಹನಿಯಂಬಾಡಿ ಬಳಿ ಭತ್ತದ ಬೆಳೆ ಹಾಳಾಗಿರುವುದು
ಮಂಡ್ಯ ತಾಲ್ಲೂಕು ಹನಿಯಂಬಾಡಿ ಬಳಿ ಭತ್ತದ ಬೆಳೆ ಹಾಳಾಗಿರುವುದು   

ಮಂಡ್ಯ: ಸರ್ಕಾರ ಅವೈಜ್ಞಾನಿಕವಾಗಿ ಬೆಳೆ ನಷ್ಟ ಪರಿಹಾರ ನೀತಿ ಅನುಸರಿ ಸುತ್ತಿದೆ ಎಂದು ಆರೋಪಿಸುವ ರೈತರು ವಿಮಾ ಯೋಜನೆಯಡಿ ಹೆಸರು ನೋಂದಣಿಗೆ ಹಿಂದೇಟು ಹಾಕುತ್ತಿದ್ದಾರೆ. ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ 2021–22ನೇ ಸಾಲಿನಲ್ಲಿ ಬೆಳೆ ವಿಮೆಗಾಗಿ ಕೇವಲ 10,813 ರೈತರು ನೋಂದಾಯಿಸಿದ್ದಾರೆ.

ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ ನದಿ ನೀರು ಹರಿದರೂ ಜಿಲ್ಲೆಯ ಬಹ ಳಷ್ಟು ಭಾಗ ಮಳೆಯಾಶ್ರಿತವಾಗಿಯೇ ಉಳಿದಿದೆ. ಕೆಆರ್‌ಎಸ್‌ ಜಲಾಶಯದ ಆಸುಪಾಸಿನಲ್ಲೇ ಅಪಾರ ಭೂಪ್ರದೇಶಕ್ಕೆ ನೀರಾ ವರಿ ಸೌಲಭ್ಯ ಒದಗಿಸಲು ಸಾಧ್ಯ ವಾಗಿಲ್ಲ. ಆ ಭಾಗದ ರೈತರು
ಬೆಳೆದ ಬೆಳೆ ನಷ್ಟ ಹೊಂದಿದಾಗ ಬೆಳೆ ವಿಮೆ ಮೂಲಕ ರೈತರ ಕೈಹಿಡಿಯ ಬಹುದು. ಆದರೆ, ಕೃಷಿ ಇಲಾಖೆ ಹಾಗೂ ವಿಮಾ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬೆಳೆ ವಿಮೆ ಯೋಜನೆಗಳು ರೈತರಿಗೆ ಇಲ್ಲಿಯವರೆಗೂ ವರವಾಗಿಲ್ಲ ಎಂಬ ಆರೋಪವಿದೆ.

ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ (ಪಿಎಂಎಸ್‌ಬಿವೈ) 2005ರಿಂದ ಜಾರಿ ಯಲ್ಲಿದ್ದರೂ ಜಿಲ್ಲೆಯಲ್ಲಿ ಬೆಳೆ ಪರಿಹಾರ ಪಡೆದ ರೈತರ ಸಂಖ್ಯೆ 30 ಸಾವಿರ ದಾಟಿಲ್ಲ. ವಿಪರೀತ ಬರಗಾಲ ಪರಿಸ್ಥಿತಿ ಇದ್ದ 2018–19ನೇ ಸಾಲಿನಲ್ಲಿ 22,268 ರೈತರು ಪರಿಹಾರ ಪಡೆದಿದ್ದಾರೆ. 2019–20ನೇ ಸಾಲಿನ ಮುಂಗಾರು, ಬೇಸಿಗೆ ಹಂಗಾಮಿನಲ್ಲಿ ಕೇವಲ 14,147 ರೈತರು ಪರಿಹಾರ ಪಡೆದಿದ್ದಾರೆ. 2020–21ರಲ್ಲಿ ಕೇವಲ 3,181 ಮಂದಿ ಮಾತ್ರ ಬೆಳೆ ಪರಿಹಾರ ಪಡೆದಿದ್ದಾರೆ.

ADVERTISEMENT

ಕೃಷಿಯೇ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಮಂಡ್ಯ, ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು, ಮಳವಳ್ಳಿ ತಾಲ್ಲೂಕುಗಳ ಹೆಚ್ಚಿನ ಭೂಪ್ರದೇಶ ನೀರಾವರಿಗೆ ಒಳಪಟ್ಟಿದೆ. ಆದರೆ, ಸಂಪೂರ್ಣ ಭೂಪ್ರದೇಶವನ್ನು ನೀರಾ ವರಿಗೆ ಒಳಪಡಿಸಲು ಸಾಧ್ಯವಾಗಿಲ್ಲ. ಮಳವಳ್ಳಿ, ಮದ್ದೂರು ತಾಲ್ಲೂಕುಗಳ ನಾಲೆಯ ಕೊನೆ ಭಾಗಕ್ಕೆ ನೀರುಹರಿಸಲು ಸಾಧ್ಯವಾಗಿಲ್ಲ.

ಮಂಡ್ಯ ತಾಲ್ಲೂಕಿನ ದುದ್ದ, ಬಸರಾಳು ಭಾಗ ಈಗಲೂ ಮಳೆಯಾಶ್ರಿತ ಪ್ರದೇಶವಾಗಿಯೇ ಉಳಿದಿವೆ. ಈ ಭಾಗದ ರೈತರಿಗೆ ವಿಮಾ ಯೋಜನೆಗಳು ಸಹಾಯ ಒದಗಿಸದೇ ಇರುವುದು ದುರದೃಷ್ಟಕರ ಎಂಬ ಅಭಿಪ್ರಾಯ ನಿಚ್ಚಳವಾಗಿದೆ.

ಕೆ.ಆರ್‌.ಪೇಟೆ, ನಾಗಮಂಗಲ ತಾಲ್ಲೂಕಿನ ಹೆಚ್ಚು ರೈತರು ವಿಮಾ ಯೋಜನೆಗಳಿಗೆ ಹೆಸರು ನೋಂದಣಿ ಮಾಡಿದ್ದಾರೆ. ಈ ಹಂಗಾಮಿನಲ್ಲಿ ನಾಗಮಂಗಲ ತಾಲ್ಲೂಕಿನ 5,553 ರೈತರು ನೋಂದಣಿ ಮಾಡಿಸಿದ್ದರೆ ಕೆ.ಆರ್‌.ಪೇಟೆ ತಾಲ್ಲೂಕಿನಿಂದ 3,979 ರೈತರು ನೋಂದಾಯಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಈ ಎರಡು ತಾಲ್ಲೂಕಿನ ರೈತರು ಮಾತ್ರ ಪಿಎಂ ಎಸ್‌ಬಿವೈ ಯೋಜನೆಯನ್ನು ಜೀವಂತವಾ ಗಿಟ್ಟಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ರೈತರು ಅತಿ ಕಡಿಮೆ 17 ಮಂದಿ ನೋಂದಣಿ ಮಾಡಿಸಿದ್ದಾರೆ.

‘ಅನಾವೃಷ್ಟಿಯಿಂದ ಮಾತ್ರ ಬೆಳೆನಷ್ಟ ವಾಗುವುದಿಲ್ಲ, ಅತಿವೃಷ್ಟಿ ಯಿಂದಲೂ ಬೆಳೆ ನಷ್ಟವಾಗುತ್ತದೆ. ಆದರೆ, ನೀರಾವರಿ ಪ್ರದೇಶಗಳ ರೈತರು ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ವಿಮೆ ಮಾಡಿಸುತ್ತಾರೆ. ಇದಕ್ಕೆ ಕೃಷಿ ಇಲಾಖೆ ಅಧಿಕಾರಿಗಳೇ ಕಾರಣ. ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಸರ್ಕಾರಿ ಸೌಲಭ್ಯಗಳನ್ನು ರೈತರಿಗೆ ತಲುಪಿಸುತ್ತಿಲ್ಲ’ ಎಂದು ರೈತ ಮುಖಂಡ ಹನಿಯಂಬಾಡಿ ನಾಗರಾಜ್‌ ತಿಳಿಸಿದರು.

2021ನೇ ಸಾಲಿನಲ್ಲಿ ಜಿಲ್ಲಾ ವ್ಯಾಪ್ತಿಯ 10 ಕೃಷಿ ಬೆಳೆ ಹಾಗೂ 2 ತೋಟಗಾರಿಗೆ ಬೆಳೆಗಳಿಗೆ ಪಿಎಂ ಎ ಸ್‌ಬಿವೈ ಯೋಜನೆಯನ್ನು ಅನು ಷ್ಠಾನ ಮಾಡುವ ಅಧಿಸೂಚನೆ ಹೊರಡಿಸಲಾಗಿದೆ. ತಾಲ್ಲೂಕು ವಾರು, ಹೋಬಳಿವಾರು, ಗ್ರಾಮ ಪಂಚಾ ಯಿತಿವಾರು ಅನುಷ್ಠಾನ ಗೊಳಿಸಲು ಸೂಚನೆ ನೀಡಲಾಗಿದೆ. ಬೆಂಗಳೂರಿನ ಅಗ್ರಿಕಲ್ಚರಲ್‌ ವಿಮಾ ಕಂಪನಿಯನ್ನು ಜಿಲ್ಲೆಯ ವಿಮಾ ಕಂಪನಿಯನ್ನಾಗಿ ನಿಗದಿಗೊಳಿಸಲಾಗಿದೆ.

ಗ್ರಾ.ಪಂ ಮಟ್ಟದಲ್ಲಿ ಭತ್ತ, ರಾಗಿ (ಮಳೆಯಾಶ್ರಿತ), ಮುಸುಕಿನ ಜೋಳವನ್ನು ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಇದನ್ನು ನಾಗಮಂಗಲ, ಪಾಂಡವಪುರ ಅನುಸೂಚಿತ ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನ ಗೊಳಿ ಸಲಾಗಿದೆ. ಹೋಬಳಿ ಮಟ್ಟದಲ್ಲಿ ನೀರಾ ವರಿ ಆಶ್ರಿತ ಭತ್ತ, ಮಳೆಯಾಶ್ರಿತ ರಾಗಿ, ನೀರಾವರಿ ಆಶ್ರಿತ ಮುಸುಕಿನ ಜೋಳ, ಮಳೆಯಾಶ್ರಿತ ತೊಗರಿ ಸೇರಿಸಲಾಗಿದೆ.

ಯೋಜನೆಯ ಮಾರ್ಗ ಸೂಚಿ ಯನ್ವಯ ಬ್ಯಾಂಕ್‌ನಲ್ಲಿ ಬೆಳೆ ಸಾಲ ಪಡೆದಿರುವ ರೈತರು ಕಡ್ಡಾಯವಾಗಿ ಬೆಳೆ ವಿಮೆಗೆ ನೋಂದಣಿ ಮಾಡಿಸಬೇಕಿತ್ತು. ಆದರೆ, ಸರ್ಕಾರ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ್ದು ಬೆಳೆ ವಿಮೆ ಪಡೆಯಲು ಇಚ್ಛಿಸದಿದ್ದಲ್ಲಿ ಆಯಾ ಬ್ಯಾಂಕ್‌ ವ್ಯವಸ್ಥಾಪಕರಿಗೆ ತಿಳಿಸಿ ಬೆಳೆಯಿಂದ ದೂರ ಉಳಿಯಬಹುದು. ಅದು ರೈತರ ಆಯ್ಕೆಗೆ ಬಿಡಲಾಗಿದೆ.

‘ಜಿಲ್ಲೆಯ ರೈತರು ಬೆಳೆ ವಿಮೆ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದಾರೆ. ಶೇ 90ರಷ್ಟು ರೈತರು ಬೆಳೆ ಸಾಲ ಪಡೆದಿದ್ದರೂ ಬೆಳೆ ವಿಮೆ ಪಡೆಯಲು ಅವರು ಇಚ್ಛಿಸುತ್ತಿಲ್ಲ’ ಎಂದು ರೈತ ಶಿವನಂಜೇಗೌಡ ಹೇಳಿದರು.

‘ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ವಿಮಾ ಕಂಪನಿ, ಬ್ಯಾಂಕ್‌ಗಳು ವಿಮಾ ಯೋಜನೆ ಕುರಿತು ಜಾಗೃತಿ ಮೂಡಿಸುತ್ತಾರೆ. ಆಟೊ ಪ್ರಚಾರವನ್ನೂ ಮಾಡಲಾಗುತ್ತದೆ.ಹಳ್ಳಿಗಳ ಪ್ರಮುಖ ವೃತ್ತದಲ್ಲಿ ಭಿತ್ತಿ ಪತ್ತ ವನ್ನೂ ಹಾಕಲಾಗುತ್ತದೆ. ಹೀಗಿದ್ದರೂ ಬೆಳೆ ವಿಮೆ ಮೇಲೆ ರೈತರು ಆಸಕ್ತಿ ತೋರಿಸುತ್ತಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ನಷ್ಟ ಪರಿಹಾರ ಲೆಕ್ಕವೇ ಅವೈಜ್ಞಾನಿಕ’

ಇಲಾಖೆಗಳು ಬೆಳೆ ನಷ್ಟ ಪರಿಹಾರ ಲೆಕ್ಕಾಚಾರ ಮಾಡುವುದೇ ಅವೈಜ್ಞಾನಿಕವಾಗಿದೆ. ಹೀಗಾಗಿ ರೈತರು ಪ್ರೀಮಿಯಂ ಪಾವತಿಸಿದರೂ ಪರಿಹಾರ ಬರುವುದಿಲ್ಲ. ಪ್ರೀಮಿಯಂ ಕಟ್ಟುವುದರಿಂದ ವಿಮಾ ಕಂಪನಿಗಳನ್ನು ಉದ್ಧಾರ ಮಾಡಿದಂತಾಗುತ್ತದೆ ಎಂದು ರೈತರು ಆರೋಪಿಸುತ್ತಾರೆ.

‘ನಷ್ಟ ಪರಿಹಾರ ನಿಗದಿಪಡಿಸುವಾಗ ಏಳುವರ್ಷಗಳ ಇಳುವರಿಯನ್ನು ಪರಿಗಣಿಸಲಾಗುತ್ತದೆ. ಅದರಲ್ಲಿ 2 ವರ್ಷಗಳನ್ನು ಬಿಟ್ಟು 5 ವರ್ಷಗಳ ಸರಾಸರಿ ಇಳುವರಿಯನ್ನು ಪರಿಗಣಿಸಲಾಗುತ್ತದೆ. ಪ್ರಸ್ತುತ ವರ್ಷದ ಇಳುವರಿ ಆ 5 ವರ್ಷಗಳಿಗಿಂತಲೂ ಕಡಿಮೆ ಇದ್ದರೆ ಮಾತ್ರ ಅದನ್ನು ನಷ್ಟ ಎಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ ನಷ್ಟ ಪರಿಹಾರಕ್ಕೆ ಕ್ಲೇಮು ಮಾಡಲು ಸಾಧ್ಯವಿಲ್ಲ’ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದರು.

‘ಮಳೆ, ನಾಲೆ ನೀರಿನ ಹರಿವಿನಲ್ಲಿ ಪ್ರತಿ ವರ್ಷ ವ್ಯತ್ಯಾಸವಿರುತ್ತದೆ. ಪಿಎಂಬಿಎಸ್‌ವೈ ಯೋಜನೆಯಂತೆ ಲೆಕ್ಕ ಹಾಕಿದರೆ ಜಿಲ್ಲೆಯ ಯಾವುದೇ ರೈತರು ಪರಿಹಾರಕ್ಕೆ ಅರ್ಹತೆ ಹೊಂದುವುದಿಲ್ಲ. ಹೀಗಾಗಿ ರೈತರು ಪ್ರೀಮಿಯಂ ಪಾವತಿಗೆ ಹಿಂದೇಟು ಹಾಕುತ್ತಾರೆ’ ಎಂದು ರೈತ ಮುಖಂಡ ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.