ADVERTISEMENT

ಮೈಸೂರು: ಗುಣಮುಖರಿಂದ ಆಸ್ಪತ್ರೆಗೆ ಕೊಡುಗೆ

ಬಿಸಿ ನೀರಿನ ಉಪಕರಣ, ಗೀಸರ್, ಫ್ಲಾಸ್ಕ್ ದೇಣಿಗೆ

ಡಿ.ಬಿ, ನಾಗರಾಜ
Published 21 ಜುಲೈ 2020, 19:31 IST
Last Updated 21 ಜುಲೈ 2020, 19:31 IST
ಕೋವಿಡ್‌ನಿಂದ ಗುಣಮುಖರಾದವರು, ಮೈಸೂರಿನ ಜಿಲ್ಲಾ ಕೋವಿಡ್–19 ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ ಬಿಸಿ ನೀರಿನ ಉಪಕರಣ
ಕೋವಿಡ್‌ನಿಂದ ಗುಣಮುಖರಾದವರು, ಮೈಸೂರಿನ ಜಿಲ್ಲಾ ಕೋವಿಡ್–19 ಆಸ್ಪತ್ರೆಗೆ ದೇಣಿಗೆಯಾಗಿ ನೀಡಿದ ಬಿಸಿ ನೀರಿನ ಉಪಕರಣ   

ಮೈಸೂರು: ಇಲ್ಲಿನ ಕೋವಿಡ್‌–19 ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರು, ತಮಗೆ ಸಿಕ್ಕ ವೈದ್ಯಕೀಯ ಸೇವೆಯನ್ನು ಸ್ಮರಿಸಿ, ಆಸ್ಪತ್ರೆಗೆ ತುರ್ತು ಅಗತ್ಯವಿರುವ ವಸ್ತುಗಳನ್ನು ಕೃತಜ್ಞತಾಪೂರ್ವಕವಾಗಿ ನೀಡಿದ್ದಾರೆ.

ಕೊಡುಗೆ ಸ್ವೀಕರಿಸಿದ ಜಿಲ್ಲಾ ಆಸ್ಪತ್ರೆ ಸಹ ಅವರ ಸಹಕಾರವನ್ನು ಪ್ರಶಂಸಿಸಿದೆ.

‘ನಾವು ಕೋವಿಡ್‌ ಪೀಡಿತರಾಗಿ ಆಸ್ಪತ್ರೆಗೆ ದಾಖಲಾದಾಗ, ದಾನಿಯೊಬ್ಬರು ಕೊಟ್ಟಿದ್ದ ವಾಟರ್ ಡಿಸ್ಪೆನ್ಸರ್‌ ಒಂದಿತ್ತು. ಎಲ್ಲ ರೋಗಿಗಳೂ ಬಿಸಿ ನೀರಿಗಾಗಿ ಇದರ ಮುಂದೆ ಯಾವಾಗಲೂ ಸಾಲಿನಲ್ಲಿ ನಿಲ್ಲಬೇಕಿತ್ತು. ಇದು ಮನಸ್ಸಿಗೆ ತುಂಬಾ ಬೇಸರ ಮಾಡುತ್ತಿತ್ತು. ಗುಣಮುಖರಾಗುತ್ತಿದ್ದಂತೆಯೇ ಮೂವರು ಸ್ನೇಹಿತರು ಒಟ್ಟಾಗಿ, ಮತ್ತೊಂದು ಬಿಸಿ ನೀರಿನ ಉಪಕರಣವನ್ನು ಆಸ್ಪತ್ರೆಗೆ ಕೊಡುಗೆಯಾಗಿ ನೀಡಿದೆವು’ ಎಂದು ಮೈಸೂರಿನ ವಿ.ವಿ.ಮೊಹಲ್ಲಾದ ಸೆಸ್ಕ್ ಕಚೇರಿಯ ಹಿರಿಯ ಸಹಾಯಕ ಸಿಬ್ಬಂದಿ ಎಚ್‌.ವಿ.ಸಂದೀಪ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೊಸ ಉಪಕರಣವೊಂದನ್ನು ದೇಣಿಗೆಯಾಗಿ ಕೊಡುವುದಾಗಿ ಆಸ್ಪತ್ರೆಯ ಸಿಬ್ಬಂದಿ ಬಳಿ ಹೇಳಿಕೊಂಡೆವು. ಜಿಲ್ಲಾ ಸರ್ಜನ್‌ ಕೂಡ ಸಮ್ಮತಿಸಿದರು. ತಕ್ಷಣವೇ ನಮ್ಮ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಂತೋಷ್, ಮತ್ತೊಬ್ಬ ಸಿಬ್ಬಂದಿ ಬಿ.ಎ.ಮಧು, ನಾನೂ ಸಮಾನವಾಗಿ ವಂತಿಗೆ ಹಾಕಿದೆವು’ ಎಂದು ಅವರು ಹೇಳಿದರು.

‘ಆಸ್ಪತ್ರೆಯಿಂದ ಮನೆಗೆ ಮರಳುವ ದಿನವೇ ಬಿಸಿ ನೀರಿನ ಉಪಕರಣವನ್ನು ಆಸ್ಪತ್ರೆಗೆ ತಲುಪಿಸುವಂತೆ ಸ್ನೇಹಿತರಲ್ಲಿ ಕೇಳಿಕೊಂಡಿದ್ದೆವು. ನಮ್ಮ ಸದುದ್ದೇಶವನ್ನು ತಿಳಿದ ಅಂಗಡಿ ಮಾಲೀಕ ಸಹ ₹ 9000 ಮೌಲ್ಯದ ಸಾಮಗ್ರಿಯನ್ನು ₹ 8000ಕ್ಕೆ ಕೊಟ್ಟರು. ಇದೀಗ ಕೋವಿಡ್ ಆಸ್ಪತ್ರೆಯ ಎರಡು ಮಹಡಿಗಳಲ್ಲಿ ಬಿಸಿ ನೀರಿನ ಯಂತ್ರವಿದೆ. ಇದು ಪೀಡಿತರಿಗೆ ಅನುಕೂಲವಾಗಿದೆ’ ಎಂದು ಸಂದೀಪ್ ಮಾಹಿತಿ ನೀಡಿದರು.

***

10ಕ್ಕೂ ಹೆಚ್ಚು ಫ್ಲಾಸ್ಕ್‌, 2 ಬಿಸಿ ನೀರಿನ ಉಪಕರಣ, ರೋಗಿಗಳಿಗೆ ಬಿಸಿ ನೀರಿನ ಸ್ನಾನಕ್ಕಾಗಿ ಸಣ್ಣ ಗೀಸರ್‌ಗಳು, ಎನ್‌ 95 ಮಾಸ್ಕ್ ಕೊಟ್ಟ ದಾನಿಗಳಿದ್ದಾರೆ

- ರಾಜೇಶ್ವರಿ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಕೋವಿಡ್ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.