ADVERTISEMENT

ಉಚ್ಚಗಣಿ ಗ್ರಾಮದಲ್ಲಿ 2 ಗುಂಪುಗಳ ನಡುವೆ ಮಾರಾಮಾರಿ

ಮೂವರಿಗೆ ಗಾಯ; ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 6:39 IST
Last Updated 16 ಸೆಪ್ಟೆಂಬರ್ 2021, 6:39 IST

ನಂಜನಗೂಡು‌‌/ ಹಂಪಾಪುರ:‌‌ ತಾಲ್ಲೂಕಿನ ಉಚ್ಚಗಣಿ ಗ್ರಾಮದಲ್ಲಿ ಬುಧವಾರ ಹಳೇ ವೈಷಮ್ಯ ಹಿನ್ನೆಲೆ, ಮಹದೇವಮ್ಮ ದೇಗುಲದ ವಿಚಾರದಲ್ಲಿ ಕಾಂಗ್ರೆಸ್‌, ಬಿಜೆಪಿ ಮುಖಂಡರ ನಡುವೆ ಮಾರಾಮಾರಿ ನಡೆದಿದ್ದು, ಮೂವರು ಗಾಯಗೊಂಡಿದ್ದಾರೆ.

ಗಂಭೀರವಾಗಿ ಗಾಯಗೊಂಡಿರುವ ಬಿಜೆಪಿಯ ಉದಯ್ ರವಿ, ಸಣ್ಣ ಗಾಯಗಳಾಗಿರುವ ಕಾಂಗ್ರೆಸ್‌ನ ಪ್ರಸನ್ನ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಂಗ್ರೆಸ್‌ನ ರವಿಕೀರ್ತಿ ನಂಜನಗೂಡು ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆಲ ದಿನಗಳ ಹಿಂದೆ ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಎರಡೂ ಪಕ್ಷಗಳ ಮುಖಂಡರ ನಡುವೆ ಮನಸ್ತಾಪ ಏರ್ಪಟ್ಟಿತ್ತು ಎನ್ನಲಾಗಿದೆ.

ADVERTISEMENT

‘ಮಹದೇವಮ್ಮ ದೇವಾಲಯ ಧ್ವಂಸವನ್ನು ಖಂಡಿಸಿ ಸೆ.16ರಂದು ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆ ಸಂಬಂಧ ಗ್ರಾಮಸ್ಥರು ಬುಧವಾರ ಸಭೆ ಸೇರಿದ್ದರು. ದೇವಸ್ಥಾನ ನೆಲಸಮಗೊಳಿಸುವ ವಿಚಾರ ಉದಯ್‌ ರವಿಗೆ ಗೊತ್ತಿತ್ತು. ಗ್ರಾಮಸ್ಥರಿಗೆ ಈ ವಿಚಾರ ತಿಳಿಸಿದ್ದರೆ ದೇವಸ್ಥಾನ ಉಳಿಯುತ್ತಿತ್ತು ಎಂದು ರವಿಕೀರ್ತಿ ದೂರಿದ್ದರು. ಆ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಉದಯ್‌ ಮೇಲೆ ರವಿಕೀರ್ತಿ ಕಬ್ಬಿಣದ ಪೈಪ್‌ನಿಂದ ಹಲ್ಲೆ ನಡೆಸಿದ್ದಾರೆ’ ಎಂದು ಹುಲ್ಲಹಳ್ಳಿ ಠಾಣೆ ಪಿಎಸ್‌ಐ ರಾಘವೇಂದ್ರ ಕಟಾರಿಯಾ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳಕ್ಕೆ ಸಿಪಿಐ ಲಕ್ಷ್ಮೀಕಾಂತ ತಳವಾರ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.