ADVERTISEMENT

ಸಿಂಧನೂರು ಕ್ಷೇತ್ರದ ಟಿಕೆಟ್‌ಗಾಗಿ ಅಜ್ಜ–ಮೊಮ್ಮಗ ಪೈಪೋಟಿ

ನಾಗರಾಜ ಚಿನಗುಂಡಿ
Published 23 ಮಾರ್ಚ್ 2023, 19:30 IST
Last Updated 23 ಮಾರ್ಚ್ 2023, 19:30 IST
ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ
ಹಂಪನಗೌಡ ಬಾದರ್ಲಿ, ಬಸನಗೌಡ ಬಾದರ್ಲಿ   

ರಾಯಚೂರು: ಜಿಲ್ಲೆಯ ಸಿಂಧನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ ಸಂಬಂಧದಲ್ಲಿ ಅಜ್ಜ–ಮೊಮ್ಮಗ.

ಹಂಪನಗೌಡ ಬಾದರ್ಲಿ ನಾಲ್ಕು ಬಾರಿ ಶಾಸಕರಾಗಿದ್ದು, ಚುನಾವಣೆಯಲ್ಲಿ ಎರಡು ಸಲ ಸೋತಿದ್ದಾರೆ. ಜನತಾ ಪರಿವಾರದ ಕಾಲದಿಂದಲೂ ಸಿದ್ದರಾಮಯ್ಯ ಅವರೊಂದಿಗೆ ಹಂಪನಗೌಡ ನಿಕಟ ಸಂಬಂಧ ಹೊಂದಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಎಂಎಸ್‌ ಐಎಲ್ ಅಧ್ಯಕ್ಷರಾಗಿದ್ದರು. ಕೆಪಿಸಿಸಿ ವರಿಷ್ಠರ ಒಡನಾಟವೂ ಇದೆ. ಟಿಕೆಟ್‌ ವಿಚಾರದಲ್ಲಿ ಸಿದ್ದರಾಮಯ್ಯ ಬೆಂಬಲ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಹಂಪನಗೌಡ ಬಾದರ್ಲಿ ಇದ್ದಾರೆ.‌

ADVERTISEMENT

ಹಲವು ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯರಾಗಿರುವ ಬಸನಗೌಡ ಬಾದರ್ಲಿ ಅವರು ಕಾಂಗ್ರೆಸ್‌ ಯುವ ಘಟಕದ ರಾಜ್ಯ ಅಧ್ಯಕ್ಷರಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ಜೊತೆ ಆತ್ಮೀಯತೆ ಕಾಯ್ದುಕೊಂಡಿದ್ದಾರೆ. ಟಿಕೆಟ್‌ ವಿಷಯದಲ್ಲಿ ಸೋತವರಿಗಿಂತ ಯುವ ಆಕಾಂಕ್ಷಿಗಳಿಗೆ ಆದ್ಯತೆ ಸಿಗಲಿದೆ ಎಂಬ ವಿಶ್ವಾಸದಲ್ಲಿ ಬಸನಗೌಡ ಬಾದರ್ಲಿ ಇದ್ದಾರೆ.

ಹಂಪನಗೌಡರಿಗೆ ಬಸವನಗೌಡ ಸಹೋದರನ ಕಡೆಯಿಂದ ಮೊಮ್ಮಗ. ಇಬ್ಬರೂ ಪರಸ್ಪರ ಗೌರವ ಹೊಂದಿದ್ದಾರೆ. ಸಾರ್ವಜನಿಕರ ಎದುರು ಅಂತರ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್‌ ಪಕ್ಷವು ರಾಜ್ಯಮಟ್ಟದಲ್ಲಿ ಪ್ರತಿಭಟನೆಗೆ ಕರೆ ನೀಡಿದಾಗ, ಸಿಂಧನೂರಿನಲ್ಲಿ ಅಜ್ಜ ಮತ್ತು ಮೊಮ್ಮಗ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಾರೆ.

ಟಿಕೆಟ್‌ಗಾಗಿ ಇಬ್ಬರೂ ವರಿಷ್ಠರ ಮೇಲೆ ಪ್ರಭಾವ ಬೀರಲು ಪ್ರಯತ್ನ ನಡೆಸಿದ್ದಾರೆ. ವೇದಿಕೆಗಳಲ್ಲಿ ಇಬ್ಬರೂ ಪರಸ್ಪದ ವಿರುದ್ಧ ಮಾತನಾಡುವುದಿಲ್ಲ. ತಮಗೆ ಟಿಕೆಟ್‌ ಸಿಗುವುದು ನಿಶ್ಚಿತ ಎಂಬ ಆಶಾಭಾವದಲ್ಲಿ ಇಬ್ಬರೂ ಇದ್ದಾರೆ.

***

ನಾಲ್ಕು ಬಾರಿ ಶಾಸಕನಾಗಿದ್ದೇನೆ. ಎಲ್ಲವನ್ನೂ ಪರಿಶೀಲಿಸಿ ಹೈಕಮಾಂಡ್‌ ನ್ಯಾಯೋಚಿತ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ

– ಹಂಪನಗೌಡ ಬಾದರ್ಲಿ, ಮಾಜಿ ಶಾಸಕ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ವರಿಷ್ಠರನ್ನು ಭೇಟಿಯಾಗಿರುವೆ. ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಟಿಕೆಟ್ ಸಿಗುವುದು ಖಚಿತ

– ಬಸನಗೌಡ ಬಾದರ್ಲಿ , ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.