ADVERTISEMENT

ಉಡುಪಿ: ಸರಳ ಈಸ್ಟರ್ ವಿಜಿಲ್ ಆಚರಣೆ

ಕೋವಿಡ್ ಮಾರ್ಗಸೂಚಿಯಂತೆ ನಡೆದ ಧಾರ್ಮಿಕ ವಿಧಿವಿಧಾನಗಳು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 15:04 IST
Last Updated 3 ಏಪ್ರಿಲ್ 2021, 15:04 IST
ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಶನಿವಾರ ಆಚರಿಸಿದರು.
ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಶನಿವಾರ ಆಚರಿಸಿದರು.   

ಉಡುಪಿ: ಯೇಸು ಕ್ರಿಸ್ತ ಶಿಲುಬೆಗೇರಿ ಮೂರನೇ ದಿನ ಪುನರುತ್ಥಾನಗೊಂಡ ಹಿನ್ನೆಲೆಯಲ್ಲಿ ಆಚರಿಸಲಾಗುವ ಈಸ್ಟರ್ ಹಬ್ಬವನ್ನು ಕ್ರೈಸ್ತರು ಜಿಲ್ಲೆಯಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಶನಿವಾರ ಆಚರಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ನೇತೃತ್ವದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಧರ್ಮಪ್ರಾಂತ್ಯದ ಪ್ರಧಾನ ಕಾರ್ಯಕ್ರಮವಾದ ಈಸ್ಟರ್ ವಿಜಿಲ್ ಆಚರಣೆಯು ಜರುಗಿತು. ಈ ವೇಳೆ ಚರ್ಚಿನ ಪ್ರಧಾನ ಧರ್ಮಗುರು ವಲೇರಿಯನ್ ಮೆಂಡೊನ್ಸಾ, ಸಹಾಯಕ ಧರ್ಮಗುರು ಕೆನ್ಯೂಟ್, ಪಿಲಾರ್ ಸಭೆಯ ಬ್ರಾಯನ್ ಉಪಸ್ಥಿತರಿದ್ದರು.

ಈ ಸಂದರ್ಭ ಸಂದೇಶ ನೀಡಿದ ಧರ್ಮಾಧ್ಯಕ್ಷರು ‘ಕಳೆದ ಒಂದು ವರ್ಷದಿಂದ ಸಮಾಜದ ಕೋಟ್ಯಂತರ ಜನರು ಕೋವಿಡ್-19 ಸಂಕಷ್ಟಗಳಿಗೆ ತುತ್ತಾಗಿ, ಹೊಸ ಭರವಸೆಗಳಿಗೆ ಕಾಯುತ್ತಿದ್ದಾರೆ. ಕೋವಿಡ್ ಸಂಕಷ್ಟದಿಂದ ಎಲ್ಲರೂ ಹೊರಬಂದಿಲ್ಲ. ಯೇಸುವಿನ ಮರಣ ಹಾಗೂ ಪುನರುತ್ಥಾನದ ಆಚರಣೆ ಭರವಸೆಯ ಆಶಾಕಿರಣವಾಗಿ ಮೂಡಿದೆ.

ADVERTISEMENT

ಪ್ರಳಯದ ನಂತರ ಶಾಂತತೆ ಮರಳುವಂತೆ, ಹೊಸ ಜೀವನ, ಆರೋಗ್ಯ ಹಾಗೂ ಹೊಸ ಭವಿಷ್ಯಕ್ಕಾಗಿ ಕಾಯುತ್ತಿರುವ ಜನರಿಗೆ ಪುನರುತ್ಥಾನಿಯಾದ ಯೇಸು ಕ್ರಿಸ್ತ ಶಾಂತಿ-ಸಮಾಧಾನ ನೀಡುತ್ತಾರೆ. ಯೇಸುವಿನ ‘ಶಾಂತಿ ನಿಮಗೆ’ ಎಂಬ ಆಶ್ವಾಸನೆ ನಮ್ಮೊಳಗಿದ್ದ ಭೀತಿಯನ್ನು ತೊಲಗಿಸಿ ಧೈರ್ಯವನ್ನು ತುಂಬುತ್ತದೆ. ವಿಶ್ವದ ಸ್ವಾಸ್ಥ್ಯಕ್ಕಾಗಿ, ಶಾಂತಿ -ನೆಮ್ಮದಿಗಾಗಿ ಕ್ರಿಸ್ತನಲ್ಲಿ ಮೊರೆ ಇಡೋಣ’ ಎಂದರು.

ಕ್ರೈಸ್ತರು ಹೊಸ ಬಟ್ಟೆ ತೊಟ್ಟು ನಗರದ ಚರ್ಚ್‌ಗಳಲ್ಲಿ ನಡೆದ ಈಸ್ಟರ್ ವಿಜಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಪಾಸ್ಕ್‌ ಜಾಗರಣೆಯ ಧಾರ್ಮಿಕ ವಿಧಿವಿಧಾನಗಳು ಚರ್ಚ್‌ಗಳಲ್ಲಿ ನಡೆದವು. ಧರ್ಮಗುರುಗಳು ಆಶೀರ್ವದಿಸಿದ ಹೊಸ ಬೆಂಕಿಯಿಂದ ಬೃಹತ್ ಗಾತ್ರದ ಈಸ್ಟರ್ ಕ್ಯಾಂಡಲ್‌ ಹಚ್ಚಿ ಮೆರವಣಿಗೆಯಲ್ಲಿ ಕೊಂಡೊಯ್ದು ಚರ್ಚ್‌ನ ಪ್ರಧಾನ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಯಿತು.

ಬಳಿಕ ದೇವರ ವಾಕ್ಯವನ್ನು ಪಠಿಸಿ ಆಶೀರ್ವಚನ ನೀಡಿದ ಧರ್ಮಗುರುಗಳು ಭಕ್ತರ ಮೇಲೆ ಹೊಸ ನೀರನ್ನು ಪ್ರೋಕ್ಷಿಸಿದರು. ಬಳಿಕ ನಡೆದ ಬಲಿಪೂಜೆಯಲ್ಲಿ ಯೇಸುವಿನ ಕಷ್ಟಗಳು, ಪುನರುತ್ಥಾನದ ಸಂದೇಶವನ್ನು ಭಕ್ತರಿಗೆ ವಿವರಿಸಿದರು.

ಕ್ರೈಸ್ತರು 40 ದಿನಗಳ ಉಪವಾಸ ವ್ರತ ಹಾಗೂ ಧ್ಯಾನ ಮಾಡುತ್ತ ಯೇಸುವಿನ ಕಷ್ಟಗಳನ್ನು ನೆನೆದು ಈಸ್ಟರ್ ಹಬ್ಬದ ದಿನ ಆಚರಣೆ ಕೊನೆಗೊಳಿಸುತ್ತಾರೆ. ಈಸ್ಟರ್ ಕೂಡ ಕ್ರಿಸ್‌ಮಸ್ ಹಬ್ಬದಂತೆ ಕ್ರೈಸ್ತರಿಗೆ ಪ್ರಮುಖ ಹಬ್ಬವಾಗಿದೆ.

ಕೋವಿಡ್ ಎರಡನೇ ಅಲೆಯ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ಮಾರ್ಗಸೂಚಿ ಪ್ರಕಾರ ನಡೆದವು. ಭಕ್ತರಿಗೆ ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಜನ ಸಂದಣಿ ತಡೆಯಲು ಏಕ ಕಾಲದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಪೂಜಾ ವಿಧಿಗೆ ಅವಕಾಶ ಮಾಡಿಕೊಡಲಾಗಿತ್ತು.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.