ADVERTISEMENT

PV Web Exclusive: ವಿಜಯನಗರದ ಪಾಲಿಗೆ ಇದ್ದೂ ಇಲ್ಲದಂತಿರುವ ಪ್ರವಾಸೋದ್ಯಮ ಇಲಾಖೆ

ಇಲಾಖೆಗೆ ಸೇರಿದ 213 ಎಕರೆ ಜಾಗ; ಮೂಲಸೌಕರ್ಯ ಕಲ್ಪಿಸಲು ವಿಫಲ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ಆಗಸ್ಟ್ 2021, 19:30 IST
Last Updated 30 ಆಗಸ್ಟ್ 2021, 19:30 IST
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಬಳಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 213 ಎಕರೆ ಜಾಗ
ಹೊಸಪೇಟೆ ತಾಲ್ಲೂಕಿನ ಕಮಲಾಪುರ ಬಳಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 213 ಎಕರೆ ಜಾಗ   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಮಟ್ಟಿಗೆ ಪ್ರವಾಸೋದ್ಯಮ ಇಲಾಖೆ ಇದ್ದೂ ಇಲ್ಲದಂತಾಗಿದೆ. ಪ್ರವಾಸಿಗರಿಗೆ ಕನಿಷ್ಠ ಸೌಕರ್ಯ ಕಲ್ಪಿಸಲು ಸಾಧ್ಯವಾಗಿಲ್ಲ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ ನೂರಾರು ಎಕರೆ ಜಾಗವಿದ್ದರೂ ಪ್ರವಾಸಿಗರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಆ ಸ್ಥಳದ ಸದ್ಬಳಕೆಯಾಗುತ್ತಿಲ್ಲ. ಇಷ್ಟೇ ಅಲ್ಲ, ಇಲಾಖೆಗೆ ಸೇರಿದ ಆಸ್ತಿ ರಕ್ಷಣೆಗೂ ಹೆಣಗಾಟ ನಡೆಸುವ ಪರಿಸ್ಥಿತಿ ಇದೆ.

ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದ ಎದುರು ಪ್ರವಾಸೋದ್ಯಮ ಇಲಾಖೆಗೆ ಸೇರಿದ 213 ಎಕರೆ ಜಮೀನು ಇದೆ. ನೈಸರ್ಗಿಕವಾಗಿ ಬೆಳೆದ ಕುರುಚಲು ಗಿಡ, ಮರಗಳು ಬಿಟ್ಟರೆ ಅಲ್ಲಿ ಬೇರೇನೂ ಇಲ್ಲ. ಇಲಾಖೆಯ ಜಾಗಕ್ಕೆ ಸೇರಿದ ಜಾಗದ ಸುತ್ತಲೂ ಕನಿಷ್ಠ ತಂತಿಬೇಲಿ ಹಾಕಿ ರಕ್ಷಿಸುವ ಕೆಲಸವೂ ಆಗಿಲ್ಲ.

ADVERTISEMENT

ಆಗಾಗ ಅಲ್ಲಿ ಅನಧಿಕೃತವಾಗಿ ಶೆಡ್‌ಗಳು ತಲೆ ಎತ್ತುತ್ತವೆ. ಇಲಾಖೆಯ ಅಧಿಕಾರಿಗಳು ಆ ಕಡೆ ಸುಳಿಯದ ಕಾರಣ ಇಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಸ್ಥಳೀಯರ ಗಮನಕ್ಕೆ ಬಂದಾಗ, ಅದನ್ನು ತಿಳಿಸುತ್ತಾರೆ. ಆಗ ಎಚ್ಚೆತ್ತುಕೊಂಡು ಅಲ್ಲಿರುವವರನ್ನು ತೆರವುಗೊಳಿಸುತ್ತಾರೆ. ಇದು ಮೇಲಿಂದ ಮೇಲೆ ನಡೆಯುತ್ತಿದೆ. ಕೆಲ ದಿನಗಳ ಹಿಂದೆಯೂ ಇಂತಹುದೇ ಘಟನೆ ನಡೆದಿದೆ. ಈಗ ಅಲ್ಲಿ ಇಬ್ಬರನ್ನು ಕಾವಲಿಗೆ ನಿಯೋಜಿಸಲಾಗಿದೆ. ಜಿಲ್ಲೆಯ ಇತರೆ ಭಾಗಗಳಲ್ಲೂ ಇದೇ ಸಮಸ್ಯೆ ಇದೆ.

ಮೂಲಸೌಕರ್ಯ ಇಲ್ಲ:

ವಿಶ್ವ ಪ್ರಸಿದ್ಧ ಹಂಪಿಯಲ್ಲಿ ಆರಂಭದಿಂದಲೂ ಮೂಲಸೌಕರ್ಯಗಳ ಕೊರತೆ ಇದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಹೇಳಿಕೊಳ್ಳುವಂತಹ ಕೆಲಸಗಳು ಆಗಿಲ್ಲ.

ಆಗಾಗ ಸ್ಮಾರಕಗಳ ಸುತ್ತಮುತ್ತಲಿನ ನಾಮಫಲಕಗಳನ್ನು ಬದಲಿಸುವುದು ಬಿಟ್ಟರೆ ಬೇರೇನೂ ಕೆಲಸ ಮಾಡಿಲ್ಲ. ತುಂಗಭದ್ರಾ ನದಿ ಸ್ನಾನಘಟ್ಟದಲ್ಲಿ ಹೆಣ್ಣು ಮಕ್ಕಳಿಗೆ ಬಟ್ಟೆ ಬದಲಿಸಿಕೊಳ್ಳಲು ವ್ಯವಸ್ಥೆ ಇಲ್ಲ. ಸ್ಮಾರಕಗಳ ಪರಿಸರದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಕೆಲವೆಡೆ ಶೌಚಾಲಯಗಳನ್ನು ನಿರ್ಮಿಸಿದೆ. ಆದರೆ, ಪ್ರವಾಸಿಗರ ಸಂಖ್ಯೆಗೆ, ಪ್ರದೇಶದ ವಿಸ್ತಾರಕ್ಕೆ ಅನುಗುಣವಾಗಿ ಇಲ್ಲ. ಕಡಿಮೆ ವೆಚ್ಚದ ಕೊಠಡಿಗಳು ಇಲ್ಲ. ಪ್ರವಾಸಿಗರು ದುಬಾರಿ ಬೆಲೆ ತೆತ್ತು ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡುವ ಅನಿವಾರ್ಯತೆ ಇದೆ.

‘ಹಂಪಿಯಲ್ಲಿ ಪ್ರವಾಸೋದ್ಯಮ ಇಲಾಖೆ ಹೆಸರಿಗಷ್ಟೇ ಸೀಮಿತವಾಗಿದೆ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಓಡಾಡುವುದಿಲ್ಲ. ಗೈಡ್‌ಗಳು, ಪ್ರವಾಸಿಗರ ಸಮಸ್ಯೆ ಆಲಿಸುವುದಿಲ್ಲ. ಜನರಿಗೆ ಉಪಯೋಗಕ್ಕೆ ಬಾರದ ಇಂತಹ ಇಲಾಖೆ ಏಕೆ ಬೇಕು? ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ನೂರಾರು ಉದ್ಯೋಗ ಸೃಷ್ಟಿಸಬಹುದು. ಆದರೆ, ಅದಕ್ಕೆ ಅದರ ಬಗ್ಗೆ ಆಸಕ್ತಿಯೇ ಇಲ್ಲ’ ಎಂದು ಆರೋಪಿಸುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸ್ಥಳೀಯ ಗೈಡ್‌ಗಳು.

‘ನನಗೆ ಏನೂ ಮಾಹಿತಿ ಇಲ್ಲ’

‘ನನಗೆ ಏನೂ ಮಾಹಿತಿ ಇಲ್ಲ. ಎಲ್ಲವೂ ಕೇಂದ್ರ ಕಚೇರಿಯವರಿಗೆ ಗೊತ್ತು. ಎಲ್ಲವೂ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಿಗೆ ಗೊತ್ತು’

ಇದು ಸ್ಥಳೀಯ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ತಿಪ್ಪೇಸ್ವಾಮಿ ಅವರ ಮಾತು. ‘ಇಲಾಖೆಯಿಂದ ಏನೆಲ್ಲ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ, ತ್ರೀ ಸ್ಟಾರ್‌ ಹೋಟೆಲ್‌ ನಿರ್ಮಾಣ ಯೋಜನೆ ಎಲ್ಲಿಗೆ ಬಂತು’ ಎಂಬ ‘ಪ್ರಜಾವಾಣಿ’ಯ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

ತ್ರೀ ಸ್ಟಾರ್‌ ಯಾವಾಗ?

ಕಮಲಾಪುರ ಬಳಿ ಪ್ರವಾಸೋದ್ಯಮ ಇಲಾಖೆಗೆ ಸೇರಿದ 213 ಎಕರೆ ಜಾಗವಿದ್ದು, ಈ ಪೈಕಿ 10ರಿಂದ 15 ಎಕರೆಯಲ್ಲಿ ₹18ರಿಂದ ₹20 ಕೋಟಿಯಲ್ಲಿ ತ್ರೀ ಸ್ಟಾರ್‌ ಹೋಟೆಲ್‌ ನಿರ್ಮಿಸುವ ಮಾತುಗಳು ಅನೇಕ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಇದುವರೆಗೆ ಆ ನಿಟ್ಟಿನಲ್ಲಿ ಕೆಲಸಗಳೇ ಆಗಿಲ್ಲ.

2021ರ ಜೂನ್‌ 30ಕ್ಕೆ ಕಮಲಾಪುರಕ್ಕೆ ಭೇಟಿ ನೀಡಿದ್ದ ಈ ಹಿಂದಿನ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ, ‘ಒಂದು ವಾರದೊಳಗೆ ತ್ರೀ ಸ್ಟಾರ್‌ ಹೋಟೆಲ್‌ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗುವುದು. ಒಂದು ಸಾವಿರ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ನಿರ್ಮಿಸಲಾಗುವುದು. ಅದಕ್ಕೆ ಬಹಳ ಕಡಿಮೆ ದರ ನಿಗದಿಪಡಿಸಲಾಗುವುದು’ ಎಂದು ಘೋಷಿಸಿದ್ದರು. ಸಚಿವರೇ ಬದಲಾದರು ಹೊರತು ಯಾವುದೇ ಕೆಲಸಗಳು ಆಗಿಲ್ಲ.

ಈಗ ವಿಜಯನಗರ ಕ್ಷೇತ್ರವನ್ನೇ ಪ್ರತಿನಿಧಿಸುವ ಆನಂದ್‌ ಸಿಂಗ್‌ ಅವರಿಗೆ ಪ್ರವಾಸೋದ್ಯಮ ಖಾತೆ ಒಲಿದು ಬಂದಿದೆ. ಅವರು ಈ ನಿಟ್ಟಿನಲ್ಲಿ ಏನು ಮಾಡುತ್ತಾರೆ ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.